Fact Check: ರೈಲಿನ ಸೀಟಿಗೆ ಬೆಂಕಿ ಹಚ್ಚುತ್ತಿರುವ ಹಳೆಯ ವೀಡಿಯೊ ಕೋಮುಕೋನದೊಂದಿಗೆ ವೈರಲ್
ಓರ್ವ ವ್ಯಕ್ತಿ ರೈಲಿನ ಸೀಟಿನ ಮೇಲೆ ಪೇಪರ್ ಇಟ್ಟು ಬೆಂಕಿಕಡ್ಡಿಯಿಂದ ಬೆಂಕಿ ಹಚ್ಚುತ್ತಿರುವುದನ್ನು ಕಾಣಬಹುದು. ಮತ್ತೋರ್ವ ವ್ಯಕ್ತಿ ಮೊಬೈಲ್ನಲ್ಲಿ ವೀಡಿಯೊ ಮಾಡುತ್ತಿರುತ್ತಾನೆ.
By Vinay Bhat Published on 1 Feb 2025 4:28 PM ISTClaim: ಮುಸ್ಲಿಮರು ರೈಲಿನ ಸೀಟುಗಳಿಗೆ ಬೆಂಕಿ ಹಚ್ಚುತ್ತಿದ್ದಾರೆ.
Fact: ಈ ವೀಡಿಯೊ 2022 ರಲ್ಲಿ ಹೈದರಾಬಾದ್ನ ಸಿಕಂದರಾಬಾದ್ನಲ್ಲಿ ಅಗ್ನಿಪಥ್ ಯೋಜನೆ ವಿರುದ್ಧ ನಡೆದ ಪ್ರತಿಭಟನೆಯ ಸಮದ್ದಾಗಿದೆ ಮತ್ತು ಇದರಲ್ಲಿ ಯಾವುದೇ ಕೋಮುಕೋನವಿಲ್ಲ.
ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಒಂದು ವೈರಲ್ ಆಗುತ್ತಿದೆ. ಇದರಲ್ಲಿ ಮೊದಲಿಗೆ ಓರ್ವ ವ್ಯಕ್ತಿ ರೈಲಿನ ಸೀಟಿನ ಮೇಲೆ ಪೇಪರ್ ಇಟ್ಟು ಬೆಂಕಿಕಡ್ಡಿಯಿಂದ ಬೆಂಕಿ ಹಚ್ಚುತ್ತಿರುವುದನ್ನು ಕಾಣಬಹುದು. ಮತ್ತೋರ್ವ ವ್ಯಕ್ತಿ ಮೊಬೈಲ್ನಲ್ಲಿ ವೀಡಿಯೊ ಮಾಡುತ್ತಿರುತ್ತಾನೆ. ಇದೇ ರೀತಿ ಇವರು ರೈಲಿನ ಬೇರೆ ಬೇರೆ ಸೀಟುಗಳಿಗೆ ಬೆಂಕಿ ಇಡುತ್ತಿರುವುದನ್ನು ಈ ವೀಡಿಯೊದಲ್ಲಿ ಕಾಣಬಹುದು.
ಫೇಸ್ಬುಕ್ ಬಳಕೆದಾರರೊಬ್ಬರು ಜನವರಿ 27,2025 ರಂದು ಈ ವೀಡಿಯೊವನ್ನು ಹಂಚಿಕೊಂಡು, ‘‘ದೇಶದ ಅಬಿವೃದ್ದಿ ಸಹಿಸದ ಮುಸ್ಲಿಂ ಬೋ... ಮಕ್ಕಳ ಕೆಲಸ ನೋಡಿ..... ಬಾಂಬ್ ಇಕ್ಕೋರು ದರೋಡೆಕೋರರು ಸುಲಿಗೆಗಾರರು ಅತ್ಯಾಚಾರಿಗಳು.. ಡಿಕೆ ಇರೋವರೆಗೆ ಈ ದೇಶ ಅಭಿವೃದ್ಧಿ ಅಗಲ್ಲ’’ ಎಂದು ಬರೆದುಕೊಂಡಿದ್ದಾರೆ.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ ಎಂಬುದು ಕಂಡುಬಂದಿದೆ. ರೈಲಿನ ಸೀಟಿಗೆ ಬೆಂಕಿ ಇಡುತ್ತಿರುವ ವೀಡಿಯೊ 2022 ರಲ್ಲಿ ಹೈದರಾಬಾದ್ನ ಸಿಕಂದರಾಬಾದ್ನಲ್ಲಿ ಅಗ್ನಿಪಥ್ ಯೋಜನೆ ವಿರುದ್ಧ ನಡೆದ ಪ್ರತಿಭಟನೆಯ ಸಮದ್ದಾಗಿದೆ ಮತ್ತು ಇದರಲ್ಲಿ ಯಾವುದೇ ಕೋಮುಕೋನವಿಲ್ಲ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊವನ್ನು ಗೂಗಲ್ ಲೆನ್ಸ್ ಸಹಾಯದಿಂದ ಸರ್ಚ್ ಮಾಡಿದ್ದೇವೆ. ಆಗ ಇದೇ ವೀಡಿಯೊ ಎಕ್ಸ್ನಲ್ಲಿ ಕೂಡ ವೈರಲ್ ಆಗುತ್ತಿರುವುದು ಕಂಡುಬಂತು. ಈ ವೀಡಿಯೊದ ಕಮೆಂಟ್ ಬಾಕ್ಸ್ ಪರಿಶೀಲಿಸಿದಾಗ ಬಳಕೆದಾರರೊಬ್ಬರು, ಇದು ಹಳೇಯ ವೀಡಿಯೊ ಎಂದು 2022 ರಲ್ಲಿ ವಾರ ಪತ್ರಿಕೆ Organiser Weekly ಹಂಚಿಕೊಂಡಿರುವ ಇದೇ ವೈರಲ್ ವೀಡಿಯೊವನ್ನು ಕಮೆಂಟ್ ಬಾಕ್ಸ್ನಲ್ಲಿ ಹಾಕಿದ್ದಾರೆ.
