ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತ ಪಾಕಿಸ್ತಾನದಲ್ಲಿರುವ ಒಂಬತ್ತು ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಿದೆ. ಆಪರೇಷನ್ ಸಿಂಧೂರ್ ಹೆಸರಿನ ಸರ್ಜಿಕಲ್ ಸ್ಟ್ರೈಕ್ ಮೂಲಕ ಭಾರತ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಇದರ ಬೆನ್ನಲ್ಲೇ, ಆಪರೇಷನ್ ಸಿಂಧೂರ್ನ ಒಂದು ಸಣ್ಣ ನೋಟ ಎಂದು ಹೇಳಲಾಗುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ವೀಡಿಯೊದಲ್ಲಿ ಕ್ಷಿಪಣಿಗಳು ನಗರದ ವಿವಿಧ ಸ್ಥಳಗಳಿಗೆ ಹಾರುತ್ತಿರುವುದನ್ನು ಕಾಣಬಹುದು.
ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಆಪರೇಷನ್ ಸಿಂಧೂರ್: ಪಾಕಿಸ್ತಾನದ 9 ಟೆರರ್ ಕ್ಯಾಂಪ್‌ಗಳ ಮೇಲೆ ಭಾರತ ದಾಳಿ’’ ಎಂದು ಬರೆದುಕೊಂಡಿದ್ದಾರೆ. (Archive)
ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ವೀಡಿಯೊ ಆಪರೇಷನ್ ಸಿಂಧೂರ್‌ನದ್ದಲ್ಲ ಬದಲಾಗಿ 2024 ರ ಅಕ್ಟೋಬರ್‌ನಲ್ಲಿ ಇಸ್ರೇಲ್ ಮೇಲೆ ಇರಾನ್ ನಡೆಸಿದ ಕ್ಷಿಪಣಿ ದಾಳಿಯ ದೃಶ್ಯಾವಳಿ ಆಗಿದೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಕೀಫ್ರೇಮ್‌ಗಳನ್ನು ರಿವರ್ಸ್ ಇಮೇಜ್ ಹುಡುಕಾಟ ನಡೆಸಿದೆವು. ಈ ಸಂದರ್ಭ ಅಕ್ಟೋಬರ್ 2024 ರಿಂದ ಹಲವಾರು ಸಾಮಾಜಿಕ ಮಾಧ್ಯಮ ಪುಟಗಳಲ್ಲಿ ಇದೇ ರೀತಿಯ ವೀಡಿಯೊ ಪ್ರಸಾರವಾಗುತ್ತಿರುವುದು ಕಂಡುಬಂದಿದೆ . "ಇರಾನ್ ಇಸ್ರೇಲ್ ಮೇಲೆ ದಾಳಿ ಮಾಡಿದೆ" ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಇದೇ ವೈರಲ್ ವೀಡಿಯೊವನ್ನು ಅಕ್ಟೋಬರ್ 1, 2024 ರಂದು ಡಿಡಿ ಜಿಯೋ ಪಾಲಿಟಿಕ್ಸ್ ಎಂಬ ಎಕ್ಸ್ ಖಾತೆಯಿಂದ ಹಂಚಿಕೊಂಡಿರುವುದನ್ನು ಇಲ್ಲಿ ನೋಡಬಹುದು.
ಹಾಗೆ ನಾವು ವೈರಲ್ ವೀಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದ್ದೇವೆ. ಇದರಲ್ಲಿ ಡಿಡಿ ಇಂಡಿಯಾ ಲೋಗೋವನ್ನು ಕಾಣಬಹುದು. ಇದರ ಆಧಾರದ ಮೇಲೆ, ನಾವು ಡಿಡಿ ಇಂಡಿಯಾದ ಯೂಟ್ಯೂಬ್ ಪುಟವನ್ನೂ ಪರಿಶೀಲಿಸಿದ್ದೇವೆ. ಆಗ ಅಕ್ಟೋಬರ್ 2, 2024 ರಂದು ಚಾನೆಲ್‌ನಲ್ಲಿ ಇದೇ ವೀಡಿಯೊವನ್ನು ಹಂಚಿಕೊಂಡಿರುವುದು ಸಿಕ್ಕಿದೆ. "ನೆಗೆವ್ ಮರುಭೂಮಿಯಲ್ಲಿರುವ ನೆವಾಟಿಮ್ ವಾಯುನೆಲೆಯನ್ನು ಗುರಿಯಾಗಿಸಿಕೊಂಡು ಇರಾನಿನ ಕ್ಷಿಪಣಿಗಳು ದಾಳಿ ಮಾಡಿವೆ" ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.
ಈ ಮಾಹಿತಿಯ ಆಧಾರದ ಮೇಲೆ ನಾವು ಗೂಗಲ್ನಲ್ಲಿ ಕೀವರ್ಸ್ ಸರ್ಚ್ ನಡೆಸಿದ್ದೇವೆ. ಈ ಸಂದರ್ಭ ಬಿಸಿನೆಸ್ ಸ್ಟ್ಯಾಂಡರ್ಡ್ ‘‘ಅಕ್ಟೋಬರ್ 1, 2024 ರಂದು ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ನಡೆಸಿತು. ಆಪರೇಷನ್ ಟ್ರೂ ಪ್ರಾಮಿಸ್ II ಎಂಬ ಹೆಸರಿನಲ್ಲಿ ಇರಾನ್ ಈ ದಾಳಿ ನಡೆಸಿದೆ’’ ಎಂದು ಪ್ರಕಟಿಸಿದ ವರದಿ ಸಿಕ್ಕಿದೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಆಪರೇಷನ್ ಸಿಂಧೂರ್ ಎಂದು ವೈರಲ್ ಆಗುತ್ತಿರುವ ವೀಡಿಯೊವು ಅಕ್ಟೋಬರ್ 1, 2024 ರಂದು ಇಸ್ರೇಲ್ ಮೇಲೆ ಇರಾನ್ ನಡೆಸಿದ ಕ್ಷಿಪಣಿ ದಾಳಿಯ ದೃಶ್ಯಾವಳಿಯಾಗಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.