ಇತ್ತೀಚಿನ ಅಧಿವೇಶನದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಸಂಸತ್ತಿನೊಳಗೆ ಬಿಸಿ ವಾಗ್ವಾದದಲ್ಲಿ ತೊಡಗಿರುವ ಫೋಟೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿಗೆ ನೇರವಾಗಿ ಎಚ್ಚರಿಕೆ ಕೊಟ್ಟಿದ್ದಾರೆ ಎಂಬ ಹೇಳಿಕೆಯೊಂದಿಗೆ ಫೋಟೋ ಹಂಚಿಕೊಳ್ಳಲಾಗುತ್ತಿದೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ಫೋಟೋವನ್ನು ಅಪ್ಲೋಡ್ ಮಾಡಿ, ‘‘ನನ್ನ ಹತ್ತಿರ ಇಟ್ಟುಕೊಂಡರೆ ಸರಿಯಿಲ್ಲ ಅಂತ ರಾಹುಲ್ ಗಾಂಧೀ ಅವರು ನೇರವಾಗಿ ಎಚ್ಚರಿಕೆ ಕೊಡುತ್ತಿದ್ದಾರೆ!. ದೇಶದಲ್ಲಿ ಮೋದಿಯನ್ನ ಧೈರ್ಯವಾಗಿ ಎದುರಿಸುವ ತಾಕತ್ತು ಇರುವ ಏಕೈಕ ನಾಯಕ ರಾಹುಲ್ ಗಾಂಧಿ.’’ ಎಂದು ಬರೆದುಕೊಂಡಿದ್ದಾರೆ. (Archive)
Fact Check
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಈ ಹಕ್ಕು ಸುಳ್ಳು ಎಂದು ತಿಳಿದುಬಂದಿದೆ. ವೈರಲ್ ಆಗಿರುವ ಚಿತ್ರ ನಿಜವಲ್ಲ ಇದನ್ನು AI ಬಳಸಿ ರಚಿಸಲಾಗಿದೆ.
ವೈರಲ್ ಹೇಳಿಕೆಯನ್ನು ಪರಿಶೀಲಿಸಲು, ನಾವು ಮೊದಲು ಕೀವರ್ಡ್‌ಗಳನ್ನು ಬಳಸಿಕೊಂಡು ಗೂಗಲ್ನಲ್ಲಿ ಹುಡುಕಿದೆವು, ಆದರೆ ಯಾವುದೇ ಸುದ್ದಿ ವರದಿಗಳು ಕಂಡುಬಂದಿಲ್ಲ. ನಂತರ ನಾವು ಗೂಗಲ್ ಲೆನ್ಸ್ ಬಳಸಿ ಫೋಟೋವನ್ನು ಹುಡುಕಿದೆವು, ಆದರೆ ವೈರಲ್ ಹೇಳಿಕೆಗೆ ಸಂಬಂಧಿಸಿದ ಯಾವುದೇ ಮಾಧ್ಯಮ ವರದಿಗಳು ಕಂಡುಬಂದಿಲ್ಲ. ಇದು ಫೋಟೋವನ್ನು AI ಸಹಾಯದಿಂದ ರಚಿಸಲಾಗಿದೆ ಎಂದು ನಮಗೆ ಅನುಮಾನ ಮೂಡಿಸಿತು.
ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ನಾವು ಹಲವಾರು ವ್ಯತ್ಯಾಸಗಳನ್ನು ಗಮನಿಸಿದ್ದೇವೆ. ಉದಾಹರಣೆಗೆ, ಚಿತ್ರದಲ್ಲಿನ ಮುಖದ ಲಕ್ಷಣಗಳು, ಬೆಳಕು ಮತ್ತು ದೇಹ ರಚನೆ ನಿಜವಾದ ಛಾಯಾಗ್ರಹಣಕ್ಕೆ ಹೊಂದಿಕೆಯಾಗುವುದಿಲ್ಲ. ಚಿತ್ರದ ದೃಢೀಕರಣವನ್ನು ಪರಿಶೀಲಿಸಲು, ನಾವು ಅದನ್ನು ವಿಶ್ವಾಸಾರ್ಹ AI ಚಿತ್ರ ಪತ್ತೆ ಸಾಧನಗಳಲ್ಲಿ ಪರೀಕ್ಷಿಸಿದ್ದೇವೆ.
Hive Moderation ನಲ್ಲಿ ಪರೀಕ್ಷಿಸಿದಾಗ ಇದನ್ನು ಶೇ. 99.8 ರಷ್ಟು ಎಐಯಿಂದ ಸೃಷ್ಟಿಸಲಾಗಿದೆ ಎಂದು ಹೇಳಿದೆ. Sightengine ನಲ್ಲಿ ಪರೀಕ್ಷಿಸಿದಾಗ ಇದು ಶೇ. 99 ರಷ್ಟು ಎಐಯಿಂದ ರಚಿತವಾಗಿದೆ ಎಂದು ಹೇಳಿದೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ವೈರಲ್ ಆಗಿರುವ ಈ ಫೋಟೋವು ಡಿಜಿಟಲ್ ರೂಪದಲ್ಲಿ ರಚಿಸಲ್ಪಟ್ಟಿದೆ ಮತ್ತು ಸಂಸತ್ತಿನೊಳಗೆ ಪ್ರಧಾನಿ ನರೇಂದ್ರ ಮೋದಿಗೆ ರಾಹುಲ್ ಗಾಂಧಿ ಎಚ್ಚರಿಕೆ ಕೊಡುವುದನ್ನು ಚಿತ್ರಿಸುವುದಿಲ್ಲ ಎಂದು ನಾವು ಕಂಡುಕೊಂಡಿದ್ದೇವೆ.