Fact Check: ಪಾಕಿಸ್ತಾನದಲ್ಲಿ ಆಹಾರಕ್ಕಾಗಿ ಮಸೀದಿ ಕೆಡವಿ ಅದರ ಕಬ್ಬಿಣ, ಇಟ್ಟಿಗೆಗಳನ್ನು ಮಾರಾಟ ಮಾಡುತ್ತಿದ್ದಾರೆಯೇ?

ಪುರುಷರ ಗುಂಪೊಂದು ಮಸೀದಿಯಂತೆ ಕಾಣುವ ಕಟ್ಟದ ಮೇಲೆ ಹತ್ತಿ ಸುತ್ತಿಗೆಯಿಂದ ಧ್ವಂಸ ಮಾಡುತ್ತಿರುವುದು ಕಾಣಬಹುದು. ಅನೇಕ ಬಳಕೆದಾರರು, ಪಾಕಿಸ್ತಾನಿಗಳು ಆಹಾರಕ್ಕಾಗಿ ಮಸೀದಿಗಳನ್ನು ಕೆಡವಿ ಕಬ್ಬಿಣ ಮತ್ತು ಇಟ್ಟಿಗೆಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ.

By Vinay Bhat  Published on  5 March 2025 2:55 PM IST
Fact Check: ಪಾಕಿಸ್ತಾನದಲ್ಲಿ ಆಹಾರಕ್ಕಾಗಿ ಮಸೀದಿ ಕೆಡವಿ ಅದರ ಕಬ್ಬಿಣ, ಇಟ್ಟಿಗೆಗಳನ್ನು ಮಾರಾಟ ಮಾಡುತ್ತಿದ್ದಾರೆಯೇ?
Claim: ಪಾಕಿಸ್ತಾನದಲ್ಲಿ ಮಸೀದಿ ಕೆಡವಿ ಅದರ ಕಬ್ಬಿಣ, ಇಟ್ಟಿಗೆಗಳನ್ನು ಆಹಾರಕ್ಕಾಗಿ ಮಾರಾಟ ಮಾಡುತ್ತಿದ್ದಾರೆ.
Fact: ಹಕ್ಕು ಸುಳ್ಳು. ಕರಾಚಿಯ ಸದ್ದಾರ್‌ನಲ್ಲಿರುವ ಅಲ್ಪಸಂಖ್ಯಾತ ಅಹ್ಮದಿಯಾ ಸಮುದಾಯಕ್ಕೆ ಸೇರಿದ ಮಸೀದಿಯನ್ನು ತೆಹ್ರೀಕ್-ಎ-ಲಬ್ಬೈಕ್-ಪಾಕಿಸ್ತಾನ್ ಭಯೋತ್ಪಾದಕ ಸಂಘಟನೆಯ ಶಂಕಿತ ಸದಸ್ಯರು ಧ್ವಂಸ ಮಾಡುತ್ತಿರುವ ದೃಶ್ಯ ಇದಾಗಿದೆ.

ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿರುವ ಪಾಕಿಸ್ತಾನದ ಜನರು ಭೀಕರ ಪರಿಸ್ಥಿತಿಗಳನ್ನು ಎದುರಿಸುತ್ತಿದ್ದಾರೆ. ಹಣದುಬ್ಬರದ ಜೊತೆಗೆ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿವೆ. ಇದರ ಮಧ್ಯೆ ವೀಡಿಯೊ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಇದರಲ್ಲಿ ಪುರುಷರ ಗುಂಪೊಂದು ಮಸೀದಿಯಂತೆ ಕಾಣುವ ಕಟ್ಟದ ಮೇಲೆ ಹತ್ತಿ ಸುತ್ತಿಗೆಯಿಂದ ಅದನ್ನು ಧ್ವಂಸ ಮಾಡುತ್ತಿರುವುದು ಕಾಣಬಹುದು. ಈ ಕ್ಲಿಪ್ ಅನ್ನು ಹಂಚಿಕೊಳ್ಳುವಾಗ ಅನೇಕ ಬಳಕೆದಾರರು, ಪಾಕಿಸ್ತಾನಿಗಳು ಆಹಾರಕ್ಕಾಗಿ ಮಸೀದಿಗಳನ್ನು ಕೆಡವಿ ಕಬ್ಬಿಣ ಮತ್ತು ಇಟ್ಟಿಗೆಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ.

ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಪಾಕಿಸ್ತಾನದಲ್ಲಿ ಅವರು ಮಸೀದಿಯನ್ನು ಕೆಡವಿ ಅದರ ಕಬ್ಬಿಣ ಮತ್ತು ಇಟ್ಟಿಗೆಗಳನ್ನು ತಮ್ಮ ಆಹಾರಕ್ಕಾಗಿ ಮಾರಾಟ ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕೆಡವಲಾದ 3ನೇ ಮಸೀದಿ ಇದಾಗಿದೆ. ಅಲ್ಲಾಹನು ನಮಗೆ ಆಹಾರವನ್ನು ನೀಡದಿದ್ದರೆ ಮಸೀದಿಗಳ ಅಗತ್ಯವೇನು, ಅವರು ಹೇಳುತ್ತಾರೆ? ಒಂದು ಕಾಲದಲ್ಲಿ ಅಲ್ಲಾ ದೊಡ್ಡವನು ಎಂದು ನಂಬಿ ಮಂದಿರಗಳನ್ನು ಹಾಳು ಮಾಡಿದ ಜನ ಈಗ ಅಲ್ಲಾಹನ ನೆಲೆಗಳನ್ನು ಹಾಳು ಮಾಡುತ್ತಿದ್ದಾರೆ. ಕರ್ಮದ ಸಿದ್ಧಾಂತದ ಪ್ರಕಾರ, ನೀವು ಯಾವ ರೀತಿಯಲ್ಲಿ ಪಾಪ ಮಾಡಿದ್ದೀರಿ, ನೀವು ಅದನ್ನು ಆ ರೀತಿಯಲ್ಲಿ ಪಾವತಿಸಬೇಕು. ಇದು ವೈದಿಕ ಧರ್ಮದ ಅರ್ಥ’’ ಎಂದು ಬರೆದುಕೊಂಡಿದ್ದಾರೆ. (Archive)

ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ಪೋಸ್ಟ್ ಅನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು ಫೆಬ್ರವರಿ 2023 ರಲ್ಲಿ ಪಾಕಿಸ್ತಾನದ ಕರಾಚಿಯ ಸದ್ದಾರ್‌ನಲ್ಲಿರುವ ಅಲ್ಪಸಂಖ್ಯಾತ ಅಹ್ಮದಿಯಾ ಸಮುದಾಯಕ್ಕೆ ಸೇರಿದ ಮಸೀದಿಯನ್ನು ತೆಹ್ರೀಕ್-ಎ-ಲಬ್ಬೈಕ್-ಪಾಕಿಸ್ತಾನ್ ಭಯೋತ್ಪಾದಕ ಸಂಘಟನೆಯ ಶಂಕಿತ ಸದಸ್ಯರು ಧ್ವಂಸ ಮಾಡುತ್ತಿರುವ ದೃಶ್ಯಗಳಾಗಿವೆ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್​ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಆಗ ಫೆಬ್ರವರಿ 4, 2023 ರಂದು ಹಿಂದೂಸ್ತಾನ್ಟೈಮ್ಸ್ ಇದೇ ವೈರಲ್ ವೀಡಿಯೊವನ್ನು ಹಂಚಿಕೊಂಡಿರುವುದು ಸಿಕ್ಕಿದೆ. ಇದಕ್ಕೆ ‘‘ಕರಾಚಿಯಲ್ಲಿ ಇಸ್ಲಾಮಿಸ್ಟ್‌ಗಳು ಅಹ್ಮದಿ ಮಸೀದಿಯನ್ನು ಧ್ವಂಸಗೊಳಿಸುವುದನ್ನು ಪಾಕ್ ಪೊಲೀಸರು ವೀಕ್ಷಿಸುತ್ತಿದ್ದಾರೆ’’ ಎಂಬ ಶೀರ್ಷಿಕೆ ನೀಡಿದೆ.

ಇದರಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ‘‘ಪಾಕಿಸ್ತಾನದ ಇಸ್ಲಾಮಿಸ್ಟ್‌ಗಳು ಕರಾಚಿಯಲ್ಲಿ ಅಹ್ಮದಿ ಅಲ್ಪಸಂಖ್ಯಾತರಿಗೆ ಸೇರಿದ ಪೂಜಾ ಸ್ಥಳವನ್ನು ಧ್ವಂಸಗೊಳಿಸಿದ್ದಾರೆ. ದುಷ್ಕರ್ಮಿಗಳು ಪೂಜಾ ಸ್ಥಳದ ಮಿನಾರ್‌ಗಳನ್ನು ಧ್ವಂಸ ಮಾಡಿದ್ದಾರೆ ಎಂದು ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ. ಪಾಕಿಸ್ತಾನದ ಕಾನೂನು ಅಹ್ಮದಿಗಳು ದೇಶದಲ್ಲಿ ತಮ್ಮ ಪೂಜಾ ಸ್ಥಳಗಳನ್ನು ಮಸೀದಿಗಳು ಎಂದು ಕರೆಯುವುದನ್ನು ನಿಷೇಧಿಸುತ್ತದೆ. ಅಲ್ಪಸಂಖ್ಯಾತ ಸಮುದಾಯದ ಪೂಜಾ ಸ್ಥಳವಾದ ಅಹ್ಮದಿಯಾ ಹಾಲ್ ಅನ್ನು 1950 ರ ದಶಕದಲ್ಲಿ ನಿರ್ಮಿಸಲಾಯಿತು. ಸ್ಥಳದಲ್ಲಿದ್ದ ಪೊಲೀಸರು ವಿಧ್ವಂಸಕ ಕೃತ್ಯವನ್ನು ತಡೆಯಲು ವಿಫಲರಾದರು ಮತ್ತು ಇಲ್ಲಿಯವರೆಗೆ ಯಾವುದೇ ಎಫ್‌ಐಆರ್ ದಾಖಲಿಸಲಾಗಿಲ್ಲ’’ ಎಂದು ಬರೆಯಲಾಗಿದೆ.

ಹಾಗೆಯೆ ಟೈಮ್ಸ್ ಆಫ್ ಇಂಡಿಯಾ ಕೂಡ ಇದೇ ವೈರಲ್ ವೀಡಿಯೊವನ್ನು ಹಂಚಿಕೊಂಡು ಫೆಬ್ರವರಿ 03, 2023 ರಂದು ಸುದ್ದಿ ಪ್ರಕಟಿಸಿದ್ದು, ‘‘ಪಾಕಿಸ್ತಾನದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು ನಿರಂತರವಾಗಿ ಗುರಿಯಾಗುತ್ತಿದ್ದಾರೆ. ಆಘಾತಕಾರಿ ಘಟನೆಯೊಂದರಲ್ಲಿ, ಪಾಕಿಸ್ತಾನದ ತೆಹ್ರೀಕ್-ಇ-ಲಬ್ಬೈಕ್ ಗುಂಪಿನ ಶಂಕಿತ ಸದಸ್ಯರು ಕರಾಚಿಯ ಅಹ್ಮದಿ ಮಸೀದಿಯನ್ನು ಧ್ವಂಸಗೊಳಿಸಿದ್ದಾರೆ. ಕರಾಚಿಯ ಸದರ್‌ನಲ್ಲಿ ಅಹ್ಮದಿ ಮಸೀದಿಯ ಮಿನಾರ್‌ಗಳನ್ನು ಮುರಿದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಒಂದು ತಿಂಗಳಲ್ಲಿ ಅಹ್ಮದಿ ಮಸೀದಿಯ ಮಿನಾರ್‌ಗಳನ್ನು ಕೆಡವಿರುವುದು ಇದು ಎರಡನೇ ಬಾರಿ’’ ಎಂದು ವರದಿಯಲ್ಲಿದೆ.

