ತನ್ನ ಮುಸ್ಲಿಂ ಗೆಳೆಯ ಮದುವೆಯಾದ ನಂತರ ಇಸ್ಲಾಂಗೆ ಮತಾಂತರಗೊಂಡ ಹಿಂದೂ ಮಹಿಳೆಯ ಮೇಲೆ ಆತ ಹಲ್ಲೆ ನಡೆಸಿದ್ದಾನೆ. ಎರಡು ವರ್ಷಗಳ ಕಾಲ ನಿಂದಿಸಿ, ಹೊಡೆದು, ನಂತರ ಮನೆಯಿಂದ ಹೊರಗೆಸೆದಿದ್ದಾನೆ ಎಂಬ ಹೇಳಿಕೆಯೊಂದಿಗೆ ಎರಡು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಮೊದಲ ಫೋಟೋದಲ್ಲಿ ಒಬ್ಬ ಪುರುಷ ಶರ್ಟ್ ಧರಿಸಿದ್ದರೆ, ಒಬ್ಬ ಮಹಿಳೆ ಸೀರೆ ಧರಿಸಿದ್ದಾರೆ. ಎರಡನೇ ಫೋಟೋದಲ್ಲಿ ಸುಟ್ಟ ಮುಖವಿರುವ ಮಹಿಳೆಯೊಬ್ಬರಿದ್ದಾರೆ. ಎರಡೂ ಫೋಟೋಗಳಲ್ಲಿರುವ ಮಹಿಳೆ ನೊಂದ ಹಿಂದೂ ಮಹಿಳೆ ಎಂದು ಹೇಳಲಾಗುತ್ತಿದೆ.
ಫೇಸ್‌ಬುಕ್ ಬಳಕೆದಾರರೊಬ್ಬರು ಈ ಫೋಟೋವನ್ನು ಹಂಚಿಕೊಂಡು, ‘‘ವಿದ್ಯೆ, ಹಣ, ಆಸ್ತಿ, ಸೌಂದರ್ಯ ಎಲ್ಲವೂ ಇತ್ತು, ಸೆಂಟ್ ವಾಸನೆ ಹಿಂದೆ ಬಿದ್ದಳು, ಇವಳ ಫಾಲೋವರ್ಸ್ ಎಷ್ಟೇ ಬುದ್ದಿವಾದ ಹೇಳಿದ್ರು ಕೇಳಲಿಲ್ಲ, ಅವರಿಗೆ ಧಮಕಿ ಹಾಕಿದ್ಲು, ನನ್ನವನು ಅಂತವನಲ್ಲ ಎಲ್ಲರಂತಲ್ಲ ಎಂದು ಮತಾಂತರ ಮದುವೆಯಾದಳು. ಎರಡು ವರ್ಷ ಅವಳನ್ನು, ಅವಳ ಎಲ್ಲವನ್ನು ಅನುಭವಿಸಿ, ಈ ಗತಿಗೆ ತಂದಿದ್ದಾನೆ. ಇಂತಹ ಸಾವಿರಾರು ಘಟನೆಗಳು ಕಣ್ ಮುಂದೆ ಇದ್ದರು, ನಮ್ಮ ಹೆಣ್ಣುಮಕ್ಕಳಿಗೆ ಬುದ್ದಿ ಬರಲ್ಲ, ಇವಳ ಅದೃಷ್ಟ ಚನ್ನಾಗಿತ್ತು, ಇವಳು ಸೂಟ್ಕೇಸ್/ ಫ್ರಿಡ್ಜ್ ಅಲ್ಲಿ ಪಾರ್ಸಲ್ ಆಗಲಿಲ್ಲ. ಬದಲಾಗಿ ಸಹೋದರಿಯರೇ ಇಂತಹ ಘಟನೆಗಳನ್ನಾದ್ರೂ ನೋಡಿ ಬದಲಾಗಿ’’ ಎಂದು ಬರೆದುಕೊಂಡಿದ್ದಾರೆ. (Archive)
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ಪೋಸ್ಟ್ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ಫೋಟೋಗಳು ಬಾಂಗ್ಲಾದೇಶಿ ನಟಿ ಜ್ಯೋತಿ ಇಸ್ಲಾಂ ಅವರದ್ದಾಗಿದೆ. ಮೊದಲ ಫೋಟೋ ಚಲನಚಿತ್ರ ಪೋಸ್ಟರ್‌ನಿಂದ ಬಂದಿದ್ದರೆ, ಎರಡನೇ ಫೋಟೋ ಚಲನಚಿತ್ರ ಚಿತ್ರೀಕರಣದ ವೀಡಿಯೊದಿಂದ ತೆಗೆದುಕೊಳ್ಳಲಾಗಿದೆ.
