ಪತಂಜಲಿ ಕಂಪನಿಯ ನಕಲಿ ತುಪ್ಪ ತಯಾರಿಸುವ ಕಾರ್ಖಾನೆಯ ಮೇಲೆ ಪೊಲೀಸರು ದಾಳಿ ನಡೆಸುತ್ತಿರುವ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಮುಸ್ಲಿಮರು ಪತಂಜಲಿ ಕಂಪನಿಯ ನಕಲಿ ತುಪ್ಪವನ್ನು ತಯಾರಿಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಫೇಸ್‌ಬುಕ್ ಬಳಕೆದಾರರೊಬ್ಬರು ವೈರಲ್ ವೀಡಿಯೊವನ್ನು ಹಂಚಿಕೊಂಡು, "ಈ ಅಬ್ದುಲ್‌ಗಳು ಪತಂಜಲಿ ಕಂಪನಿಯ ನಕಲಿ ತುಪ್ಪವನ್ನು ತಯಾರಿಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ... ಈ ರೀತಿಯಾಗಿ ಅವರು ಹಣ ಗಳಿಸುವುದಲ್ಲದೆ, ಹೆಸರಾಂತ ಬ್ರ್ಯಾಂಡ್ ಮತ್ತು ಬಾಬಾ ರಾಮದೇವ್ ಅವರ ಹೆಸರು ಕೆಡಿಸುತ್ತಿದ್ದಾರೆ." ಎಂದು ಬರೆದುಕೊಂಡಿದ್ದಾರೆ. (Archive)
Fact Check
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ಕಾರ್ಖಾನೆಯ ಮಾಲೀಕರು ಮತ್ತು ಉದ್ಯೋಗಿಗಳಲ್ಲಿ ಯಾರೂ ಮುಸ್ಲಿಮರಲ್ಲ, ಬದಲಿಗೆ ಎಲ್ಲರೂ ಹಿಂದೂಗಳಾಗಿದ್ದಾರೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಪ್ರಮುಖ ಕೀಫ್ರೇಮ್‌ಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದ್ದೇವೆ. ಈ ಸಂದರ್ಭ ಜನವರಿಯಲ್ಲಿ ದೈನಿಕ್ ಭಾಸ್ಕರ್ ಸೇರಿದಂತೆ ಹಲವಾರು ಮಾಧ್ಯಮಗಳಲ್ಲಿ ಇದೇ ವೈರಲ್ ವೀಡಿಯೊ ಜೊತೆಗೆ ವರದಿ ಮಾಡಿರುವುದು ಕಂಡುಬಂದಿವೆ. ಆಗ್ರಾದಲ್ಲಿ ನಕಲಿ ದೇಸಿ ತುಪ್ಪ ತಯಾರಿಸುತ್ತಿದ್ದ ಕಾರ್ಖಾನೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಕಾರ್ಖಾನೆಯು ಪತಂಜಲಿ ಮತ್ತು ಅಮುಲ್ ಸೇರಿದಂತೆ 18 ಪ್ರಸಿದ್ಧ ಕಂಪನಿಗಳ ಸ್ಟಿಕ್ಕರ್‌ಗಳೊಂದಿಗೆ ತುಪ್ಪವನ್ನು ಪ್ಯಾಕ್ ಮಾಡುತ್ತಿತ್ತು. ನಂತರ ಈ ತುಪ್ಪವನ್ನು ಉತ್ತರ ಪ್ರದೇಶ, ರಾಜಸ್ಥಾನ, ಹರಿಯಾಣ, ಜಮ್ಮು ಮತ್ತು ಕಾಶ್ಮೀರ ಮತ್ತು ಉತ್ತರಾಖಂಡಗಳಿಗೆ ಸರಬರಾಜು ಮಾಡಲಾಗುತ್ತಿತ್ತು.
