ಅಯೋಧ್ಯೆಯ ರಾಮಲಲ್ಲಾ ದೇವಸ್ಥಾನಕ್ಕೆ ನವಿಲೊಂದು ಹೂವಿನ ಹಾರವನ್ನು ಅರ್ಪಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಜೈ ಶ್ರೀ ರಾಮ್ ಘೋಷಣೆಗಳ ನಡುವೆ, ನವಿಲು ತನ್ನ ಕೊಕ್ಕಿನಿಂದ ಹಾರವನ್ನು ಎತ್ತಿ ಭಗವಾನ್ ರಾಮನ ವಿಗ್ರಹಕ್ಕೆ ಅರ್ಪಿಸುತ್ತಿರುವುದು ವೀಡಿಯೊದಲ್ಲಿ ಕಾಣಬಹುದು. ಅನೇಕ ಜನರು ಈ ದೃಶ್ಯವನ್ನು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಸೆರೆಹಿಡಿಯುತ್ತಿದ್ದಾರೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಅಯೋಧ್ಯೆ ರಾಮಮಂದಿರದಲ್ಲಿ ರಾಮಲಲ್ಲಾ ಭೇಟಿ. ನವಿಲುಗಳು ಆಗಮಿಸಿ ಅವರ ಪಾದಗಳಿಗೆ ಹೂವಿನ ಮಾಲೆಗಳನ್ನು ಇಡಲಾಗುತ್ತದೆ. ನಿಜಕ್ಕೂ ಭವ್ಯವಾದ, ದೈವಿಕ ದೃಶ್ಯ’’ ಎಂದು ಬರೆದುಕೊಂಡಿದ್ದಾರೆ.
Fact Check
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು ನಿಜವಾಗಿ ನಡೆ ಘಟನೆ ಅಲ್ಲ, ಬದಲಾಗಿ ಇದನ್ನು ಕೃತಕ ಬುದ್ದಿಮತ್ತೆ ಸಹಾಯದಿಂದ ರಚಿಸಲಾಗಿದೆ.
ನಿಜಾಂಶವನ್ನು ತಿಳಿಯಲು ನಾವು ಮೊದಲಿಗೆ ವೈರಲ್ ವೀಡಿಯೊದ ಕುರಿತು ಸೂಕ್ತವಾದ ಕೀವರ್ಡ್‌ಗಳನ್ನು ಬಳಸಿ ಇಂಟರ್ನೆಟ್‌ನಲ್ಲಿ ಹುಡುಕಿದ್ದೇವೆ. ಆದರೆ, ಇದಕ್ಕೆ ಸಂಬಂಧಿಸಿದ ಯಾವುದೇ ವಿಶ್ವಾಸಾರ್ಹ ಮಾಹಿತಿ ಲಭ್ಯವಾಗಲಿಲ್ಲ.
ಬಳಿಕ ವೈರಲ್ ವೀಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ವೀಡಿಯೊದಲ್ಲಿ 'Ash_saxena' ಎಂಬ ವಾಟರ್‌ಮಾರ್ಕ್ ಅನ್ನು ಕಾಣಬಹುದು.
ಈ ಹೆಸರನ್ನು ಹುಡುಕಿದಾಗ ಇವರ ಇನ್ಸ್ಟಾಗ್ರಾಮ್ ಖಾತೆ ಸಿಕ್ಕಿತು. ಇದರಲ್ಲಿ 29 ಡಿಸೆಂಬರ್ 2025 ರಂದು ಅದೇ ವೈರಲ್ ವೀಡಿಯೊವನ್ನು ಶೇರ್ ಮಾಡಿದ್ದಾರೆ. ಈ ಪೋಸ್ಟ್ ವಿವರಣೆಯಲ್ಲಿ #sora2 #sora ಎಂದು ಆ್ಯಶ್ಟ್ಯಾಗ್ ಬಳಸಲಾಗಿದೆ. ಸೋರಾ ಓಪನ್ AI ಯ ವೀಡಿಯೊ ಜನರೇಷನ್ ಪ್ಲಾಟ್‌ಫಾರ್ಮ್ ಆಗಿದ್ದು, ಇದು AI- ರಚಿತ ವೀಡಿಯೊಗಳನ್ನು ರಚಿಸಲು ಅನುಮತಿಸುತ್ತದೆ.
ಇನ್ನಷ್ಟು ಖಚಿತ ಮಾಹಿತಿಗಾಗಿ ನಾವು ಎಐ ಮತ್ತೆ ಸಾಧನ Hive Moderation ನಲ್ಲಿ ಪರೀಕ್ಷಿಸಿದಾಗ ಇದನ್ನು ಶೇ. 91.8 ರಷ್ಟು ಎಐಯಿಂದ ಸೃಷ್ಟಿಸಲಾಗಿದೆ ಎಂದು ಹೇಳಿದೆ. Sightengine ನಲ್ಲಿ ಪರೀಕ್ಷಿಸಿದಾಗ ಇದು ಶೇ. 87 ರಷ್ಟು ಎಐಯಿಂದ ರಚಿತವಾಗಿದೆ ಎಂದು ಹೇಳಿದೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಅಯೋಧ್ಯೆಯ ರಾಮಲಲ್ಲಾ ದೇವಸ್ಥಾನದಲ್ಲಿ ನವಿಲೊಂದು ಹೂವಿನ ಹಾರವನ್ನು ಅರ್ಪಿಸುತ್ತಿರುವ ವೈರಲ್ ವೀಡಿಯೊ ನಿಜವಲ್ಲ, ಇದನ್ನು ಕೃತಕ ಬುದ್ಧಿಮತ್ತೆಯಿಂದ ಸೃಷ್ಟಿಸಲ್ಪಟ್ಟಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.