Fact Check: ಟೋಕಿಯೊದಲ್ಲಿ ಪ್ರಧಾನಿ ನರೆಂದ್ರ ಮೋದಿ ಹೆಸರು ರಾರಾಜಿಸುತ್ತಿದೆಯೇ?, ಸತ್ಯ ಇಲ್ಲಿ ತಿಳಿಯಿರಿ

ಮೋದಿ ಎಂದು ಬರೆದಿರುವ ದೊಡ್ಡ ಕಟ್ಟಡವೊಂದನ್ನು ಕಾಣಬಹುದು. ಅನೇಕ ಬಳಕೆದಾರರು ಈ ವೀಡಿಯೊಕ್ಕೆ ‘‘ನಮ್ಮ ಮೋದಿಜಿಯವರ ಹೆಸರು ಈಗ ಟೋಕಿಯೋದಲ್ಲಿಯೂ ಮಿಂಚುತ್ತಿದೆ’’ ಎಂಬ ಕ್ಯಾಪ್ಶನ್ ನೀಡಿದ್ದಾರೆ.

By Vinay Bhat
Published on : 26 Jun 2025 11:04 AM IST

Fact Check: ಟೋಕಿಯೊದಲ್ಲಿ ಪ್ರಧಾನಿ ನರೆಂದ್ರ ಮೋದಿ ಹೆಸರು ರಾರಾಜಿಸುತ್ತಿದೆಯೇ?, ಸತ್ಯ ಇಲ್ಲಿ ತಿಳಿಯಿರಿ
Claim:ಟೋಕಿಯದಲ್ಲಿರುವ ಕಟ್ಟಡವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಹೆಸರಿರುವುದನ್ನು ವೀಡಿಯೊ ತೋರಿಸುತ್ತದೆ.
Fact:ಹಕ್ಕು ಸುಳ್ಳು. ವೈರಲ್ ವೀಡಿಯೊದಲ್ಲಿ ಕಾಣುವ ಮೋದಿ ಹೆಸರು ಮರುಯಿ ಗ್ರೂಪ್ ಒಡೆತನದ ಬ್ರ್ಯಾಂಡ್‌ನ ಹೆಸರಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಹೆಸರಿನೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ.

ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ ಅಂತ್ಯದಲ್ಲಿ ಜಪಾನ್‌ಗೆ ಭೇಟಿ ನೀಡುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ. ಆದರೆ, ಇದಕ್ಕೂ ಮುನ್ನ ಜಪಾನ್‌ನ ಅತ್ಯಂತ ಜನನಿಬಿಡ ರಸ್ತೆಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದ್ದು, ಇದರಲ್ಲಿ ಮೋದಿ ಎಂದು ಬರೆದಿರುವ ದೊಡ್ಡ ಕಟ್ಟಡವೊಂದನ್ನು ಕಾಣಬಹುದು. ಅನೇಕ ಬಳಕೆದಾರರು ಈ ವೀಡಿಯೊಕ್ಕೆ ‘‘ನಮ್ಮ ಮೋದಿಜಿಯವರ ಹೆಸರು ಈಗ ಟೋಕಿಯೋದಲ್ಲಿಯೂ ಮಿಂಚುತ್ತಿದೆ’’ ಎಂಬ ಕ್ಯಾಪ್ಶನ್ ನೀಡಿದ್ದಾರೆ.

ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ ಎಂಬುದು ಕಂಡುಬಂದಿದೆ. ಈ ವೀಡಿಯೊದಲ್ಲಿ ಕಾಣುವ ಮೋದಿಯ ಹೆಸರು ಭಾರತದ ಪ್ರಧಾನ ಮಂತ್ರಿಯ ಹೆಸರಲ್ಲ, ಬದಲಿಗೆ ಕಟ್ಟಡ ಮತ್ತು ಅದರಲ್ಲಿರುವ ಫ್ಯಾಷನ್ ಬ್ರ್ಯಾಂಡ್‌ನ ಹೆಸರಾಗಿದೆ

ನಿಜಾಂಶವನ್ನು ತಿಳಿಯಲು ನಾವು ಮೊದಲಿಗೆ, ವೈರಲ್ ವೀಡಿಯೊದ ಪ್ರಮುಖ ಚೌಕಟ್ಟುಗಳನ್ನು ಹೊರತೆಗೆದು ಗೂಗಲ್​ನ ರಿವರ್ಸ್ ಇಮೇಜ್ ಸರ್ಚ್ ಟೂಲ್ ಬಳಸಿ ಹುಡುಕಿದೆವು. ಈ ಸಂದರ್ಭ ಪ್ರಸಿದ್ಧ ಇಮೇಜ್ ಮತ್ತು ವೀಡಿಯೊ ಹೋಸ್ಟಿಂಗ್ ವೆಬ್‌ಸೈಟ್ ‘ಫ್ಲಿಕರ್’ ಲಿಂಕ್ ಅನ್ನು ಕಂಡುಕೊಂಡೆವು. ಇದರಲ್ಲಿ ‘ಶಂಕರ್ ಎಸ್' ಎಂಬ ಬಳಕೆದಾರರು ಆಗಸ್ಟ್ 26, 2019 ರಂದು ಈ ಕಟ್ಟಡದ ಹೈ-ಕ್ವಾಲಿಟಿ ಫೋಟೋವನ್ನು ಹಂಚಿಕೊಂಡಿದ್ದಾರೆ ಮತ್ತು "ಈ ಕಟ್ಟಡದ ಹೆಸರು ಶಿಬುಯಾ ಮೋದಿ. ಇದು ಟೋಕಿಯೊದ ಶಿಬುಯಾ ಪ್ರದೇಶದಲ್ಲಿ ಇರುವ ಒಂದು ಐಷಾರಾಮಿ ಶಾಪಿಂಗ್ ಮಾಲ್" ಎಂಬ ಮಾಹಿತಿ ಬರೆದುಕೊಂಡಿದ್ದಾರೆ.