ನಿಜಾಂಶವನ್ನು ತಿಳಿಯಲು ನಾವು ಮೊದಲಿಗೆ ಸುಟ್ಟ ಮುಖ ಹೊಂದಿರುವ ಹುಡುಗಿಯ ಫೋಟೋವನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದಾಗ, ಬಾಂಗ್ಲಾದೇಶದ ನಟಿ ಜ್ಯೋತಿ ಇಸ್ಲಾಂ ಅವರ ಅಕ್ಟೋಬರ್ 21 ರಂದು ಬರೆದ ಫೇಸ್‌ಬುಕ್ ಪೋಸ್ಟ್ ನಮ್ಮನ್ನ ಕರೆದೊಯ್ಯಿತು. ಅದರಲ್ಲಿ ಅವರ ಮುಖ ಸುಟ್ಟುಹೋಗಿರುವುದನ್ನು ತೋರಿಸುವ ವೀಡಿಯೊ ಇದೆ. ಇದು ಮೇಕಪ್ ಮಾಡಿರುವುದು ಎಂಬುದು ಸ್ಪಷ್ಟವಾಗಿ ಸೂಚಿಸುತ್ತದೆ. ವೈರಲ್ ಪೋಸ್ಟ್‌ನಲ್ಲಿರುವ ಎರಡನೇ ಫೋಟೋವನ್ನು ಅದೇ ವೀಡಿಯೊದಿಂದ ತೆಗೆದುಕೊಳ್ಳಲಾಗಿದೆ. ಜ್ಯೋತಿ ಇಸ್ಲಾಂ ತಮ್ಮ ಪೋಸ್ಟ್‌ಗೆ "#ಶೂಟಿಂಗ್" ಮತ್ತು "#ಬಂಗ್ಲಾನಾಟೋಕ್" ಎಂಬ ಶೀರ್ಷಿಕೆಗಳನ್ನು ನೀಡಿದ್ದಾರೆ. ಇದಲ್ಲದೆ, ಒಂದು ಪ್ರಶ್ನೆಗೆ ಉತ್ತರಿಸುತ್ತಾ, ಇದು ಕೇವಲ ಶೂಟಿಂಗ್ನ ಭಾಗವಾಗಿದೆ ಎಂದು ಅವರು ವಿವರಿಸಿದ್ದಾರೆ. ಮತ್ತೊಂದು ಕಾಮೆಂಟ್‌ನಲ್ಲಿ, ಆ ವೀಡಿಯೊ "ಅಮಿ ನುಸ್ರತ್ ಬೋಲ್ಚಿ" (ನಾನು ನುಸ್ರತ್ ಮಾತನಾಡುತ್ತಿದ್ದೇನೆ) ಎಂಬ ಬಂಗಾಳಿ ನಾಟಕದ ಚಿತ್ರೀಕರಣದಿಂದ ಬಂದಿದೆ ಎಂದು ಅವರು ಬರೆದಿದ್ದಾರೆ. ಬಂಗಾಳಿ ನಾಟಕಗಳು ಬಾಂಗ್ಲಾದೇಶದಲ್ಲಿ ಜನಪ್ರಿಯವಾಗಿರುವ ಒಂದು ರೀತಿಯ ಕಿರುಚಿತ್ರವಾಗಿದೆ.
ಅಕ್ಟೋಬರ್ 30 ರಂದು "ಆಮಿ ನುಸ್ರತ್ ಬೊಲ್ಚಿ" ಚಿತ್ರದ ಪೋಸ್ಟರ್ಅನ್ನು ಜ್ಯೋತಿ ಹಂಚಿಕೊಂಡಿರುವುದು ಅವರ ಪ್ರೊಫೈಲ್ನಲ್ಲಿ ಸಿಕ್ಕಿದೆ.
ನಾವು ಮತ್ತಷ್ಟು ಹುಡುಕಿದಾಗ ಅವರ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವೈರಲ್ ಪೋಸ್ಟ್‌ನ ಮೊದಲ ಚಿತ್ರ ಕಂಡುಬಂದಿದೆ. ಇದು ಬಾಂಗ್ಲಾ ಭಾಷೆಯ ಶೀರ್ಷಿಕೆ "ವಿಧವೆ ಪತ್ನಿ" ಎಂದು ಅನುವಾದಿಸಲಾದ ಚಲನಚಿತ್ರದ ಪೋಸ್ಟರ್ ಎಂಬುದು ಸ್ಪಷ್ಟವಾಗಿದೆ. ಇದನ್ನು ಡಿಸೆಂಬರ್ 28, 2024 ರಂದು ಹಂಚಿಕೊಳ್ಳಲಾಗಿದೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ ಬಾಂಗ್ಲಾದೇಶದ ನಟಿಯ ಚಿತ್ರಗಳನ್ನು ಸುಳ್ಳು ಕೋಮು ಕೋನದೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.