Fact Check: ಮುಸ್ಲಿಮರು ಈದ್ ಆಚರಿಸಲಿ ಎಂದಿದ್ದಕ್ಕೆ ಎಎಪಿ ನಾಯಕ ಸೌರಭ್ ಭಾರದ್ವಾಜ್ರನ್ನು ಸಾರ್ವಜನಿಕರು ಓಡಿಸಿದ್ದಾರೆಯೇ?
ಸಾಮಾಜಿಕ ಮಾಧ್ಯಮಗಳಲ್ಲಿ ಹೇಳುವಂತೆ ಎಎಪಿ ನಾಯಕ ಸೌರಭ್ ಭಾರದ್ವಾಜ್ ದೆಹಲಿಯ ಉತ್ತಮ್ ನಗರದಲ್ಲಿ ಮುಸ್ಲಿಮರು ಈದ್ ಆಚರಿಸಲಿ ಎಂದು ಹೇಳಿದ್ದಾರೆ. ಇದರಿಂದ ಕೋಪಗೊಂಡ ಸಾರ್ವಜನಿಕರು ಅವರನ್ನು ಓಡಿಸಿದರು.
By - Vinay Bhat |
Claim:ಮುಸ್ಲಿಮರು ಈದ್ ಆಚರಿಸಲಿ ಎಂದಿದಕ್ಕೆ ಎಎಪಿ ನಾಯಕ ಸೌರಭ್ ಭಾರದ್ವಾಜ್ರನ್ನು ಸಾರ್ವಜನಿಕರು ಓಡಿಸಿದರು.
Fact:ಹಕ್ಕು ಸುಳ್ಳು. ಈ ವೀಡಿಯೊ ಪಾಲಂ ಅಗ್ನಿ ಅವಘಡದ ಸಂತಾಪ ಸಭೆಯ ಸಂದರ್ಭದಲ್ಲಿ ನಡೆದ ಘರ್ಷಣೆಯದ್ದಾಗಿದೆ.
ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಸೌರಭ್ ಭಾರದ್ವಾಜ್ ಅವರ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಅದರಲ್ಲಿ ಅವರು ಜನಸಂದಣಿಯ ಮಧ್ಯದಲ್ಲಿ ನಿಂತು ಕೆಲವು ಜನರೊಂದಿಗೆ ಜಗಳವಾಡುತ್ತಿರುವುದನ್ನು ಕಾಣಬಹುದು. ವೀಡಿಯೊದಲ್ಲಿ ಎಎಪಿ ನಾಯಕ ಮತ್ತು ಕೆಲವು ಜನರ ನಡುವೆ ಗಲಾಟೆ ನಡೆಯುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವರು ಹೇಳುವಂತೆ ಎಎಪಿ ನಾಯಕ ದೆಹಲಿಯ ಉತ್ತಮ್ ನಗರದಲ್ಲಿ ಮುಸ್ಲಿಮರು ಈದ್ ಆಚರಿಸಲಿ ಎಂದು ಹೇಳಿದ್ದಾರೆ. ಇದರಿಂದ ಕೋಪಗೊಂಡ ಸಾರ್ವಜನಿಕರು ಅವರನ್ನು ಓಡಿಸಿದರು. ಹೋಳಿ ಹಬ್ಬದ ಸಮಯದಲ್ಲಿ ತರುಣ್ ಕುಮಾರ್ ಎಂಬ ಯುವಕನ ಹತ್ಯೆಯಾದ ನಂತರ ಈ ಪ್ರದೇಶವು ಗಮನಾರ್ಹ ಉದ್ವಿಗ್ನತೆಯನ್ನು ಅನುಭವಿಸುತ್ತಿದೆ. ಕೆಲವು ಹಿಂದೂಗಳು ಮುಸ್ಲಿಮರು ಅಲ್ಲಿ ಈದ್ ಆಚರಿಸುವುದನ್ನು ತಡೆಯುವುದಾಗಿ ಬೆದರಿಕೆ ಹಾಕಿದ್ದಾರೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ದೆಹಲಿಯ ಉತ್ತಮ್ ನಗರದಲ್ಲಿ AAP ನಾಯಕ ಸೌರಭ್ ಭಾರದ್ವಾಜ ಮುಸ್ಲಿಮರು ನಮ್ಮ ಸಹೋದರರು... ಅವರು ಈದ್ ಆಚರಿಸಲಿ ಎಂದು ಹೇಳಿದ್ದಕ್ಕೆ ಅವರನ್ನು ಸಾರ್ವಜನಿಕರು ಬೀದಿ ನಾಯಿಯಂತೆ ಓಡಿಸಿದರು.’’ ಎಂದು ಬರೆದುಕೊಂಡಿದ್ದಾರೆ. (Archive)Fact Check
