ಸಾಮಾಜಿಕ ಜಾಲತಾಣದಲ್ಲಿ ವೀಡಿಯೊವೊಂದು ವೈರಲ್ ಆಗುತ್ತಿದೆ. ಇದರಲ್ಲಿ ಯುವಕನೊಬ್ಬನನ್ನು ಅರೆನಗ್ನಗೊಳಿಸಿ ಹಿಂದಿನಿಂದ ಹೊಡೆಯುತ್ತಿರುವುದನ್ನು ಕಾಣಬಹುದು. ಹಸುವಿನ ಮೇಲೆ ಅತ್ಯಾಚಾರ ಮಾಡಿದ್ದಕ್ಕಾಗಿ ಬಜರಂಗದಳ ಸದಸ್ಯರು ಮುಸ್ಲಿಂ ಯುವಕನನ್ನು ಥಳಿಸಿದ್ದಾರೆ ಎಂಬ ಹೇಳಿಕೆಯೊಂದಿಗೆ ಈ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಗೋಮಾತೆಯ ಮೇಲೆ ಅತ್ಯಾಚಾರ ಎಸಗಿದ ಜಿಹಾದಿಯನ್ನು ಬಜರಂಗದಳ ಸದಸ್ಯರು ಹಿಡಿದು ಬೆತ್ತಲೆಯಾಗಿ ಮೆರವಣಿಗೆ ಮಾಡಿದರು’’ ಎಂದು ಬರೆದುಕೊಂಡಿದ್ದಾರೆ. (Archive)
ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಹಸುವಿನ ಮೇಲೆ ಅತ್ಯಾಚಾರ ಎಸೆಗಿದ ಯುವಕ ಮುಸ್ಲಿಂ ಅಲ್ಲ, ಆತ ಹಿಂದೂ ಆಗಿದ್ದು ಆತನ ಹೆಸರು ಅನುಜ್ ತಂಡಿ ಆಗಿದೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಪ್ರಮುಖ ಕೀ ಫ್ರೇಮ್ಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದ್ದೇವೆ. ಈ ಸಂದರ್ಭ ಜೂನ್ 07 ರಂದು ದೈನಿಕ್ ಭಾಸ್ಕರ್ ವೆಬ್‌ಸೈಟ್ ವೈರಲ್ ವೀಡಿಯೊದೊಂದಿಗೆ ಸುದ್ದಿ ಪ್ರಕಟಿಸಿರುವುದು ಸಿಕ್ಕಿದೆ. ಇದರಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ‘‘ರಾಯ್‌ಪುರದಲ್ಲಿ ಯುವಕನೊಬ್ಬ ಹಸುಗಳೊಂದಿಗೆ ಅಸಭ್ಯವಾಗಿ ವರ್ತಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಸುತ್ತಮುತ್ತಲಿನ ಜನರು ಆ ಯುವಕನನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ವೀಡಿಯೊ ಮಾಡಿದ್ದಾರೆ. ಈ ಘಟನೆ ಅವಂತಿ ವಿಹಾರ್‌ನ ಖಮ್ಹರ್ದಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆರೋಪಿ ಯುವಕನ ಹೆಸರು ಅನುಜ್ ತಂಡಿ ಆಗಿದ್ದು, ಶನಿವಾರ ಹಿಂದೂ ಸಂಘಟನೆಯ ಕಾರ್ಯಕರ್ತರು ದುಷ್ಕೃತ್ಯ ಎಸಗಿದ ಆರೋಪಿಯನ್ನು ಅರೆಬೆತ್ತಲೆ ಮೆರವಣಿಗೆಯಲ್ಲಿ ಕರೆದೊಯ್ದು ಖಮ್ಹರ್ದಿ ಪೊಲೀಸರಿಗೆ ಒಪ್ಪಿಸಿದರು’’ ಎಂದು ಬರೆಯಲಾಗಿದೆ.
ಹಾಗೆಯೆ ಜೂನ್ 07 ರಂದು ಐಬಿಸಿ 24 ವೆಬ್‌ಸೈಟ್ ಕೂಡ ಈ ಘಟನೆಯ ಕುರಿತು ವರದಿ ಬಿತ್ತರಿಸಿದ್ದು, ‘‘ರಾಯ್ಪುರದ ಅವಂತಿ ವಿಹಾರ್ ಪ್ರದೇಶದಲ್ಲಿ ಯುವಕನೊಬ್ಬ ಹಸುವಿನ ಮೇಲೆ ಅತ್ಯಾಚಾರ ಮಾಡುವ ಘೋರ ಅಪರಾಧ ಮಾಡಿದ್ದಾನೆ. ಈ ಘಟನೆಯ ನಂತರ, ಕೋಪಗೊಂಡ ಜನರು ಯುವಕನನ್ನು ಥಳಿಸಿ ಮೆರವಣಿಗೆ ನಡೆಸಿದರು. ಶಾಲಾ ಮೈದಾನದಲ್ಲಿ ಹಸುವಿನ ಮೇಲೆ ಅತ್ಯಾಚಾರ ಮಾಡುತ್ತಿದ್ದ ಯುವಕನನ್ನು ಜನರು ಹಿಡಿದಿದ್ದಾರೆ. ಆರೋಪಿ ಯುವಕನ ಹೆಸರು ಅನುಜ್ ತಂಡಿ ಆಗಿದ್ದು, ಘಟನೆಯ ನಂತರ, ಹಿಂದೂ ಸಂಘಟನೆಯ ಕಾರ್ಯಕರ್ತರು ಆ ಪ್ರದೇಶದಲ್ಲಿ ಯುವಕನನ್ನು ವಿವಸ್ತ್ರಗೊಳಿಸಿ ಮೆರವಣಿಗೆ ನಡೆಸಿ ಪೊಲೀಸರಿಗೆ ಒಪ್ಪಿಸಿದರು’’ ಎಂಬ ಮಾಹಿತಿ ನೀಡಲಾಗಿದೆ.
ಜೂನ್ 08 ರಂದು ನ್ಯೂಸ್ ಝೀ ಇಂಡಿಯಾ24 ಯೂಟ್ಯೂಬ್ ಚಾನೆಲ್ ‘ಹಸುವಿನೊಂದಿಗೆ ಅನೈತಿಕ ಸಂಬಂಧ ಬೆಳೆಸಿದ ವ್ಯಕ್ತಿಯನ್ನು ಬಜರಂಗದಳ ಮೆರವಣಿಗೆ ನಡೆಸಿತ’ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡು ಇದೇ ವೈರಲ್ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನೀವಿಲ್ಲಿ ನೋಡಬಹುದು.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಹಸುವಿನ ಮೇಲೆ ಅತ್ಯಾಚಾರ ಎಸೆಗಿದ ಯುವಕ ಮುಸ್ಲಿಂ ಅಲ್ಲ, ಆತ ಹಿಂದೂ ಆಗಿದ್ದು ಆತನ ಹೆಸರು ಅನುಜ್ ತಂಡಿ ಎಂದು ಖಚಿತವಾಗಿ ಹೇಳಬಹುದು.