Fact Check: ಬಿಷ್ಣೋಯ್ ಬಗ್ಗೆ ಹೇಳಿಕೆ ನೀಡಿದ ನಂತರ ರಾಜ್ ಶೇಖಾವತ್ಗೆ ಹೊಡೆದಿದ್ದಾರೆಂದು ಹಳೆಯ ವೀಡಿಯೊ ವೈರಲ್
ರಾಜ್ ಶೇಖಾವತ್ ಅವರ ವೀಡಿಯೊ ಒಂದು ವೈರಲ್ ಆಗುತ್ತಿದೆ. ಬಿಷ್ಣೋಯ್ ಎನ್‌ಕೌಂಟರ್‌ಗೆ ಬಹುಮಾನ ಘೋಷಿಸಿದ್ದರಿಂದ ಕೋಪಗೊಂಡ ಜನರು ಅವರನ್ನು ಥಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.
By Vinay Bhat Published on 24 Oct 2024 3:56 PM ISTClaim: ಬಿಷ್ಣೋಯ್ ಎನ್‌ಕೌಂಟರ್‌ಗೆ ಬಹುಮಾನ ಘೋಷಿಸಿದ್ದರಿಂದ ಕೋಪಗೊಂಡ ಜನರು ಕರ್ಣಿ ಸೇನಾ ಅಧ್ಯಕ್ಷ ರಾಜ್ ಶೇಖಾವತ್ ಅವರನ್ನು ಥಳಿಸಿದ್ದಾರೆ.
Fact: ಕಳೆದ ಏಪ್ರಿಲ್ನಲ್ಲಿ ಗುಜರಾತ್‌ನ ಬಿಜೆಪಿ ಕೇಂದ್ರ ಕಚೇರಿಗೆ ಮುತ್ತಿಗೆ ಹಾಕಲು ಹೊರಟಿದ್ದ ರಾಜ್ ಶೇಖಾವತ್ ಅವರನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡ ವೀಡಿಯೊ ಇದಾಗಿದೆ.
ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಹತ್ಯೆಯ ನಂತರ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಮತ್ತೊಮ್ಮೆ ಬೆಳಕಿಗೆ ಬಂದಿದ್ದಾರೆ. ಇದರ ಬೆನ್ನಲ್ಲೇ ಇತ್ತೀಚೆಗಷ್ಟೆ ಕ್ಷತ್ರಿಯ ಕರ್ಣಿ ಸೇನೆಯ ರಾಷ್ಟ್ರೀಯ ಅಧ್ಯಕ್ಷ ರಾಜ್ ಸಿಂಗ್ ಶೇಖಾವತ್ ಅವರು ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಬಗ್ಗೆ ದೊಡ್ಡ ಘೋಷಣೆ ಮಾಡಿದ್ದರು. ಬಿಷ್ಣೋಯ್ ಅವರನ್ನು ಎನ್ ಕೌಂಟರ್ ಮಾಡುವ ಪೊಲೀಸರಿಗೆ ಕರ್ಣಿ ಸೇನೆ 1 ಕೋಟಿ 11 ಲಕ್ಷ 11 ಸಾವಿರದ 111 ರೂಪಾಯಿ ಬಹುಮಾನ ನೀಡಲಿದೆ ಎಂದು ಹೇಳಿದ್ದರು.
ಕರ್ಣಿ ಸೇನೆಯ ಈ ಘೋಷಣೆಯ ನಂತರ, ಇದೀಗ ರಾಜ್ ಶೇಖಾವತ್ ಅವರ ವೀಡಿಯೊ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಬಿಷ್ಣೋಯ್ ಎನ್‌ಕೌಂಟರ್‌ಗೆ ಬಹುಮಾನ ಘೋಷಿಸಿದ್ದರಿಂದ ಕೋಪಗೊಂಡ ಜನರು ಕರ್ಣಿ ಸೇನಾ ಅಧ್ಯಕ್ಷ ರಾಜ್ ಶೇಖಾವತ್ ಅವರನ್ನು ಥಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ವೀಡಿಯೊದಲ್ಲಿ ಕೆಲವರು ರಾಜ್ ಶೇಖಾವತ್ ಅವರನ್ನು ಬಲವಂತವಾಗಿ ಕಾರಿಗೆ ಹತ್ತಿಸಲು ಯತ್ನಿಸುತ್ತಿದ್ದಾರೆ. ಇದರ ನಡುವೆ ಶೇಖಾವತ್ ಅವರ ಪೇಟವೂ ಕಳಚಿ ಬೀದ್ದಿದೆ.
