ದೇಶದಲ್ಲಿ ಆಗಸ್ಟ್ 9 ರಂದು ನಾಗರಪಂಚಮಿ ಹಬ್ಬದನ್ನು ಸಾಂಪ್ರದಾಯಿಕವಾಗಿ ಆಚರಣೆ ಮಾಡಲಾಗಿದೆ. ಇದರ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ನಾಗರಪಂಚಮಿ ಹಬ್ಬದ ದಿನದಂದು ಪೊಲೀಸ್ ಅಧಿಕಾರಿಗಳು ಮುಸ್ಲಿಮರಿಗೆ ಲಾಠಿಯಿಂದ ಹೊಡೆಯುತ್ತಿರುವ ವೀಡಿಯೊ ಹರಿದಾಡುತ್ತಿದೆ. ಒಂದು ಮಂದಿರದಿಂದ ಮುಸ್ಲಿಮರು ಹೊರಬರುತ್ತಿರುವಾಗ ಪೊಲೀಸರು ಅವರಿಗೆ ಲಾಠಿ ಬೀಸುತ್ತಿದ್ದಾರೆ.
ಪ್ರಸಿದ್ಧ ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ಹರಿ ಎಂಬ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡಿದ್ದು, 'ನಾಗರ ಪಂಚಮಿ ಪ್ರಯುಕ್ತ ನಾಗರಬೆತ್ತದ ಪೂಜೆಯನ್ನು ಅತಿ ವಿಜೃಂಭಣೆಯಿಂದ ಆಚರಿಸಿದ ನಮ್ಮ ಪೊಲೀಸರು, ಅವರಿಗೆ ನನ್ನದೊಂದು ಜೈ!' ಎಂದು ಬರೆದುಕೊಂಡಿದ್ದಾರೆ.
ಇದೇ ರೀತಿಯ ಪೋಸ್ಟ್ ಅನ್ನು ಇಲ್ಲಿ ನೋಡಬಹುದು.
Fact Check:
ಈ ಸುದ್ದಿಯನ್ನು ನ್ಯೂಸ್ ಮೀಟರ್ ಪರಿಶೋಧಿಸಿದಾಗ, ಇದು ಸುಳ್ಳು ಸುದ್ದಿ ಎಂದು ಕಂಡುಬಂದಿದೆ. ನಾಗರಪಂಚಮಿ ದಿನ ಈರೀತಿಯ ಯಾವುದೇ ಘಟನೆ ನಡೆದಿಲ್ಲ. ಬದಲಾಗಿ ಇದು ಲಾಕ್‌ಡೌನ್ ಸಮಯದಲ್ಲಿ ನಡೆದ ಘಟನೆ ಆಗಿದೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ಆಗುತ್ತಿರುವ ವೀಡಿಯೊದ ಸ್ಕ್ರೀನ್‌ಶಾಟ್ ಅನ್ನು ತೆಗೆದುಕೊಂಡು ಗೂಗಲ್‍ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದೆವು. ಆಗ ಮಾರ್ಚ್ 26, 2020 ರಂದು ಈಟಿವಿ ಭಾರತ್ ಕನ್ನಡ ತನ್ನ ವೆನ್ಸೈಟ್ನಲ್ಲಿ 'ಸರ್ಕಾರದ ಆದೇಶ ಧಿಕ್ಕರಿಸಿ ಮಸೀದಿಯಲ್ಲಿ ಸಾಮೂಹಿಕ ನಮಾಜ್: ಪೊಲೀಸರಿಂದ ಲಾಠಿ ಚಾರ್ಜ್' ಎಂಬ ಶೀರ್ಷಿಕೆಯೊಂದುಗೆ ಪ್ರಟಿಸಿದ ಸುದ್ದಿ ಕಂಡುಬಂತು. ಜೊತೆಗೆ ವೀಡಿಯೊ ಕೂಡ ಹಂಚಿಕೊಂಡಿದ್ದಾರೆ.
