Fact Check: ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳುವ ಹಳೆಯ ವೀಡಿಯೊ ಹಕೀಮ್ ಸಲಾವುದ್ದೀನ್ ಪ್ರಕರಣಕ್ಕೆ ಲಿಂಕ್ ಮಾಡಿ ವೈರಲ್

ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಬಂದೂಕುಗಳು ಮತ್ತು ಹಣದ ವೀಡಿಯೊವೊಂದು ವೈರಲ್ ಆಗುತ್ತಿದೆ. ಹಕೀಮ್ ಸಲಾಹುದ್ದೀನ್ ಮನೆಯಿಂದ 3,000 ಕ್ಕೂ ಹೆಚ್ಚು ಬಂದೂಕುಗಳು ಪತ್ತೆಯಾಗಿವೆ ಎಂಬ ಹೇಳಿಕೆಯೊಂದಿಗೆ ಈ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ.

By Vinay Bhat
Published on : 3 July 2025 7:32 PM IST

Fact Check: ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳುವ ಹಳೆಯ ವೀಡಿಯೊ ಹಕೀಮ್ ಸಲಾವುದ್ದೀನ್ ಪ್ರಕರಣಕ್ಕೆ ಲಿಂಕ್ ಮಾಡಿ ವೈರಲ್
Claim:ಹಕೀಮ್ ಸಲಾವುದ್ದೀನ್ ಮನೆಯಿಂದ ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳನ್ನು ವೀಡಿಯೊ ತೋರಿಸುತ್ತದೆ.
Fact:ಹಕ್ಕು ಸುಳ್ಳು. ಈ ವೀಡಿಯೊ ಇತ್ತೀಚಿನದಲ್ಲ, ಸುಮಾರು ನಾಲ್ಕು ವರ್ಷಗಳಷ್ಟು ಹಳೆಯದು ಮತ್ತು ಅಫ್ಘಾನಿಸ್ತಾನದ್ದಾಗಿದೆ.

ಇತ್ತೀಚೆಗಷ್ಟೆ ಲಕ್ನೋ ಪೊಲೀಸರು ಮಲಿಹಾಬಾದ್‌ನಲ್ಲಿ ಅಕ್ರಮ ಶಸ್ತ್ರಾಸ್ತ್ರ ತಯಾರಿಕಾ ಘಟಕವನ್ನು ಭೇದಿಸಿ, ಹಕೀಮ್ ಸಲಾವುದ್ದೀನ್ ಅಲಿಯಾಸ್ ಲಾಲಾ ಎಂಬಾತನನ್ನು ಬಂದೂಕುಗಳು, ಮದ್ದುಗುಂಡುಗಳು ಮತ್ತು ಸಂರಕ್ಷಿತ ಜಿಂಕೆಯ ಚರ್ಮದೊಂದಿಗೆ ಬಂಧಿಸಿದರು. ಇದರ ಬೆನ್ನಲ್ಲೇ ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಬಂದೂಕುಗಳು ಮತ್ತು ಹಣದ ವೀಡಿಯೊವೊಂದು ವೈರಲ್ ಆಗುತ್ತಿದೆ. ಹಕೀಮ್ ಸಲಾಹುದ್ದೀನ್ ಮನೆಯಿಂದ 3,000 ಕ್ಕೂ ಹೆಚ್ಚು ಬಂದೂಕುಗಳು ಪತ್ತೆಯಾಗಿವೆ ಎಂಬ ಹೇಳಿಕೆಯೊಂದಿಗೆ ಈ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ. ಜೊತೆಗೆ ಮನೆಯಿಂದ 20 ಚೀಲಗಳ 50,000 ಕಾರ್ಟ್ರಿಡ್ಜ್‌ಗಳು ಮತ್ತು ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ.

