ಸಾಮಾಜಿಕ ಜಾಳತಾಣಗಳಲ್ಲಿ ಒಂದು ವೀಡಿಯೊ ವೈರಲ್ ಆಗುತ್ತಿದೆ. ಇದರಲ್ಲಿ ನೀಲಿ ಶರ್ಟ್ ಧರಿಸಿದ ವ್ಯಕ್ತಿ ಪೊಲೀಸರಿಂದ ತಪ್ಪಿಸಿ ಮನೆಯಿಂದ ಓಡಿ ಹೋಗಲು ಪ್ರಯತ್ನಿಸುತ್ತಾನೆ. ಆಗ ಪೊಲೀಸರು ಆತನ ಕಾಲರ್ ಹಿಡಿದು ಸೋಫಾ ಮೇಲೆ ಕೂರಿಸುತ್ತಾರೆ. ಪೊಲೀಸರ ಜೊತೆಯಲ್ಲಿ ಬಿಳಿ ಶರ್ಟ್ ಧರಿಸಿದ ವ್ಯಕ್ತಿ ಹಾಗೂ ನೀಲಿ ಕುರ್ತಾ ಧರಿಸಿರುವ ಮಹಿಳೆ ಕೂಡ ಇರುವುದನ್ನು ಕಾಣಬಹುದು. ಅನೇಕ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡು, ಹಿಂದೂ ಹೆಸರು ಹೇಳಿ ಹಿಂದೂ ಹುಡುಗಿಯನ್ನು ಪ್ರೀತಿ ಮಾಡುತ್ತಿದ್ದ ಮುಸ್ಲಿಂ ವ್ಯಕ್ತಿಯನ್ನು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ ಎಂದು ಹೇಳುತ್ತಿದ್ದಾರೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಹಿಂದೂ-ಮುಸ್ಲಿಂ ಜೋಡಿ. ತನ್ನ ಹೆಸರು "ಗೌರವ್" ಎಂದು ಹೇಳಿ, ಹಿಂದೂ ಯುವತಿಯೊಡನೆ ಪ್ರೇಮ ವ್ಯವಹಾರ ಮಾಡುತ್ತಿದ್ದ ಸಲೀಂ ಎಂಬ ಮುಸ್ಲಿಂ ಯುವಕ ಪೊಲೀಸರ ಎದುರು ಸತ್ಯ ಗೊತ್ತಾದಾಗ, ಓಡಲು ಯತ್ನಿಸಿದ. ಮೋಸ ತಿಳಿದ ಹಿಂದೂ ಯುವತಿಗೆ ಆಶ್ಚರ್ಯ. ಈ ಘಟನೆ "ಸತ್ಯದ ಕನ್ನಡಿ". ಹಿಂದೂ ಸಹೋದರಿಯರು ಇದನ್ನು ಬೇಗ ಅರ್ಥಮಾಡಿಕೊಂಡಷ್ಟೂ ಉತ್ತಮವಾಗಿರುತ್ತದೆ’’ ಎಂದು ಬರೆದುಕೊಂಡಿದ್ದಾರೆ. (Archive)
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಅಸಲಿಗೆ ಇದು ನೈಜ್ಯವಾಗಿ ನಡೆದ ಘಟನೆ ಅಲ್ಲ, ಬದಲಾಗಿ ಇದೊಂದು ಸ್ಕ್ರಿಪ್ಟೆಡ್ ವೀಡಿಯೊ ಆಗಿದೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಪ್ರಮುಖ ಕೀಫ್ರೇಮ್‌ಗಳನ್ನು ಗೂಗಲ್ ಲೆನ್ಸ್ನಲ್ಲಿ ಹುಡುಕಿದ್ದೇವೆ. ಈ ಸಂದರ್ಭ ಜುಲೈ 28, 2025 ರಂದು ಮಾಂಟಿ ದೀಪಕ್ ಶರ್ಮಾ ಎಂಬಫೇಸ್‌ಬುಕ್ ಖಾತೆಯಲ್ಲಿ ವೈರಲ್ ವೀಡಿಯೊದ ಮತ್ತೊಂದು ಆವೃತ್ತಿ ಕಂಡುಬಂತು. ಇದನ್ನು ಬೇರೆ ಕೋನದಿಂದ ಚಿತ್ರೀಕರಿಸಲಾಗಿದೆ. ಈ ವೀಡಿಯೊದ 2ನೇ ಸೆಕೆಂಡ್ನಲ್ಲಿ, ಒಂದು ಹಕ್ಕು ನಿರಾಕರಣೆ ಕಾಣಿಸಿಕೊಳ್ಳುತ್ತದೆ: "ಈ ವೀಡಿಯೊವನ್ನು ಮಾಂಟಿ ದೀಪಕ್ ಶರ್ಮಾ ಪ್ರಸ್ತುತಪಡಿಸಿದ್ದಾರೆ. ಈ ವೀಡಿಯೊ ಕಾಲ್ಪನಿಕ ಕೃತಿ. ಯಾವುದೇ ರೀತಿಯಲ್ಲಿ ಈ ವೀಡಿಯೊ ಯಾವುದೇ ಸಮುದಾಯ ಅಥವಾ ವೃತ್ತಿಯನ್ನು ಅವಮಾನಿಸುವುದಿಲ್ಲ. ಈ ವೀಡಿಯೊ ಮನರಂಜನಾ ಉದ್ದೇಶಗಳಿಗಾಗಿ ಮಾತ್ರ" ಎಂದು ಬರೆಯಲಾಗಿದೆ.
ಇದೇ ವೈರಲ್ ವೀಡಿಯೊದ ಮತ್ತೊಂದು ಆವೃತ್ತಿಯನ್ನು ನೀವು ಯೂಟ್ಯೂಬ್ನಲ್ಲೂ ಅದೇ ಮಾಂಟಿ ದೀಪಕ್ ಶರ್ಮಾ ಖಾತೆಯಲ್ಲಿ ವೀಕ್ಷಿಸಬಹುದು.
ಮಾಂಟಿ ದೀಪಕ್ ಶರ್ಮಾ ತನ್ನನ್ನು ತಾನು ರೀಲ್ ಸೃಷ್ಟಿಕರ್ತ ಎಂದು ಬರೆದಿರುವುದನ್ನು ನಾವು ಗಮನಿಸಿದ್ದೇವೆ.
ಇಷ್ಟೇ ಅಲ್ಲದೆ ವೈರಲ್ ವೀಡಿಯೊದಲ್ಲಿ ಬಿಳಿ ಶರ್ಟ್ ಧರಿಸಿರುವ ಅದೇ ವ್ಯಕ್ತಿ ಹಲವಾರು ಇತರ ವೀಡಿಯೊಗಳಲ್ಲಿ ಪೊಲೀಸ್ ಅಧಿಕಾರಿಯ ಪಾತ್ರ ಮಾಡಿರುವುದನ್ನು ನಾವು ಗಮನಿಸಿದ್ದೇವೆ. ಅದನ್ನು ನೀವು ಇಲ್ಲಿ, ಇಲ್ಲಿ, ಇಲ್ಲಿ ನೋಡಬಹುದು.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಹಿಂದೂ ಹೆಸರು ಹೇಳಿ ಹಿಂದೂ ಹುಡುಗಿಯನ್ನು ಪ್ರೀತಿ ಮಾಡುತ್ತಿದ್ದ ಮುಸ್ಲಿಂ ವ್ಯಕ್ತಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ ಎಂಬ ಹೇಳಿಕೆ ಸುಳ್ಳು, ಇದೊಂದು ಸ್ಕ್ರಿಪ್ಟೆಡ್ ವೀಡಿಯೊ ಎಂದು ನಾವು ಖಚಿತವಾಗಿ ಹೇಳುತ್ತೇವೆ.