Fact Check: ಬಾಂಗ್ಲಾದಲ್ಲಿ ಹಿಂದೂ ಮಹಿಳೆಯರನ್ನು ಮನೆಯಿಂದ ಹೊರ ಹಾಕಿ ದಾಳಿ ಎಂದು ಹಳೇಯ ವೀಡಿಯೊ ವೈರಲ್

ಇತ್ತೀಚಿನ ದಿನಗಳಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಆಗುತ್ತಿರುವ ಹಲ್ಲೆಗೆ ಲಿಂಕ್ ಮಾಡಿ, ಹಿಂದೂಗಳ ಮೇಲಿನ ದೌರ್ಜನ್ಯ ಎಂದು ವೀಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

By Vinay Bhat  Published on  20 Dec 2024 10:34 AM GMT
Fact Check: ಬಾಂಗ್ಲಾದಲ್ಲಿ ಹಿಂದೂ ಮಹಿಳೆಯರನ್ನು ಮನೆಯಿಂದ ಹೊರ ಹಾಕಿ ದಾಳಿ ಎಂದು ಹಳೇಯ ವೀಡಿಯೊ ವೈರಲ್
Claim: ಬಾಂಗ್ಲಾದೇಶದಲ್ಲಿ ಹಿಂದೂ ಮಹಿಳೆಯರನ್ನು ಮನೆ ಇಂದ ಆಚೆ ಹಾಕಿ ಮುಸ್ಲಿರು ದಾಳಿ ಮಾಡಿದ್ದಾರೆ.
Fact: ಇದು ಹಳೇಯ ವೀಡಿಯೊ ಆಗಿದೆ. ಬಾಂಗ್ಲಾದೇಶದಲ್ಲಿ ಎರಡು ವರ್ಷಗಳ ಹಿಂದೆ ಭೂಮಿ ವಿವಾದಕ್ಕೆ ಸಂಬಂಧಿಸಿದ ಜಗಳ ಇದಾಗಿದೆ.

(Content Warning: This article reports graphic visuals, which some readers may find distressing. Reader discretion is advised.)

ಇಬ್ಬರು ಪುರುಷರು ಮಹಿಳೆಯರ ಮೇಲೆ ಹಲ್ಲೆ ನಡೆಸುತ್ತಿರುವ ವೀಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಪುರುಷರು ಮೊದಲಿಗೆ ಮಹಿಳೆಯರ ಜೊತೆ ಮಾತಿಗೆ ಇಳಿದು ನಂತರ ಕೋಲಿನಿಂದ ಹೊಡೆಯುತ್ತಿರುವುದು ವೀಡಿಯೊದಲ್ಲಿದೆ. ಇತ್ತೀಚಿನ ದಿನಗಳಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಆಗುತ್ತಿರುವ ಹಲ್ಲೆಗೆ ಲಿಂಕ್ ಮಾಡಿ, ಹಿಂದೂಗಳ ಮೇಲಿನ ದೌರ್ಜನ್ಯ ಎಂದು ವೀಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಬಾಂಗ್ಲಾದೇಶ. ಮನೆ ಇಂದ ಆಚೆ ಹಾಕಿ ಹಿಂದೂ ಹೆಣ್ಣುಮಕ್ಕಳ ಮೇಲೆ ಶಾಂತಿ ದುತರ ದಾಳಿ. ಎಚ್ಚರ ಹಿಂದುಗಳೇ ಎಚ್ಚರ ನಾಳೆ ನಿಮಗೂ ಇದೆ ಪರಿಸ್ಥಿತಿ ಬರುತ್ತೆ ಎಚ್ಚತ್ತಕ್ಕೊಳ್ಳಿ’’ ಎಂದು ಬರೆದುಕೊಂಡಿದ್ದಾರೆ.

ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ವೀಡಿಯೊ 2022 ರದ್ದಾಗಿದೆ. ಬಾಂಗ್ಲಾದೇಶದಲ್ಲಿ ಎರಡು ವರ್ಷಗಳ ಹಿಂದೆ ಭೂಮಿ ವಿವಾದಕ್ಕೆ ಸಂಬಂಧಿಸಿದ ಜಗಳ ಇದಾಗಿದೆ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ ತೆಗೆದುಕೊಂಡು ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಆಗ ಇದೇ ವೈರಲ್ ವೀಡಿಯೊವನ್ನು ಜೂನ್ 3, 2022 ರಂದು ಬಾಂಗ್ಲಾದೇಶದ ಸ್ಥಳೀಯ ಸುದ್ದಿ ಮಾಧ್ಯಮ ಪ್ರೋಥೋಮ್ ಅಲೋ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಿರುವುದು ನಮಗೆ ಸಿಕ್ಕಿದೆ.

‘‘ಬಾಂಗ್ಲಾದೇಶದ ಚಟ್ಟೋಗ್ರಾಮ್‌ನ ಸೀತಾಕುಂಡ್‌ನಲ್ಲಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದಿದೆ. ಈ ಜಗಳದಲ್ಲಿ ಮಹಿಳೆಯೊಬ್ಬರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ’’ ಎಂಬ ಮಾಹಿತಿ ವೀಡಿಯೊದಲ್ಲಿದೆ.

ಬಳಿಕ ಪ್ರೋಥೋಮ್ ಅಲೋ ಯೂಟ್ಯೂಬ್ ಚಾನೆಲ್​ನಲ್ಲಿ ನೀಡಿದ ಶೀರ್ಷಿಕೆಯನ್ನು ಕಾಪಿ ಮಾಡಿ ಗೂಗಲ್​ನಲ್ಲಿ ಸರ್ಚ್ ಮಾಡಿದ್ದೇವೆ. ಆಗ ಈ ಘಟನೆಗೆ ಸಂಬಂಧಿಸಿದಂತೆ ಕೆಲ ವರದಿಗಳು ನಮಗೆ ಕಂಡುಬಂತು. ಬಾಂಗ್ಲಾದ ಸ್ಥಳೀಯ ವೆಬ್​ಸೈಟ್ Sangbad ಜೂನ್ 8, 2022 ರಂದು ಇದೇ ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ ಹಂಚಿಕೊಂಡು ಸುದ್ದಿಯನ್ನು ಪ್ರಕಟಿಸಿದೆ.

ಇದರಲ್ಲಿರುವ ಮಾಹಿತಿಯ ಪ್ರಕಾರ, ‘‘ದಾಳಿಕೋರರ ಹೆಸರುಗಳು ತೌಹಿದುಲ್ ಇಸ್ಲಾಂ ಮತ್ತು ಅಲಂಗೀರ್ ಹುಸೇನ್. ಆ ಪ್ರದೇಶದ ಪ್ರಭಾವಿ ವ್ಯಕ್ತಿ ಅಮಿನುಲ್ ಹಕ್ ಅವರ ಪುತ್ರ. ಹಲ್ಲೆಗೊಳಗಾದ ಮೂವರು ಗೃಹಿಣಿಯರ ಹೆಸರು ರಾಣಿ ದಾಸ್ (30), ಅಂಜನಾ ರಾಣಿ ದಾಸ್ (32) ಮತ್ತು ರಿಮಾ ರಾಣಿ ದಾಸ್ (27). ಜಾಗದ ವಿಚಾರಕ್ಕೆ ಈ ಎರಡು ಕುಟುಂಬಗಳ ಮಧ್ಯೆ ಕೆಲ ವರ್ಷಗಳಿಂದ ಜಗಳ ನಡೆಯುತ್ತಿತ್ತು. ವಿವಾದವಿರುವ ಭೂಮಿಗೆ ತೆರಳು ಹಣ್ಣನ್ನು ತಂದಿದ್ದಾರೆ. ಇದನ್ನು ಗಮನಿಸಿದ ತೌಹಿದುಲ್ ಮತ್ತು ಅಲಂಗೀರ್ ಮಹಿಳೆಯರ ಮೇಲೆ ಹಲ್ಲೆ ನಡೆಸಿದ್ದಾರೆ. ಆರೋಪಿಗಳ ವಿರುದ್ಧ ಪ್ರಕರಣವೂ ದಾಖಲಾಗಿದೆ’’ ಎಂಬ ಮಾಹಿತಿ ಇದೆ.