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು ಮಾರ್ಚ್ 19 ರಂದು ದೆಹಲಿಯ ಪಾಲಂನಲ್ಲಿ ನಡೆದ ಘಟನೆ ಆಗಿದ್ದು, ಅಲ್ಲಿ ಆಮ್ ಆದ್ಮಿ ಪಕ್ಷ ಮತ್ತು ಬಿಜೆಪಿ ನಾಯಕರ ನಡುವೆ ಘರ್ಷಣೆ ನಡೆದಿತ್ತು.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಪ್ರಮುಖ ಕೀಫ್ರೇಮ್‌ಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದ್ದೇವೆ. ಈ ಸಂದರ್ಭ ಮಾರ್ಚ್ 19 ರಂದು ಸುದ್ದಿ ಸಂಸ್ಥೆ IANS ನಎಕ್ಸ್‌ಪೋಸ್ಟ್‌ನಲ್ಲಿ ಇದೇ ವೀಡಿಯೊ ಕಂಡುಬಂದಿದೆ. ಆಗ ಈ ವೀಡಿಯೊ ಈದ್‌ನದ್ದಲ್ಲ ಎಂದು ಸ್ಪಷ್ಟವಾಯಿತು.
IANS ಪೋಸ್ಟ್ ಪ್ರಕಾರ, ಈ ವೀಡಿಯೊ ದೆಹಲಿಯ ಪಾಲಂ ಪ್ರದೇಶದದ್ದಾಗಿದ್ದು, ಅಲ್ಲಿ ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಭೇಟಿಗೂ ಮುನ್ನ ಬಿಜೆಪಿ ಮತ್ತು ಎಎಪಿ ನಾಯಕರ ನಡುವೆ ಘರ್ಷಣೆ ನಡೆದಿತ್ತು.
Delhi: A clash broke out between BJP and AAP leaders in Palam, involving AAP State President Saurabh Bhardwaj, ahead of AAP National Convenor Arvind Kejriwal’s visit pic.twitter.com/O2i8w39HSO
— IANS (@ians_india) March 19, 2026
ಈ ಮಾಹಿತಿಯ ಆಧಾರದ ಮೇಲೆ ಕೀವರ್ಡ್ ಸರ್ಚ್ ನಡೆಸಿದಾಗ ಹಲವಾರು ಸುದ್ದಿ ವರದಿಗಳು ಸಿಕ್ಕವರು. ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ ಜೊತೆ ಎನ್ಡಿಟಿವಿ ಮಾರ್ಚ್ 19 ರಂದು ಪ್ರಕಟಿಸಿದ ವರದಿಯ ಪ್ರಕಾರ, ಪಾಲಂ ಬೆಂಕಿಯ ಶೋಕ ಸಭೆಯಲ್ಲಿ ಎಎಪಿ ಮತ್ತು ಬಿಜೆಪಿ ಕಾರ್ಯಕರ್ತರು ಘರ್ಷಣೆ ನಡೆಸಿದರು. ಸೌರಭ್ ಭಾರದ್ವಾಜ್ ಹೈಡ್ರಾಲಿಕ್ ಯಂತ್ರ ವೈಫಲ್ಯವನ್ನು ಪ್ರತಿಪಾದಿಸಿದರು ಮತ್ತು ಆಡಳಿತವನ್ನು ಪ್ರಶ್ನಿಸಿದರು. ಇದು ಎರಡೂ ಕಡೆಯ ನಡುವೆ ಘರ್ಷಣೆಗೆ ಕಾರಣವಾಯಿತು.