ಫೇಸ್ಬುಕ್ ಬಳಕೆದಾರರೊಬ್ಬರು ಅಕ್ಟೋಬರ್ 22, 2024 ರಂದು ಈ ವೀಡಿಯೊವನ್ನು ಹಂಚಿಕೊಂಡು, ‘‘ವಿಷ್ಣೋಯ್ ನ ಎನ್ ಕೌಂಟರ್ ಮಾಡೋಕೆ ಒಂದು ಕೋಟಿ ಹನ್ನೊಂದು ಲಕ್ಷದ ಹನ್ನೊಂದು ಸಾವಿರದ ನೂರ ಹನ್ನೊಂದು ರೂ. ಘೋಷಿಸಿದವನಿಗೆ ಯಾರೋ ಹೊಡದಿದ್ದಾರೆ,’’ ಎಂದು ಬರೆದುಕೊಂಡಿದ್ದಾರೆ.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟಿರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಅಸಲಿಗೆ ಇದು 2024 ರ ಏಪ್ರಿಲ್‌ನ ವೀಡಿಯೊ ಆಗಿದ್ದು, ಗುಜರಾತ್‌ನ ಬಿಜೆಪಿ ಕೇಂದ್ರ ಕಚೇರಿಗೆ ಮುತ್ತಿಗೆ ಹಾಕಲು ಹೊರಟಿದ್ದ ರಾಜ್ ಶೇಖಾವತ್ ಅವರನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡ ಘಟನೆ ಇದಾಗಿದೆ.
ನಿಜಾಂಶವನ್ನು ತಿಳಿಯಲು ನಾವು ವೀಡಿಯೊದ ಕೀಫ್ರೇಮ್‌ಗಳನ್ನು ಹಿಮ್ಮುಖವಾಗಿ ಹುಡುಕಿದಾಗ ಎಕ್ಸ್ ಪೋಸ್ಟ್ ಒಂದನ್ನು ಕಂಡುಕೊಂಡಿದ್ದೇವೆ. ಏಪ್ರಿಲ್ 9, 2024 ರಲ್ಲಿ ಹಂಚಿಕೊಂಡು ಈ ಪೋಸ್ಟ್ನಲ್ಲಿ ಬಿಜೆಪಿ ಕೇಂದ್ರ ಕಚೇರಿಗೆ ತೆರಳುತ್ತಿದ್ದ ಕರ್ಣಿ ಸೇನಾ ನಾಯಕ ರಾಜ್ ಶೇಖಾವತ್ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಬಿಜೆಪಿ ನಾಯಕ ಪರಶೋತ್ತಮ್ ರೂಪಾಲಾ ಅವರು ರಜಪೂತರ ಕುರಿತು ನೀಡಿರುವ ವಿವಾದಾತ್ಮಕ ಹೇಳಿಕೆಯನ್ನು ವಿರೋಧಿಸಿ ಶೇಖಾವತ್ ಅವರು ಪ್ರತಿಭಟನೆ ನಡೆಸಿದ್ದರು.JUST IN: Gujarat Karni Sena leader Raj Shekhawat detained by Police ahead of his visit to the state BJP headquarters. He is one of the leaders spearheading protests against union minister Parshottam Rupala for his controversial remarks about the Rajputs. #Gujarat pic.twitter.com/Aw4ArWDGXl
— Mahesh Langa (@LangaMahesh) April 9, 2024
ಈ ಮಾಹಿತಿಯ ಆಧಾರದ ಮೇಲೆ ನಾವು ಗೂಗಲ್ನಲ್ಲಿ ಕೀವರ್ಡ್ ಸರ್ಚ್ ಮಾಡಿದ್ದೇವೆ. ಆಗ Hindustan Times ಏಪ್ರಿಲ್ 9, 2024 ರಂದು ಈ ವೈರಲ್ ವೀಡಿಯೊದಲ್ಲಿರುವ ಫೋಟೋದೊಂದಿಗೆ ಸುದ್ದಿ ಪ್ರಕಟಿಸಿರುವುದನ್ನು ನಾವು ಕಂಡುಕೊಂಡಿದ್ದೇವೆ. ಇದರಲ್ಲಿರುವ ಮಾಹಿತಿಯ ಪ್ರಕಾರ, ‘‘ಏಪ್ರಿಲ್ 9 2024 ರಂದು, ರಾಜ್ ಶೇಖಾವತ್ ಗಾಂಧಿನಗರದ ಬಿಜೆಪಿ ಪ್ರಧಾನ ಕಚೇರಿಯನ್ನು ಸುತ್ತುವರಿಯಲು ಹೊರಟಿದ್ದರು. ಆದರೆ, ಶೇಖಾವತ್ ಅಹಮದಾಬಾದ್ ವಿಮಾನ ನಿಲ್ದಾಣವನ್ನು ತಲುಪಿದ ತಕ್ಷಣ, ಗುಜರಾತ್ ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಂಡರು,’’ ಎಂದು ಬರೆಯಲಾಗಿದೆ.
