Fact Check: ಸಂಭಾಲ್ ಮಸೀದಿ ಸಮೀಕ್ಷೆಯಲ್ಲಿ ವಿಗ್ರಹ ಪತ್ತೆ ಎಂದು ಕರ್ನಾಟಕದಲ್ಲಿ ಸಿಕ್ಕ ಮೂರ್ತಿಯ ಫೋಟೋ ವೈರಲ್

ನಾಲ್ಕು ಫೋಟೋಗಳನ್ನು ಕೊಲಾಜ್ ಮಾಡಿ ಹಂಚಿಕೊಳ್ಳಲಾಗುತ್ತಿದ್ದು, ಸಂಭಾಲ್‌ನಲ್ಲಿ ಮಸೀದಿಯೊಂದರ ಸಮೀಕ್ಷೆ ವೇಳೆ 1,500 ವರ್ಷಗಳಷ್ಟು ಹಳೆಯದಾದ ಶಿಲ್ಪಗಳು ಕಂಡುಬಂದಿವೆ ಎಂದು ಹೇಳಲಾಗಿದೆ.

By Vinay Bhat  Published on  16 Dec 2024 12:14 PM IST
Fact Check: ಸಂಭಾಲ್ ಮಸೀದಿ ಸಮೀಕ್ಷೆಯಲ್ಲಿ ವಿಗ್ರಹ ಪತ್ತೆ ಎಂದು ಕರ್ನಾಟಕದಲ್ಲಿ ಸಿಕ್ಕ ಮೂರ್ತಿಯ ಫೋಟೋ ವೈರಲ್
Claim: ಸಂಭಾಲ್ ಮಸೀದಿ ಸಮೀಕ್ಷೆಯಲ್ಲಿ 1500 ವರ್ಷಗಳಷ್ಟು ಹಳೆಯದಾದ ವಿಷ್ಣುವಿನ ಪ್ರತಿಮೆ, ಸುದರ್ಶನ ಚಕ್ರ, ಹಿಂದೂ ಚಿಹ್ನೆಗಳು ಪತ್ತೆ.
Fact: ಫೋಟೋದಲ್ಲಿ ಕಾಣುವ ಮೊದಲ ಮೂರು ವಿಗ್ರಹ ಕರ್ನಾಟಕದಲ್ಲಿ ಸಿಕ್ಕಿರುವುದಾಗಿದೆ. ನಾಲ್ಕನೇ ಫೋಟೋ ಆನ್‌ಲೈನ್ ಶಾಪಿಂಗ್ ಸೈಟ್‌ನಲ್ಲಿ ಪಟ್ಟಿ ಮಾಡಲಾಗಿದೆ.

ಇತ್ತೀಚೆಗಷ್ಟೆ ಉತ್ತರ ಪ್ರದೇಶದ ಸಂಭಾಲ್‌ನಲ್ಲಿರುವ ಶಾಹಿ ಜಾಮಾ ಮಸೀದಿಯ ಸಮೀಕ್ಷೆಯ ಸಂದರ್ಭದಲ್ಲಿ ದೊಡ್ಡ ಹಿಂಸಾಚಾರ ಸಂಭವಿಸಿತು. ಈ ಹಿಂಸಾಚಾರದಲ್ಲಿ ನಾಲ್ಕು ಜನರು ಪ್ರಾಣ ಕಳೆದುಕೊಂಡರೆ, ಕೆಲ ಪೊಲೀಸರು ಗಾಯಗೊಂಡರು. ಇದರ ನಡುವೆ ಕೆಲವು ಫೋಟೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ. ನಾಲ್ಕು ಫೋಟೋಗಳನ್ನು ಕೊಲಾಜ್ ಮಾಡಿ ಹಂಚಿಕೊಳ್ಳಲಾಗುತ್ತಿದ್ದು, ಸಂಭಾಲ್‌ನಲ್ಲಿ ಮಸೀದಿಯೊಂದರ ಸಮೀಕ್ಷೆ ವೇಳೆ 1,500 ವರ್ಷಗಳಷ್ಟು ಹಳೆಯದಾದ ಶಿಲ್ಪಗಳು ಕಂಡುಬಂದಿವೆ ಎಂದು ಹೇಳಲಾಗಿದೆ.