ಈ ವರದಿಯಲ್ಲಿ ಈರೀತಿ ಬರೆಯಲಾಗಿದೆ: ''ಲಾಕ್ ಡೌನ್ ಆದೇಶ ಉಲ್ಲಂಘಿಸಿ ಮಸೀದಿಯಲ್ಲಿ ನಮಾಜ್ ಮಾಡುತ್ತಿದ್ದವರನ್ನು ಹೊರ ಕರೆತಂದ ಪೊಲೀಸರು ಅವರ ಮೇಲೆ ಲಾಠಿ ಚಾರ್ಜ್ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದಲ್ಲಿ ನಡೆದಿದೆ. ಲಾಕ್ ಡೌನ್ ಆದೇಶ ಇದ್ದರೂ ನಗರದ ಎರಡು ಮಸೀದಿಗಳಿಗೆ ನೂರಾರು ಜನರು ನಮಾಜ್ ಮಾಡಲು ಆಗಮಿಸಿದ್ದರು. ಸಾಮೂಹಿಕ ಪ್ರಾರ್ಥನೆ, ಜಾತ್ರೆ, ಹಬ್ಬ, ಸಮಾರಂಭ ನಡೆಸದಂತೆ ಸರ್ಕಾರ ಹೊರಡಿಸಿದ ಆದೇಶ ಉಲ್ಲಂಘಿಸಿ ನಮಾಜ್ ಮಾಡಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿದ ಗೋಕಾಕ್ ಶಹರ್ ಠಾಣೆಯ ಪೊಲೀಸರು ಎಲ್ಲರನ್ನೂ ಹೊರಕರೆದು ಲಾಠಿ ರುಚಿ ತೋರಿಸಿದರು. ಬಳಿಕ ಮಸೀದಿಯ ಕೆಲ ಮುಖಂಡರನ್ನು ವಶಕ್ಕೆ ಪಡೆದಿದ್ದಾರೆ,' ಎಂದು ವರದಿಯಲ್ಲಿದೆ.
ಹಾಗೆಯೆ 2020 ರ ಮಾರ್ಚ್ 26 ರಂದು ನ್ಯೂಸ್ 18 ಕೂಡ ಈ ಬಗ್ಗೆ ವರದಿ ಮಾಡಿದೆ. 'ಕರ್ನಾಟಕದ ಬೆಳಗಾವಿಯಲ್ಲಿ ಲಾಕ್‌ಡೌನ್ ಆದೇಶದ ಹೊರತಾಗಿಯೂ ನಮಾಜ್ ಮಾಡಲು ಬಂದ ಒಂದು ಗುಂಪು ಮಸೀದಿಯಲ್ಲಿ ಜಮಾಯಿಸಿದಾಗ ಈ ಘಟನೆ ಸಂಭವಿಸಿದೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಿದರು.' ಎಂದು ಬರೆಯಲಾಗಿದೆ.
ದಿ ಎಕನಾಮಿಕ್ ಟೈಮ್ಸ್ ಫೇಸ್‌ಬುಕ್ ಪುಟದಲ್ಲಿಯೂ ಈ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.
ಹೀಗಾಗಿ ನಾಗರಪಂಚಮಿ ದಿನ ಪೊಲೀಸರು ನಾಗರರ ಬೆತ್ತದ ಪೂಜೆಯನ್ನು ಮುಸಲ್ಮಾನರ ಮೇಲೆ ಲಾಠಿ ಚಾರ್ಜ್ ಮಾಡುವ ಮೂಲಕ ಆಚರಿಸಿದ್ದಾರೆ ಎಂಬ ಸುದ್ದಿ ಸುಳ್ಳು. ಈ ವೀಡಿಯೊ 2020 ರದ್ದಾಗಿದೆ ಮತ್ತು ಪೊಲೀಸರು ಕೋವಿಡ್-19 ಲಾಕ್‌ಡೌನ್ ವೇಳೆ ನಿಯಮ ಉಲ್ಲಂಘಿಸಿದ್ದಕ್ಕಾಗಿ ಈ ಕ್ರಮಗಳನ್ನು ಕೈಗೊಂಡಿದ್ದಾರೆ.