ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ, ಭಾರತವು ಆಪರೇಷನ್ ಸಿಂಧೂರ್ ಅಡಿಯಲ್ಲಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಅಡಗುತಾಣಗಳನ್ನು ಗುರಿಯಾಗಿಸಿಕೊಂಡು ಪ್ರತೀಕಾರ ತೀರಿಸಿಕೊಂಡಿದೆ. ಏತನ್ಮಧ್ಯೆ, ಪಾಕಿಸ್ತಾನಿ ಸುದ್ದಿ ನಿರೂಪಕಿಯೊಬ್ಬರು ನ್ಯೂಸ್ ಓದುತ್ತಿರುವಾಗ ಕಣ್ಣೀರಿಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಆಪರೇಷನ್ ಸಿಂಧೂರ್‌ನಲ್ಲಿ ಸಾವನ್ನಪ್ಪಿದ ಜೀವಗಳಿಗಾಗಿ ಪಾಕಿಸ್ತಾನಿ ಸುದ್ದಿ ನಿರೂಪಕಿಯೊಬ್ಬರು ಅಳುತ್ತಿದ್ದಾರೆ ಎಂದು ಅನೇಕರು ಹೇಳಿಕೊಳ್ಳುತ್ತಿದ್ದಾರೆ. ವೀಡಿಯೊ ಕ್ಲಿಪ್‌ನಲ್ಲಿ, ಕೊಲ್ಲಲ್ಪಟ್ಟ ಜನರು ಅಲ್ಲಾಹನನ್ನು ಭೇಟಿಯಾಗುತ್ತಾರೆ ಮತ್ತು ಈ ಜಗತ್ತಿನಲ್ಲಿ ಅವರಿಗೆ ಸಂಭವಿಸಿದ ದೌರ್ಜನ್ಯಗಳ ಬಗ್ಗೆ ಮಾತನಾಡುತ್ತಾರೆ ಎಂದು ಅವರು ಹೇಳುವುದನ್ನು ನಾವು ಕೇಳಬಹುದು.
ಫೇಸ್‌ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಪಾಪಿ ಉಗ್ರರ ಮೇಲೆ ಕ್ಷಿಪಣಿ ದಾಳಿ.. ನ್ಯೂಸ್ ರೂಮ್ನಲ್ಲಿ ಗಳಗಳನೇ ಕಣ್ಣೀರಿಟ್ಟ ಪಾಕಿಸ್ತಾನ ನ್ಯೂಸ್ ಆ್ಯಂಕರ್’’ ಎಂದು ಬರೆದುಕೊಂಡಿದ್ದಾರೆ. (Archive)
ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ವೀಡಿಯೊಗೂ ಆಪರೇಷನ್ ಸಿಂಧೂರ್ಗೂ ಯಾವುದೇ ಸಂಬಂಧವಿಲ್ಲ. ಪಾಕಿಸ್ತಾನಿ ಸುದ್ದಿ ನಿರೂಪಕಿ ಫರ್ವಾ ವಹೀದ್ ಅವರ ಈ ವೀಡಿಯೊ ಗಾಜಾ ಸಮಸ್ಯೆಗೆ ಸಂಬಂಧಿಸಿದೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಪ್ರಮುಖ ಚೌಕಟ್ಟನ್ನು ಗೂಗಲ್ ಲೆನ್ಸ್ ಸಹಾಯದಿಂದ ಸರ್ಚ್ ಮಾಡಿದ್ದೇವೆ. ಆಗ ಏಪ್ರಿಲ್ 18 ರಂದು ಎಕ್ಸ್ ಬಳಕೆದಾರರೊಬ್ಬರು ಇದೇ ವೀಡಿಯೊವನ್ನು ಹಂಚಿಕೊಂಡಿರುವುದು ನಮಗೆ ಕಂಡುಬಂದಿತು. ‘ಎಕ್ಸ್‌ಪ್ರೆಸ್ ನ್ಯೂಸ್' ಮತ್ತು ‘#ಸಿಯಾಸತ್' ಎಂದು ಈ ವೀಡಿಯೊದಲ್ಲಿ ಬರೆದಿರುವುದನ್ನು ಕಾಣಬಹುದು. ಈ ಮೂಲಕ ಆಪರೇಷನ್ ಸಿಂಧೂರ್ಗು ಮೊದಲೇ ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಇದೆ ಎಂಬುದು ಸ್ಪಷ್ಟವಾಯಿತು.