ಫೇಸ್​ಬುಕ್ ಬಳಕೆದಾರರು ಈ ಫೋಟೋವನ್ನು ಹಂಚಿಕೊಂಡು, ‘‘ಸಂಭಾಲ್ ಮಸೀದಿ ಸಮೀಕ್ಷೆಯಲ್ಲಿ 1500 ವರ್ಷಗಳಷ್ಟು ಹಳೆಯದಾದ ವಿಷ್ಣುವಿನ ಪ್ರತಿಮೆ, ಸುದರ್ಶನ ಚಕ್ರ, ಹಿಂದೂ ಚಿಹ್ನೆಗಳು ಪತ್ತೆ. ಪ್ರತಿಯೊಬ್ಬ ಹಿಂದೂ ಶೇರ್ ಮಾಡಿ ಮತ್ತು ಹಿಂದೂ ಧರ್ಮವನ್ನು ಉಳಿಸಿ’’ ಎಂದು ಬರೆದುಕೊಂಡಿದ್ದಾರೆ.

ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ಫೋಟೋವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ಫೋಟೋ ವೈರಲ್ ಆಗುತ್ತಿದೆ ಎಂಬುದು ತಿಳಿದುಬಂದಿದೆ. ಫೋಟೋದಲ್ಲಿ ಕಾಣುವ ಮೊದಲ ಮೂರು ವಿಗ್ರಹಗಳು ಕರ್ನಾಟಕದಲ್ಲಿ ಫೆಬ್ರವರಿ 2024 ರಲ್ಲಿ ಸಿಕ್ಕಿರುವುದಾಗಿದೆ. ನಾಲ್ಕನೇ ಫೋಟೋದಲ್ಲಿ ಕಂಡುಬರುವ ಸುದರ್ಶನ ಚಕ್ರವನ್ನು ಆನ್‌ಲೈನ್ ಶಾಪಿಂಗ್ ಸೈಟ್‌ನಲ್ಲಿ ಪಟ್ಟಿ ಮಾಡಲಾಗಿದೆ.

ನಿಜಾಂಶವನ್ನು ತಿಳಿಯಲು ಮೊದಲಿಗೆ ನಾವು ವೈರಲ್ ಪೋಸ್ಟ್‌ನಲ್ಲಿ ಹೇಳಿದಂತೆ, ಸಂಭಾಲ್ ಮಸೀದಿ ಸಮೀಕ್ಷೆಯಲ್ಲಿ ಪ್ರಾಚೀನ ಹಿಂದೂ ವಿಗ್ರಹಗಳು ಕಂಡುಬಂದಿವೆಯೇ ಎಂದು ಸೂಕ್ತ ಕೀವರ್ಡ್‌ಗಳನ್ನು ಬಳಸಿಕೊಂಡು ಗೂಗಲ್​ನಲ್ಲಿ ಸರ್ಚ್ ಮಾಡಿದ್ದೇವೆ. ಆದರೆ, ಸಂಭಾಲ್ ಮಸೀದಿ ಸಮೀಕ್ಷೆಯಲ್ಲಿ ಪ್ರಾಚೀನ ಹಿಂದೂ ವಿಗ್ರಹಗಳ ಯಾವುದೇ ವಿಶ್ವಾಸಾರ್ಹ ವರದಿಗಳು ಕಂಡುಬಂದಿಲ್ಲ. ಅಲ್ಲದೆ ಈ ಸಮೀಕ್ಷಾ ವರದಿ ಇನ್ನೂ ಬಹಿರಂಗಗೊಂಡಿಲ್ಲ ಎಂಬ ವಿಚಾರ ತಿಳಿದುಬಂತು.

