Fact Check: ಕುಂಭಮೇಳದಿಂದ ಹಿಂದೂ ಭಕ್ತರು ಹಿಂತಿರುಗುತ್ತಿದ್ದ ರೈಲಿನ ಮೇಲೆ ಮುಸ್ಲಿಮರು ದಾಳಿ ಮಾಡಿದ್ದಾರೆಯೇ?
ಬಿಹಾರದ ಮಧುಬನಿ ರೈಲು ನಿಲ್ದಾಣದಲ್ಲಿ ರೈಲು ಬಂದು ನಿಂತಾಗ ಪ್ರಯಾಣಿಕರು ಹತ್ತಲು ರೈಲಿನ ಬಾಗಿಲು ತೆಗೆಯದ ಕಾರಣಕ್ಕೆ ಕಾದುಕುಳಿತಿದ್ದ ಪ್ರಯಾಣಿಕರು ಕೋಪಗೊಂಡು ಗಾಜನ್ನು ಪುಡಿ-ಪುಡಿ ಮಾಡಿದ ಘಟನೆ ಇದಾಗಿದೆ
By Vinay Bhat Published on 14 Feb 2025 12:11 PM IST
Claim: ಕುಂಭಮೇಳದಿಂದ ಹಿಂತಿರುಗುತ್ತಿದ್ದ ಹಿಂದೂಗಳೇ ತುಂಬಿದ್ದ ಸ್ವಾತಂತ್ರ್ಯ ಸೇನಾನಿ ಎಕ್ಸ್ ಪ್ರೆಸ್ ರೈಲು ದೆಹಲಿಗೆ ಬಂದು ತಲುಪಿದಾಗ ಮುಸ್ಲಿಮರು ರೈಲಿನ ಗಾಜು ಒಡೆದಿದ್ದಾರೆ.
Fact: ಈ ಘಟನೆ ನಡೆದಿರುವುದು ಬಿಹಾರದ ಮಧುಬನಿ ರೈಲು ನಿಲ್ದಾಣದಲ್ಲಿ. ರೈಲಿನ ಬಾಗಿಲು ತೆಗೆಯದ ಕಾರಣಕ್ಕೆ ಪ್ರಯಾಣಿಕರು ಕೋಪಗೊಂಡು ಗಾಜನ್ನು ಪುಡಿ-ಪುಡಿ ಮಾಡಿದ ಘಟನೆ ಇದಾಗಿದೆ.
ಮಹಾ ಕುಂಭಮೇಳದಿಂದ ಹಿಂದಿರುಗುತ್ತಿದ್ದ ಸ್ವಾತಂತ್ರ್ಯ ಸೇನಾನಿ ಎಕ್ಸ್‌ಪ್ರೆಸ್ ರೈಲಿನ ಮೇಲೆ ದೆಹಲಿಯಲ್ಲಿ ಮುಸ್ಲಿಮರು ಅಟ್ಯಾಕ್ ಮಾಡಿದ್ದಾರೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮ ಬಳಕೆದಾರರು ವೀಡಿಯೊವನ್ನು ಹಂಚಿಕೊಳ್ಳುತ್ತಿದ್ದಾರೆ. ಈ ವೀಡಿಯೊದಲ್ಲಿ ಕೆಲವು ಜನರು ಪ್ಲಾಟ್‌ಫಾರ್ಮ್‌ನಲ್ಲಿ ನಿಂತಿದ್ದ ರೈಲಿನ ಕಿಡಕಿಯ ಗಾಜುಗಳನ್ನು ಒಡೆಯುವುದನ್ನು ಕಾಣಬಹುದು.