ಢಾಕಾ ಟ್ರಿಬ್ಯೂನ್ ಕೂಡ ಜೂನ್ 4, 2022 ರಂದು ಈ ಘಟನೆಗೆ ಸಂಬಂಧಿಸಿದಂತೆ ಸುದ್ದಿ ಮಾಡಿದೆ. ‘‘ಚಟ್ಟೋಗ್ರಾಮ್‌ನ ಸೀತಾಕುಂಡ್‌ನಲ್ಲಿರುವ ಬಾಷ್ಬರಿಯಾ ಯೂನಿಯನ್‌ನ ಜೋರ್ಬೋಟ್ ಟೋಲಾ ಪ್ರದೇಶದಲ್ಲಿ ಬ್ಲ್ಯಾಕ್‌ಬೆರಿ ಹಣ್ಣನ್ನು ಕೀಳಿದ್ದಕ್ಕಾಗಿ ಮೂವರು ಮಹಿಳೆಯರ ಮೇಲೆ ದಾಳಿ ಮಾಡಲಾಗಿದೆ’’ ಎಂದು ಹೇಳಲಾಗಿದೆ.

ಈ ಘಟನೆಗೆ ಸಂಬಂಧಿಸಿದ ಇನ್ನೂ ಕೆಲ ವರದಿಗಳನ್ನು ನೀವು ಇಲ್ಲಿ ಓದಬಹುದು.

ಹೀಗಾಗಿ ಬಾಂಗ್ಲಾದೇಶದಲ್ಲಿ ಹಿಂದೂ ಮಹಿಳೆಯರ ಮೇಲಿನ ದಾಳಿಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಹೇಳಿಕೆ ಸುಳ್ಳು ಎಂದು ತಿಳಿದುಬಂದಿದೆ. ಬಳಕೆದಾರರು ಎರಡು ವರ್ಷಗಳ ಹಳೆಯ ವೀಡಿಯೊವನ್ನು ಈ ಹಂಚಿಕೊಳ್ಳುತ್ತಿದ್ದಾರೆ. ಈ ಘಟನೆಯಲ್ಲಿ ವಿಭಿನ್ನ ಧರ್ಮದ ಎರಡು ಗುಂಪುಗಳ ಜನರಿದ್ದರೂ ಇದು ಇತ್ತೀಚಿನ ಘಟನೆಗೆ ಸಂಬಂಧಿಸಿದ್ದಲ್ಲ ಎಂದು ನಾವು ಖಚಿತವಾಗಿ ಹೇಳುತ್ತೇವೆ.

Claim Review:ಬಾಂಗ್ಲಾದೇಶದಲ್ಲಿ ಹಿಂದೂ ಮಹಿಳೆಯರನ್ನು ಮನೆ ಇಂದ ಆಚೆ ಹಾಕಿ ಮುಸ್ಲಿರು ದಾಳಿ ಮಾಡಿದ್ದಾರೆ.
Claimed By:Facebook User
Claim Reviewed By:News Meter
Claim Source:Social Media
Claim Fact Check:False
Fact:ಇದು ಹಳೇಯ ವೀಡಿಯೊ ಆಗಿದೆ. ಬಾಂಗ್ಲಾದೇಶದಲ್ಲಿ ಎರಡು ವರ್ಷಗಳ ಹಿಂದೆ ಭೂಮಿ ವಿವಾದಕ್ಕೆ ಸಂಬಂಧಿಸಿದ ಜಗಳ ಇದಾಗಿದೆ.
Next Story