Fact Check: ಕುಂಭಮೇಳಕ್ಕೆ ತೆರಳುವ ರೈಲಿನ ಮೇಲೆ ಕಲ್ಲು ಎಸೆದವರಿಗೆ ಪೊಲೀಸರಿಂದ ಲಾಠಿ ಚಾರ್ಜ್?, ಇಲ್ಲ ಈ ವೀಡಿಯೊ ಪಶ್ಚಿಮ ಬಂಗಾಳದ್ದು

ಪ್ರಯಾಗರಾಜ್‌ಗೆ ತೆರಳುತ್ತಿರುವ ವಿಶೇಷ ರೈಲಿನ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ವರದಿ ಆಗಿತ್ತು. ಇದರ ಬೆನ್ನಲ್ಲೇ ಇದೀಗ ಪೊಲೀಸರು ರಸ್ತೆಯಲ್ಲಿ ಕೆಲ ಯುವಕರಿಗೆ ಲಾಠಿಯಿಂದ ಹೊಡೆಯುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

By Vinay Bhat  Published on  3 Feb 2025 8:01 PM IST
Fact Check: ಕುಂಭಮೇಳಕ್ಕೆ ತೆರಳುವ ರೈಲಿನ ಮೇಲೆ ಕಲ್ಲು ಎಸೆದವರಿಗೆ ಪೊಲೀಸರಿಂದ ಲಾಠಿ ಚಾರ್ಜ್?, ಇಲ್ಲ ಈ ವೀಡಿಯೊ ಪಶ್ಚಿಮ ಬಂಗಾಳದ್ದು
Claim: ಕುಂಭಮೇಳಕ್ಕೆ ಹೋಗುವ ರೈಲುಗಳ ಮೇಲೆ ಕಲ್ಲು ತೂರಾಟ ನಡೆಸಿದವರ ಮೇಲೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
Fact: ಕುಂಭಮೇಳಕ್ಕೂ ಈ ವೀಡಿಯೊಕ್ಕು ಯಾವುದೇ ಸಂಬಂಧವಿಲ್ಲ. ಇದು ಪಶ್ಚಿಮ ಬಂಗಾಳದ ಬಿರ್ಭೂಮ್‌ನಲ್ಲಿ ಜಮೀನಿನ ವಿವಾದಕ್ಕೆ ಸಂಬಂಧಿಸಿದಂತೆ ನಡೆದ ಘಟನೆ ಆಗಿದೆ.

ಮಹಾಕುಂಭ ಮೇಳದಲ್ಲಿ ಪವಿತ್ರ ಸ್ನಾನ ಮಾಡಲು ಭಕ್ತರು ಸೇರುತ್ತಿರುವ ಹಿನ್ನೆಲೆಯಲ್ಲಿ, ಪ್ರಯಾಣಿಕರಿಗೆ ಪ್ರಯಾಗರಾಜ್‌ಗೆ ತಲುಪಲು ಯಾವುದೇ ತೊಂದರೆಯಾಗದಂತೆ ಹಲವಾರು ವಿಶೇಷ ರೈಲುಗಳನ್ನು ಓಡಿಸಲು ರೈಲ್ವೆ ಘೋಷಿಸಿದೆ. ಆದರೆ, ಇತ್ತೀಚೆಗಷ್ಟೆ ಪ್ರಯಾಗರಾಜ್‌ಗೆ ತೆರಳುತ್ತಿರುವ ವಿಶೇಷ ರೈಲಿನ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ವರದಿ ಆಗಿತ್ತು. ಇದರ ಬೆನ್ನಲ್ಲೇ ಇದೀಗ ಪೊಲೀಸರು ರಸ್ತೆಯಲ್ಲಿ ಕೆಲ ಯುವಕರಿಗೆ ಲಾಠಿಯಿಂದ ಹೊಡೆಯುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಫೇಸ್​ಬುಕ್ ಬಳಕೆದಾರರು ಫೆಬ್ರವರಿ 2, 2025 ರಂದು ಈ ವೀಡಿಯೊ ಹಂಚಿಕೊಂಡು, ‘‘ಕುಂಭಮೇಳಕ್ಕೆ ಹೋಗುವ ರೈಲುಗಳ ಮೇಲೆ ಕಲ್ಲು ತೂರಾಟ ನಡೆಸಿದವರನ್ನು ಹಂದಿಗಳಂತೆ ಮನೆಗಳಿಂದ ಹೊರಗೆ ಎಳೆದು ತರಲಾಗುತ್ತಿದೆ’’ ಎಂದು ಬರೆದುಕೊಂಡಿದ್ದಾರೆ.

ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಕುಂಭಮೇಳಕ್ಕೂ ಈ ವೀಡಿಯೊಕ್ಕು ಯಾವುದೇ ಸಂಬಂಧವಿಲ್ಲ. ಇದು ಪಶ್ಚಿಮ ಬಂಗಾಳದ ಬಿರ್ಭೂಮ್‌ನಲ್ಲಿ ನಡೆದ ಘಟನೆ ಆಗಿದೆ.

ನಿಜಾಂಶನ್ನು ತಿಳಿಯಲು ನಾವು ವೈರಲ್ ವೀಡಿಯೊದ ವಿವಿಧ ಕ್ರೀ ಪ್ರೇಮ್​ಗಳನ್ನು ಬಳಸಿ ಗೂಗಲ್​ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಆಗ ಇದೇ ವೈರಲ್ ವೀಡಿಯೊವನ್ನು ಉತ್ತಮ ಕ್ವಾಲಿಟಿಯಲ್ಲಿ ರಿಪಬ್ಲಿಕ್ ಬಾಂಗ್ಲಾ ಜನವರಿ 28, 2025 ರಂದು ತನ್ನ ಯೂಟ್ಯೂಬ್​ ಚಾನೆಲ್​ನಲ್ಲಿ ಹಂಚಿಕೊಂಡಿದೆ. ಇದರಲ್ಲಿರುವ ಮಾಹಿತಿಯ ಪ್ರಕಾರ, ‘‘ಸೂರಿಯಲ್ಲಿ ಬಂದೂಕುಗಳೊಂದಿಗೆ ಬಂದ ಇಬ್ಬರು ಯುವಕರನ್ನು ಗ್ರಾಮಸ್ಥರು ಹಿಡಿದಿದ್ದಾರೆ. ಪೊಲೀಸರನ್ನು ಸುತ್ತುವರೆದ ಬೃಹತ್ ಪ್ರತಿಭಟನೆಗಳು ನಡೆದಿವೆ. ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಅಪರಾಧಿಗಳು ಆಸ್ಪತ್ರೆಗೆ ದಾಖಲು’’ ಎಂದು ಬರೆದುಕೊಂಡಿದೆ.

