Fact Check: ‘ಭಾರತ್ ಮಾತಾ ಕಿ ಜೈ’ ಎಂದಿದ್ದಕ್ಕೆ ವೃದ್ಧನಿಗೆ ಥಳಿಸಿದ ಮುಸ್ಲಿಮರು? ವೈರಲ್ ವೀಡಿಯೊದ ನಿಜಾಂಶ ಇಲ್ಲಿದೆ
ಇದು 2019ರಲ್ಲಿ ರಾಜಸ್ಥಾನದಲ್ಲಿ ನಡೆದ ಘಟನೆ ಆಗಿದೆ. ಬೀದಿಯಲ್ಲಿ ಹಾದು ಹೋಗುತ್ತಿದ್ದ ಜನರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದ ಕಾರಣಕ್ಕೆ ಕೋಪಗೊಂಡ ಜನರು ವೃದ್ಧನನ್ನು ಥಳಿಸಿದ್ದಾರೆ.
By Vinay Bhat Published on 10 Aug 2024 11:43 AM GMTClaim: ಮುಂಬೈಯಲ್ಲಿ "ಭಾರತ್ ಮಾತಾ ಕಿ ಜೈ" ಎಂದು ಘೋಷಣೆ ಕೂಗಿದ್ದಕ್ಕಾಗಿ ಮುಸ್ಲಿಮರು ವೃದ್ಧರೊಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ.
Fact: ಈ ವೀಡಿಯೊ ರಾಜಸ್ಥಾನದ್ದಾಗಿದೆ. ವೃದ್ಧ ಜನರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದ ಕಾರಣಕ್ಕೆ ಕೋಪಗೊಂಡ ಸ್ಥಳೀಯರು ಥಳಿಸಿದ್ದಾರೆ.
ವಯೋವೃದ್ಧರೊಬ್ಬರ ಮೇಲೆ ಗುಂಪೊಂದು ಹಲ್ಲೆ ನಡೆಸಿರುವ ವೀಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಹಂಚಿಕೊಂಡಿದ್ದಾರೆ. ಮುಂಬೈನಲ್ಲಿ ಈ ಘಟನೆ ನಡೆದಿದ್ದು, ‘ಭಾರತ್ ಮಾತಾ ಕಿ ಜೈ’ ಎಂದು ಹೇಳಿದ್ದಕ್ಕೆ ಮುಸ್ಲಿಮ್ ಯುವಕರು ಈ ವೃದ್ಧರನ್ನು ಥಳಿಸಿದ್ದಾರೆ ಎನ್ನಲಾಗಿದೆ.
ಕಿಶೋರ್ ಎಂಬ ಎಕ್ಸ್ ಖಾತೆಯಿಂದ ಆಗಸ್ಟ್ 9, 2024 ರಂದು ಈ ವೀಡಿಯೊ ಅಪ್ಲೊಡ್ ಆಗಿದ್ದು, ಹಂಚಿಕೊಂಡಿರುವ ವೀಡಿಯೊಕ್ಕೆ ಹೀಗೆ ಅಡಿಬರಹ ನೀಡಿದ್ದಾರೆ, "ಭಾರತ ಮಾತೆಗೆ ಜೈ ಎನ್ನಲಾಗದ ಪರಿಸ್ಥಿತಿ. ಘಟನೆ ಮುಂಬೈನ ಭಿಂಡಿ ಬಜಾರ್‌ನಲ್ಲಿ ನಡೆದಿದೆ. ಇದು ಭಾರತದಲ್ಲಿನ ಜಿಹಾದಿ ಮುಸಲ್ಮಾನರ ಒಕ್ಕಲಿಗ ಪ್ರದೇಶಗಳಲ್ಲಿ *ಭಾರತ್ ಮಾತಾಕಿ ಜೈ* ಎನ್ನುವ ಪರಿಸ್ಥಿತಿ. ಇದು ಇಸ್ಲಾಮಿಕ್ ದೇಶ ಅಲ್ಲ... ಇದು ಭಾರತದ ಮುದುಕನ ಪರಿಸ್ಥಿತಿ... ಈ ವಿಡಿಯೋವನ್ನು ಆದಷ್ಟು ಶೇರ್ ಮಾಡಿ.." ಎಂದು ಬರೆದುಕೊಂಡಿದ್ದಾರೆ.
