Fact Check: ಧರ್ಮಸ್ಥಳದಲ್ಲಿ ಸಿಕ್ಕಿದ ಅಸ್ಥಿಪಂಜರಗಳು ಎಂದು ಫ್ರಾನ್ಸ್‌ಗೆ ಸೇರಿದ ಹಳೆಯ ಫೋಟೋ ವೈರಲ್
ಎಸ್ಐಟಿ ಅಧಿಕಾರಿಗಳು, ಫೋರೆನ್ಸಿಕ್ ತಜ್ಞರ ಮೇಲ್ವಿಚಾರಣೆಯಲ್ಲಿ 29 ಜುಲೈ 2025 ರಿಂದ ಶೋಧಕಾರ್ಯ ನಡೆಸುತ್ತಿದ್ದಾರೆ. ಇದರ ಮಧ್ಯೆ ಉತ್ಖನನ ಪ್ರಕ್ರಿಯೆಯಲ್ಲಿರುವ ಹಲವಾರು ಮಾನವ ಅಸ್ಥಿಪಂಜರಗಳನ್ನು ತೋರಿಸುವ ಫೋಟೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಇದು ಉತ್ಖನನ ಸ್ಥಳಗಳಿಂದ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.
By Vinay Bhat
Claim:ಧರ್ಮಸ್ಥಳದಲ್ಲಿ ನಡೆಯುತ್ತಿರುವ ಶೋಧಕಾರ್ಯದ ವೇಳೆ ಸಿಕ್ಕಿದ ಅಸ್ಥಿಪಂಜರಗಳನ್ನು ಫೋಟೋ ತೋರಿಸುತ್ತದೆ.
Fact:ಹಕ್ಕು ಸುಳ್ಳು. ಈ ಫೋಟೋವು 2011 ಮತ್ತು 2013 ರ ನಡುವೆ ಫ್ರಾನ್ಸ್‌ನ ರೆನ್ನೆಸ್‌ನಲ್ಲಿರುವ ಜಾಕೋಬಿನ್ಸ್ ಕಾನ್ವೆಂಟ್‌ನಲ್ಲಿ ನಡೆದ ಉತ್ಖನನಕ್ಕೆ ಸಂಬಂಧಿಸಿದೆ.
ಧರ್ಮಸ್ಥಳ ಪ್ರಕರಣ ಇಡೀ ದೇಶದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಇಲ್ಲಿ ನಡೆದಿದೆ ಎನ್ನಲಾದ ಅಪರಾಧ ಕೃತ್ಯಗಳ ಆರೋಪ ಪ್ರಕರಣದ ಬಗ್ಗೆ ಎಸ್‌ಐಟಿ ಶೋಧಕಾರ್ಯ ಮುಂದುವರಿಸಿದ್ದು, ಕಾಡಿನಲ್ಲಿ ಮೃತದೇಹದ ಅವಶೇಷಗಳು ಪತ್ತೆಯಾಗಿವೆ. ಪ್ರಕರಣದ ಸಾಕ್ಷಿ ದೂರುದಾರ ತೋರಿಸಿದ್ದ ಕೆಲವು ಕಡೆಗಳಲ್ಲಿ ಅವಶೇಷಗಳು ಸಿಕ್ಕಿವೆ. ಒಂದು ತಲೆಬುರುಡೆ, ಬೆನ್ನು ಮೂಳೆ ಸೇರಿ ಸುಮಾರು 100 ಮೂಳೆ ಸಿಕ್ಕಿವೆ ಎಂದು ಎಸ್ಐಟಿ ಮೂಲಗಳು ತಿಳಿಸಿವೆ.
ಎಸ್ಐಟಿ ಅಧಿಕಾರಿಗಳು, ಫೋರೆನ್ಸಿಕ್ ತಜ್ಞರ ಮೇಲ್ವಿಚಾರಣೆಯಲ್ಲಿ 29 ಜುಲೈ 2025 ರಿಂದ ಶೋಧಕಾರ್ಯ ನಡೆಸುತ್ತಿದ್ದಾರೆ. ಇದರ ಮಧ್ಯೆ ಉತ್ಖನನ ಪ್ರಕ್ರಿಯೆಯಲ್ಲಿರುವ ಹಲವಾರು ಮಾನವ ಅಸ್ಥಿಪಂಜರಗಳನ್ನು ತೋರಿಸುವ ಫೋಟೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಇದು ಧರ್ಮಸ್ಥಳದ ಉತ್ಖನನ ಸ್ಥಳಗಳಿಂದ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಪತ್ರಕರ್ತೆ ಗೌರಿ ಲಂಕೇಶ್ 2001 ರಲ್ಲಿ ಧರ್ಮಸ್ಥಳದ ದೌರ್ಜನ್ಯದ ಬಗ್ಗೆ ಪ್ರಕಟಿಸಿದ್ದರು, ಅದು ಅವರ ಹತ್ಯೆಗೆ ಕಾರಣವಾಯಿತು ಎಂದು ಕೂಡ ಫೇಸ್‌ಬುಕ್ ಬಳಕೆದಾರರು ಆರೋಪಿಸಿದ್ದಾರೆ.
