Fact Check: Pahalgam terror attack- ಒಬ್ಬ ಉಗ್ರವಾದಿಯನ್ನ ಜೀವಂತವಾಗಿ ಹಿಡಿದ ಭಾರತೀಯ ಸೇನೆ ಎಂದು 2022ರ ವೀಡಿಯೊ ವೈರಲ್
ವೈರಲ್ ವೀಡಿಯೊವು ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತೀಯ ಸೇನೆಯು ಭಯೋತ್ಪಾದಕನನ್ನು ಜೀವಂತವಾಗಿ ಸೆರೆಹಿಡಿದಿರುವುದನ್ನು ತೋರಿಸುತ್ತಿಲ್ಲ ಎಂದು ನಾವು ಖಚಿತವಾಗಿ ಹೇಳುತ್ತೇವೆ. ಈ ವೀಡಿಯೊ 2022 ರದ್ದಾಗಿದೆ.
By Vinay Bhat
Claim:ಪಹಲ್ಗಾಮ್ ದಾಳಿಯ ಹಿಂದಿನ ಭಯೋತ್ಪಾದಕನನ್ನು ಭಾರತೀಯ ಸೇನೆ ಜೀವಂತವಾಗಿ ಸೆರೆಹಿಡಿದಿದೆ.
Fact:ಹಕ್ಕು ಸುಳ್ಳು. ವೈರಲ್ ಆಗುತ್ತಿರುವ ವೀಡಿಯೊ 2022 ರದ್ದಾಗಿದೆ.
ಏಪ್ರಿಲ್ 22 ರಂದು ಶ್ರೀನಗರದಿಂದ 100 ಕಿ.ಮೀ. ದಕ್ಷಿಣಕ್ಕೆ ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ ಇಪ್ಪತ್ತಾರು ಮಂದಿ ಸಾವನ್ನಪ್ಪಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ. 40 ಭಾರತೀಯ ಸೇನಾ ಸೈನಿಕರನ್ನು ಬಲಿತೆಗೆದುಕೊಂಡ ಪುಲ್ವಾಮಾ ದಾಳಿಯ ನಂತರ, ಏಪ್ರಿಲ್ 22 ರಂದು ನಡೆದ ಈ ದಾಳಿಯು ಭಯಾನಕವಾಗಿದೆ. ಇದರ ಬೆನ್ನಲ್ಲೇ, ಪ್ರತಿಯೊಬ್ಬ ಭಯೋತ್ಪಾದಕರನ್ನು ಗುರುತಿಸಿ, ಪತ್ತೆ ಹಚ್ಚಿ, ಅವರನ್ನು ಭಾರತ ಶಿಕ್ಷಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಹೀಗಿರುವಾಗ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಒಂದು ವೈರಲ್ ಆಗುತ್ತಿದೆ.
ಆಸ್ಪತ್ರೆಯ ಬೆಡ್ ಮೇಲೆ ಓರ್ವ ವ್ಯಕ್ತಿ ಮಲಗಿಗೊಂಡಿದ್ದು, ವರದಿಗಾರ ಆತನ ಬಳಿ ಕೆಲ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಫೇಸ್ಬುಕ್ ಬಳಕೆದಾರರು ಏಪ್ರಿಲ್ 23, 2025 ರಂದು ಈ ವೀಡಿಯೊವನ್ನು ಹಂಚಿಕೊಂಡು, ‘‘ಒಬ್ಬ ಉಗ್ರವಾದಿಯನ್ನ ಜೀವಂತ ವಾಗಿ ಹಿಡಿದ ಭಾರತೀಯ ಸೇನೆ ಪಾಕಿಸ್ತಾನ ISI ದಾಳಿ ಮಾಡಲು ಕಳಿಸಿತ್ತಂತೆ. ಇದಕ್ಕೆ ಇನ್ನು ಪ್ರತಿಕಾರ ಬೇಕು.. ಜೈ ಜಾವಾನ್’’ ಎಂದು ಬರೆದುಕೊಂಡಿದ್ದಾರೆ. (Archive)
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಪಹಲ್ಗಾಮ್ ಅಟ್ಯಾಕ್ 2025ಕ್ಕು ಈ ವೀಡಿಯೊಕ್ಕು ಯಾವುದೇ ಸಂಬಂಧವಿಲ್ಲ. ಇದು 2022ರ ವೀಡಿಯೊ ಆಗಿದೆ.
