Fact Check: ಹೋಳಿ ಹಬ್ಬದಲ್ಲಿ ಕಲ್ಲು ಎಸೆದವರಿಗೆ ಪೊಲೀಸರು ಹೊಡೆದಿದ್ದಾರೆ ಎಂದು ನಕಲಿ ಪೋಸ್ಟ್ ವೈರಲ್

ಹೋಳಿ ಹಬ್ಬದ ಸಂದರ್ಭ ಕಲ್ಲು ಎಸೆದವನಿಗೆ ಪೊಲೀಸರು ಹೊಡೆದಿದ್ದಾರೆ ಎಂಬ ಹೇಳಿಕೆಯೊಂದಿಗೆ ಅನೇಕರು ಈ ವೀಡಿಯೊವನ್ನು ಹಂಚಿಕೊಳ್ಳುತ್ತಿದ್ದಾರೆ.

By Vinay Bhat  Published on  16 March 2025 6:53 PM IST
Fact Check: ಹೋಳಿ ಹಬ್ಬದಲ್ಲಿ ಕಲ್ಲು ಎಸೆದವರಿಗೆ ಪೊಲೀಸರು ಹೊಡೆದಿದ್ದಾರೆ ಎಂದು ನಕಲಿ ಪೋಸ್ಟ್ ವೈರಲ್
Claim: ಹೋಳಿ ಹಬ್ಬದಲ್ಲಿ ಕಲ್ಲು ಎಸೆದವರಿಗೆ ಪೊಲೀಸರು ಹೊಡೆದಿದ್ದಾರೆ.
Fact: ಹಕ್ಕು ಸುಳ್ಳು. ಈ ವೀಡಿಯೊಕ್ಕೂ ಹೋಳಿ ಹಬ್ಬಕ್ಕು ಯಾವುದೇ ಸಂಬಂಧವಿಲ್ಲ.

ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಒಂದು ವೈರಲ್ ಆಗುತ್ತಿದೆ. ಇದರಲ್ಲಿ ಸಾರ್ವಜನಿಕ ಪ್ರದೇಶದಲ್ಲಿ ಓರ್ವ ಯುವಕನಿಗೆ ಇಬ್ಬರು ಲಾಠಿಯಿಂದ ಹೊಡೆಯುತ್ತಿರುವುದನ್ನು ಕಾಣಬಹುದು. ಹೋಳಿ ಹಬ್ಬದ ಸಂದರ್ಭ ಕಲ್ಲು ಎಸೆದವನಿಗೆ ಪೊಲೀಸರು ಹೊಡೆದಿದ್ದಾರೆ ಎಂಬ ಹೇಳಿಕೆಯೊಂದಿಗೆ ಅನೇಕರು ಈ ವೀಡಿಯೊವನ್ನು ಹಂಚಿಕೊಳ್ಳುತ್ತಿದ್ದಾರೆ.

ಫೇಸ್​ಬುಕ್ ಬಳಕೆದಾರರೊಬ್ಬರು ಮಾರ್ಚ್ 15, 2025 ರಂದು ಈ ವೀಡಿಯೊವನ್ನು ಹಂಚಿಕೊಂಡು, ‘‘ಗುಜರಾತ್ ಪೊಲೀಸರು ಹೋಳಿ ಹಬ್ಬದಲ್ಲಿ ಕಲ್ಲು ಎಸೆದ ದುಷ್ಕರ್ಮಿಗಳಿಗೆ ಆಂಟಿಡೋಸ್ ಕೊಡ್ತಿದ್ದಾರೆ’’ ಎಂದು ಬರೆದುಕೊಂಡಿದ್ದಾರೆ. (Archive)

ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ವೀಡಿಯೊಕ್ಕೂ ಹೋಳಿ ಹಬ್ಬಕ್ಕು ಯಾವುದೇ ಸಂಬಂಧವಿಲ್ಲ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್​ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಆಗ ಇದೇ ವೈರಲ್ ವೀಡಿಯೊದ ಸ್ಕ್ರೀನ್ ಶಾಟ್​ನೊಂದಿಗೆ Live Mint ಮಾರ್ಚ್ 15, 2025 ರಂದು ‘‘ಗುಜರಾತ್ ಪೊಲೀಸರು ಅಹಮದಾಬಾದ್‌ನಲ್ಲಿ ಗೂಂಡಾಗಳನ್ನು ಥಳಿಸಿದ್ದಾರೆ’’ ಎಂಬ ಶೀರ್ಷಿಕೆದಿಗೆ ಸುದ್ದಿ ಪ್ರಕಟಿಸಿರುವುದು ಸಿಕ್ಕಿದೆ.

ಇದರಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ‘‘ಗುರುವಾರ ಅಹಮದಾಬಾದ್‌ನ ವಸ್ತ್ರಲ್ ಪ್ರದೇಶದಲ್ಲಿ ಕೆಲವರ ಮೇಲೆ ಹಲ್ಲೆ ನಡೆಸಿ, ವಾಹನಗಳನ್ನು ಕೋಲು ಮತ್ತು ಕತ್ತಿಗಳಿಂದ ಧ್ವಂಸ ಮಾಡಿದ ಆರೋಪದ ಮೇಲೆ ಗುಜರಾತ್ ಪೊಲೀಸರು ಗೂಂಡಾಗಳನ್ನು ಥಳಿಸಿದ್ದಾರೆ. ಈ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಹೋಳಿ ಆಚರಣೆಗೆ ಒಂದು ದಿನ ಮೊದಲು, ಮಾರ್ಚ್ 13 ರಂದು, ಪ್ರತ್ಯಕ್ಷದರ್ಶಿಯೊಬ್ಬರು ಚಿತ್ರೀಕರಿಸಿದ ವೀಡಿಯೊದಲ್ಲಿ, 20 ಜನರ ಗುಂಪೊಂದು ಎಸ್‌ಯುವಿ ಮಾಲೀಕರ ಮೇಲೆ ದಾಳಿ ಮಾಡಿ ಸುತ್ತಮುತ್ತಲಿನ ಇತರ ವಾಹನಗಳಿಗೆ ಕತ್ತಿ ಮತ್ತು ಕೋಲುಗಳನ್ನು ಬಳಸಿ ಹಾನಿಗೊಳಿಸುವುದನ್ನು ತೋರಿಸಲಾಗಿದೆ. ಘಟನೆಯ ನಂತರ, ಇದುವರೆಗೆ ಕನಿಷ್ಠ 14 ಜನರನ್ನು ಬಂಧಿಸಲಾಗಿದೆ’’ ಎಂದು ಬರೆಯಲಾಗಿದೆ.

ಹಾಗೆಯೆ ಉಪ ಪೊಲೀಸ್ ಆಯುಕ್ತ ಬಲದೇವ್ ದೇಸಾಯಿ ಅವರು ಪಿಟಿಐಗೆ ನೀಡಿದ ಮಾಹಿತಿಯನ್ನು ಮಿಂಟ್ ಕೋಟ್ ಮಾಡಿದ್ದು, ‘‘ವಸ್ತ್ರಲ್ ಪ್ರದೇಶದ ವಾಣಿಜ್ಯ ಸಂಕೀರ್ಣದ ಬಳಿ ಆಹಾರ ಮಳಿಗೆ ತೆರೆಯುವ ವಿಚಾರದಲ್ಲಿ ಇಬ್ಬರು ವ್ಯಕ್ತಿಗಳ ನಡುವಿನ ದ್ವೇಷದ ಪರಿಣಾಮವಾಗಿ ಈ ಹಿಂಸಾಚಾರ ನಡೆದಿದೆ. ಪಂಕಜ್ ಭಾವಸರ್ ಎಂಬುವರು ತಮ್ಮ ಪ್ರತಿಸ್ಪರ್ಧಿ ಸಂಗ್ರಾಮ್ ಸಿಕಾರ್ವಾರ್ ಪ್ರದೇಶದಲ್ಲಿ ಆಹಾರ ಮಳಿಗೆ ತೆರೆಯಲು ಅವಕಾಶ ನೀಡದಿದ್ದಕ್ಕಾಗಿ ದ್ವೇಷ ಹೊಂದಿದ್ದರು’’ ಎಂದು ಅವರು ಹೇಳಿದ್ದಾರೆ.