ಚಿತ್ರದ ಮೇಲಿನ ತೆಲುಗು ಪಠ್ಯದ ಕನ್ನಡ ಅನುವಾದವು ಹೀಗೆ ಹೇಳುತ್ತದೆ, "ಈ ಅಸ್ಥಿಪಂಜರಗಳಲ್ಲಿ ಕನಿಷ್ಠ ಒಂದು ಹಸುವಿನದ್ದಾಗಿದ್ದರೆ ಉತ್ತಮವಾಗಿತ್ತು - ಆದರೆ ಇಲ್ಲ, ಅವೆಲ್ಲವೂ ಬೀದಿಗಳಲ್ಲಿ ನಡೆಯುತ್ತಿದ್ದ ಜನರಿಗೆ ಸೇರಿದ್ದವು. ಇಲ್ಲಿ, ಅವರೆಲ್ಲರೂ ಮನುಷ್ಯರು. #ಧರ್ಮಸ್ಥಳ"
"ಗೌರಿ ಲಂಕೇಶ್ 2001 ರಲ್ಲೇ ತಮ್ಮ ‘ಲಂಕೇಶ್’ ಪತ್ರಿಕೆಯಲ್ಲಿ ಧರ್ಮಸ್ಥಳದ ದೌರ್ಜನ್ಯಗಳ ಬಗ್ಗೆ ಪ್ರಕಟಿಸಿದ್ದರು. ಅಂದಿನಿಂದ, ಸಾವು ಅವರನ್ನು ಬೆನ್ನಟ್ಟುತ್ತಲೇ ಇತ್ತು ಮತ್ತು ಅಂತಿಮವಾಗಿ ಅವರನ್ನು ಧರ್ಮಸ್ಥಳ ಮಾಫಿಯಾ ಕೊಂದಿತು" ಎಂಬ ಶೀರ್ಷಿಕೆಯೊಂದಿಗೆ ಫೇಸ್‌ಬುಕ್ ಬಳಕೆದಾರರುಈ ಫೋಟೋವನ್ನು ಹಂಚಿಕೊಂಡಿದ್ದಾರೆ. (Archive)
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ಫೋಟೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ಫೋಟೋವು 2011 ಮತ್ತು 2013 ರ ನಡುವೆ ಫ್ರಾನ್ಸ್‌ನ ರೆನ್ನೆಸ್‌ನಲ್ಲಿರುವ ಜಾಕೋಬಿನ್ಸ್ ಕಾನ್ವೆಂಟ್‌ನಲ್ಲಿ ನಡೆದ ಉತ್ಖನನಕ್ಕೆ ಸಂಬಂಧಿಸಿದೆ.
ಧರ್ಮಸ್ಥಳ ಉತ್ಖನನದ ಕುರಿತು ನಾವು ಕೀವರ್ಡ್ ಹುಡುಕಾಟ ನಡೆಸಿದಾಗ, ಆಗಸ್ಟ್ 5 ರಂದು ಪ್ರಜಾವಾಣಿ ಪ್ರಕಟಿಸಿದ ವರದಿಯನ್ನು ಕಂಡುಕೊಂಡೆವು.
ವರದಿಯ ಪ್ರಕಾರ, ಪ್ರಕರಣದ ಸಾಕ್ಷಿ ದೂರುದಾರ ತೋರಿಸಿದ್ದ 11ನೇ ಜಾಗಕ್ಕಿಂತ ಸುಮಾರು 100 ಮೀಟರ್ ದೂರದಲ್ಲಿ ನೆಲದ ಮೇಲೆ ಅವಶೇಷಗಳು ಸಿಕ್ಕಿವೆ. ಕೇವಲ ಒಂದು ತಲೆಬುರುಡೆ, ಬೆನ್ನು ಮೂಳೆ ಸೇರಿ ಸುಮಾರು 100 ಮೂಳೆ ಸಿಕ್ಕಿವೆ ಎಂದು ಎಸ್ಐಟಿ ಮೂಲಗಳು ಪ್ರಜಾವಾಣಿಗೆ ತಿಳಿಸಿದೆ ಎಂಬ ಮಾಹಿತಿ ಇದರಲ್ಲಿದೆ.