ವೈರಲ್ ವೀಡಿಯೊದಲ್ಲಿ ಆಜ್ ತಕ್ ಲೋಗೋ ಇರುವುದನ್ನು ನಾವು ಗಮನಿಸಿದ್ದೇವೆ. ಜೊತೆಗೆ ವೀಡಿಯೊದ ಮೇಲೆ ‘ಪಾಕಿಸ್ತಾನದ ರಹಸ್ಯಗಳನ್ನು ಬಹಿರಂಗಪಡಿಸಿದ ಭಯೋತ್ಪಾದಕ’ ಎಂದು ಹಿಂದಿಯಲ್ಲಿ ಬರೆಯಲಾಗಿದೆ. ನಾವು ಇದೇ ಟೆಕ್ಸ್ಟ್ ಅನ್ನು ಕಾಪಿ ಮಾಡಿ ಯೂಟ್ಯೂಬ್ನಲ್ಲಿ ಹುಡುಕಿದ್ದೇವೆ. ಆಗ ಆಗಸ್ಟ್ 25, 2022 ರಂದು ಆಜ್ ತಕ್ ಯೂಟ್ಯೂಬ್ ಚಾನೆಲ್ನಲ್ಲಿ ಇದೇ ವೈರಲ್ ವೀಡಿಯೊವನ್ನು ಶಾರ್ಟ್ ರೂಪದಲ್ಲಿ ಹಂಚಿಕೊಂಡಿರುವುದು ನಮಗೆ ಸಿಕ್ಕಿದೆ. ಇದಕ್ಕೆ ‘‘ಪಾಕಿಸ್ತಾನದ ಭಯೋತ್ಪಾದಕನೊಬ್ಬ ಪಾಕಿಸ್ತಾನ ಸೇನೆಯ ರಹಸ್ಯಗಳನ್ನು ಬಹಿರಂಗಪಡಿಸಿದ್ದಾನೆ.’’ ಎಂದು ಕ್ಯಾಪ್ಶನ್ ನೀಡಲಾಗಿದೆ.
ಇದೇ ಮಾಹಿತಿಯನ್ನು ಗೂಗಲ್ನಲ್ಲಿ ಹುಡುಕಿದಾಗ ಆಗಸ್ಟ್ 25, 2022 ರಂದು ಆಜ್ತಕ್ ತನ್ನ ವೆಬ್ಸೈಟ್ನಲ್ಲಿ ಪೂರ್ಣ ವೀಡಿಯೊದ ಜೊತೆಗೆ ಸುದ್ದಿ ಪ್ರಕಟಿಸಿರುವುದು ಕಂಡುಬಂತು. ‘‘ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ನೌಶೇರಾ ಸೆಕ್ಟರ್‌ನಲ್ಲಿ ಎಲ್‌ಒಸಿ ಉದ್ದಕ್ಕೂ ಕಳೆದ 48 ಗಂಟೆಗಳಲ್ಲಿ ಭಾರತೀಯ ಸೇನೆ ಎರಡು ಒಳನುಸುಳುವಿಕೆ ಪ್ರಯತ್ನಗಳನ್ನು ವಿಫಲಗೊಳಿಸಿದೆ. ಈ ಪ್ರಯತ್ನದಲ್ಲಿ ಒಬ್ಬ ಪಾಕಿಸ್ತಾನಿ ಭಯೋತ್ಪಾದಕ ಜೀವಂತವಾಗಿ ಸೆರೆ ಸಿಕ್ಕಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಆಗಸ್ಟ್ 21 ರ ಮುಂಜಾನೆ ನೌಶೇರಾದ ಝಾಂಗರ್ ಸೆಕ್ಟರ್‌ನಲ್ಲಿ ನಿಯೋಜಿಸಲಾದ ಸೈನಿಕರು ಎಲ್‌ಒಸಿಯಲ್ಲಿ 2-3 ಭಯೋತ್ಪಾದಕರ ಚಲನವಲನಗಳನ್ನು ಗಮನಿಸಿದರು. ಗಾಯಗೊಂಡ ಭಯೋತ್ಪಾದಕನನ್ನು ಸೈನಿಕರು ಆಸ್ಪತ್ರೆಗೆ ದಾಖಲಿಸಿದರು. ಅವರನ್ನು ಪಾಕಿಸ್ತಾನದಿಂದ ಭಾರತಕ್ಕೆ ಏಕೆ ಕಳುಹಿಸಲಾಯಿತು ಎಂದು ಕೇಳಿದಾಗ? ಬಂಧಿತ ಭಯೋತ್ಪಾದಕ ಈ ವಿಷಯವನ್ನು ಬಹಿರಂಗಪಡಿಸಿದ್ದಾನೆ’’ ಎಂಬ ಮಾಹಿತಿ ಇದರಲ್ಲಿದೆ.