Organiser Weekly ಈ ವೀಡಿಯೊವನ್ನು ಜೂನ್ 23, 2022 ರಂದು ತನ್ನ ಎಕ್ಸ್ ಖಾತೆಯಲ್ಲಿ ಅಪ್ಲೋಡ್ ಮಾಡಿದೆ. ಇದರಲ್ಲಿರುವ ಮಾಹಿತಿಯ ಪ್ರಕಾರ, ಇದು ಸಿಕಂದರಾಬಾದ್‌ನ ವೀಡಿಯೊ. ಆರೋಪಿ ಆದಿಲಾಬಾದ್‌ನ ಪೃಧ್ವಿರಾಜ್ ರೈಲ್ವೆ ಬೋಗಿಗಳಿಗೆ ಮೊದಲು ಬೆಂಕಿ ಹಚ್ಚಿದ ವ್ಯಕ್ತಿ. ಜೂನ್ 17 ರಂದು ಹಿಂಸಾತ್ಮಕ ಗುಂಪೊಂದು ಸಿಕಂದರಾಬಾದ್ ರೈಲ್ವೆ ನಿಲ್ದಾಣದ ಮೇಲೆ ದಾಳಿ ಮಾಡಿ ರೈಲ್ವೆ ಆಸ್ತಿಗೆ ಹಾನಿ ಮಾಡಿತು.
#Watch| Video allegedly from #Secunderabad, according to the police, accused Prudhviraj from Adilabad was the first to set railway coaches on fire. On June 17 violent mob attacked the Secunderabad Railway Station and damaged the railway's property.#AgnipathScheme #Agniveers pic.twitter.com/Dmsk0mvZKv
— Organiser Weekly (@eOrganiser) June 23, 2022
ಈ ಮಾಹಿತಿಯ ಆಧಾರದ ಮೇಲೆ ನಾವು ‘prudhviraj-Adilabad-rail-fire’ ಎಂಬ ಕೀವರ್ಡ್ ಬಳಸಿ ಗೂಗಲ್ನಲ್ಲಿ ಸರ್ಚ್ ಮಾಡಿದ್ದೇವೆ. ಆಗ Aaj Tak ಇದೇ ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ನೊಂದಿಗೆ ಜೂನ್ 25, 2022 ರಂದು ಸುದ್ದಿ ಪ್ರಕಟಿಸಿರುವುದು ಸಿಕ್ಕಿದೆ. ‘‘ಸೇನಾ ನೇಮಕಾತಿಗಾಗಿ ಕೇಂದ್ರ ಸರ್ಕಾರದ ಅಗ್ನಿಪಥ ಯೋಜನೆ ವಿರೋಧಿಸಿ ದೇಶದ ಹಲವೆಡೆ ಭಾರೀ ಪ್ರತಿಭಟನೆಗಳು ನಡೆದಿದ್ದವು. ಅಗ್ನಿಪಥ್ ಯೋಜನೆ ವಿರುದ್ಧ ತೆಲಂಗಾಣದಲ್ಲೂ ಉಗ್ರ ಪ್ರತಿಭಟನೆಗಳು ನಡೆದಿವೆ. ಸಿಕಂದರಾಬಾದ್ ರೈಲು ನಿಲ್ದಾಣದಲ್ಲಿ ಪ್ರತಿಭಟನಾಕಾರರು ಕೋಲಾಹಲ ಸೃಷ್ಟಿಸಿದರು. ಪ್ರತಿಭಟನಾಕಾರರು ನಿಲ್ದಾಣವನ್ನು ಧ್ವಂಸಗೊಳಿಸಿದ್ದು ಮಾತ್ರವಲ್ಲದೆ ರೈಲು ಬೋಗಿಗಳಿಗೆ ಬೆಂಕಿ ಹಚ್ಚಿದ್ದಾರೆ. ಇದೀಗ ಈ ಘಟನೆಯ ಆಘಾತಕಾರಿ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ’’ ಎಂದು ಬರೆದುಕೊಂಡಿದೆ.
