ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊವೊಂದು ವೈರಲ್ ಆಗುತ್ತಿದ್ದು, ಕೆಲವರು ತುಪ್ಪದ ಬಾಕ್ಸ್‌ನಿಂದ ಪಿಸ್ತೂಲ್ ತೆಗೆಯುತ್ತಿರುವುದನ್ನು ಕಾಣಬಹುದು. ತುಪ್ಪದ ಪೆಟ್ಟಿಗೆಯಲ್ಲಿ ಪಿಸ್ತೂಲ್‌ಗಳನ್ನು ಬಚ್ಚಿಟ್ಟುಕೊಂಡಿದ್ದ ಮುಸ್ಲಿಂ ಯುವಕರನ್ನು ಪೊಲೀಸರು ಹಿಡಿದಿದ್ದಾರೆ ಎಂಬರ್ಥದಲ್ಲಿ ಪೋಸ್ಟ್ ಅನ್ನು ಅನೇಕರು ಹಂಚಿಕೊಳ್ಳುತ್ತಿದ್ದಾರೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಈ ಶಾಂತಿ ದೂತರು ಮುಸ್ಲಿಂ ಧರ್ಮದವರು ಕಾಫಿರರನ್ನ (ಹಿಂದುಗಳನ್ನು) ಹೊಡೆಯಲಿಕ್ಕೆ ಯಾವ ತರಹದ ಆಯುಧಗಳನ್ನು ತರುತ್ತಿದ್ದಾರೆ ನೋಡಿ, ಸರಿಯಾದ ಸಮಯಕ್ಕೆ ಪೊಲೀಸರು ಹಿಡಿಯುತ್ತಾರೆ ಇಲ್ಲದಿದ್ದರೆ... ಲೇ ಜಾತಿ ತೂತು ಹಿಂದುಗಳೇ ಅವರು ಜಾತಿ ಕೇಳಿ ಹೊಡೆಯೋಲ್ಲ ಅರ್ಥ ಮಾಡ್ಕೊಳಿ’’ ಎಂದು ಬರೆದುಕೊಂಡಿದ್ದಾರೆ.
ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರು ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ನಮ್ಮ ತನಿಖೆಯಲ್ಲಿ, ವೈರಲ್ ವೀಡಿಯೊ 2019 ರದ್ದು ಮತ್ತು ಪಿಸ್ತೂಲ್‌ನೊಂದಿಗೆ ಬಂಧಿಸಲ್ಪಟ್ಟವರು ಮುಸ್ಲಿಮರಲ್ಲ, ಅವರು ಹಿಂದೂಗಳು ಎಂದು ನಾವು ಕಂಡುಕೊಂಡಿದ್ದೇವೆ.
ವೈರಲ್ ಪೋಸ್ಟ್‌ನ ಸತ್ಯವನ್ನು ತಿಳಿದುಕೊಳ್ಳಲು, ಮೊದಲನೆಯದಾಗಿ ನಾವು ಈ ವೀಡಿಯೊದ ಸ್ಕ್ರೀನ್‌ಶಾಟ್‌ಗಳ ರಿವರ್ಸ್ ಇಮೇಜ್ ಸರ್ಚ್ ಅನ್ನು ಗೂಗಲ್ ಮಾಡಿದ್ದೇವೆ. ಆಗ 27 ಸೆಪ್ಟೆಂಬರ್ 2019 ರಂದು ದೆಹಲಿ ಟಕ್‌ನ ಯೂಟ್ಯೂಬ್ ಚಾನಲ್‌ನಲ್ಲಿ ಈ ವೀಡಿಯೊ ಅಪ್‌ಲೋಡ್ ಮಾಡಿರುವುದನ್ನು ನಾವು ಕಂಡುಕೊಂಡಿದ್ದೇವೆ.
"ದೆಹಲಿಯಲ್ಲಿ ಕಳ್ಳಸಾಗಣೆ, ತುಪ್ಪದ ಪೆಟ್ಟಿಗೆಗಳಲ್ಲಿ ಪಿಸ್ತೂಲ್" ಎಂದು ವೀಡಿಯೋ ಜೊತೆಗಿನ ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಅಲ್ಲದೆ ಬಂಧಿತರಿಬ್ಬರ ಹೆಸರುಗಳು - ಜಿತೇಂದ್ರ ಜೀತು ಮತ್ತು ರಾಜ್ ಬಹದ್ದೂರ್ ಎಂದು ವೀಡಿಯೊದಲ್ಲಿ ಹೇಳಲಾಗಿದೆ.
