ಸಾಮಾಜಿಕ ಮಾಧ್ಯಮದಲ್ಲಿ ಒಂದು ಫೋಟೋ ವೈರಲ್ ಆಗುತ್ತಿದೆ. ಇದರಲ್ಲಿ ಕೆಲವರು ಓರ್ವ ವ್ಯಕ್ತಿಯನ್ನು ಹೊಡೆಯುತ್ತಿರುವುದನ್ನು ಕಾಣಬಹುದು. ಸಾಮಾಜಿಕ ಮಾಧ್ಯಮದಲ್ಲಿ ಕೆಲವು ಬಳಕೆದಾರರು ಈ ಘಟನೆ ರಾಜಸ್ಥಾನದ್ದು ಎಂದು ಹೇಳಿಕೊಳ್ಳುತ್ತಿದ್ದಾರೆ. ರಾಜಸ್ಥಾನದಲ್ಲಿ, ಜುನೈದ್ ಅನ್ಸಾರಿ ಎಂಬ ವ್ಯಕ್ತಿ ಬ್ರಾಹ್ಮಣ ಹುಡುಗಿಯರನ್ನು ಬಲೆಗೆ ಬೀಳಿಸಲು ಫೇಸ್‌ಬುಕ್‌ನಲ್ಲಿ ಒಂದು ಗುಂಪನ್ನು ರಚಿಸಿದ್ದ. ನಂತರ ಆತನನ್ನು ಹಿಂದೂಗಳನ್ನು ಥಳಿಸಿದ್ದಾರೆ ಎಂದು ಹೇಳುತ್ತಿದ್ದಾರೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ರಾಜಸ್ಥಾನದ ಜುನೈದ್ ಅನ್ಸಾರಿ ಎಂಬ ಯುವಕ ಫೇಸ್‌ಬುಕ್‌ನಲ್ಲಿ #Brahmin_Unity ಎಂಬ ಗುಂಪನ್ನು ರಚಿಸಿ ಅದರ ಅಡ್ಮಿನ್ ಆಗಿ ಮುಂದುವರೆದನು. ಈ ಗುಂಪಿಗೆ ಬ್ರಾಹ್ಮಣ ಸಮುದಾಯದ ಹುಡುಗಿಯರನ್ನು ಮಾತ್ರ ಸೇರಿಸುವುದು ಅವನ ವಿಧಾನವಾಗಿತ್ತು. ಇದರ ವಿರುದ್ಧ ಹಿಂದೂ ಯುವಕರು ಪೊಲೀಸರಿಂದ ಸಹಾಯ ಕೋರಿದ್ದರೂ, ರಾಜಸ್ಥಾನ ಪೊಲೀಸರು ಸಹಕರಿಸಲಿಲ್ಲ. ಕೊನೆಗೆ, ಹಿಂದೂ ಯುವಕರೇ ಜುನೈದ್‌ನನ್ನು ನಿಭಾಯಿಸಿದರು.’’ ಎಂದು ಬರೆದುಕೊಂಡಿದ್ದಾರೆ. (Archive)
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ಫೋಟೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ಚಿತ್ರವು ರಾಜಸ್ಥಾನದ್ದಲ್ಲ, ಇದು ಡಿಸೆಂಬರ್ 2023 ರಲ್ಲಿ ಉತ್ತರ ಪ್ರದೇಶದ ನೋಯ್ಡಾದಲ್ಲಿ ಕಾಲೇಜು ವಿದ್ಯಾರ್ಥಿಗಳ ನಡುವಿನ ಗಲಾಟೆಗೆ ಸಂಬಂಧಿಸಿದ್ದಾಗಿದೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ಆಗುತ್ತಿರುವ ಫೋಟೋವನ್ನು ರಿವರ್ಸ್ ಇಮೇಜ್ ಸರ್ಚ್‌ನಲ್ಲಿ ಪರಿಶೀಲಿಸಿದಾಗ, ಡಿಸೆಂಬರ್ 5, 2023 ರಂದು NDTV ಹಂಚಿಕೊಂಡ ವರದಿಯಲ್ಲಿ ಇದೇ ರೀತಿಯ ದೃಶ್ಯ ಕಂಡುಬಂದಿದೆ. ಡಿಸೆಂಬರ್ 3 ರಂದು ಗ್ರೇಟರ್ ನೋಯ್ಡಾದ ವಸತಿ ಸಂಕೀರ್ಣದಲ್ಲಿ ಕಾಲೇಜು ವಿದ್ಯಾರ್ಥಿಗಳ ಗುಂಪುಗಳ ನಡುವೆ ಘರ್ಷಣೆ ನಡೆದಿತ್ತು ಎಂದು ವರದಿ ಹೇಳುತ್ತದೆ.