ವಾಸ್ತವವಾಗಿ, ಈ ಇಡೀ ವಿವಾದವು ಆ ಸಮಯದಲ್ಲಿ ಕೇಂದ್ರ ಸಚಿವರಾಗಿದ್ದ ಪರಶೋತ್ತಮ್ ರೂಪಾಲಾ ಅವರ ಹೇಳಿಕೆಯ ನಂತರ ಪ್ರಾರಂಭವಾಯಿತು. ಬ್ರಿಟಿಷರು ನಮ್ಮನ್ನು ಆಳುತ್ತಿದ್ದಾಗ ಅಂದಿನ ಮಹಾರಾಜರು ವಿದೇಶಿ ದೊರೆಗಳ ಮುಂದೆ ಮಂಡಿಯೂರಿ ನಮಸ್ಕರಿಸಿ ತಮ್ಮ ಹೆಣ್ಣು ಮಕ್ಕಳ ಮದುವೆಯನ್ನೂ ಮಾಡಿದರು ಎಂದು ಮಾರ್ಚ್ 22 ರಂದು ನಡೆದ ಸಭೆಯಲ್ಲಿ ಹೇಳಿದ್ದರು. ಈ ಹೇಳಿಕೆಯನ್ನು ಖಂಡಿಸಿ ರಜಪೂತ ಸಮುದಾಯವು ರೂಪಾಲಾ ಅವರ ಲೋಕಸಭಾ ಟಿಕೆಟ್ ಹಿಂಪಡೆಯಬೇಕು ಎಂದು ಬಿಜೆಪಿ ಸರ್ಕಾರವನ್ನು ಒತ್ತಾಯಿಸಿತ್ತು. ವಿವಾದದ ನಂತರ, ರೂಪಾಲಾ ಅವರ ಹೇಳಿಕೆಗೆ ಕ್ಷಮೆಯಾಚಿಸಿದರು, ಆದರೆ ಪ್ರತಿಭಟನೆಗಳು ನಿಲ್ಲಲಿಲ್ಲ.
ಈ ಹೇಳಿಕೆಯಿಂದ ಕೋಪಗೊಂಡ ರಜಪೂತ ಸಮುದಾಯದ ಮಹಿಳೆಯರು ಜೌಹರ್ (ಆತ್ಮಹತ್ಯೆ) ಮಾಡಿಕೊಳ್ಳುವ ಎಚ್ಚರಿಕೆಯನ್ನೂ ನೀಡಿದ್ದರು. ಈ ಹಿನ್ನೆಲೆಯಲ್ಲಿ ಏಪ್ರಿಲ್ 9 ರಂದು ಬಿಜೆಪಿ ಕೇಂದ್ರ ಕಚೇರಿಗೆ ಘೇರಾವ್ ಹಾಕುವಂತೆ ರಾಜ್ ಶೇಖಾವತ್ ಕರೆ ನೀಡಿದ್ದರು. ಇದಕ್ಕೆಂದು ಶೇಖಾವತ್ ಅಹಮದಾಬಾದ್ ವಿಮಾನ ನಿಲ್ದಾಣವನ್ನು ತಲುಪಿದ ತಕ್ಷಣ, ಗುಜರಾತ್ ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಂಡಾಗ ನಡೆದ ಘಟನೆ ಇದಾಗಿದೆ.
ಇನ್ನು ಟಿವಿ9 ಗುಜರಾತಿ ಯೂಟ್ಯೂಬ್ ಚಾನೆಲ್‌ನಲ್ಲಿ ಕೂಡ ಇದೇ ವೈರಲ್ ವೀಡಿಯೊವನ್ನು ಏಪ್ರಿಲ್ 9 ರಂದು ಅಪ್‌ಲೋಡ್ ಮಾಡಿರುವುದು ನಮಗೆ ಸಿಕ್ಕಿದೆ. ಕರ್ಣಿ ಸೇನೆಯ ರಾಷ್ಟ್ರೀಯ ಅಧ್ಯಕ್ಷ ರಾಜ್ ಸಿಂಗ್ ಶೇಖಾವತ್ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂಬ ಶೀರ್ಷಿಕೆ ಇದಕ್ಕೆ ನೀಡಲಾಗಿದೆ.ಹೀಗಾಗಿ ಬಿಷ್ಣೋಯ್ ಎನ್‌ಕೌಂಟರ್‌ಗೆ ಬಹುಮಾನ ಘೋಷಿಸಿದ್ದರಿಂದ ಕೋಪಗೊಂಡ ಜನರು ಕರ್ಣಿ ಸೇನಾ ಅಧ್ಯಕ್ಷ ರಾಜ್ ಶೇಖಾವತ್ ಅವರನ್ನು ಥಳಿಸಿದ್ದಾರೆ ಎಂದು ಹೇಳಲಾಗುತ್ತಿದೆ ಪೋಸ್ಟ್ ಸುಳ್ಳು ಎಂದು ನಾವು ಖಚಿತವಾಗಿ ಹೇಳುತ್ತೇವೆ. ಇದು ಆರು ತಿಂಗಳ ಹಳೆಯ ವೀಡಿಯೊ ಆಗಿದೆ.