ಇದೇವೇಳೆ ನಮಗೆ Free Press Journal ಕೂಡ ವೈರಲ್ ವೀಡಿಯೊದ ಸ್ಕ್ರೀನ್ ಶಾಟ್​ನೊಂದಿಗೆ ಮಾರ್ಚ್ 15, 2025 ರಂದು ಸುದ್ದಿ ಪ್ರಕಟಿಸಿರುವುದು ಸಿಕ್ಕಿದೆ. ‘‘ಕೆಲವು ದಿನಗಳ ಹಿಂದೆ ಸಿಕಾರ್ವಾರ್ ಜೈಲಿನಿಂದ ಬಿಡುಗಡೆಯಾಗಿದ್ದಾನೆಂದು ತಿಳಿದ ನಂತರ, ಭಾವಸರ್ ತನ್ನ ಸಹಚರರನ್ನು ಅವನ ಮೇಲೆ ದಾಳಿ ಮಾಡಲು ಕಳುಹಿಸಿದ್ದಾಗಿ ವರದಿಯಾಗಿದೆ. ಆದಾಗ್ಯೂ, ಸಿಕಾರ್ವಾರ್ ಅವರ ನಿವಾಸದಲ್ಲಿ ಇಲ್ಲದಿದ್ದಾಗ, ದಾಳಿ ಮಾಡಲು ಬಂದಿದ್ದ ಗುಂಪು ಇತರೆ ಜನರ ಮೇಲೆ ಹಲ್ಲೆ ನಡೆಸಿದೆ ಮತ್ತು ವಾಹನಗಳಿಗೆ ಹಾನಿ ಮಾಡಿದೆ. ಅಂತಿಮವಾಗಿ ಸ್ಥಳೀಯ ಇನ್ಸ್‌ಪೆಕ್ಟರ್ ನೇತೃತ್ವದ ಪೊಲೀಸ್ ತಂಡವು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿತು. ಎಸ್‌ಯುವಿ ಮಾಲೀಕರ ದೂರಿನ ಮೇರೆಗೆ, ಅಧಿಕಾರಿಗಳು ಗಲಭೆ, ಕೊಲೆಯತ್ನ ಮತ್ತು ಇತರ ಅಪರಾಧಗಳಿಗಾಗಿ ಪ್ರಕರಣ ದಾಖಲಿಸಿದ್ದಾರೆ, ಅದರ ನಂತರ ಪೊಲೀಸರು ಅಪ್ರಾಪ್ತ ವಯಸ್ಕ ಸೇರಿದಂತೆ 14 ಜನರನ್ನು ಬಂಧಿಸಿದ್ದಾರೆ’’ ಎಂಬ ಮಾಹಿತಿ ಇದರಲ್ಲಿದೆ.

ಹಾಗೆಯೆ ‘‘ಘಟನೆಯ ನಂತರ, ಪೊಲೀಸ್ ಅಧಿಕಾರಿಗಳು ಆರೋಪಿಗಳನ್ನು ಸಾರ್ವಜನಿಕವಾಗಿ ಥಳಿಸುತ್ತಿರುವುದನ್ನು ತೋರಿಸುವ ಹಲವಾರು ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿವೆ. ದೃಶ್ಯಾವಳಿಗಳಲ್ಲಿ, ಅಧಿಕಾರಿಗಳು ಯುವಕನನ್ನು ಬಂಧಿಸುವಾಗ ಕೋಲುಗಳಿಂದ ಹೊಡೆಯುವುದನ್ನು ಕಾಣಬಹುದು. ಆರೋಪಿಗಳ ವಿರುದ್ಧ ಅಧಿಕಾರಿಗಳು ಅತಿಯಾದ ಬಲಪ್ರಯೋಗ ಮಾಡುತ್ತಿರುವುದನ್ನು ವೀಡಿಯೊಗಳು ತೋರಿಸಿದ್ದರಿಂದ, ಪೊಲೀಸರ ನಡವಳಿಕೆಯ ಬಗ್ಗೆ ವಿವಾದವನ್ನು ಹುಟ್ಟುಹಾಕಿತು’’ ಎಂದು ಬರೆಯಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದ ಇನ್ನಷ್ಟು ವರದಿಯನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ ಹೋಳಿ ಹಬ್ಬದ ಸಂದರ್ಭ ಕಲ್ಲು ಎಸೆದವನಿಗೆ ಪೊಲೀಸರು ಹೊಡೆದಿದ್ದಾರೆ ಎಂದು ವೈರಲ್ ಆಗುತ್ತಿರುವ ಪೋಸ್ಟ್ ಸುಳ್ಳು ಎಂದು ನಾವು ಖಚಿತವಾಗಿ ಹೇಳುತ್ತೇವೆ.

Claim Review:ಹೋಳಿ ಹಬ್ಬದಲ್ಲಿ ಕಲ್ಲು ಎಸೆದವರಿಗೆ ಪೊಲೀಸರು ಹೊಡೆದಿದ್ದಾರೆ.
Claimed By:Facebook User
Claim Reviewed By:NewsMeter
Claim Source:Social Media
Claim Fact Check:False
Fact:ಹಕ್ಕು ಸುಳ್ಳು. ಈ ವೀಡಿಯೊಕ್ಕೂ ಹೋಳಿ ಹಬ್ಬಕ್ಕು ಯಾವುದೇ ಸಂಬಂಧವಿಲ್ಲ.
Next Story