34 ವರ್ಷದ ಜೋಹ್ರಾನ್ ಮಮ್ದಾನಿ ಇತ್ತೀಚೆಗೆ ನ್ಯೂಯಾರ್ಕ್ ನಗರದ ಮೇಯರ್ ಆಗಿ ಆಯ್ಕೆಯಾದರು, ಮಾಜಿ ಗವರ್ನರ್ ಆಂಡ್ರ್ಯೂ ಕ್ಯುಮೊ ಮತ್ತು ರಿಪಬ್ಲಿಕನ್ ಅಭ್ಯರ್ಥಿ ಕರ್ಟಿಸ್ ಸ್ಲಿವಾ ಅವರನ್ನು ಸೋಲಿಸಿ, ನಗರದ ಮೊದಲ ಮುಸ್ಲಿಂ ಮೇಯರ್ ಆಗಿ ಇತಿಹಾಸ ನಿರ್ಮಿಸಿದರು. ಇವರ ಗೆಲುವಿನ ನಂತರ ಇದೀಗ, ನ್ಯೂಯಾರ್ಕ್‌ನಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ಅಮೆರಿಕದ ಧ್ವಜವನ್ನು ದೀಪಸ್ತಂಭದಿಂದ ತೆಗೆದುಹಾಕುತ್ತಿರುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ನುಯಾರ್ಕ್ ಮೇಯರ್ ಮುಸ್ಲಿಂ ಆದ ತಕ್ಷಣ ಅಮೇರಿಕಾದ ಬಾವುಟವನ್ನು ಹರಿದು ಹಾಕಿದ ಅಬ್ದುಲ್ಲಗಳು. ಅವರ ನಿಲುವು ನಿರ್ಧಾರ ಎಂದಿಗೂ ಒಂದೇ.. ನಿರಾಶ್ರಿತರಾಗಿ ಹೋಗುವುದು ನಂತರ ಅಧಿಕಾರ ತೆಗೆದುಕೊಳ್ಳುವುದು ಆಮೇಲೆ ಇಸ್ಲಾಂ ಧರ್ಮ ಸ್ಥಾಪಿಸುವುದು. ಇದನ್ನೇ ಕೆಲ ಕಾಂಗ್ರೆಸ್ ಮುಖಂಡರು ಶಾಂತಿ ಅನ್ನುವುದು???’’ ಎಂದು ಬರೆದುಕೊಂಡಿದ್ದಾರೆ. (Archive)
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ವೀಡಿಯೊ ನವೆಂಬರ್ 2023 ರದ್ದಾಗಿದ್ದು, ಪ್ಯಾಲೆಸ್ಟೈನ್ ಪರ ಪ್ರತಿಭಟನೆಯ ಸಂದರ್ಭದ್ದಾಗಿದೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಪ್ರಮುಖ ಚೌಕಟ್ಟನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದ್ದೇವೆ. ಈ ಸಂದರ್ಭ ನವೆಂಬರ್ 11, 2023 ರಂದು @NinooCiber ಎಂಬ X ಪೋಸ್ಟ್ ಕಾಣಿಸಿತು. ಇದು ಅದೇ ವೈರಲ್ ದೃಶ್ಯಗಳನ್ನು ತೋರಿಸುತ್ತದೆ ಮತ್ತು ಇದನ್ನು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಪ್ಯಾಲೆಸ್ಟೈನ್ ಪರ ಪ್ರತಿಭಟನೆ ಎಂದು ಹೇಳಲಾಗಿದೆ.