ಫೇಸ್ಬುಕ್ ಬಳಕೆದಾರರೊಬ್ಬರು ಫೆಬ್ರವರಿ 12, 2025 ರಂದು ಈ ವೀಡಿಯೊವನ್ನು ಹಂಚಿಕೊಂಡು, ‘‘ಕುಂಭಮೇಳದಿಂದ ಹಿಂತಿರುಗುತ್ತಿದ್ದ ಹಿಂದೂಗಳೇ ತುಂಬಿದ್ದ ಸ್ವಾತಂತ್ರ್ಯ ಸೇನಾನಿ ಎಕ್ಸ್ ಪ್ರೆಸ್ ರೈಲು ದೆಹಲಿಗೆ ಬಂದು ತಲುಪಿದಾಗ ಹಿಂದೂ ವಿರೋಧಿಗಳು ರೈಲಿನ ಗಾಜು ಒಡೆಯಿತ್ತಿರುವ ದೃಶ್ಯ. ಯಾರಿರಬಹುದು? ನೀವೇ ಊಹಿಸಿ. ಇದೇ ಮಾದರಿಯಲ್ಲಿ ಅಯೋಧ್ಯೆಯಿಂದ ಹಿಂತಿರುಗುತ್ತಿದ್ದ ಕಾರಸೇವಕರಿದ್ದ ರೈಲಿನ ಬೋಗಿಗೆ ಬೆಂಕಿ ಹಚ್ಚಿ ಜೀವಂತ ಸುಟ್ಟು ಹಾಕಿದ ಘಟನೆ ನೆನಪಿಸಿಕೊಳ್ಳಿ. ಇಂತಹ ಉಗ್ರರನ್ನು ಸಮರ್ಥಿಸಿಕೊಳ್ಳುವ ಬೆರಕೆ ಹಿಂದುಗಳು ಇನ್ನೂ ಇದ್ದಾರೆ’’ ಎಂದು ಬರೆದುಕೊಂಡಿದ್ದಾರೆ.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ ಎಂಬುದು ಕಂಡುಬಂದಿದೆ. ರೈಲು ನಿಲ್ದಾಣಕ್ಕೆ ರೈಲು ಬಂದು ನಿಂತಾಗ ಪ್ರಯಾಣಿಕರು ಹತ್ತಲು ರೈಲಿನ ಬಾಗಿಲು ತೆಗೆಯದ ಕಾರಣಕ್ಕೆ ಕಾದುಕುಳಿತಿದ್ದ ಪ್ರಯಾಣಿಕರು ಕೋಪಗೊಂಡು ಗಾಜನ್ನು ಪುಡಿ-ಪುಡಿ ಮಾಡಿದ್ದಾರೆ. ಇದರಲ್ಲಿ ಯಾವುದೇ ಕೋಮುಕೋನವಿಲ್ಲ.
ನಿಜಾಂಶವನ್ನು ತಿಳಿಯಲು ನಾವು ಮೊದಲಿಹೆ ಈ ವೀಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದ್ದೇವೆ. ಆಗ ಈ ವೈರಲ್ ವೀಡಿಯೊದ 1 ನಿಮಿಷ 59 ಸೆಕೆಂಡ್ನಲ್ಲಿ ರೈಲಿ ಮೇಲೆ ಜಯನಗರ- ನ್ಯೂ ಡೆಲ್ಲಿ ಎಂದು ಬರೆದಿರುವುದು ಕಾಣಿಸುತ್ತದೆ. ಈ ಮಾಹಿತಿಯನ್ನು ಪಡೆದುಕೊಂಡು ನಾವು ಗೂಗಲ್ನಲ್ಲಿ ‘jayanagar new delhi train window glass attack’ ಎಂಬ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಆಗ ಇದೇ ವೈರಲ್ ವೀಡಿಯೊಕ್ಕೆ ಹೋಲಿಕೆಯಾಗುವ ಸ್ಕ್ರೀನ್ ಶಾಟ್ನೊಂದಿಗೆ ಫೆ. 11, 2025 ರಂದು ಇಂಡಿಯಾ ಟುಡೆ ‘‘ಮಹಾಕುಂಭಕ್ಕೆ ಹೋಗುವ ರೈಲನ್ನು ಹತ್ತಲು ಸಾಧ್ಯವಾಗದ ಭಕ್ತರು ರೈಲಿನ ಮೇಲೆ ಕಲ್ಲು ಎಸೆದು, ಕಿಟಕಿಗಳನ್ನು ಒಡೆದರು’’ ಎಂಬ ಶೀರ್ಷಿಕೆಯೊಂದಿಗೆ ಸುದ್ದಿ ಪ್ರಕಟಿಸಿರುವುದು ಸಿಕ್ಕಿದೆ.
ಇದರಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ‘‘ಬಿಹಾರದ ಮಧುಬನಿ ರೈಲು ನಿಲ್ದಾಣದಲ್ಲಿ ಮಹಾಕುಂಭಕ್ಕಾಗಿ ಪ್ರಯಾಗ್‌ರಾಜ್‌ಗೆ ಹೋಗುತ್ತಿದ್ದ ನಿರಾಶೆಗೊಂಡ ಭಕ್ತರು ಜನರಿಂದ ತುಂಬಿ ಹೋಗಿದ್ದ ರೈಲನ್ನು ಹತ್ತಲು ಸಾಧ್ಯವಾಗದ ಕಾರಣ ಸ್ವತಂತ್ರ ಸೇನಾನಿ ಎಕ್ಸ್‌ಪ್ರೆಸ್‌ನ ಎಸಿ ಬೋಗಿಗಳನ್ನು ಧ್ವಂಸಗೊಳಿಸಿದ್ದಾರೆ. ಉದ್ರಿಕ್ತ ಪ್ರಯಾಣಿಕರು ರೈಲಿನ ಮೇಲೆ ಕಲ್ಲು ತೂರಾಟ, ಕಿಟಕಿಗಳನ್ನು ಒಡೆದು, ಬಲವಂತವಾಗಿ ಬೋಗಿಗಳಿಗೆ ಪ್ರವೇಶಿಸಲು ಮುಂದಾದರು. ಎಸಿ ಬೋಗಿಗಳು ಭಕ್ತರಿಂದ ತುಂಬಿ ತುಳುಕುತ್ತಿದ್ದವು, ಬಾಗಿಲು ತೆರೆಯಲು ಸಾಧ್ಯವಾಗಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ವರದಿ ಮಾಡಿದ್ದಾರೆ. ನಿಲ್ದಾಣದಲ್ಲಿ ಜನಸಂದಣಿ ಹೆಚ್ಚಾಗುತ್ತಿದ್ದಂತೆ, ಕೆಲವು ಪ್ರಯಾಣಿಕರು ಕಿಟಕಿಗಳ ಮೂಲಕ ಹತ್ತಲು ಪ್ರಯತ್ನಿಸಿದರು, ಆದರೆ ಇತರರು ಕೋಪದಿಂದ ಕಲ್ಲುಗಳನ್ನು ಎಸೆದು ಗಾಜು ಒಡೆದರು’’ ಎಂದು ಬರೆಯಲಾಗಿದೆ.
ಇನ್ನು ಇದಕ್ಕೆ ಸಂಬಂಧಿಸಿದ ವೀಡಿಯೊ ವರದಿಯನ್ನು ಸಹ ನಾವು ಕಂಡುಕೊಂಡಿದ್ದೇವೆ. ಮನಿ ಕಂಟ್ರೊಲ್ ಫೆಬ್ರವರಿ 11, 2025 ರಂದು ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ಹಂಚಿಕೊಂಡಿರುವ ಸುದ್ದಿಯಲ್ಲಿ, ಈ ಘಟನೆ ಬಿಹಾರದ ಮಧುಬನಿ ರೈಲು ನಿಲ್ದಾಣದಲ್ಲಿ ನಡೆದಿದೆ. ಮಹಾಕುಂಭಮೇಳಕ್ಕೆ ಹೋಗಲು ರೈಲ್ವೆ ನಿಲ್ದಾಣದಲ್ಲಿ ಕಾಯುತ್ತಿದ್ದ ಭಕ್ತರು ರೈಲು ಹತ್ತಲು ಸಾಧ್ಯವಾಗದಿದ್ದಾಗ, ಅವರು ಕಿಟಕಿಗಳನ್ನು ಒಡೆದರು. ಪ್ರಯಾಣಿಕರು ಸ್ವತಂತ್ರ ಸೇನಾನಿ ಎಕ್ಸ್‌ಪ್ರೆಸ್‌ನ ಎಸಿ ಬೋಗಿಗಳ ಕಿಟಕಿಗಳನ್ನು ಒಡೆದರು ಎಂದು ವರದಿ ಹೇಳುತ್ತದೆ.