ದೆಹಲಿ NCR ನಲ್ಲಿರುವ ಖಾಸಗಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಗ್ರೇಟರ್ ನೋಯ್ಡಾದ ಸೂಪರ್‌ಟೆಕ್ ಸಾರ್ ವಸತಿ ಕಟ್ಟಡದ ಬಳಿ ಘರ್ಷಣೆ ನಡೆಸಿದರು. ಕಾಲೇಜಿನಲ್ಲಿ ವಿದ್ಯಾರ್ಥಿಗಳ ನಡುವಿನ ವಾಗ್ವಾದದ ಮುಂದುವರಿಕೆಯೇ ಈ ಘರ್ಷಣೆ ಎಂದು ಪೊಲೀಸರು ಹೇಳಿದ್ದರು. ಘಟನೆಯಲ್ಲಿ ಐದು ಜನರನ್ನು ಬಂಧಿಸಲಾಗಿದೆ ಎಂದು ಸುದ್ದಿಯಲ್ಲಿ ಹೇಳಲಾಗಿದೆ.
ಭಾಸ್ಕರ್.ಕಾಮ್ ಕೂಡ ಡಿಸೆಂಬರ್ 5, 2023 ರಂದು ವೈರಲ್ ಫೋಟೋದೊಂದಿಗೆ ಸುದ್ದಿ ಪ್ರಕಟಿಸಿದ್ದು, ಘಟನೆಯು ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ ಎಂದು ಹೇಳಿದೆ. ಪೊಲೀಸರನ್ನು ಉಲ್ಲೇಖಿಸಿ, ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವಿನ ವಿವಾದದ ನಂತರ, ಹಲವಾರು ಜನರನ್ನು ಬಂಧಿಸಲಾಗಿದೆ ಎಂದು ಹೇಳಲಾಗಿದೆ.
ಈ ಗಲಾಟೆಯಲ್ಲಿ ಜುನೈದ್ ಅನ್ಸಾರಿ ಎಂಬ ಹೆಸರಿನ ಯಾರಾದರೂ ಭಾಗಿಯಾಗಿದ್ದಾರೆಯೇ ಎಂದು ನಾವು ಪರಿಶೀಲಿಸಿದ್ದೇವೆ. ಡಿಸೆಂಬರ್ 6, 2023 ರಂದು ಟೈಮ್ಸ್ ಆಫ್ ಇಂಡಿಯಾ ವರದಿಯು ಬಂಧಿತರ ವಿವರಗಳನ್ನು ಒಳಗೊಂಡಿದೆ. ಬಂಧಿತ ವಿದ್ಯಾರ್ಥಿಗಳು ವೇದಾಂತ್ ದೇಡಾ, ಆರ್ಯನ್ ಅರೋರಾ, ಓಜಸ್ ಮಿಶ್ರಾ, ನಿತೀಶ್ ಭಟ್ಟಿ ಮತ್ತು ಸುಶಾಂತ್ ಭದಾನ. ಕಾಲೇಜಿನಲ್ಲಿ ಶಾಂತನು ಮತ್ತು ಶಿವಂ ನಡುವೆ ಹುಡುಗಿಯೊಬ್ಬಳ ವಿಷಯಕ್ಕೆ ನಡೆದ ವಾಗ್ವಾದದಿಂದ ಘರ್ಷಣೆ ಉಂಟಾಗಿದೆ ಎಂದು ವರದಿ ಹೇಳುತ್ತದೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆಮ ಎರಡು ವರ್ಷಗಳ ಹಿಂದೆ, ಗ್ರೇಟರ್ ನೋಯ್ಡಾದಲ್ಲಿ ಎರಡು ಗುಂಪುಗಳ ವಿದ್ಯಾರ್ಥಿಗಳ ನಡುವೆ ಜಗಳ ನಡೆದ ಘಟನೆಯ ಫೋಟೋವನ್ನು ಸದ್ಯ ರಾಜಸ್ಥಾನದ ಹೆಸರಿನಲ್ಲಿ ಕೋಮುವಾದದ ಹೇಳಿಕೆಯೊಂದಿಗೆ ವೈರಲ್ ಮಾಡಲಾಗುತ್ತಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.