ಬಳಿಕ ಈ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್ ಸಹಾಯದಿಂದ ಸರ್ಚ್ ಮಾಡಿದ್ದೇವೆ. ಆಗ ಫೆಬ್ರವರಿ 7, 2024 ರಂದು ನ್ಯೂಸ್ 18 ವೈರಲ್ ಫೋಟೋದಲ್ಲಿರುವ ಒಂದು ವಿಗ್ರಹವನ್ನು ಒಳಗೊಂಡಿರುವ ಫೋಟೋ ಹಂಚಿಕೊಂಡು ಸುದ್ದಿ ಪ್ರಕಟಿಸಿರುವುದು ಕಂಡುಬಂದಿದೆ. ‘ಅಯೋಧ್ಯೆಯ ರಾಮಲಲ್ಲಾ ಪ್ರತಿಮೆಯನ್ನು ಹೋಲುವ ಪ್ರಾಚೀನ ವಿಷ್ಣುವಿನ ವಿಗ್ರಹವು ಕರ್ನಾಟಕದಲ್ಲಿ ಕಂಡುಬಂದಿದೆ’ ಎಂದು ಶೀರ್ಷಿಕೆ ನೀಡಲಾಗಿದೆ.

ಇದರಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ‘‘ಭಗವಾನ್ ವಿಷ್ಣುವಿನ ಎಲ್ಲಾ ಹತ್ತು ಅವತಾರಗಳನ್ನು ಒಳಗೊಂಡಿರುವ ಪುರಾತನ ವಿಗ್ರಹವು ಇತ್ತೀಚೆಗೆ ಕರ್ನಾಟಕದ ರಾಯಚೂರಿನಲ್ಲಿ ಪತ್ತೆಯಾಗಿದ್ದು ಭಕ್ತರಲ್ಲಿ ಉತ್ಸಾಹವನ್ನು ಮೂಡಿಸಿದೆ. ಈ ವಿಗ್ರಹವು ಕ್ರಿ.ಶ.11 ಅಥವಾ 12ನೇ ಶತಮಾನಕ್ಕೆ ಸೇರಿದ್ದು ಎಂದು ಪುರಾತತ್ವಶಾಸ್ತ್ರಜ್ಞರು ನಂಬಿದ್ದಾರೆ’’ ಎಂದು ಬರೆಯಲಾಗಿದೆ.

ಈ ಮಾಹಿತಿಯ ಆಧಾರದ ಮೇಲೆ ನಾವು ಗೂಗಲ್​ನಲ್ಲಿ ‘ರಾಯಚೂರು, ವಿಗ್ರಹ, ಶಿವಲಿಂಗ’ ಎಂದು ಕೀವರ್ಡ್ ಸರ್ಚ್ ಮಾಡಿದ್ದೇವೆ. ಆಗ ವೈರಲ್ ಫೋಟೋದಲ್ಲಿನ ಮೊದಲ ಮೂರು ಫೋಟೋಗಳಿರುವ ಸುದ್ದಿಯನ್ನು ವಿಸ್ತಾರ ನ್ಯೂಸ್ ಫೆಬ್ರವರಿ 6, 2024 ರಂದು ಪ್ರಕಟಿಸಿರುವುದು ಸಿಕ್ಕಿದೆ.