ಜೊತೆಗೆ ರೈಲು ಕಂಪಾರ್ಟ್‌ಮೆಂಟ್‌ಗೆ ನುಗ್ಗಿ ಬೆಂಕಿ ಹಚ್ಚಿದವರ ವಿರುದ್ಧ ರೈಲ್ವೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಆರ್‌ಪಿಎಫ್ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ಟ್ವೀಟ್ ಅನ್ನು ಆಜ್ ತಕ್ ಎಂಬೆಡ್ ಮಾಡಿದೆ.
‘‘ಈ ವೀಡಿಯೊ ಜೂನ್ 17 ರಂದು ಸಿಕಂದರಾಬಾದ್ ಠಾಣೆಯಲ್ಲಿ ನಡೆದಿದೆ. ವೀಡಿಯೊದಲ್ಲಿರುವ ವ್ಯಕ್ತಿಗಳನ್ನು ಸಂತೋಷ್ ಮತ್ತು ಪೃದ್ವಿ ಎಂದು ಗುರುತಿಸಲಾಗಿದೆ, ಐಪಿಸಿ, ಪಿಡಿಪಿಪಿ ಕಾಯ್ದೆ ಮತ್ತು ರೈಲ್ವೆ ಕಾಯ್ದೆಯ ವಿವಿಧ ವಿಭಾಗಗಳ ಅಡಿಯಲ್ಲಿ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳಲ್ಲಿ ಜಿಆರ್‌ಪಿ/ಆರ್‌ಪಿಎಫ್ ಬಂಧಿಸಿದ 60 ಕ್ಕೂ ಹೆಚ್ಚು ಜನರಲ್ಲಿ ಇವರೂ ಇದ್ದಾರೆ. ಹೆಚ್ಚಿನ ಬಂಧನಗಳು ನಂತರ ನಡೆಯಲಿವೆ’’ ಎಂದು ಟ್ವೀಟ್ನಲ್ಲಿದೆ.
This video is of Secunderabad station on 17th June. Persons in the video identified as Santosh and Prudvi, 2 of more than 60 arrested by GRP/RPF in criminal cases registered under various section of IPC, PDPP Act and Railways Act. More arrests will follow. https://t.co/hC5bh0w2oV
— RPF INDIA (@RPF_INDIA) June 24, 2022
The Kashmir Monitor ಕೂಡ ಜೂನ್ 23, 2022 ರಂದು ಇದೇ ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ನೊಂದಿಗೆ ‘‘ಅಗ್ನಿಪಥ್ ಪ್ರತಿಭಟನಾಕಾರರು ರೈಲಿಗೆ ಬೆಂಕಿ ಹಚ್ಚುವ ಆಘಾತಕಾರಿ ದೃಶ್ಯಗಳು’’ ಎಂಬ ಹೆಡ್ಲೈನ್ ಬರೆದು ಸುದ್ದಿ ಪ್ರಕಟಿಸಿದೆ. ‘‘ಸಿಕಂದರಾಬಾದ್ ರೈಲ್ವೆ ನಿಲ್ದಾಣದ ಹಿಂಸಾಚಾರ ಪ್ರಕರಣದ ಶಂಕಿತರಲ್ಲಿ ಒಬ್ಬನಾದ ಪೃಥ್ವಿರಾಜ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಅವನು ತನ್ನ ಸ್ನೇಹಿತನನ್ನು ಕರೆದು ವೀಡಿಯೊ ಮಾಡಲು ಕೇಳಿಕೊಂಡನು. ನಂತರ ಅವುಗಳನ್ನು ಸಾಮಾಜಿಕ ಜಾನತಾಣಗಳಲ್ಲಿ ಹಂಚಿಕೊಂಡಿದ್ದಾನೆ’’ ಎಂದು ಬರೆಯಲಾಗಿದೆ.
Amar Ujala ಹಾಗೂ Deccan Herald ಕೂಡ ರೈಲಿನ ಕೋಚ್‌ಗೆ ಬೆಂಕಿ ಹಚ್ಚಿ ವ್ಯಕ್ತಿಗಳನ್ನು ಸಂತೋಷ್ ಮತ್ತು ಪ್ರುದ್ವಿ ಎಂದು ಗುರುತಿಸಲಾಗಿದೆ ಎಂದು ಬರೆದುಕೊಂಡಿದೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ರೈಲಿನ ಸೀಟಿಗೆ ಬೆಂಕಿ ಇಡುತ್ತಿರುವ ವೀಡಿಯೊ 2022 ರಲ್ಲಿ ಸಿಕಂದರಾಬಾದ್ನಲ್ಲಿ ಅಗ್ನಿಪಥ್ ಯೋಜನೆ ವಿರುದ್ಧ ನಡೆದ ಪ್ರತಿಭಟನೆಯ ಸಮದ್ದಾಗಿದೆ ಮತ್ತು ಇದರಲ್ಲಿ ಯಾವುದೇ ಕೋಮುಕೋನವಿಲ್ಲ. ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು ಇವರು ಹಿಂದೂಗಳಾಗಿದ್ದಾರೆ.