ಆದಾಗ್ಯೂ, ವೈರಲ್ ಫೋಟೋವು ತಲೆಬುರುಡೆಗಳನ್ನು ಹೊಂದಿರುವ ಹಲವಾರು ಅಸ್ಥಿಪಂಜರಗಳನ್ನು ತೋರಿಸುತ್ತಿದೆ, ಇದು ಧರ್ಮಸ್ಥಳ ಉತ್ಖನನಗಳಿಗೆ ಸಂಬಂಧಿಸಿದ್ದಲ್ಲ ಎಂದು ದೃಢಪಡಿಸುತ್ತದೆ.
ಅಸ್ಥಿಪಂಜರಗಳಿರುವ ಫೋಟೋದ ಮೂಲ ಯಾವುದು?
ನಿಜಾಂಶವನ್ನು ತಿಳಿಯಲು ನಾವು ಫೋಟೋದ ರಿವರ್ಸ್ ಇಮೇಜ್ ಹುಡುಕಾಟ ನಡೆಸಿದಾಗ, ಮೇ 5, 2021 ರಂದು ಫ್ರೆಂಚ್ ಸುದ್ದಿವಾಹಿನಿ ಲೆ ಮಾಂಡೆ ಇದೇ ವೈರಲ್ ಫೋಟೋದೊಂದಿಗೆ ಸುದ್ದಿ ಪ್ರಕಟಿಸಿರುವುದು ಸಿಕ್ಕಿತು. ವರದಿಯ ಪ್ರಕಾರ, ಈ ಚಿತ್ರವು ಫ್ರಾನ್ಸ್‌ನ ರೆನ್ನೆಸ್‌ನಲ್ಲಿರುವ ಜಾಕೋಬಿನ್ ಕಾನ್ವೆಂಟ್‌ನಲ್ಲಿ ನಡೆದ ಪುರಾತತ್ತ್ವ ಶಾಸ್ತ್ರದ ಉತ್ಖನನವನ್ನು ಚಿತ್ರಿಸುತ್ತದೆ. ಆ ಸ್ಥಳದಲ್ಲಿ ಪತ್ತೆಯಾದ ಎರಡು ಸಾಮೂಹಿಕ ಸಮಾಧಿಗಳಲ್ಲಿ ಒಂದರಲ್ಲಿ ಸಮಾಧಿ ಮಾಡಲಾದ ರಾಜ ಸೈನ್ಯದ ಸೈನಿಕರ ಅವಶೇಷಗಳನ್ನು ಇದು ತೋರಿಸುತ್ತದೆ.
ಈ ಅಸ್ಥಿಪಂಜರಗಳು 15 ನೇ ಶತಮಾನದ ಅಂತ್ಯದ್ದಾಗಿದ್ದು, 1488 ರಲ್ಲಿ ಸೇಂಟ್-ಆಬಿನ್-ಡು-ಕಾರ್ಮಿಯರ್ ಕದನದಲ್ಲಿ ಮಡಿದ ಸೈನಿಕರ ಅವಶೇಷಗಳು ಎಂದು ನಂಬಲಾಗಿದೆ ಎಂದು ಲೆ ಮಾಂಡೆ ಲೇಖನವು ವಿವರಿಸಿದೆ. ಈ ಯುದ್ಧವು ಬ್ರಿಟಾನಿಯ ಡಚಿ ಮತ್ತು ಫ್ರೆಂಚ್ ಕಿರೀಟದ ನಡುವೆ ನಡೆದಿತ್ತು.
ಹಾಗೆಯೆ ಮೇ 5, 2021 ರಂದು ಮತ್ತೊಂದು ಫ್ರೆಂಚ್ ಮಾಧ್ಯಮವಾದ ಲೆ ಪ್ಯಾರಿಸಿಯನ್ ವರದಿಯಲ್ಲಿ ಇದೇ ವೈರಲ್ ಫೋಟೋವನ್ನು ನಾವು ಕಂಡುಕೊಂಡಿದ್ದೇವೆ.