*👆ಭಾರತ ಮಾತೆಗೆ ಜೈ ಎನ್ನಲಾಗದ ಪರಿಸ್ಥಿತಿ*😡 ಘಟನೆ ಮುಂಬೈನ ಭಿಂಡಿ ಬಜಾರ್‌ನಲ್ಲಿ ನಡೆದಿದೆ. 😡 ಇದು ಭಾರತದಲ್ಲಿನ ಜಿಹಾದಿ ಮುಸಲ್ಮಾನರ ಒಕ್ಕಲಿಗ ಪ್ರದೇಶಗಳಲ್ಲಿ *ಭಾರತ್ ಮಾತಾಕಿ ಜೈ* ಎನ್ನುವ ಪರಿಸ್ಥಿತಿ.... ಇದು ಇಸ್ಲಾಮಿಕ್ ದೇಶ ಅಲ್ಲ... ಇದು ಭಾರತದ ಮುದುಕನ ಪರಿಸ್ಥಿತಿ... ಈ ವಿಡಿಯೋವನ್ನು ಆದಷ್ಟು ಶೇರ್ ಮಾಡಿ ಸಾಧ್ಯ. pic.twitter.com/OekNKVJRKP
— kishore kishore (@kishorekis97690) August 9, 2024
ಹಾಗೆಯೆ ಜುಲೈ 31, 2024 ರಂದು ಪ್ರಭಾಕರ್ ಭಟ್ ಎಂಬವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಇದೇ ವೀಡಿಯೊವನ್ನು ಹಂಚಿಕೊಂಡು, ''ಎಚ್ಚೆತ್ತುಕೊಳ್ಳಿ ಭಾರತೀಯರೇ.. ಒಬ್ಬ ರಾಷ್ಟ್ರೀಯವಾದಿ ವೃದ್ಧರು ಭಾರತ ಮಾತೆಗೆ ಜೈ ಎಂದಾಗ ಅವರನ್ನು ಹೊಡೆದು ಬಡಿದು ಜೈವಿಕ ಹಲ್ಲೆ ಮಾಡಿದ ಘಟನೆ ಮುಂಬೈನ ಭಿಂಡಿ ಬಜಾರ್‌ನಲ್ಲಿ ನಡೆದಿದೆ. ಮಹಾರಾಷ್ಟ್ರ ಪೋಲೀಸರು ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸ್ವಯಂ ಈ ಘಟನೆಯ ತನಿಖೆ ನಡೆಸಿ ಅಪರಾಧಿಗಳನ್ನು ಶಿಕ್ಷಿಸ ಬೇಕು.'' ಎಂದು ಬರೆದಿದ್ದಾರೆ.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋಧಿಸಿದಾಗ, ಈ ವೈರಲ್ ವೀಡಿಯೊದ ಹಿಂದಿನ ನಿಜಾಂಶ ಏನು ಎಂಬುದು ತಿಳಿದಿದ್ದು, ಇದು 2019ರಲ್ಲಿ ರಾಜಸ್ಥಾನದಲ್ಲಿ ನಡೆದ ಘಟನೆ ಆಗಿದೆ. ಬೀದಿಯಲ್ಲಿ ಹಾದು ಹೋಗುತ್ತಿದ್ದ ಜನರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದ ಕಾರಣಕ್ಕೆ ಕೋಪಗೊಂಡ ಜನರು ವೃದ್ಧನನ್ನು ಥಳಿಸಿದ್ದಾರೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ಆಗುತ್ತಿರುವ ವೀಡಿಯೊದ ಸ್ಕ್ರೀನ್‌ಶಾಟ್ ಅನ್ನು ತೆಗೆದುಕೊಂಡು ಗೂಗಲ್‍ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದೆವು. ಆಗ ಭಾರತೀಯ ಜನತಾ ಪಕ್ಷದ ನಾಯಕ ಮಂಜಿಂದರ್ ಸಿಂಗ್ ಅವರು ಅಕ್ಟೋಬರ್ 19, 2019 ರಂದು ತಮ್ಮ ಫೇಸ್‌ಬುಕ್ ಪೇಜ್ನಲ್ಲಿ ಇದೇ ವೀಡಿಯೊವನ್ನು ಹಂಚಿಕೊಂಡಿರುವುದು ಕಂಡುಬಂತು.
ಈ ವೀಡಿಯೋದಲ್ಲಿ ವಯೋವೃದ್ಧರು “ಭಾರತ್ ಮಾತಾ ಕಿ ಜೈ” ಘೋಷಣೆ ಮಾಡುವ ಮೊದಲು ಬಿಜೆಪಿ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸುವುದನ್ನು ಕಾಣಬಹುದು. ಆ ಬಳಿಕ, ಅವರ ಸುತ್ತಲು ಸ್ಥಳೀಯ ಜನರು ಬಂದು ನಂತರ ಹಲ್ಲೆ ನಡೆಸಲಾಗಿದೆ.
ಸಿಂಗ್ ಅವರು ತಮ್ಮ ಪೋಸ್ಟ್‌ನಲ್ಲಿ, ಭಿಲ್ವಾರದ ಆಜಾದ್ ಚೌಕ್ ಮಾರ್ಕೆಟ್‌ನಲ್ಲಿ ಈ ಘಟನೆ ನಡೆದಿದ್ದು, ವೃದ್ಧರೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸುವಂತೆ ರಾಜಸ್ಥಾನ ಪೊಲೀಸರಿಗೆ ಕರೆ ನೀಡಿರುವುದು ಇದೆ.