ಫೇಸ್​ಬುಕ್ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡು, ‘‘ಲಕ್ನೋದ ಹಕೀಮ್ ಸಲಾವುದ್ದೀನ್ ಮನೆಯಿಂದ 3,000 ಬಂದೂಕುಗಳು ಮತ್ತು 20 ಚೀಲಗಳಲ್ಲಿ 50,000 ಕಾರ್ಟ್ರಿಡ್ಜ್‌ಗಳು ಮತ್ತು $ 1,000 ನಗದನ್ನು ವಶಪಡಿಸಿಕೊಳ್ಳಲಾಗಿದೆ. ಏನೆಲ್ಲಾ ಸಮಾಜದಲ್ಲಿ ದುಷ್ಕೃತ್ಯಗಳನ್ನು ಮಾಡಲು ಇವನ್ನು ಇವರುಗಳು ತಂದು ಇಟ್ಟುಕೊಂಡಿದ್ದರು. ಮತ್ತು ಈ ದೇಶದಲ್ಲಿ ಇಷ್ಟು ಸುಲಭವಾಗಿ ಶಸ್ತ್ರಾಸ್ತ್ರಗಗಳು ಸಿಗುತ್ತವೆ ಎಂದರೆ ಕಾನೂನು ಸುವ್ಯವಸ್ಥೆ ಹೇಗಿದೆ ಎಂಬುದು ತಿಳಿಯಿರಿ’’ ಎಂದು ಬರೆದುಕೊಂಡಿದ್ದಾರೆ. (Archive)

ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ವೀಡಿಯೊ ಇತ್ತೀಚಿನದಲ್ಲ, ಸುಮಾರು ನಾಲ್ಕು ವರ್ಷಗಳಷ್ಟು ಹಳೆಯದು ಮತ್ತು ಅಫ್ಘಾನಿಸ್ತಾನದ್ದಾಗಿದೆ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಕೀಫ್ರೇಮ್‌ಗಳನ್ನು ರಿವರ್ಸ್-ಸರ್ಚ್ ಮಾಡಿದಾಗ ಆಗಸ್ಟ್ 2021 ರ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಗೆ ನಮ್ಮನ್ನು ಕರೆದೊಯ್ಯಲಾಯಿತು, ಅದರಲ್ಲಿ ವೀಡಿಯೊದ ದೀರ್ಘ ಆವೃತ್ತಿಯನ್ನು ತೋರಿಸಲಾಗಿದೆ. ಇದರಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ಅಮೆರಿಕಕ್ಕೆ ಸೇರಿದ ಶಸ್ತ್ರಾಸ್ತ್ರಗಳನ್ನು ತಾಲಿಬಾನ್ ವಶಪಡಿಸಿಕೊಂಡಿದೆ ಎಂದು ಹೇಳಿದೆ. ಆದ್ದರಿಂದ ಈ ವೀಡಿಯೊ ಸುಮಾರು ನಾಲ್ಕು ವರ್ಷಗಳ ಹಿಂದಿನದು ಎಂಬುದು ತಿಳಿದುಬಂತು.

ಈ ಮಾಹಿತಿಯ ಆಧಾರದ ಮೇಲೆ ಸಂಬಂಧಿತ ಕೀವರ್ಡ್‌ಗಳ ಸಹಾಯದಿಂದ ಗೂಗಲ್‌ನಲ್ಲಿ ಹುಡುಕಿದಾಗ, ಎಬಿಪಿ ನ್ಯೂಸ್‌ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ವೈರಲ್ ವೀಡಿಯೊಗೆ ಸಂಬಂಧಿಸಿದ ವರದಿಯನ್ನು ನಾವು ಕಂಡುಕೊಂಡೆವು. ಈ ವೀಡಿಯೊವನ್ನು ಆಗಸ್ಟ್ 30, 2021 ರಂದು ಹಂಚಿಕೊಳ್ಳಲಾಗಿದೆ. ಇದರಲ್ಲಿ ವೈರಲ್ ವೀಡಿಯೊದ ಕ್ಲಿಪ್ ಕೂಡ ಇದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಈ ವೀಡಿಯೊ ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಯುಎಸ್ ಶಸ್ತ್ರಾಸ್ತ್ರಗಳನ್ನು ಸೆರೆಹಿಡಿಯುತ್ತಿರುವ ವೀಡಿಯೊವಾಗಿದೆ.