ಇನ್ನು ಪಾಕಿಸ್ತಾನದ ಸುದ್ದಿ ಮಾಧ್ಯಮ ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ಕೂಡ ಫೆಬ್ರವರಿ 4, 2023 ರಂದು ಈ ಘಟನೆ ಹೀಗೆ ಬರೆದುಕೊಂಡಿದೆ. ‘‘ಅಲ್ಪಸಂಖ್ಯಾತ ಸಮುದಾಯದ ಪೂಜಾ ಸ್ಥಳವಾದ ಅಹ್ಮದಿಯಾ ಹಾಲ್ ಅನ್ನು 1950 ರ ದಶಕದಲ್ಲಿ ನಿರ್ಮಿಸಲಾಯಿತು ಎಂದು ಸಮುದಾಯದ ಸದಸ್ಯರು ಹೇಳಿದ್ದಾರೆ. ಅಹ್ಮದಿ ಸಮುದಾಯದ ವಕ್ತಾರ ಅಮೀರ್ ಮೆಹಮೂದ್ ಈ ಘಟನೆಯನ್ನು ಖಂಡಿಸಿದರು ಮತ್ತು ದಾಳಿಕೋರರನ್ನು ನಿಯಂತ್ರಿಸಲು ಪೊಲೀಸರು ವಿಫಲರಾಗಿದ್ದಾರೆ ಎಂದು ವಿಷಾದಿಸಿದರು. ಇತ್ತೀಚೆಗೆ, ತಮ್ಮ ಸಮುದಾಯಕ್ಕೆ ಸೇರಿದ ಪೂಜಾ ಸ್ಥಳಗಳನ್ನು ಪಾಕಿಸ್ತಾನದಾದ್ಯಂತ ಗುರಿಯಾಗಿಸಲಾಗುತ್ತಿದೆ ಎಂದು ಹೇಳಿದ್ದಾರೆ’’.

1889 ರಲ್ಲಿ ಪಂಜಾಬ್‌ನ ಖಾಡಿಯನ್‌ನಲ್ಲಿ ಮಿರ್ಜಾ ಗುಲಾಮ್ ಅಹ್ಮದ್ ಸ್ಥಾಪಿಸಿದ ಅಹ್ಮದಿ ಸಮುದಾಯ ಅಥವಾ ಅಹ್ಮದಿಯಾ ಪಂಥವು ಪಾಕಿಸ್ತಾನದಲ್ಲಿ ನಿಯಮಿತ ದೌರ್ಜನ್ಯ ಮತ್ತು ಕಿರುಕುಳಕ್ಕೆ ಒಳಗಾಗಿದೆ. ಪಾಕಿಸ್ತಾನಿ ಸಂಸತ್ತು 1974 ರಲ್ಲಿ ಅಹ್ಮದಿ ಸಮುದಾಯವನ್ನು ಮುಸ್ಲಿಮೇತರರೆಂದು ಘೋಷಿಸಿತು. ಒಂದು ದಶಕದ ನಂತರ, ಅವರು ತಮ್ಮನ್ನು ತಾವು ಮುಸ್ಲಿಮರು ಎಂದು ಕರೆದುಕೊಳ್ಳುವುದನ್ನು ನಿಷೇಧಿಸಲಾಯಿತು. ಅವರು ಧರ್ಮೋಪದೇಶ ಮಾಡುವುದನ್ನು ಮತ್ತು ತೀರ್ಥಯಾತ್ರೆಗಾಗಿ ಸೌದಿ ಅರೇಬಿಯಾಕ್ಕೆ ಪ್ರಯಾಣಿಸುವುದನ್ನು ನಿಷೇಧಿಸಲಾಗಿದೆ.

