ಆಗಸ್ಟ್ 30 ರಂದು ದೆಹಲಿಯ ಪ್ರಸಿದ್ಧ ಕಲ್ಕಾಜಿ ದೇವಾಲಯ ಆವರಣದಲ್ಲಿ ನಡೆದ ದೇವಾಲಯದ ಸೇವಕ ಯೋಗೇಂದ್ರ ಸಿಂಗ್ ಅವರ ಭೀಕರ ಹತ್ಯೆಯ ಸಿಸಿಟಿವಿ ದೃಶ್ಯಾವಳಿಗಳು ದೇಶಾದ್ಯಂತ ವೈರಲ್ ಆಗುತ್ತಿದೆ. ಈ ವೀಡಿಯೊ ಜೊತೆಗೆ ಕೆಲ ಸಾಮಾಜಿಕ ಮಾಧ್ಯಮ ಬಳಕೆದಾರರು, ಯೋಗೇಂದ್ರ ಸಿಂಗ್ ಅವರನ್ನು ಮುಸ್ಲಿಮರು ಕ್ರೂರವಾಗಿ ಥಳಿಸಿ ಕೊಂದಿದ್ದಾರೆ ಎಂದು ಹೇಳುತ್ತಿದ್ದಾರೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ಸಿಸಿಟಿವಿ ದೃಶ್ಯವನ್ನು ಹಂಚಿಕೊಂಡು, ‘‘ದೆಹಲಿಯಲ್ಲಿ ಹಿಂದೂಗಳನ್ನು ಜಾಗೃತಗೊಳಿಸಿ ಮುಸ್ಲಿಂ ಅರಾಜಕತೆಯಿಂದ ರಕ್ಷಿಸುತ್ತಿದ್ದ ಕಲ್ಕಾಜಿ ಮಂದಿರದ ಸೇವಕ ಯೋಗೇಂದ್ರ ಸಿಂಗ್ ಅವರನ್ನು ಎಲ್ಲರ ಮುಂದೆ ಸಾರ್ವಜನಿಕವಾಗಿ ಹೊಡೆದು ಕೊಂದ ಭಯೋತ್ಪಾದಕ ಜಿಹಾದಿ ಹಂದಿಗಳು. ಹಿಂದೂಗಳೆ ಇನ್ನಾದರೂ ಯೋಚಿಸಿ..’’ ಎಂದು ಬರೆದುಕೊಂಡಿದ್ದಾರೆ. (Archive)
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ಹತ್ಯೆಯಲ್ಲಿ ಯಾವುದೇ ಕೋಮು ಸಂಬಂಧವಿಲ್ಲ. ಆರೋಪಿಗಳು ಮುಸ್ಲಿಮರಲ್ಲ, ಬದಲಾಗಿ ಅವರೆಲ್ಲ ಹಿಂದೂಗಳು.
ನಿಜಾಂಶವನ್ನು ತಿಳಿಯಲು ನಾವು ಮೊದಲಿಗೆ ವೈರಲ್ ವೀಡಿಯೊದ ಪ್ರಮುಖ ಚೌಕಟ್ಟನ್ನು ಗೂಗಲ್ ಲೆನ್ಸ್ ಸಹಾಯದಿಂದ ಸರ್ಚ್ ಮಾಡಿದ್ದೇವೆ. ಈ ಸಂದರ್ಭ ಆಗಸ್ಟ್ 30 ರಂದು ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ನೊಂದಿಗೆ ಹಲವಾರು ಸುದ್ದಿ ಲೇಖನಗಳು ಪ್ರಕಟವಾಗಿರುವುದು ಕಂಡುಬಂತು. ಈ ಲೇಖನಗಳ ಪ್ರಕಾರ, ‘‘ದೆಹಲಿಯ ಕಲ್ಕಾಜಿ ದೇವಸ್ಥಾನದಲ್ಲಿ ಸುಮಾರು 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಸೇವಕ ಯೋಗೇಂದ್ರ ಸಿಂಗ್, ಆಗಸ್ಟ್ 29, 2025 ರಂದು ಚುನ್ನಿ ಪ್ರಸಾದ ವಿತರಣೆಯ ಕುರಿತು ಕೆಲವು ಭಕ್ತರೊಂದಿಗೆ ವಾಗ್ವಾದ ನಡೆಸಿದರು. ವಾದವು ಉಲ್ಬಣಗೊಂಡು ಹಿಂಸಾತ್ಮಕವಾಗಿ ಮಾರ್ಪಟ್ಟಾಗ, ಅವರನ್ನು ದೇವಾಲಯದ ಹೊರಗೆ ಎಳೆದುಕೊಂಡು ಹೋಗಿಕೋಲುಗಳಿಂದ ಹಲ್ಲೆ ಮಾಡಲಾಯಿತು. ಈ ದಾಳಿಯಲ್ಲಿ, ಗಂಭೀರವಾಗಿ ಗಾಯಗೊಂಡ ಯೋಗೇಂದ್ರ ಸಿಂಗ್ ಅವರನ್ನು ದೇವಾಲಯದ ಸಿಬ್ಬಂದಿ ತಕ್ಷಣವೇ ಏಮ್ಸ್ ಟ್ರಾಮಾ ಸೆಂಟರ್‌ಗೆ ಸ್ಥಳಾಂತರಿಸಿದರು, ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿರುವಾಗ ನಿಧನರಾದರು.’’