ಇನ್ನಷ್ಟು ಮಾಹಿತಿಗಾಗಿ ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ, ಆಗಸ್ಟ್ 24, 2022ರ ದಿ ಪ್ರಿಂಟ್ ವರದಿ ಸಿಕ್ಕಿದೆ. ‘‘ಜಮ್ಮು ಪ್ರದೇಶದ ಬಳಿಯ ನಿಯಂತ್ರಣ ರೇಖೆಯಲ್ಲಿ ಭಾರತೀಯ ಭದ್ರತಾ ಪಡೆಗಳು ಸೆರೆಹಿಡಿದ ಭಯೋತ್ಪಾದಕನೊಬ್ಬ ಭಾರತದ ಭೂಪ್ರದೇಶದೊಳಗೆ ಭಯೋತ್ಪಾದಕ ದಾಳಿಗಳನ್ನು ಪ್ರಾಯೋಜಿಸುವಲ್ಲಿ ಸೇವೆ ಸಲ್ಲಿಸುತ್ತಿರುವ ಪಾಕಿಸ್ತಾನಿ ಸೇನಾ ಕರ್ನಲ್ ಪಾತ್ರದ ಬಗ್ಗೆ ಹೇಳಿದ್ದಾನೆ. ಬಂಧಿತ ಭಯೋತ್ಪಾದಕ, ಪಾಕ್ ಆಕ್ರಮಿತ ಕಾಶ್ಮೀರದ ಕೋಟ್ಲಿ ಜಿಲ್ಲೆಯ ಸಬ್ಜ್‌ಕೋಟ್ ಗ್ರಾಮದ ನಿವಾಸಿ ತಬಾರಕ್ ಹುಸೇನ್ ಪ್ರಸ್ತುತ ಸೇನಾ ವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಹುಸೇನ್ ಬುಧವಾರ ಚೇತರಿಸಿಕೊಳ್ಳುತ್ತಿದ್ದಂತೆ, ಎಲ್‌ಒಸಿ ದಾಟಿದ ನಂತರ ಭಾರತೀಯ ಸೈನಿಕರ ಮೇಲೆ ಫಿದಾಯೀನ್ ದಾಳಿ ನಡೆಸಲು ಪಾಕಿಸ್ತಾನದ ಕರ್ನಲ್ ಯೂನಸ್ ಚೌಧರಿ ಹಣ ಪಾವತಿಸಿದ್ದಾರೆ. ಇತರ ಮೂರರಿಂದ ನಾಲ್ಕು ಭಯೋತ್ಪಾದಕರೊಂದಿಗೆ ತನ್ನನ್ನು ಕಳುಹಿಸಲಾಗಿದೆ ಎಂದು ಎಎನ್‌ಐಗೆ ತಿಳಿಸಿದ್ದಾನೆ. ಹುಸೇನ್ ಗುಂಡೇಟಿನಿಂದ ಗಾಯಗೊಂಡಿದ್ದರೆ, ಆತನ ಸಹಚರರು ತಪ್ಪಿಸಿಕೊಂಡಿದ್ದರು’’ ಎಂದು ವರದಿಯಲ್ಲಿದೆ.
ಆಗಸ್ಟ್ 21, 2022 ರಂದು ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಭಾರತೀಯ ಸೇನಾ ಠಾಣೆಯ ಮೇಲೆ ದಾಳಿ ಮಾಡಲು ಪ್ರಯತ್ನಿಸುತ್ತಿದ್ದಾಗ ಪಾಕಿಸ್ತಾನಿ ಭಯೋತ್ಪಾದಕನೊಬ್ಬನನ್ನು ಜೀವಂತವಾಗಿ ಸೆರೆ ಹಿಡಿಯಲಾಯಿತು ಎಂದು ವೈರಲ್ ವೀಡಿಯೊದಲ್ಲಿರುವ ವ್ಯಕ್ತಿಯ ಸ್ಕ್ರೀನ್ ಶಾಟ್ನೊಂದಿಗೆ ಸುದ್ದಿ ಪ್ರಕಟ ಆಗಿರುವುದನ್ನು ನೀವು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಆದ್ದರಿಂದ, ಈ ಎಲ್ಲಾ ಮಾಹಿತಿಯ ಆಧಾರದ ಮೇಲೆ, ವೈರಲ್ ವೀಡಿಯೊವು ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತೀಯ ಸೇನೆಯು ಭಯೋತ್ಪಾದಕನನ್ನು ಜೀವಂತವಾಗಿ ಸೆರೆಹಿಡಿದಿರುವುದನ್ನು ತೋರಿಸುತ್ತಿಲ್ಲ ಎಂದು ನಾವು ಖಚಿತವಾಗಿ ಹೇಳುತ್ತೇವೆ. ಈ ವೀಡಿಯೊ 2022 ರದ್ದಾಗಿದೆ.