ಹಾಗೆಯೆ Aadhan ಹಿಂದಿ ಫೆಬ್ರವರಿ 11 ರಂದು ವೈರಲ್ ವೀಡಿಯೊದಲ್ಲಿರುವ ದೃಶ್ಯಾವಳಿಯ ಒಳಗೊಂಡ ವೀಡಿಯೊ ಸುದ್ದಿಯನ್ನು ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ಪಬ್ಲಿಶ್ ಮಾಡಿದೆ. ಇದಕ್ಕೆ ಮಧುಬನಿ ರೈಲು ನಿಲ್ದಾಣದಲ್ಲಿ ಕಲ್ಲು ತೂರಾಟ ಎಂಬ ಶೀರ್ಷಿಕೆ ನೀಡಿದೆ.
asianetnews, ನ್ಯೂಸ್ 24 ಹಾಗೂ ಹಿಂದೂಸ್ತಾನ್ ಟೈಮ್ಸ್ ಕೂಡ ಮಹಾಕುಂಭಮೇಳಕ್ಕಾಗಿ ಪ್ರಯಾಗ್‌ರಾಜ್‌ಗೆ ತೆರಳುತ್ತಿದ್ದ ಜನರು ರೈಲಿನ ಮೇಲೆ ಕಲ್ಲು ಎಸೆದು ಕಿಟಕಿಗಳನ್ನು ಒಡೆದ ಘಟನೆ ಮಧುಬನಿ ರೈಲು ನಿಲ್ದಾಣದಲ್ಲಿ ನಡೆದಿದೆ ಎಂದು ವರದಿ ಮಾಡಿದೆ. ಬಾಗಿಲು ಮುಚ್ಚಿದ್ದರಿಂದ ರೈಲು ಹತ್ತಲು ಸಾಧ್ಯವಾಗದ ಕಾರಣ ಕಿಟಕಿಯ ಗಾಜುಗಳನ್ನು ಚೂರು ಚೂರು ಮಾಡಲಾಗಿದೆ ಎಂದು ಬರೆಯಲಾಗಿದೆ.
ಇಂಡಿಯನ್ ಎಕ್ಸ್‌ಪ್ರೆಸ್ ಮಾಡಿರುವ ವರದಿಯ ಪ್ರಕಾರ, ‘‘ಫೆಬ್ರವರಿ 10 ರಂದು, ಜಯನಗರ- ನವದೆಹಲಿ ಸ್ವತಂತ್ರ ಸೇನಾನಿ ಎಕ್ಸ್‌ಪ್ರೆಸ್ ಮಧುಬನಿ ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 2 ಕ್ಕೆ ಬಂದಾಗ, ಕಿಟಕಿಗಳು ಮತ್ತು ಬಾಗಿಲುಗಳು ಒಳಗಿನಿಂದ ಮುಚ್ಚಲ್ಪಟ್ಟಿದ್ದವು. ರೈಲು ಹತ್ತಲು ಸಾಧ್ಯವಾಗದ ಮಧುಬನಿ ನಿಲ್ದಾಣದಲ್ಲಿ ಪ್ರಯಾಣಿಕರ ದೊಡ್ಡ ಗುಂಪು ಉದ್ರೇಕಗೊಂಡು ಅನೇಕ ಕಿಟಕಿ ಗಾಜುಗಳನ್ನು ಒಡೆದಿದೆ, ಇದಕ್ಕಾಗಿ ಎಫ್‌ಐಆರ್ ದಾಖಲಿಸಲಾಗಿದೆ’’ ಎಂದು ಫೆಬ್ರವರಿ 14 ರಂದು ಸುದ್ದಿ ಪ್ರಕಟಿಸಿದೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ ಈ ಘಟನೆ ನಡೆದಿರುವುದು ದೆಹಲಿಯಲ್ಲಿ ಅಲ್ಲ. ಬಿಹಾರದ ಮಧುಬನಿ ರೈಲು ನಿಲ್ದಾಣದಲ್ಲಿ ರೈಲು ಬಂದು ನಿಂತಾಗ ಪ್ರಯಾಣಿಕರು ಹತ್ತಲು ರೈಲಿನ ಬಾಗಿಲು ತೆಗೆಯದ ಕಾರಣಕ್ಕೆ ಕಾದುಕುಳಿತಿದ್ದ ಪ್ರಯಾಣಿಕರು ಕೋಪಗೊಂಡು ಗಾಜನ್ನು ಪುಡಿ-ಪುಡಿ ಮಾಡಿದ ಘಟನೆ ಇದಾಗಿದೆ ಮತ್ತು ಇದರಲ್ಲಿ ಯಾವುದೇ ಕೋಮುಕೋನವಿಲ್ಲ ಎಂದು ನ್ಯೂಸ್ ಮೀಟರ್ ಸ್ಪಷ್ಟಪಡಿಸುತ್ತದೆ.