ಸೆಪ್ಟೆಂಬರ್ 2 ರಂದು ಪ್ರಕಟವಾದ ಟೈಮ್ಸ್ ಆಫ್ ಇಂಡಿಯಾ ಸುದ್ದಿ ಲೇಖನದ ಪ್ರಕಾರ, ಪೊಲೀಸರು ಈ ಪ್ರಕರಣದಲ್ಲಿ ಸುಮಾರು ಒಂಬತ್ತು ಆರೋಪಿಗಳನ್ನು ಬಂಧಿಸಿದ್ದಾರೆ. ಅತುಲ್ ಪಾಂಡೆ, ಮೋಹನ್ (ಅಲಿಯಾಸ್ ಭೂರಾ), ಕುಲದೀಪ್ ಬಿಧುರಿ, ನಿತಿನ್ ಪಾಂಡೆ, ಅನಿಲ್ ಪಾಂಡೆ, ಸಂದೀಪ್ ಬಿಧುರಿ, ಮೋನು ಕಂಗರ್, ಬಾಬು ಬಿದ್ಹುರಿ, ಬಾಬು ಬಿದ್ಹುರಿ ಎಂಬರವನ್ನು ಬಂಧಿಸಲಾಗಿದೆ.
ಇಂಡಿಯನ್ ಎಕ್ಸ್ಪ್ರೆಸ್ ಕೂಡ ಸೆಪ್ಟೆಂಬರ್ 1 ರಂದು ಪ್ರಕಟಿಸಿದ ಸುದ್ದಿಯಲ್ಲಿ ಆರೋಪಿಗಳ ಹೆಸರನ್ನು ನಮೋದಿಸಿದ್ದು, ‘‘ಸಿಂಗ್ ಸಾವಿನ ನಂತರ ಪ್ರಕರಣದಲ್ಲಿ ಮೋಹನ್ ಮತ್ತು ಕುಲದೀಪ್ ಅವರಲ್ಲದೆ, ಗೋವಿಂದಪುರಿಯ ನಿವಾಸಿ ನಿತಿನ್ ಪಾಂಡೆ (26) ಮತ್ತು ತಂದೆ ಅನಿಲ್ ಕುಮಾರ್ ಮತ್ತು ಅತುಲ್ ಪಾಂಡೆ (30) ಅವರನ್ನು ಬಂಧಿಸಲಾಯಿತು’’ ಎಂದು ಬರೆಯಲಾಗಿದೆ.
ಹಿಂದೂಸ್ಥಾನ್ ಟೈಮ್ಸ್ ಕೂಡ ಆಗಸ್ಟ್ 31 ರಂದು, ‘‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಐದು ಜನರನ್ನು ಬಂಧಿಸಲಾಗಿದ್ದು, ಪ್ರಮುಖ ಆರೋಪಿ ಅತುಲ್ ಪಾಂಡೆಯನ್ನು ಸ್ಥಳೀಯರು ಸ್ಥಳದಲ್ಲೇ ಹಿಡಿದಿದ್ದಾರೆ. ಶನಿವಾರ ಇತರ ನಾಲ್ವರು, ಮೋಹನ್ ಅಲಿಯಾಸ್ ಭೂರಾ, ಆತನ ಸೋದರಸಂಬಂಧಿ ಕುಲದೀಪ್ ಬಿಧುರಿ, ನಿತಿನ್ ಪಾಂಡೆ ಮತ್ತು ಆತನ ತಂದೆ ಅನಿಲ್ ಕುಮಾರ್ ಅವರನ್ನು ಬಂಧಿಸಲಾಗಿದೆ’’ ಎಂದು ಬರೆದುಕೊಂಡಿದೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ದೆಹಲಿಯಲ್ಲಿ ನಡೆದ ಕಲ್ಕಾಜಿ ದೇವಾಲಯದ ಸೇವಕ ಯೋಗೇಂದ್ರ ಸಿಂಗ್ ಅವರ ಹತ್ಯೆಯನ್ನು ಸುಳ್ಳು ಕೋಮು ಕೋನದೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.