‘‘ರಾಯಚೂರಿನ ಕೃಷ್ಣಾ ನದಿಯಲ್ಲಿ ಅಯೋಧ್ಯೆಯ ಬಾಲಕ ರಾಮನ ಮೂರ್ತಿಯನ್ನು ಹೋಲುವ ವಿಷ್ಣುವಿನ ವಿಗ್ರಹ ಸೇರಿದಂತೆ ಹಲವು ಪುರಾತನ ವಿಗ್ರಹಗಳು ಪತ್ತೆಯಾಗಿವೆ. ದಶಾವತಾರಗಳಿಂದ ಕೂಡಿದ ವಿಷ್ಣುವಿನ ವಿಗ್ರಹ ಮತ್ತು ಪುರಾತನ ಶಿವಲಿಂಗ ಪತ್ತೆಯಾಗಿವೆ. ಸೇತುವೆ ಕಾಮಗಾರಿ ವೇಳೆ ಪುರಾತನವಾದ ಈ ವಿಗ್ರಹಗಳು ಪತ್ತೆಯಾಗಿದ್ದು, 12-16ನೇ ಶತಮಾನದ ವಿಗ್ರಹಗಳಾಗಿರಬಹುದು ಎನ್ನಲಾಗಿದೆ. ವಿಷ್ಣುವಿನ ವಿಗ್ರಹ 11ನೇ ಶತಮಾನಕ್ಕೆ ಸೇರಿರುವ ಸಾಧ್ಯತೆ ಇದೆ. ನೀರಿಲ್ಲದೆ ನದಿ ಬತ್ತಿರುವುದರಿಂದ ನದಿಯ ಆಳದಲ್ಲಿ ಈ ವಿಗ್ರಹಗಳು ಕಂಡುಬಂದಿವೆ. ಶಂಖ, ಚಕ್ರ, ಪದ್ಮಗಳನ್ನು ಹಿಡಿದ ಹಾಗೂ ಕಟಿಹಸ್ತನಾದ ವಿಷ್ಣುವಿನ ವಿಗ್ರಹವು ಪ್ರಭಾವಳಿಯಲ್ಲಿ ವೆಂಕಟೇಶನ ಶಿಲ್ಪ ಹಾಗೂ ದಶಾವತಾರ ಶಿಲ್ಪಗಳನ್ನು ಹೊಂದಿದೆ. ಇದು ಯಾವುದೋ ವೈಷ್ಣವ ದೇವಾಲಯಕ್ಕೆ ಸಂಬಂಧಿಸಿದ ವಿಷ್ಣುವಿನ ಮೂಲ ಮೂರ್ತಿ ಆಗಿರಬಹುದು. ಆಗಮ ಶಾಸ್ತ್ರದ ರೀತಿಯಲ್ಲೇ ವಿಷ್ಣುವಿನ ಮೂರ್ತಿಯ ರಚನೆ ಆಗಿದೆ. ಸದ್ಯ ವಿಗ್ರಹಗಳನ್ನು ನದಿಯಿಂದ ಮೇಲಕ್ಕೆ ಎತ್ತಿ ಸ್ಥಳೀಯರು ತಾತ್ಕಾಲಿಕ ರಕ್ಷಣೆ ವ್ಯವಸ್ಥೆ ಮಾಡಿದ್ದಾರೆ’’ ಎಂಬ ಮಾಹಿತಿ ಇದರಲ್ಲಿದೆ.

ಇದೇ ಮಾಹಿತಿಯನ್ನು ಮತ್ತು ಫೋಟೋವನ್ನು ಹಂಚಿಕೊಂಡಿರುವ ವರದಿ ಟಿವಿ9 ಕನ್ನಡ ಕೂಡ ಪ್ರಕಟಿಸಿದೆ. ‘‘ರಾಯಚೂರು ಜಿಲ್ಲೆಯಲ್ಲಿನ ಶಕ್ತಿ ನಗರ ಬಳಿಯ ಕೃಷ್ಣಾ ನದಿಯಲ್ಲಿ ಪುರಾತನ ಕಾಲದ ವಿಗ್ರಹಗಳು ಪತ್ತೆಯಾಗಿವೆ. ರಾಯಚೂರು-ತೆಲಂಗಾಣ ಗಡಿಯಲ್ಲಿರುವ ಶಕ್ತಿ ನಗರ ಬಳಿಯ ಕೃಷ್ಣಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಲಾಗುತ್ತಿದೆ. ಈ ಸೇತುವೆ ಕಾಮಗಾರಿ ವೇಳೆ ಕೃಷ್ಣಾ ನದಿಯಲ್ಲಿ ದೇವರ ವಿಗ್ರಹಗಳು ಪತ್ತೆಯಾಗಿವೆ’’ ಎಂದು ಬರೆಯಲಾಗಿದೆ.