ಈ ಮಾಹಿತಿಯ ಆಧಾರದ ಮೇಲೆ ನಾವು ಗೂಗಲ್​ನಲ್ಲಿ ‘suri-police lathi charge’ ಎಂಬ ಕೀವರ್ಡ್ ಮೂಲಕ ಸರ್ಚ್ ಮಾಡಿದ್ದೇವೆ. ಆದ ಈ ಘಟನೆಗೆ ಸಂಬಂಧಿಸಿದ ಕೆಲವು ವರದಿಗಳು ನಮಗೆ ಕಂಡುಬಂತು. Millennium Post ಜನವರಿ 29, 2025 ರಂದು ಈ ಘಟನೆಯ ಕುರಿತು ಸುದ್ದಿ ಪ್ರಕಟಿಸಿದ್ದು, ‘‘ಜಮೀನಿನ ವಿವಾದಕ್ಕೆ ಸಂಬಂಧಿಸಿದಂತೆ ಘರ್ಷಣೆ ನಡೆದಿದೆ. ಬೇರೆ ಪ್ರದೇಶದ ಇಬ್ಬರು ಯುವಕರು ಮಾರಕಾಯುಧಗಳೊಂದಿಗೆ ಸೂರಿಯ ಮಿನಿಸ್ಟಿಲ್ ಗ್ರಾಮಕ್ಕೆ ನುಗ್ಗಿದ್ದರು. ಗ್ರಾಮಸ್ಥರಲ್ಲಿ ಭಯ ಹುಟ್ಟಿಸಲು ಇವರಿಬ್ಬರು ಮಾರಕಾಸ್ತ್ರಗಳನ್ನು ಝಳಪಿಸುತ್ತಿದ್ದರು. ಆದರೆ ಗ್ರಾಮಸ್ಥರು ಆರೋಪಿ ಇಬ್ಬರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಮೇಲೆ ಗ್ರಾಮಸ್ಥರು ಹಲ್ಲೆ ನಡೆಸಿದ್ದಾರೆ. ಪೊಲೀಸರು ಇಬ್ಬರನ್ನು ಬಂಧಿಸಲು ಯತ್ನಿಸಿದಾಗ ಗ್ರಾಮಸ್ಥರು ಪೊಲೀಸರನ್ನು ಸುತ್ತುವರಿದು ಇಬ್ಬರನ್ನು ತಮಗೆ ಒಪ್ಪಿಸುವಂತೆ ಒತ್ತಾಯಿಸಿದರು. ಯುವಕರ ಮೇಲೆ ಹಲ್ಲೆ ನಡೆಯದಂತೆ ಪೊಲೀಸರು ರಕ್ಷಣೆ ಮಾಡಲು ಮುಂದಾದಾಗ ಗ್ರಾಮಸ್ಥರು ಪೊಲೀಸರ ಮೇಲೆಯೇ ಹಲ್ಲೆ ನಡೆಸಲು ಮುಂದಾದರು. ಸೂರಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ (IC) ಅವರ ಕಾಲರ್‌ನಿಂದ ಎಳೆದಿದ್ದಾರೆ. ನಂತರ, ರ್ಯಾಪಿಡ್ ಆಕ್ಷನ್ ಫೋರ್ಸ್ (ಆರ್‌ಎಎಫ್) ಜೊತೆಗೆ ಪೊಲೀಸ್ ಪಡೆಯ ದೊಡ್ಡ ತುಕಡಿ ಗ್ರಾಮಕ್ಕೆ ಆಗಮಿಸಿ 10 ಕ್ಕೂ ಹೆಚ್ಚು ಜನರನ್ನು ಬಂಧಿಸಿತು.’’ ಎಂದು ವರದಿಯಲ್ಲಿದೆ.

Times of India ಕೂಡ ವೈರಲ್ ವೀಡಿಯೊಕ್ಕೆ ಹೋಲುವ ಸ್ಕ್ರೀನ್ ಶಾಟ್​ನೊಂದಿಗೆ ಜನವರಿ 28, 2025 ರಂದು ಸುದ್ದಿ ಪ್ರಕಟಿಸಿದ್ದು, ‘‘ಸೂರಿಯ ಮಿನಿ ಸ್ಟೀಲ್ ಪ್ರದೇಶದ ಮಲ್ಲಿಕಪುರ ಗ್ರಾಮಕ್ಕೆ ಕೆಲವು ಯುವಕರು ಕಚ್ಚಾ ಶಸ್ತ್ರಾಸ್ತ್ರಗಳೊಂದಿಗೆ ಶಸ್ತ್ರಸಜ್ಜಿತರಾಗಿ ಬೆಳಿಗ್ಗೆ ಪ್ರವೇಶಿಸಿದರು. ಯುವಕರು ಗ್ರಾಮಸ್ಥರಿಗೆ ಬೆದರಿಕೆ ಹಾಕಿದ್ದು, ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ಗ್ರಾಮಸ್ಥರು ದಾಳಿಕೋರರನ್ನು ಹಿಡಿದು ಥಳಿಸಿ ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು. ಈ ಮಾಹಿತಿ ಪಡೆದ ಸೂರಿ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಯುವಕರನ್ನು ಪೊಲೀಸರು ಬಂಧಿಸಲು ಮುಂದಾದಾಗ ಗ್ರಾಮಸ್ಥರು ದಾರಿಯಲ್ಲಿ ಅಡ್ಡ ಬಂದು ಪ್ರತಿಭಟನೆಯನ್ನು ಪ್ರಾರಂಭಿಸಿದರು. ಪೊಲೀಸರು ಲಾಠಿ ಪ್ರಹಾರ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಬಂಧನದ ಸಮಯದಲ್ಲಿ, ಅಮೀರ್ ಅನ್ಸಾರಿ ಎಂಬವರು ಸೂರಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್​ನನ್ನು ಕಾಲರ್ ಹಿಡಿದುಕೊಂಡು ಬೆದರಿಕೆ ಹಾಕಿದ್ದಾನೆ. ಆಗ ಅಮೀರ್ ಅವರನ್ನೂ ಬಂಧಿಸಲಾಯಿತು’’ ಎಂದು ಬರೆಯಲಾಗಿದೆ.

