ಕಳೆದ ವಾರ ಏಪ್ರಿಲ್ 3, 2025 ರಂದು ಲೋಕಸಭೆಯು ವಕ್ಫ್ ಅಭಿವೃದ್ಧಿ ಮಸೂದೆಯನ್ನು ಧ್ವನಿ ಮತದ ಮೂಲಕ ಅಂಗೀಕರಿಸಿತು. ದೇಶಾದ್ಯಂತ ಮಸೂದೆಯ ಬಗ್ಗೆ ಅನೇಕ ವಿವಾದಗಳು ಮತ್ತು ಚರ್ಚೆಗಳು ನಡೆದಿದ್ದವು. ಈ ವಿಷಯದಲ್ಲಿ ಪ್ರತಿಪಕ್ಷಗಳು ಕೂಡ ಟೀಕೆ ವ್ಯಕ್ತಪಡಿಸಿದವು. ಮಸೂದೆ ಅಂಗೀಕಾರದ ವಿರುದ್ಧ ಹಲವು ಪ್ರತಿಭಟನೆಗಳು ನಡೆದವು. ಇದರ ಮಧ್ಯೆ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಕಪ್ಪು ಉಡುಪಿನಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇವರು ವಕ್ಫ್ ತಿದ್ದುಪಡಿ ಮಸೂದೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಫೇಸ್ಬುಕ್ ಬಳಕೆದಾರರೊಬ್ಬರು ಏಪ್ರಿಲ್ 6, 2025 ರಂದು ಈ ವೀಡಿಯೊವನ್ನು ಹಂಚಿಕೊಂಡು, ‘‘ಕಾಂಗ್ರೆಸ್ ಪಕ್ಷ ವಕ್ಫ್ ಸಂಶೋಧನೆ ಬಿಲ್ ವಿರುದ್ಧ ಸಂಸತ್ ನಿಂದ ರೋಡ್ ಮೇಲೆ ವಿರೋಧ ಪ್ರದರ್ಶನ ಮಾಡುತ್ತಿದೆ ಪ್ರಿಯಾಂಕಾ ಗಾಂಧಿಯವರು ಕೂಡ ವಿರೋಧ ಪ್ರದರ್ಶನದಲ್ಲಿ ಭಾಗವಹಿಸಿದ್ದಾರೆ’’ ಎಂದು ಬರೆದುಕೊಂಡಿದ್ದಾರೆ. (Archive)
ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು ಆಗಸ್ಟ್ 05, 2022 ರಂದು ದೆಹಲಿಯಲ್ಲಿ ಹಣದುಬ್ಬರ ಮತ್ತು ಜಿಎಸ್‌ಟಿ ವಿರುದ್ಧ ಕಾಂಗ್ರೆಸ್ ನಡೆಸಿದ ಪ್ರತಿಭಟನೆಯ ಸಂದರ್ಭದ್ದಾಗಿದೆ.
ನಿಜಾಂಶವನ್ನು ತಿಳಿಯಲು ನಾವು ವಿವಿಧ ಕೀ-ಫ್ರೇಮ್ಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದ್ದೇವೆ. ಆಗ ಆಗಸ್ಟ್ 05, 2022 ರಂದು ಪ್ರಕಟವಾದ NDTV ಯ ವೀಡಿಯೊ ವರದಿ ನಮಗೆ ಸಿಕ್ಕಿತು. ಇದು ವೈರಲ್ ಕ್ಲಿಪ್‌ನಲ್ಲಿ ಕಂಡುಬರುವ ಅದೇ ದೃಶ್ಯಗಳನ್ನು ಒಳಗೊಂಡಿದೆ. ಇದಕ್ಕೆ ‘‘ಪ್ರಿಯಾಂಕ ಗಾಂಧಿ ವಾದ್ರಾ ಪ್ರತಿಭಟನೆ ಸಂದರ್ಭ ರಸ್ತೆಯಲ್ಲಿ ಕುಳಿತಿದ್ದಾರೆ, ಪೊಲೀಸರು ಅವರನ್ನು ಸುತ್ತುವದರು’’ ಎಂದು ಶೀರ್ಷಿಕೆ ನೀಡಲಾಗಿದೆ.
‘‘ವರದಿಯ ಪ್ರಕಾರ, ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರದ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ಸಚಿನ್ ಪೈಲಟ್ ಮತ್ತು ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರನ್ನು ಬಂಧಿಸಲಾಯಿತು. ಪೊಲೀಸರು ಪ್ರಿಯಾಂಕಾ ಗಾಂಧಿಯನ್ನು ಬಂಧಿಸಲು ಪ್ರಯತ್ನಿಸುತ್ತಿರುವಾಗ ಅವರು ರಸ್ತೆಯಲ್ಲಿ ಕುಳಿತರು’’ ಎಂದು ಹೇಳಲಾಗಿದೆ.