ಇದೇವೇಳೆ ನಮಗೆ ವೈರಲ್ ವೀಡಿಯೊದ ಪೂರ್ಣ ಆವೃತ್ತಿ ಕೂಡ ಸಿಕ್ಕಿದೆ. ನವೆಂಬರ್ 7, 2023 ರಂದು
ಫರ್ವಾ ವಹೀದ್ ಅವರ ಫೇಸ್‌ಬುಕ್ ಪುಟದಲ್ಲಿ ಇದನ್ನು ಹಂಚಿಕೊಳ್ಳಲಾಗಿದೆ. ವೀಡಿಯೊದೊಂದಿಗೆ ನೀಡಲಾದ ಶೀರ್ಷಿಕೆ ಹೀಗಿದೆ, "ನನ್ನ ಕಣ್ಣೀರು ಮತ್ತು ಭಾವನೆಗಳನ್ನು ನಿಯಂತ್ರಿಸಲು ನನಗೆ ಸಾಧ್ಯವಾಗಲಿಲ್ಲ. ಪ್ಯಾಲೆಸ್ಟೈನ್ (ಗಾಜಾ) ಜನರಿಗೆ ನಾವು ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ನನಗೆ ತಿಳಿದಿದೆ. ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ, ಅನೇಕರು ಜೀವಂತವಾಗಿರಲು ಹೆಣಗಾಡುತ್ತಿದ್ದಾರೆ ಮತ್ತು ಇದು ತುಂಬಾ ದುಃಖಕರವಾಗಿದೆ. ಈ ಕ್ರೌರ್ಯ ಬೇಗ ಕೊನೆಗೊಳ್ಳಲಿ" ಎಂದು ಬರೆದುಕೊಂಡಿದ್ದಾರೆ.
ಹೆಚ್ಚುವರಿಯಾಗಿ, ನಾವು ಫರ್ವಾ ವಹೀದ್ ಅವರ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಕೂಡ ಅದೇ ವೀಡಿಯೊವನ್ನು ನವೆಂಬರ್ 7, 2023 ರಂದು ಹಂಚಿಕೊಂಡಿರುವುದನ್ನು ಕಂಡುಕೊಂಡಿದ್ದೇವೆ. ಇವರ ಪ್ರೊಫೈಲ್ ಸ್ಕ್ಯಾನ್ ಮಾಡಿದಾಗ ವೈರಲ್ ವೀಡಿಯೊದಲ್ಲಿರುವ ಸುದ್ದಿ ನಿರೂಪಕಿ ಇವರೇ ಎಂಬುದು ತಿಳಿಯಿತು.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ ವೈರಲ್ ಆಗುತ್ತಿರುವ ವೀಡಿಯೊಗೂ ಆಪರೇಷನ್ ಸಿಂಧೂರ್ಗೂ ಯಾವುದೇ ಸಂಬಂಧವಿಲ್ಲ ಎಂದು ನ್ಯೂಸ್ ಮೀಟರ್ ತನ್ನ ತನಿಖೆಯಲ್ಲಿ ಕಂಡುಕೊಂಡಿದೆ. ಪಾಕಿಸ್ತಾನಿ ಸುದ್ದಿ ನಿರೂಪಕಿ ಫರ್ವಾ ವಹೀದ್ ಅವರ ಈ ವೀಡಿಯೊ ಗಾಜಾ ಸಮಸ್ಯೆಗೆ ಸಂಬಂಧಿಸಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.