ಅದೇ ದಿನ ಪ್ರಕಟವಾದ ಫಾಕ್ಸ್ ನ್ಯೂಸ್ ವರದಿಯ ಪ್ರಕಾರ, ಪ್ಯಾಲೆಸ್ಟೈನ್ ಪರ ಪ್ರತಿಭಟನೆಗಳಿಂದಾಗಿ ಮ್ಯಾನ್‌ಹ್ಯಾಟನ್‌ನ ಗ್ರ್ಯಾಂಡ್ ಸೆಂಟ್ರಲ್ ಟರ್ಮಿನಲ್ ಅನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಈಗ ವೈರಲ್ ಆಗಿರುವ ದೃಶ್ಯಾವಳಿಗಳನ್ನು ಒಳಗೊಂಡ ವರದಿಯಲ್ಲಿ, ಅಮೆರಿಕನ್ ಮತ್ತು ಯುಎನ್ ಧ್ವಜಗಳನ್ನು ತೆಗೆದುಹಾಕಲು ಪ್ರತಿಭಟನಾಕಾರನೊಬ್ಬ ಬೀದಿ ಕಂಬವನ್ನು ಹತ್ತಿದ್ದಾನೆ, ನಂತರ ನ್ಯೂಯಾರ್ಕ್ ಪೊಲೀಸ್ ಇಲಾಖೆ (NYPD) ಅಧಿಕಾರಿಗಳು ಆತನನ್ನು ಬಂಧಿಸಿದ್ದಾರೆ ಎಂದು ಹೇಳಲಾಗಿದೆ. ಬೀದಿ ಕಂಬವನ್ನು ಹತ್ತಿ ಧ್ವಜಗಳನ್ನು ತೆಗೆದುಹಾಕಿದ ಪ್ರತಿಭಟನಾಕಾರರನ್ನು ಪೊಲೀಸ್ ಅಧಿಕಾರಿಗಳು ಬಂಧಿಸುತ್ತಿರುವ ಫೋಟೋ ಕೂಡ ವರದಿಯಲ್ಲಿದೆ.
ನವೆಂಬರ್ 12, 2023 ರಂದು ಟೈಮ್ಸ್ ಆಫ್ ಇಂಡಿಯಾ ಕೂಡ ಇದೇ ವೈರಲ್ ವೀಡಿಯೊವನ್ನು ಯೂಟ್ಯೂಬ್ ಚಾನೆಲ್ನಲ್ಲಿ ಹಂಚಿಕೊಂಡಿದ್ದು, ಮಾಜಿ ಸೈನಿಕರ ದಿನದ ಸ್ಮರಣಾರ್ಥ ಪ್ಯಾಲೆಸ್ಟೈನ್ ಪರ ಪ್ರತಿಭಟನಾಕಾರರಿಂದ ಅಮೆರಿಕ ಮತ್ತು ವಿಶ್ವಸಂಸ್ಥೆಯ ಧ್ವಜಗಳಿಗೆ ಅಗೌರವ ಎಂಬ ಮಾಹಿತಿ ಇದೆ.
ನವೆಂಬರ್ 10, 2023 ರಂದು ಮ್ಯಾನ್‌ಹ್ಯಾಟನ್‌ನಲ್ಲಿ ನಡೆದ ಪ್ಯಾಲೆಸ್ಟೈನ್ ಪರ ಪ್ರತಿಭಟನೆಯ ಬಗ್ಗೆ ಹಲವಾರು ಇತರ ವಿಶ್ವಾಸಾರ್ಹ ಮಾಧ್ಯಮಗಳು ವರದಿ ಮಾಡಿರುವುದನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಜೋಹ್ರಾನ್ ಮಮ್ದಾನಿ ನ್ಯೂಯಾರ್ಕ್ ಮೇಯರ್ ಆದ ತಕ್ಷಣ ಮುಸ್ಲಿಮರು ಅಮೇರಿಕಾದ ಬಾವುಟವನ್ನು ಹರಿದು ಹಾಕಿದರು ಎಂದು ವೈರಲ್ ಆಗುತ್ತಿರುವ ಪೋಸ್ಟ್ ಸುಳ್ಳು ಎಂದು ನಾವು ಖಚಿತವಾಗಿ ಹೇಳುತ್ತೇವೆ.