ಇದೇ ವೇಳೆ ಟೋಕಿಯೊದ ಶಿಬುಯಾ ಪ್ರದೇಶದಲ್ಲಿ ಶಿಬುಯಾ ಮೋದಿ ಎಂಬ ಐಷಾರಾಮಿ ಶಾಪಿಂಗ್ ಮಾಲ್ ಇದೆ ಎಂದು ವೈರಲ್ ವೀಡಿಯೊದ ಕ್ಲಿಪ್​ಗೆ ಹೊಂದಿಕೆ ಆಗುವ ಅನೇಕ ಪೋಸ್ಟ್ ಅನ್ನು ನಾವು ಕಂಡುಕೊಂಡಿದ್ದು, ಅದನ್ನು ಇಲ್ಲಿ, ಇಲ್ಲಿ, ಇಲ್ಲಿ ನೋಡಬಹುದು.

ಇನ್ನು ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಟೈಮ್ ಔಟ್ ಎಂಬ ವೆಬ್‌ಸೈಟ್‌ಗೆ ಲಿಂಕ್ ಕಂಡಿದ್ದು ಇದನ್ನು ಪರಿಶೀಲಿಸಿದಾಗ ನವೆಂಬರ್ 30, 2015 ರಂದು ಪ್ರಕಟವಾದ ಲೇಖನವು "ಮೋರಿ ಸಿಟಿ ಶಾಪಿಂಗ್ ಮಾಲ್ ಅನ್ನು ಶಿಬುಯಾ ಮೋದಿ ಎಂದು ಮರುನಾಮಕರಣ ಮಾಡಲಾಗಿದೆ" ಎಂದು ಹೇಳಿದೆ.

ಈ ಮಾಹಿತಿಯೊಂದಿಗೆ, ನಾವು ಗೂಗಲ್​ನಲ್ಲಿ ಹುಡುಕಿದೆವು ಮತ್ತು ದಿ ಬೆಸ್ಟ್ಜಪಾನ್ ಎಂಬ ವೆಬ್‌ಸೈಟ್‌ನಲ್ಲಿ ಈ ಶಾಪಿಂಗ್ ಮಾಲ್ ಬಗ್ಗೆ ಮಾಹಿತಿಯನ್ನು ಕಂಡುಕೊಂಡೆವು. 10 ರಿಂದ 20 ವರ್ಷ ವಯಸ್ಸಿನ ಯುವಕರಿಗೆ ಫ್ಯಾಷನ್ ವಸ್ತುಗಳು ಮತ್ತು ಬಟ್ಟೆಗಳನ್ನು ಖರೀದಿಸಲು ಶಿಬುಯಾ ಅವರ "ಮೋದಿ" ಡಿಪಾರ್ಟ್‌ಮೆಂಟ್ ಸ್ಟೋರ್ ಅತ್ಯುತ್ತಮ ಸ್ಥಳವಾಗಿದೆ ಎಂದು ಅದು ಹೇಳಿದೆ.

ಹಾಗೆಯೆ ದಿ ನೇಷನ್ ಥೈಲ್ಯಾಂಡ್ ಎಂಬ ವೆಬ್‌ಸೈಟ್‌, ‘‘ಮರುಯಿ ಸಿಟಿ ಶಿಬುಯಾ, ಮುಖ್ಯ ರಸ್ತೆಯ ಮುಂದೆ ಇರುವ ಫ್ಯಾಷನ್ ಕಟ್ಟಡವನ್ನು ನವೆಂಬರ್ 19 ರಂದು ಶಿಬುಯಾ ಮೋದಿ ಹೆಸರಿನಲ್ಲಿ ಮತ್ತೆ ತೆರೆಯಲಾಯಿತು’’ ಎಂದು ಬರೆದಿರುವುದನ್ನು ನಾವು ಕಂಡಿದ್ದೇವೆ.

ಈ ಶಾಪಿಂಗ್ ಮಾಲ್‌ನ ಹೊರಭಾಗ ಮತ್ತು ರಸ್ತೆಯ 360 ಡಿಗ್ರಿ ನೋಟವನ್ನು ನೀವು Google Maps ನಲ್ಲಿ ಇಲ್ಲಿ ನೋಡಬಹುದು.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ವೈರಲ್ ವೀಡಿಯೊದಲ್ಲಿ ಕಾಣುವ ಮೋದಿ ಹೆಸರು ಮರುಯಿ ಗ್ರೂಪ್ ಒಡೆತನದ ಬ್ರ್ಯಾಂಡ್‌ನ ಹೆಸರಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಹೆಸರಿನೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ ಎಂದು ನಾವು ಖಚಿತವಾಗಿ ಹೇಳುತ್ತೇವೆ.

Claim Review:ಟೋಕಿಯದಲ್ಲಿರುವ ಕಟ್ಟಡವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಹೆಸರಿರುವುದನ್ನು ವೀಡಿಯೊ ತೋರಿಸುತ್ತದೆ.
Claimed By:Facebook User
Claim Reviewed By:NewsMeter
Claim Source:Social Media
Claim Fact Check:False
Fact:ಹಕ್ಕು ಸುಳ್ಳು. ವೈರಲ್ ವೀಡಿಯೊದಲ್ಲಿ ಕಾಣುವ ಮೋದಿ ಹೆಸರು ಮರುಯಿ ಗ್ರೂಪ್ ಒಡೆತನದ ಬ್ರ್ಯಾಂಡ್‌ನ ಹೆಸರಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಹೆಸರಿನೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ.
Next Story