ಈ ವಿಷಯದ ಕುರಿತು ಹೆಚ್ಚಿನ ತನಿಖೆ ನಡೆಸಿದಾಗ, ಈಟಿವಿ ಭಾರತ್, ಜಾಗರಣ್ ಮತ್ತು ಅಮರ್ ಉಜಾಲ ಸೇರಿದಂತೆ ಹಲವಾರು ಮಾಧ್ಯಮಗಳಲ್ಲಿ ವೈರಲ್ ವೀಡಿಯೊದ ಸ್ಕ್ರೀನ್‌ಶಾಟ್‌ಗಳ ಜೊತೆಗೆ ವಿವರವಾದ ವರದಿಗಳು ಸಿಕ್ಕವು. ‘‘ಜನವರಿ 2, 2025 ರಂದು, ಉತ್ತರ ಪ್ರದೇಶದ ಆಗ್ರಾದ ತಾಜ್‌ಗಂಜ್‌ನಲ್ಲಿರುವ ಮಾರುತಿ ಸಿಟಿ ರಸ್ತೆಯಲ್ಲಿ ನಕಲಿ ತುಪ್ಪ ಮತ್ತು ಇತರ ಕಲಬೆರಕೆ ಉತ್ಪನ್ನಗಳನ್ನು ತಯಾರಿಸುವ ಕಾರ್ಖಾನೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಆಗ್ರಾ ನಗರ ಪೊಲೀಸರ ಡಿಸಿಪಿ ಸೂರಜ್ ಕುಮಾರ್ ರೈ ನೇತೃತ್ವದಲ್ಲಿ ಈ ದಾಳಿ ನಡೆಸಲಾಯಿತು. ಪತಂಜಲಿ ಮತ್ತು ಅಮುಲ್ ಸೇರಿದಂತೆ ಒಟ್ಟು 18 ಪ್ರಸಿದ್ಧ ಬ್ರ್ಯಾಂಡ್‌ಗಳ ಸ್ಟಿಕ್ಕರ್‌ಗಳನ್ನು ಬಳಸಿಕೊಂಡು ಈ ಕಾರ್ಖಾನೆಯು ಯೂರಿಯಾ ಮತ್ತು ರಾಸಾಯನಿಕಗಳನ್ನು ಬಳಸಿ ತುಪ್ಪ ಸೇರಿದಂತೆ ವಿವಿಧ ಉತ್ಪನ್ನಗಳನ್ನು ತಯಾರಿಸುತ್ತಿದೆ ಎಂದು ಆರೋಪಿಸಲಾಗಿದೆ’’ ಎಂಬ ಮಾಹಿತಿ ಇದರಲ್ಲಿದೆ.
‘‘ಕಾರ್ಯಾಚರಣೆಯ ಸಮಯದಲ್ಲಿ, ಪೊಲೀಸರು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಒಟ್ಟು ಐದು ಜನರನ್ನು ಬಂಧಿಸಿ ಎಲ್ಲಾ ಸರಕುಗಳನ್ನು ವಶಪಡಿಸಿಕೊಂಡರು. ಬಂಧಿತರು ಕಾರ್ಖಾನೆಯ ವ್ಯವಸ್ಥಾಪಕ ರಾಜೇಶ್ ಭಾರದ್ವಾಜ್, ತಂತ್ರಜ್ಞರಾದ ಶಿವ ಚರಣ್, ಭಾಸ್ಕರ್ ಗೌತಮ್, ರವಿ ಮಂಜಿ ಮತ್ತು ಧರ್ಮೇಂದ್ರ ಸಿಂಗ್. ವ್ಯವಸ್ಥಾಪಕ ರಾಜೇಶ್ ಭಾರದ್ವಾಜ್ ಸೇರಿದಂತೆ ಬಂಧಿತರಾದ ಉಳಿದವರು ಪೊಲೀಸ್ ವಿಚಾರಣೆಯ ಸಮಯದಲ್ಲಿ ಕಾರ್ಖಾನೆಯು ಪಂಕಜ್ ಅಗರ್ವಾಲ್, ನೀರಜ್ ಅಗರ್ವಾಲ್ ಮತ್ತು ಬ್ರಿಜೇಶ್ ಅಗರ್ವಾಲ್ ಎಂಬ ಮೂವರು ವ್ಯಕ್ತಿಗಳ ಒಡೆತನದಲ್ಲಿದೆ ಎಂದು ಒಪ್ಪಿಕೊಂಡರು. ಇವರೆಲ್ಲರೂ ಮಧ್ಯಪ್ರದೇಶದ ಗ್ವಾಲಿಯರ್‌ನ ಹಳೆಯ ಹೈಕೋರ್ಟ್‌ನ ಮೈನಾ ವಾಲಿ ಗಲಿಯ ನಿವಾಸಿಗಳು. ಅವರು ಮಧ್ಯಪ್ರದೇಶದಲ್ಲಿ ತುಪ್ಪ ತಯಾರಿಸುವ ಕಾರ್ಖಾನೆಯನ್ನು ಸಹ ಹೊಂದಿದ್ದಾರೆ.’’ ಎಂದು ವರದಿಯಲ್ಲಿದೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಪತಂಜಲಿ ಹೆಸರಿನಲ್ಲಿ ನಕಲಿ ತುಪ್ಪ ತಯಾರಿಸುತ್ತಿದ್ದವರು ಮುಸ್ಲಿಮರಲ್ಲ, ಬದಲಾಗಿ ಅವರು ಹಿಂದೂಗಳು ಎಂದು ನಾವು ಖಚಿತವಾಗಿ ಹೇಳುತ್ತೇವೆ.