2011 ಮತ್ತು 2013 ರ ನಡುವೆ, ಫ್ರೆಂಚ್ ರಾಷ್ಟ್ರೀಯ ಪ್ರಿವೆಂಟಿವ್ ಆರ್ಕಿಯಲಾಜಿಕಲ್ ರಿಸರ್ಚ್ ಇನ್‌ಸ್ಟಿಟ್ಯೂಟ್ (INRAP) ನ ತಂಡವು ರೆನ್ನೆಸ್‌ನಲ್ಲಿರುವ ಜಾಕೋಬಿನ್ಸ್ ಕಾನ್ವೆಂಟ್‌ನಿಂದ ನೂರಾರು ಮಾನವ ಅವಶೇಷಗಳನ್ನು ಉತ್ಖನನ ಮಾಡಿದೆ ಎಂದು ವರದಿ ಹೇಳಿದೆ. 15 ನೇ ಶತಮಾನದ ಅಂತ್ಯದಲ್ಲಿ ಬ್ರಿಟಾನಿಯ ಸ್ವಾತಂತ್ರ್ಯವು ಮರೆಯಾಗಿರುವ ಸ್ಥಳ, ಐತಿಹಾಸಿಕವಾಗಿ ಮಹತ್ವದ್ದಾಗಿರುವ ಈ ಪ್ರದೇಶವು ರೆನ್ನೆಸ್‌ನಲ್ಲಿರುವ ಜಾಕೋಬಿನ್ಸ್ ಕಾನ್ವೆಂಟ್‌ನಿಂದ ನೂರಾರು ಮಾನವ ಅವಶೇಷಗಳನ್ನು ಹೊರತೆಗೆದಿದೆ.
ಮೇ 5, 2021 ರಂದು PLOS ONE ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಈ ಅಸ್ಥಿಪಂಜರಗಳು 1491 ರಲ್ಲಿ ರೆನ್ನೆಸ್ ಮುತ್ತಿಗೆಯ ಸಮಯದಲ್ಲಿ ಮಡಿದ ಎದುರಾಳಿ ಸೈನ್ಯದ ಸೈನಿಕರದ್ದಾಗಿವೆ ಎಂದು ನಂಬಲಾಗಿದೆ, ಇದು ಬ್ರಿಟಾನಿ ಫ್ರಾನ್ಸ್ ಸಾಮ್ರಾಜ್ಯದೊಂದಿಗೆ ಏಕೀಕರಣಗೊಳ್ಳಲು ಕಾರಣವಾದ ಪ್ರಮುಖ ಸಂಘರ್ಷವಾಗಿದೆ.
ಮೇ 5, 2021 ರಂದು PLOS ONE ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ನಾವು ಈ ಚಿತ್ರವನ್ನು ಕಂಡುಕೊಂಡಿದ್ದೇವೆ. ಇದನ್ನು 14 ನೇ ಶತಮಾನದ ಅಂತ್ಯದಿಂದ 16 ನೇ ಶತಮಾನದವರೆಗಿನ ಜಾಕೋಬಿನ್ ಕಾನ್ವೆಂಟ್‌ನಲ್ಲಿನ ಸಾಮೂಹಿಕ ಸಮಾಧಿಯ ಪುರಾತತ್ತ್ವ ಶಾಸ್ತ್ರದ ಉತ್ಖನನದ ಭಾಗವೆಂದು ವಿವರಿಸಲಾಗಿದೆ.
ಧರ್ಮಸ್ಥಳದಲ್ಲಿ ನಡೆದ ದೌರ್ಜನ್ಯಗಳ ಬಗ್ಗೆ ಗೌರಿ ಲಂಕೇಶ್ ವರದಿ ಮಾಡಿದ್ದಾರೆಯೇ ಎಂಬ ಬಗ್ಗೆ ಆನ್ಲೈನ್ನಲ್ಲಿ ಹುಡುಕಿದಾಗ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಈ ಕುರಿತು ನಾವು ಲಂಕೇಶ್ ಪತ್ರಿಕೆಯವರನ್ನು ಸಂಪರ್ಕಿಸಿದ್ದೇವೆ, ಅವರು ಮಾಹಿತಿ ನೀಡಿದ ತಕ್ಷಣ ಈ ಸ್ಟೋರಿಯನ್ನು ಅಪ್ಡೇಟ್ ಮಾಡಲಾಗುತ್ತಿದೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, 2021 ರಲ್ಲಿ ಫ್ರಾನ್ಸ್‌ನಲ್ಲಿ ನಡೆದ ಉತ್ಖನನದ ಫೋಟೋವನ್ನು ಧರ್ಮಸ್ಥಳದಲ್ಲಿ ನಡೆಯುತ್ತಿರುವ ಶೋಧಾಕಾರ್ಯಕ್ಕೆ ಸಂಬಂಧಿಸಿ ತಪ್ಪಾಗಿ ಶೇರ್ ಮಾಡಲಾಗುತ್ತದೆ ಎಂದು ನಾವು ತೀರ್ಮಾನಿಸುತ್ತೇವೆ.