ಝೀ ನ್ಯೂಸ್ ಕೂಡ ತನ್ನ ವೆಬ್​ಸೈಟ್​ನಲ್ಲಿ ಈ ಕುರಿತು ವೀಡಿಯೊ ಸುದ್ದಿ ಪ್ರಕಟಿಸಿದ್ದು, ಸೂರಿಯಲ್ಲಿ ಬಂದೂಕುಗಳು ಸದ್ದು ಮಾಡಿದವು. ಇಬ್ಬರು ಯುವಕರನ್ನು ಗ್ರಾಮಸ್ಥರು ಹಿಡಿದಿದ್ದಾರೆ ಎಂದು ಬರೆದುಕೊಂಡಿದೆ. ಇದರಲ್ಲಿ ವೈರಲ್ ವೀಡಿಯೊವನ್ನು 40 ಸೆಕೆಂಡ್ ಬಳಿಕ ನೋಡಬಹುದು.

ಈ ಎಲ್ಲ ಮಾಹಿತಿಯ ಆಧಾರದ ಮೇಲೆ ವೈರಲ್ ವೀಡಿಯೊಕ್ಕೂ ಕುಂಭಮೇಳಕ್ಕೂ ಯಾವುದೇ ಸಂಬಂಧವಿಲ್ಲ ಎಂದು ನಾವು ಖಚಿತವಾಗಿ ಹೇಳುತ್ತೇವೆ. ಜಮೀನಿನ ವಿವಾದಕ್ಕೆ ಸಂಬಂಧಿಸಿದಂತೆ ಇಬ್ಬರು ಯುವಕರು ಮಾರಕಾಸ್ತ್ರದೊಂದಿಗೆ ಗ್ರಾಮಕ್ಕೆ ನುಗ್ಗಿದಾಗ ಗ್ರಾಮಸ್ಥರು ಅವರನ್ನು ಹಿಡಿದಿದ್ದಾರೆ. ವಿಷಯ ತಿಳಿದು ಬಂದ ಪೊಲೀಸರು ಯುವಕರನ್ನು ಬಂಧಿಸಲು ಮುಂದಾದಾಗ ಆರೋಪಿಗಳನ್ನು ನಮಗೆ ಒಪ್ಪಿಸಿ ಎಂದು ಗಲಾಟೆ ನಡೆದಿದೆ. ಈ ಸಂದರ್ಭ ಪೊಲೀಸರು ಲಾಠಿ ಚಾರ್ಜ್ ನಡೆಸಿರುವ ವೀಡಿಯೊ ಇದಾಗಿದೆ.

Claim Review:ಕುಂಭಮೇಳಕ್ಕೆ ಹೋಗುವ ರೈಲುಗಳ ಮೇಲೆ ಕಲ್ಲು ತೂರಾಟ ನಡೆಸಿದವರ ಮೇಲೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
Claimed By:Facebook User
Claim Reviewed By:NewsMeter
Claim Source:Social Media
Claim Fact Check:False
Fact:ಕುಂಭಮೇಳಕ್ಕೂ ಈ ವೀಡಿಯೊಕ್ಕು ಯಾವುದೇ ಸಂಬಂಧವಿಲ್ಲ. ಇದು ಪಶ್ಚಿಮ ಬಂಗಾಳದ ಬಿರ್ಭೂಮ್‌ನಲ್ಲಿ ಜಮೀನಿನ ವಿವಾದಕ್ಕೆ ಸಂಬಂಧಿಸಿದಂತೆ ನಡೆದ ಘಟನೆ ಆಗಿದೆ.
Next Story