ಪಾಕಿಸ್ತಾನದಲ್ಲಿ ಅಹ್ಮದಿ ಸಮುದಾಯಕ್ಕೆ ಸೇರಿದ ಜನರು ಅನುಭವಿಸುತ್ತಿರುವ ಅನ್ಯಾಯಗಳು ಮತ್ತು ಶೋಷಣೆಗಳ ಕುರಿತಾದ ಸುದ್ದಿಗಳು ಕಳೆದ ಹಲವಾರು ವರ್ಷಗಳಿಂದ ವರದಿ ಆಗುತ್ತವೇ ಇದೆ. ಅಂತಹ ವರದಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ನಾವು ಪಾಕಿಸ್ತಾನದಲ್ಲಿ ಜನರು ಕಬ್ಬಿಣ ಅಥವಾ ಇಟ್ಟಿಗೆಗಳಿಗಾಗಿ ಮಸೀದಿಗಳನ್ನು ನಾಶಪಡಿಸಿದ್ದಾರೆಯೇ ಎಂದು ಗೂಗಲ್​ನಲ್ಲಿ ಹುಡುಕಿದ್ದೇವೆ. ಆದರೆ, ಇದಕ್ಕೆ ಸಂಬಂಧಿಸಿದ ಯಾವುದೇ ವಿಶ್ವಾಸಾರ್ಹ ವರದಿಗಳು ನಮಗೆ ಸಿಕ್ಕಿಲ್ಲ.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಕರಾಚಿಯಲ್ಲಿ ಅಲ್ಪಸಂಖ್ಯಾತ ಅಹ್ಮದಿಯಾ ಸಮುದಾಯಕ್ಕೆ ಸೇರಿದ ಮಸೀದಿಯನ್ನು ಕೆಲವರು ಧ್ವಂಸ ಮಾಡುತ್ತಿರುವ ದೃಶ್ಯಗಳನ್ನು ಪಾಕಿಸ್ತಾನಿಗಳು ಕಬ್ಬಿಣ ಮತ್ತು ಇಟ್ಟಿಗೆಗಳಿಗಾಗಿ ಮಸೀದಿಗಳನ್ನು ನಾಶಪಡಿಸುತ್ತಿದ್ದಾರೆ ಎಂಬ ಸುಳ್ಳು ಹೇಳಿಕೆಯೊಂದಿಗೆ ವೈರಲ್ ಆಗುತ್ತಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.

Claim Review:ಪಾಕಿಸ್ತಾನದಲ್ಲಿ ಮಸೀದಿ ಕೆಡವಿ ಅದರ ಕಬ್ಬಿಣ, ಇಟ್ಟಿಗೆಗಳನ್ನು ಆಹಾರಕ್ಕಾಗಿ ಮಾರಾಟ ಮಾಡುತ್ತಿದ್ದಾರೆ.
Claimed By:Facebook User
Claim Reviewed By:NewsMeter
Claim Source:Social Media
Claim Fact Check:False
Fact:ಹಕ್ಕು ಸುಳ್ಳು. ಕರಾಚಿಯ ಸದ್ದಾರ್‌ನಲ್ಲಿರುವ ಅಲ್ಪಸಂಖ್ಯಾತ ಅಹ್ಮದಿಯಾ ಸಮುದಾಯಕ್ಕೆ ಸೇರಿದ ಮಸೀದಿಯನ್ನು ತೆಹ್ರೀಕ್-ಎ-ಲಬ್ಬೈಕ್-ಪಾಕಿಸ್ತಾನ್ ಭಯೋತ್ಪಾದಕ ಸಂಘಟನೆಯ ಶಂಕಿತ ಸದಸ್ಯರು ಧ್ವಂಸ ಮಾಡುತ್ತಿರುವ ದೃಶ್ಯ ಇದಾಗಿದೆ.
Next Story