CNN-News18 ಕೂಡ ಆಗಸ್ಟ್ 05, 2022 ರಂದು ಇದೇ ವೀಡಿಯೊವನ್ನು ಹಂಚಿಕೊಂಡಿದ್ದು, ‘‘ಕಾಂಗ್ರೆಸ್ ಪ್ರತಿಭಟನೆ | ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರತಿಭಟನೆಗೆ ಕುಳಿತರು’’ ಎಂಬ ಶೀರ್ಷಿಕೆ ನೀಡಲಾಗಿದೆ.
ಇಂಡಿಯಾ ಟುಡೇ ಯೂಟ್ಯೂಬ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಲಾದ ವೀಡಿಯೊದಲ್ಲಿ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಹಣದುಬ್ಬರ, ಜಿಎಸ್‌ಟಿ ಮತ್ತು ಬೆಲೆ ಏರಿಕೆಯಂತಹ ವಿಷಯಗಳ ಕುರಿತು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವುದನ್ನು ತೋರಿಸಲಾಗಿದೆ. ಅವರು ರಾಷ್ಟ್ರಪತಿ ಭವನದ ಕಡೆಗೆ ಮೆರವಣಿಗೆ ನಡೆಸಿದರು. ಆದರೆ, ಅವರನ್ನು ದೆಹಲಿ ಪೊಲೀಸರು ಮಧ್ಯದಲ್ಲಿಯೇ ತಡೆದು ಬಂಧಿಸಲಾಯಿತು ಎಂಬ ಮಾಹಿತಿ ಇದರಲ್ಲಿದೆ.
ವೈರಲ್ ವೀಡಿಯೊಕ್ಕೆ ಹೋಲುವ ಸ್ಕ್ರೀನ್ ಶಾಟ್ನೊಂದಿಗೆ ಹಿಂದೂಸ್ಥಾನ್ ಟೈಮ್ಸ್ ಆಗಸ್ಟ್ 05, 2022 ರಂದು ಸುದ್ದಿ ಪ್ರಕಟಿಸಿರುವುದು ಕೂಡ ನಮಗೆ ಸಿಕ್ಕಿದೆ. ಇದರಲ್ಲಿ ನೀಡಿರುವ ಮಾಹಿತಿ ಪ್ರಕಾರ, ಕಾಂಗ್ರೆಸ್ ಪಕ್ಷವು ಬೆಲೆ ಏರಿಕೆ ಮತ್ತು ಜಿಎಸ್‌ಟಿ ವಿರುದ್ಧ ಪ್ರತಿಭಟನೆ ನಡೆಸಿತು. ರಾಹುಲ್ ಗಾಂಧಿ ಸೇರಿದಂತೆ ಕೆಲ ಕಾಂಗ್ರೆಸ್ ನಾಯಕರನ್ನು ಬಂಧಿಸಲಾಗಿದೆ. ಆದರೆ ಪ್ರಿಯಾಂಕಾ ಗಾಂಧಿ ವಾದ್ರಾ ರಸ್ತೆಯಲ್ಲಿ ಕುಳಿತು ಬಂಧನವನ್ನು ವಿರೋಧಿಸಿದರು. ಅಲ್ಲದೆ ವಾದ್ರಾ ಪೊಲೀಸ್ ಬ್ಯಾರಿಕೇಡ್‌ಗಳನ್ನು ಕೆಡವಿ ಪ್ರತಿಭಟನೆಯಲ್ಲಿ ಭಾಗವಹಿಸಿದರು. ಬಳಿಕ ಅವರನ್ನೂ ಬಂಧಿಸಲಾಯಿತು. ಮಲ್ಲಿಕಾರ್ಜುನ ಖರ್ಗೆ, ಜೈರಾಮ್ ರಮೇಶ್ ಮತ್ತು ರಂಜೀತ್ ರಂಜನ್ ಸೇರಿದಂತೆ ಹಲವಾರು ಸಂಸದರನ್ನು ಬಂಧಿಸಲಾಗಿದೆ. ಸಾಂಕೇತಿಕ ಪ್ರತಿಭಟನೆಯಾಗಿ ಅನೇಕ ಕಾಂಗ್ರೆಸ್ ಸದಸ್ಯರು ಕಪ್ಪು ಬಟ್ಟೆ ಧರಿಸಿದ್ದರು’’ ಎಂದು ಬರೆಯಲಾಗಿದೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, 2022 ರಲ್ಲಿ ಪ್ರಿಯಾಂಕಾ ಗಾಂಧಿ ಹಣದುಬ್ಬರ ಮತ್ತು ಜಿಎಸ್‌ಟಿ ವಿರುದ್ಧ ಪ್ರತಿಭಟಿಸುತ್ತಿರುವ ವೀಡಿಯೊವನ್ನು ಈಗ ವಕ್ಫ್ ತಿದ್ದುಪಡಿ ಮಸೂದೆಯ ವಿರುದ್ಧದ ಪ್ರತಿಭಟನೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.