ಬಳಿಕ 21 ಅಕ್ಟೋಬರ್ 2019 ರಂದು ಮಂಜಿಂದರ್ ಸಿಂಗ್ ಅವರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಈ ಘಟನೆಗೆ ಸಂಬಂಧಿಸಿದ ವರದಿಯ ಫೋಟೋವನ್ನು ಹಂಚಿಕೊಂಡಿದ್ದಾರೆ. ವರದಿಯ ಪ್ರಕಾರ, ''ಈ ವೀಡಿಯೊ ಅಕ್ಟೋಬರ್ 15, 2019 ರಂದು ನಡೆದ ಘಟನೆಯಾಗಿದೆ. ವ್ಯಕ್ತಿಯ ಹೆಸರು ಹಾಟ್ಮಂಡ್ ಸಿಂಧಿ. ಇವರು ಮಾನಸಿಕ ಅಸ್ವಸ್ಥ. ದಾರಿಹೋಕರಿಗೆ ಕಿರುಕುಳ ನೀಡುತ್ತಿದ್ದರು ಮತ್ತು ನಿಂದಿಸುತ್ತಿದ್ದರು, ಇದರಿಂದ ಕೆಲವರು ಆತನಿಗೆ ಥಳಿಸಿದ್ದಾರೆ,'' ಎಂದು ಬರೆಯಲಾಗಿದೆ.
Hope this report will clarify pic.twitter.com/lSbTRO0gV1
— Manjinder Singh Sirsa (@mssirsa) October 20, 2019
"ಭಾರತ್ ಮಾತಾ ಕಿ ಜೈ" ಎಂದು ಘೋಷಣೆ ಕೂಗಿದ್ದಕ್ಕಾಗಿ ಮುಸ್ಲಿಂ ಯುವಕರು ಸಿಖ್ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂಬ ಇದೇ ರೀತಿಯ ಆರೋಪಗಳೊಂದಿಗೆ 2019 ಮತ್ತು 2023 ರಲ್ಲಿ ಕೂಡ ಇದೇ ವೀಡಿಯೊ ವೈರಲ್ ಆಗಿರುವುದನ್ನು ನಾವು ಕಂಡುಕೊಂಡಿದ್ದೇವೆ.
2019 ರಲ್ಲಿ ವಿಶ್ವಾಸ್ ನ್ಯೂಸ್ ತನ್ನ ಫ್ಯಾಕ್ಟ್ ಚೆಕ್ ವರದಿಯಲ್ಲಿ ಈ ಕುರಿತು ಮಾಹಿತಿ ನೀಡಿರುವುದು ಕಂಡುಬಂತು. ಇದರಲ್ಲಿ ಎಫ್ಐಆರ್ ಕಾಪಿ ಬಗ್ಗೆ ಮಾಹಿತಿ ನೀಡಲಾಗಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಮನೋಜ್, ಹೇಮಂತ್ ನಥಾನಿ, ಭಗವಾನ್ ದಾಸ್, ಮೇಜೂರ್ ಶೇಖ್ ಮತ್ತು ಇರ್ಫಾನ್ ಎಂಬ ಆರೋಪಿಗಳನ್ನು ಬಂದಿಸಲಾಗಿದೆ ಎಂದು ಬರೆಯಲಾಗಿದೆ. ಎಫ್ಐಆರ್ ಪ್ರಕಾರ, ಘಟನೆಯಲ್ಲಿ ಯಾವುದೇ ಕೋಮು ಗಲಭೆಯ ಉಲ್ಲೇಖವಿಲ್ಲ, ಮತ್ತು ಆರೋಪಿಗಳನ್ನು ಹಿಂದೂಗಳು ಮತ್ತು ಮುಸ್ಲಿಮರು ಎಂದು ಗುರುತಿಸಲಾಗಿದೆ.
ಹೀಗಾಗಿ ಮುಂಬೈನಲ್ಲಿ ಭಾರತ್ ಮಾತಾ ಕಿ ಜೈ ಎಂದು ಹೇಳಿದ್ದಕ್ಕೆ ವಯೋವೃದ್ಧರೊಬ್ಬರಿಗೆ ಥಳಿಸಿದ್ದಾರೆ ಎನ್ನಲಾಗುತ್ತಿರುವ ವೀಡಿಯೊ ಸುಳ್ಳು ಎಂದು ನ್ಯೂಸ್ ಮೀಟರ್ ತನ್ನ ತನಿಖೆಯಿಂದ ಕಂಡುಕೊಂಡಿದೆ. ವೈರಲ್ ಆಗಿರುವ ವಿಡಿಯೋ 2019ರದ್ದು. ರಾಜಸ್ಥಾನದಲ್ಲಿ ವೃದ್ಧ ಜನರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದ ಕಾರಣಕ್ಕೆ ಕೋಪಗೊಂಡ ಸ್ಥಳೀಯರು ಥಳಿಸಿದ್ದಾರೆ ಎಂಬುದನ್ನು ನಾವು ಖಚಿವಾಗಿ ಹೇಳುತ್ತೇವೆ.