ಮಾರ್ಚ್ 18 ರಂದು ದೆಹಲಿಯ ಪಾಲಂ ಮೆಟ್ರೋ ನಿಲ್ದಾಣದ ಬಳಿಯ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡು ಒಂಬತ್ತು ಜನರು ಸಾವನ್ನಪ್ಪಿದರು. ಈ ಕಟ್ಟಡವು ಸ್ಥಳೀಯ ಮಾರುಕಟ್ಟೆ ಸಂಘದ ಅಧ್ಯಕ್ಷ ಹಾಗೂ ಎಎಪಿ ಕಾರ್ಯಕರ್ತ ರಾಜೇಂದ್ರ ಕಶ್ಯಪ್ ಅವರಿಗೆ ಸೇರಿತ್ತು.
ಈ ಘಟನೆಯ ಕುರಿತು ಆಜ್ ತಕ್ ವೆಬ್‌ಸೈಟ್‌ನಲ್ಲಿ ಪ್ರಕಟವಾದ ವರದಿಯನ್ನು ನಾವು ಕಂಡುಕೊಂಡಿದ್ದೇವೆ. ಮಾರ್ಚ್ 19 ರಂದು ದೆಹಲಿಯ ಪಾಲಂ ಬೆಂಕಿಯಲ್ಲಿ ಒಂಬತ್ತು ಜನರ ಮರಣದ ನಂತರ ನಡೆದ ಸಂತಾಪ ಸಭೆಯಲ್ಲಿ ಆಮ್ ಆದ್ಮಿ ಪಕ್ಷ ಮತ್ತು ಬಿಜೆಪಿ ನಾಯಕರ ನಡುವಿನ ವಾಗ್ವಾದವು ಘರ್ಷಣೆಗೆ ಕಾರಣವಾಯಿತು ಎಂದು ವರದಿ ಹೇಳಿದೆ. ಆದಾಗ್ಯೂ, ಅಲ್ಲಿ ನಿಯೋಜಿಸಲಾದ ಪೊಲೀಸ್ ಅಧಿಕಾರಿಗಳು ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು. ವಾಸ್ತವವಾಗಿ, ಸೌರಭ್ ಭಾರದ್ವಾಜ್ ಈ ಘಟನೆಗೆ ಬಿಜೆಪಿ ಸರ್ಕಾರವನ್ನು ದೂಷಿಸಿದಾಗ, ಗಲಾಟೆ ಪ್ರಾರಂಭವಾಯಿತು ಎಂಬ ಮಾಹಿತಿ ಇದರಲ್ಲಿದೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ದೆಹಲಿಯ ಉತ್ತಮ್ ನಗರದಲ್ಲಿ ಮುಸ್ಲಿಮರು ಈದ್ ಆಚರಿಸಲಿ ಎಂದಿದಕ್ಕೆ ಎಎಪಿ ನಾಯಕ ಸೌರಭ್ ಭಾರದ್ವಾಜ್ರನ್ನು ಸಾರ್ವಜನಿಕರು ಓಡಿಸಿದರು ಎಂದು ಹೇಳಿಕೊಳ್ಳುವ ವೈರಲ್ ವೀಡಿಯೊ, ಪಾಲಂ ಅಗ್ನಿ ದುರಂತದ ಸಂತಾಪ ಸಭೆಯಲ್ಲಿ ಎಎಪಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವಿನ ಘರ್ಷಣೆಯದ್ದಾಗಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.