ಇದಕ್ಕೆ ಸಂಬಂಧಿಸಿದ ಇನ್ನಷ್ಟು ವರದಿಯನ್ನು ನೀವು ಇಲ್ಲಿ, ಇಲ್ಲಿ ಓದಬಹುದು.

ಇನ್ನು ವೈರಲ್ ಪೋಸ್ಟ್​ನಲ್ಲಿರುವ ನಾಲ್ಕನೇ ಫೋಟೋವನ್ನು (ವೃತ್ತಾಕಾರದ ಚಕ್ರ ಸುದರ್ಶನ ಚಕ್ರ) ಗೂಗಲ್​ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಥೇಟ್ ಇದೇ ಫೋಟೋವನ್ನು ಇಂಡಿಯಾಮಾರ್ಟ್ ಎಂಬ ಆನ್‌ಲೈನ್ ಶಾಪಿಂಗ್ ವೆಬ್‌ಸೈಟ್‌ನಲ್ಲಿ ಕಂಡುಬಂದುದೆ. ಈ ಫೋಟೋಕ್ಕೆ " Material: Brass Sudarshanachakra kalasham, Temple" ಎಂದು ಶೀರ್ಚಿಕೆ ಬರೆಯಲಾಗಿದೆ. ವೆಬ್‌ಸೈಟ್ ಪ್ರಕಾರ, ಈ ವಸ್ತುವನ್ನು ಹೈದರಾಬಾದ್ ಮೂಲದ ಕೋಲ್ಚರಮ್ ಆರ್ಟ್ ಕ್ರಿಯೇಷನ್ಸ್ ತಯಾರಿಸುತ್ತದೆ ಮತ್ತು ಮಾರಾಟ ಮಾಡುತ್ತದೆ. ಇದರ ಬೆಲೆ 20,000 ರೂ. ಆಗಿದೆ.

ಹೀಗಾಗಿ ಈ ಫೋಟೋಗಳಲ್ಲಿ ಕಂಡುಬರುವ ವಿಷ್ಣು ವಿಗ್ರಹ ಮತ್ತು ಶಿವಲಿಂಗವು ಫೆಬ್ರವರಿ 2024 ರಲ್ಲಿ ಕರ್ನಾಟಕದ ರಾಯಚೂರು ಜಿಲ್ಲೆಯಲ್ಲಿ ಸೇತುವೆಯ ನಿರ್ಮಾಣದ ಸಮಯದಲ್ಲಿ ಸಿಕ್ಕಿದ್ದಾಗಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.

Claim Review:ಸಂಭಾಲ್ ಮಸೀದಿ ಸಮೀಕ್ಷೆಯಲ್ಲಿ 1500 ವರ್ಷಗಳಷ್ಟು ಹಳೆಯದಾದ ವಿಷ್ಣುವಿನ ಪ್ರತಿಮೆ, ಸುದರ್ಶನ ಚಕ್ರ, ಹಿಂದೂ ಚಿಹ್ನೆಗಳು ಪತ್ತೆ.
Claimed By:Facebook User
Claim Reviewed By:News Meter
Claim Source:Social Media
Claim Fact Check:False
Fact:ಫೋಟೋದಲ್ಲಿ ಕಾಣುವ ಮೊದಲ ಮೂರು ವಿಗ್ರಹ ಕರ್ನಾಟಕದಲ್ಲಿ ಸಿಕ್ಕಿರುವುದಾಗಿದೆ. ನಾಲ್ಕನೇ ಫೋಟೋ ಆನ್‌ಲೈನ್ ಶಾಪಿಂಗ್ ಸೈಟ್‌ನಲ್ಲಿ ಪಟ್ಟಿ ಮಾಡಲಾಗಿದೆ.
Next Story