ಹಾಗೆಯೆ ಆಗಸ್ಟ್ 20, 2021 ರ ವಿಯಾನ್ ವರದಿ ಕೂಡ ನಮಗೆ ಸಿಕ್ಕಿದ್ದು, ಇದರಲ್ಲೂ ವೈರಲ್ ವೀಡಿಯೊದಲ್ಲಿರುವ ದೃಶ್ಯ ಬೇರೆ ಆ್ಯಂಗಲ್​ನಿಂದ ಕಾಣಬಹುದು. "ಅಫ್ಘಾನ್ ಸರ್ಕಾರಿ ಪಡೆಗಳ ತ್ವರಿತ ಸೋಲಿನ ನಂತರ ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಶತಕೋಟಿ ಡಾಲರ್ ಮೌಲ್ಯದ ಯುಎಸ್ ಸರಬರಾಜು ಮಾಡಿದ ಮಿಲಿಟರಿ ಉಪಕರಣಗಳನ್ನು ವಶಪಡಿಸಿಕೊಂಡಿದೆ. ಈ ಯುಎಸ್ ನಿರ್ಮಿತ ಸಾಮಗ್ರಿಗಳೊಂದಿಗೆ ತಾಲಿಬಾನ್ ಹೋರಾಟಗಾರರ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿವೆ" ಎಂಬ ಮಾಹಿತಿ ಇದರಲ್ಲಿದೆ.

ಆಗಸ್ಟ್ 16, 2021 ರಂದು ವೈರಲ್ ವೀಡಿಯೊದ ಕುರಿತು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದ್ದು, ‘‘ಆಗಸ್ಟ್ 15, 2021 ರಂದು ಅಫ್ಘಾನಿಸ್ತಾನ ಸರ್ಕಾರದ ಪತನದ ನಂತರ, ತಾಲಿಬಾನ್ ದಂಗೆಕೋರರು ಅಧಿಕಾರವನ್ನು ವಶಪಡಿಸಿಕೊಂಡರು ಮತ್ತು ತರುವಾಯ ಹೊಸದಾಗಿ ಸ್ವಾಧೀನಪಡಿಸಿಕೊಂಡ ಶಸ್ತ್ರಾಸ್ತ್ರಗಳು ಮತ್ತು ವಾಹನಗಳನ್ನು ಪ್ರದರ್ಶಿಸಿದರು’’ ಎಂದು ಬರೆಯಲಾಗಿದೆ.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ ಶಸ್ತ್ರಾಸ್ತ್ರಗಳ ವೈರಲ್ ವೀಡಿಯೊದ ಬಗ್ಗೆ ಮಾಡಲಾಗಿರುವ ಹೇಳಿಕೆ ಸುಳ್ಳಾಗಿದ್ದು, ಈ ವೀಡಿಯೊ ಇತ್ತೀಚಿನದಲ್ಲ, ಇದು ಸುಮಾರು ನಾಲ್ಕು ವರ್ಷಗಳಷ್ಟು ಹಳೆಯದು ಮತ್ತು ಅಫ್ಘಾನಿಸ್ತಾನದ್ದಾಗಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.

Claim Review:ಹಕೀಮ್ ಸಲಾವುದ್ದೀನ್ ಮನೆಯಿಂದ ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳನ್ನು ವೀಡಿಯೊ ತೋರಿಸುತ್ತದೆ.
Claimed By:Facebook User
Claim Reviewed By:NewsMeter
Claim Source:Social Media
Claim Fact Check:False
Fact:ಹಕ್ಕು ಸುಳ್ಳು. ಈ ವೀಡಿಯೊ ಇತ್ತೀಚಿನದಲ್ಲ, ಸುಮಾರು ನಾಲ್ಕು ವರ್ಷಗಳಷ್ಟು ಹಳೆಯದು ಮತ್ತು ಅಫ್ಘಾನಿಸ್ತಾನದ್ದಾಗಿದೆ.
Next Story