Fact Check: ಬರೇಲಿ ಹಿಂಸಾಚಾರದ ಆರೋಪಿಗಳ ಮೇಲೆ ಪೊಲೀಸರ ಹಲ್ಲೆ ನಡೆಸಿದ್ದಾರೆ ಎಂದು ಹಳೆಯ ವೀಡಿಯೊ ವೈರಲ್
ಐ ಲವ್ ಮುಹಮ್ಮದ್ ಪ್ರತಿಭಟನೆಯ ಸಂದರ್ಭದಲ್ಲಿ ಹಿಂಸಾಚಾರದಲ್ಲಿ ಭಾಗಿಯಾಗಿದ್ದಾರೆಂದು ಹೇಳಲಾದ ಬಂಧಿತರನ್ನು ಬರೇಲಿ ಪೊಲೀಸರು ಥಳಿಸುತ್ತಿರುವುದನ್ನು ಇದು ತೋರಿಸುತ್ತದೆ ಎಂದು ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ.
By - Vinay Bhat |
Claim:ಬರೇಲಿ ಹಿಂಸಾಚಾರದ ಆರೋಪಿಗಳ ಮೇಲೆ ಪೊಲೀಸರು ಹಲ್ಲೆ ನಡೆಸುತ್ತಿರುವುದನ್ನು ವೀಡಿಯೊ ತೋರಿಸುತ್ತದೆ.
Fact:ಬರೇಲಿ ಹಿಂಸಾಚಾರದ ಆರೋಪಿಗಳ ಮೇಲೆ ಪೊಲೀಸರು ಹಲ್ಲೆ ನಡೆಸುತ್ತಿರುವುದನ್ನು ವೀಡಿಯೊ ತೋರಿಸುತ್ತದೆ.
ಸೆಪ್ಟೆಂಬರ್ 26 ರಂದು ಕಾನ್ಪುರದಲ್ಲಿ ಈದ್-ಎ-ಮಿಲಾದ್-ಉನ್-ನಬಿ ಮೆರವಣಿಗೆಯಲ್ಲಿ ಐ ಲವ್ ಮುಹಮ್ಮದ್ ಪೋಸ್ಟರ್‌ಗಳನ್ನು ಹೊತ್ತ ಜನರ ಮೇಲೆ ಪೊಲೀಸ್ ಕ್ರಮವನ್ನು ವಿರೋಧಿಸಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಉತ್ತರ ಪ್ರದೇಶದ ಬರೇಲಿಯಲ್ಲಿ ಹಿಂಸಾಚಾರ ಭುಗಿಲೆದ್ದಿತು. ಸೆಪ್ಟೆಂಬರ್ 27, 2025 ರಂದು, ಬರೇಲಿಯಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು ಎಂಟು ಜನರನ್ನು ಬಂಧಿಸಿದರು.
ಇದರ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಒಂದು ವೈರಲ್ ಆಗುತ್ತಿದೆ. ಇದರಲ್ಲಿ ಒಂದು ಕೋಣೆಯೊಳಗೆ ಪೊಲೀಸರು ಪುರುಷರ ಗುಂಪೊಂದಕ್ಕೆ ಲಾಠಿಯಿಂದ ಹೊಡೆಯುತ್ತಿರುವುದನ್ನು ಕಾಣಬಹುದು. ಐ ಲವ್ ಮುಹಮ್ಮದ್ ಪ್ರತಿಭಟನೆಯ ಸಂದರ್ಭದಲ್ಲಿ ಹಿಂಸಾಚಾರದಲ್ಲಿ ಭಾಗಿಯಾಗಿದ್ದಾರೆಂದು ಹೇಳಲಾದ ಬಂಧಿತರನ್ನು ಬರೇಲಿ ಪೊಲೀಸರು ಥಳಿಸುತ್ತಿರುವುದನ್ನು ಇದು ತೋರಿಸುತ್ತದೆ ಎಂದು ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ. (Archive)
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋಧಿಸಿದಾಗ ಇದು ಸುಳ್ಳು ಸುದ್ದಿ ಎಂಬುದು ಕಂಡುಬಂದಿದೆ. ವೈರಲ್ ವೀಡಿಯೊ ಜೂನ್ 2022 ರ ಹಿಂದಿನದು ಮತ್ತು ಉತ್ತರ ಪ್ರದೇಶದ ಸಹರಾನ್‌ಪುರ ನಗರ ಪೊಲೀಸ್ ಠಾಣೆಯಲ್ಲಿ ನಡೆದ ಘಟನೆಯಾಗಿದೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಪ್ರಮುಖ ಚೌಕಟ್ಟನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದಾಗ, ಇದೇ ವೀಡಿಯೊ ಜುಲೈ 5, 2022 ರಂದು ಎನ್ಡಿಟಿವಿಯಲ್ಲಿ ಅಪ್‌ಲೋಡ್ ಆಗಿರುವುದು ನಮಗೆ ಕಂಡುಬಂದಿದೆ.
ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಎಂಟು ಮಂದಿಯನ್ನು ಕಸ್ಟಡಿಯಲ್ಲಿ ಪೊಲೀಸರು ಕ್ರೂರವಾಗಿ ಹಲ್ಲೆ ಮಾಡಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಪ್ರವಾದಿ ಮುಹಮ್ಮದ್ ವಿರುದ್ಧ ಬಿಜೆಪಿ ವಕ್ತಾರ ನೂಪುರ್ ಶರ್ಮಾ ಅವರ ಹೇಳಿಕೆಯನ್ನು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಇವರನ್ನು ಬಂಧಿಸಲಾಗಿದೆ ಎಂಬ ಮಾಹಿತಿ ನೀಡಲಾಗಿದೆ.
ವೀಡಿಯೊಕ್ಕೆ ಸಂಬಂಧಿಸಿದ ವಿವರಣೆ ಹೀಗಿದೆ: ‘‘ಕಳೆದ ತಿಂಗಳು ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ನಡೆದ ಪ್ರತಿಭಟನೆಯ ನಂತರ ವೈರಲ್ ವೀಡಿಯೊದಲ್ಲಿರುವ ಪೋಲಿಸರು ಕಸ್ಟಡಿಯಲ್ಲಿದ್ದ ಎಂಟು ಮಂದಿಯನ್ನು ಎಲ್ಲ ಆರೋಪಗಳಿಂದ ಮುಕ್ತಗೊಳಿಸಲಾಗಿದೆ. ಅವರ ವಿರುದ್ಧ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಪೊಲೀಸರು ಹೇಳಿದ ನಂತರ ಮತ್ತು ಸ್ಥಳೀಯ ನ್ಯಾಯಾಲಯ ಅವರನ್ನು ಬಿಡುಗಡೆ ಮಾಡಿದ ನಂತರ, ಅವರು ನಿನ್ನೆ ಜೈಲಿನಿಂದ ಹೊರಬಂದಿದ್ದಾರೆ’’ ಎಂದು ಬರೆಯಲಾಗಿದೆ.
ಹಾಗೆಯೆ ಇದೇ ವೀಡಿಯೊದ ಸ್ಕ್ರೀನ್‌ಶಾಟ್ ಅನ್ನು ನಾವು ಜೂನ್ 21, 2022 ರಂದು ಇಂಡಿಯಾ ಟುಡೇ ಪ್ರಕಟಿಸಿರುವ ಸುದ್ದಿಯಲ್ಲೂ ಕಂಡಿದ್ದೇವೆ. ‘‘ಯುಪಿಯಲ್ಲಿ ನೂಪುರ್ ಶರ್ಮಾ ಅವರ ಪ್ರವಾದಿ ಹೇಳಿಕೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಅಲ್ಪಸಂಖ್ಯಾತ ಸಮುದಾಯದ ಸದಸ್ಯರ ವಿರುದ್ಧ ಪೊಲೀಸ್ ದೌರ್ಜನ್ಯ ಮತ್ತು ಅಮಾನವೀಯ ವರ್ತನೆಯ ಆರೋಪಗಳ ಕುರಿತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ಎಸ್‌ಎಸ್‌ಪಿ ಸಹರಾನ್‌ಪುರದಿಂದ ಪ್ರತಿಕ್ರಿಯೆ ಕೇಳಿದೆ’’ ಎಂದು ವರದಿಯಲ್ಲಿದೆ.
ಟೈಮ್ಸ್ ನೌ ನ್ಯೂಸ್ ಕೂಡ ಜೂನ್ 17, 2022 ರಂದು ಈ ಘಟನೆಯ ಬಗ್ಗೆ ವರದಿ ಮಾಡಿದೆ. "ಅಮಾನತುಗೊಂಡಿರುವ ಬಿಜೆಪಿ ವಕ್ತಾರ ನೂಪುರ್ ಶರ್ಮಾ ಅವರು ಪ್ರವಾದಿ ಮುಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಹಿಂಸಾಚಾರ ಭುಗಿಲೆದ್ದ ನಂತರ ಜೂನ್ 10 ರಂದು ಸಹರಾನ್‌ಪುರದ ಪೊಲೀಸರು ಲಾಕಪ್‌ನಲ್ಲಿ ಪ್ರತಿಭಟನಾಕಾರರನ್ನು ಥಳಿಸಿದ ವೈರಲ್ ವೀಡಿಯೊದ ಕುರಿತು ತನಿಖೆಗೆ ಆದೇಶಿಸಲಾಗಿದೆ" ಎಂದು ವರದಿ ಹೇಳಿದೆ.
ಒಟ್ಟಾರೆಯಾಗಿ, 2022 ರಲ್ಲಿ ಉತ್ತರ ಪ್ರದೇಶದ ಸಹರಾನ್‌ಪುರದಿಂದ ಬಂದ ವೀಡಿಯೊವೊಂದನ್ನು, ಸೆಪ್ಟೆಂಬರ್ 2025 ರಲ್ಲಿ ಬರೇಲಿಯಲ್ಲಿ ನಡೆದ ಐ ಲವ್ ಮುಹಮ್ಮದ್ ಪ್ರತಿಭಟನೆಯಲ್ಲಿ ಹಿಂಸಾಚಾರಕ್ಕೆ ಸಂಬಂಧಿಸಿದ ಆರೋಪಿಗಳನ್ನು ಬರೇಲಿ ಪೊಲೀಸರು ಥಳಿಸುತ್ತಿರುವ ದೃಶ್ಯವೆಂದು ಹಂಚಿಕೊಳ್ಳಲಾಗುತ್ತಿದೆ.