ಪಾಕಿಸ್ತಾನದ ಮದುವೆ ಸ್ಥಳದಿಂದ ಹಿಂದೂ ವಧುವನ್ನು ಅಪಹರಿಸಲಾಗುತ್ತಿದೆ ಎಂದು ಹೇಳಿಕೊಳ್ಳುವ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಈ ವಿಡಿಯೋದಲ್ಲಿ ಹಾರ ಧರಿಸಿದ ಮಹಿಳೆಯನ್ನು ಅಲಂಕರಿಸಿದ ಕಾರಿನಿಂದ ಬಲವಂತವಾಗಿ ಮತ್ತೊಂದು ಕಾರಿಗೆ ಕರೆದೊಯ್ಯುತ್ತಿರುವುದನ್ನು ಕಾಣಬಹುದು.
ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಪಾಕಿಸ್ತಾನದಲ್ಲಿ ಹಿಂದು ಮದುವೆ ಹೆಣ್ಣು ಮಗಳನ್ನು ಪಾಕಿಸ್ತಾನದ ಯುವಕರು ಎಳೆದೊಯ್ಯುತ್ತಿರುವುದನ್ನು ನೋಡಿ’’ ಎಂದು ಬರೆದುಕೊಂಡಿದ್ದಾರೆ. (Archive)
Fact Check
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು ನಿಜವಾಗಿ ನಡೆದ ಘಟನೆ ಅಲ್ಲ, ಬದಲಾಗಿ ಇದೊಂದು ಸ್ಕ್ರಿಪ್ಟೆಡ್ ವೀಡಿಯೊ ಆಗಿದೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಪ್ರಮುಖ ಕೀಫ್ರೇಮ್‌ಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಾಟ ನಡೆಸಿದಾಗ, ಇದೇ ರೀತಿಯ ದೃಶ್ಯಗಳನ್ನು ಒಳಗೊಂಡಿರುವ ಹಲವಾರು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ನಮಗೆ ಕಂಡುಬಂದವು. ಅವುಗಳಲ್ಲಿ ಒಂದರಲ್ಲಿ, ಪ್ರಸಾರವಾಗುತ್ತಿರುವ ವೀಡಿಯೊ ನಿಜವಾದ ಘಟನೆಯದ್ದಲ್ಲ ಮತ್ತು ಪಾಕಿಸ್ತಾನದಲ್ಲಿ ರೌಫ್ ಟಿವಿ ನಿರ್ಮಿಸಿದ ಕಿರುಚಿತ್ರದ ದೃಶ್ಯಗಳು ಎಂದು ಬಳಕೆದಾರರೊಬ್ಬರು Grok ಹೇಳಿರುವ ಸ್ಕ್ರೀನ್ ಶಾಟ್ ಅನ್ನು ಹಂಚಿಕೊಂಡಿದ್ದಾರೆ.
ಈ ಸುಳಿವನ್ನು ಆಧರಿಸಿ ಹುಡುಕಿದಾಗ, ವೈರಲ್ ವೀಡಿಯೊದಲ್ಲಿರುವ ಅದೇ ಘಟನೆಯ ವೀಡಿಯೊ ಬೇರೆ ಕೋನದಿಂದ ಯೂಟ್ಯೂಬ್‌ನಲ್ಲಿ ಕಂಡುಬಂದಿದೆ. ಇದು ಡಿಸೆಂಬರ್ 9, 2025 ರಂದು ಯೂಟ್ಯೂಬ್ಚಾನೆಲ್ ರೌಫ್ ಟಿವಿಯಲ್ಲಿ ‘ದಿನ್ ದಿಹರಿ ಲಾರ್ಕಿ ಅಘ್ವಾ | ರೌಫ್ ಟಿವಿಯಿಂದ' ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಲಾದ ಒಂದು ಸಣ್ಣ ವೀಡಿಯೊ. ಈ ವೀಡಿಯೊದ ಕೊನೆಯಲ್ಲಿ, ‘ಹಕ್ಕುತ್ಯಾಗ: ಚಲನಚಿತ್ರ ಮತ್ತು ಅದರ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ' ಎಂದು ಬರೆಯಲಾಗಿದೆ. ವೈರಲ್ ವೀಡಿಯೊ ನಿಜವಾದ ಘಟನೆಯಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.
ವೈರಲ್ ದೃಶ್ಯಗಳಲ್ಲಿರುವ ಘಟನೆಯ ಮತ್ತೊಂದು ಭಾಗವನ್ನು ಆರ್ ಟಿವಿ ಎಂಬ ಫೇಸ್ಬುಕ್ಪುಟದಲ್ಲೂ ಪೋಸ್ಟ್ ಮಾಡಲಾಗಿದೆ. ಈ ಪೇಜ್ ಅನ್ನು ಪರಿಶೀಲಿಸಿದಾಗ ಇದರಲ್ಲಿ ಇಂತಹ ಅನೇಕ ಸ್ಕ್ರಿಪ್ಟ್ ಮಾಡಿದ ವೀಡಿಯೊಗಳನ್ನು ಪೋಸ್ಟ್ ಮಾಡಿರುವುದು ಕಂಡುಬಂತು. ಇದನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಪಾಕಿಸ್ತಾನದ ಮದುವೆ ಸ್ಥಳದಿಂದ ಹಿಂದೂ ವಧುವನ್ನು ಅಪಹರಿಸಲಾಗುತ್ತಿದೆ ಎಂಬ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊ ನಿಜವಾಗಿ ನಡೆದ ಘಟನೆಯಲ್ಲ, ಬದಲಾಗಿ ಇದು ಸ್ಕ್ರಿಪ್ಟ್ ಮಾಡಿದ್ದಾಗಿದೆ ಎಂದು ನಾವು ತೀರ್ಮಾನಿಸುತ್ತೇವೆ.