ಮತ್ತಷ್ಟು ಕೀವರ್ಡ್ ಹುಡುಕಾಟ ನಡೆಸಿದಾಗ, 26 ಸೆಪ್ಟೆಂಬರ್ 2019 ವೈರಲ್ ವೀಡಿಯೊದ ಸ್ಕ್ರೀನ್‌ಶಾಟ್ ಅನ್ನು ಒಳಗೊಂಡಿರುವ NDTV ಯಲ್ಲಿ ಪ್ರಕಟವಾದ ಸುದ್ದಿಯನ್ನು ಕಂಡುಕೊಂಡಿದ್ದೇವೆ. ವರದಿಯ ಪ್ರಕಾರ, ‘‘ದೆಹಲಿ ಪೊಲೀಸ್ ವಿಶೇಷ ತಂಡವು ತುಪ್ಪದ ಕ್ಯಾನ್‌ಗಳಲ್ಲಿ ಬಚ್ಚಿಟ್ಟ 26 ಪಿಸ್ತೂಲ್‌ಗಳೊಂದಿಗೆ ಗಾಜಿಪುರ ಪ್ರದೇಶದಲ್ಲಿ ಇಬ್ಬರನ್ನು ಬಂಧಿಸಿದೆ. ಮಧ್ಯಪ್ರದೇಶದಿಂದ ಅಕ್ರಮ ಶಸ್ತ್ರಾಸ್ತ್ರ ಪೂರೈಕೆದಾರ ದೆಹಲಿಯ ಘಾಜಿಪುರ ಪ್ರದೇಶಕ್ಕೆ ಬರಲಿದ್ದಾರೆ ಎಂದು ಅವರ ತಂಡಕ್ಕೆ ಮಾಹಿತಿ ಸಿಕ್ಕಿತ್ತು. ಈ ಮಾಹಿತಿ ಮೇರೆಗೆ ಮಹೀಂದ್ರಾ ಬೊಲೇರಾ ಕಾರನ್ನು ತಡೆದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಜಿತೇಂದ್ರ ಮತ್ತು ರಾಜಬಹದ್ದೂರ್ ಅವರನ್ನು ವಶಕ್ಕೆ ಪಡೆದು ಕಾರಿನೊಳಗಿಂದ ಎರಡು ತುಪ್ಪದ ಡಬ್ಬಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಗಳಿಬ್ಬರೂ ಮಧ್ಯಪ್ರದೇಶದ ಭಿಂಡ್ ನಿವಾಸಿಗಳು’’ ಎಂದು ವಿಶೇಷ ದಳದ ಡಿಸಿಪಿ ಪ್ರಮೋದ್ ಕುಶ್ವಾಹಾ ಹೇಳಿಕೆಯನ್ನು ಉಲ್ಲೇಖಿಸಿದೆ.
ಈ ಪ್ರಕರಣದ ಕುರಿತು ನಾವು ಅನೇಕ ವರದಿಗಳನ್ನು ಕಂಡುಕೊಂಡಿದ್ದೇವೆ. ಎಲ್ಲ ಸುದ್ದಿಯಲ್ಲಿಯೂ ಸಿಕ್ಕಿಬಿದ್ದವರ ಹೆಸರನ್ನು ಜಿತೇಂದ್ರ ಜೀತು ಮತ್ತು ರಾಜ್ ಬಹದ್ದೂರ್ ಎಂದು ಉಲ್ಲೇಖಿಸಲಾಗಿದೆ.
ಈ ಮೂಲಕ ತುಪ್ಪದ ಪೆಟ್ಟಿಗೆಗಳಲ್ಲಿ ಪಿಸ್ತೂಲ್‌ಗಳು ಪತ್ತೆಯಾದ ಪ್ರಕರಣವು 2019 ರದ್ದಾಗಿದ್ದು, ಪ್ರಕರಣದಲ್ಲಿ ಬಂಧಿತರಾದ ಇಬ್ಬರೂ ಹಿಂದೂಗಳು, ಮುಸ್ಲಿಮರಲ್ಲ ಎಂದು ನಮ್ಮ ತನಿಖೆಯಿಂದ ತಿಳಿದುಬಂದಿದೆ.