ವಯನಾಡ್ ಉಪಚುನಾವಣೆ ಪ್ರಚಾರದ ಅಂತಿಮ ದಿನದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಿಯಾಂಕಾ ಗಾಂಧಿ ಅವರೊಂದಿಗೆ ಸೇರಿಕೊಂಡು ವಯನಾಡನ್ನು ಜಾಗತಿಕ ಪ್ರವಾಸಿ ತಾಣವಾಗಿ ಪರಿವರ್ತಿಸುವ ಪ್ರತಿಜ್ಞೆ ಮಾಡಿದರು. ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಳ್ಳಲು ರಾಹುಲ್ ಗಾಂಧಿ ತನ್ನ ವಯನಾಡ್ ಕ್ಷೇತ್ರವನ್ನು ಬಿಟ್ಟು ಈಗ ಆ ಜಾಗದಲ್ಲಿ ಪ್ರಿಯಾಂಕಾ ಗಾಂಧಿ ಸ್ಪರ್ಧಿಸುತ್ತಿದ್ದಾರೆ.
ಇದರ ನಡುವೆ ಪ್ರಚಾರದ ಸಮಯದಲ್ಲಿ, ಮಸೀದಿ ನಿರ್ಮಿಸಲು ದೇವಸ್ಥಾನವನ್ನು ಕೆಡವಲಾಗುತ್ತಿದೆ ಎಂದು ತೋರಿಸುವ ಜಾಹೀರಾತನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ ಎಂದು ಹೇಳುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ಅನೇಕರು ಈ ವೀಡಿಯೊವನ್ನು ಹಂಚಿಕೊಂಡು, ವೀಡಿಯೊದ ಮೂಲಕ ಕಾಂಗ್ರೆಸ್ ತನ್ನ 'ಕೋರ್ ವೋಟ್ ಬೇಸ್'ಗೆ ಮನವಿ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
28 ಸೆಕೆಂಡ್‌ಗಳ ವೀಡಿಯೊದಲ್ಲಿ ರಾಮಮಂದಿರವನ್ನು ಧ್ವಂಸಗೊಳಿಸಿ ಮತ್ತು ಬಾಬರಿ ಮಸೀದಿಯಿಂದ ಬದಲಾಯಿಸಲ್ಪಟ್ಟಿರುವ ಕ್ಲಿಪ್ ಮೂಲಕ ಪ್ರಾರಂಭವಾಗುತ್ತದೆ. 'ವಯನಾಡ್ ಕಾಂಗ್ರೆಸ್ ಸಮಿತಿ' ಸಹಿ ಮಾಡಿರುವ ರಾಹುಲ್ ಗಾಂಧಿ ಮತ ಯಾಚನೆಯ ಚಿತ್ರದೊಂದಿಗೆ ವೀಡಿಯೊ ಕೊನೆಗೊಳ್ಳುತ್ತದೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಕಾಂಗ್ರೆಸ್ ತನ್ನ ವಯನಾಡ್ ಲೋಕಸಭಾ ಸ್ಥಾನಕ್ಕಾಗಿ ಯಾವ ರೀತಿಯ ಜಾಹೀರಾತು ಮಾಡಿದೆ ಎಂಬುದನ್ನು ನೋಡಿ, ಇದನ್ನು ಎಲ್ಲಾ ಹಿಂದೂಗಳಿಗೆ ಕಳುಹಿಸಿ ಮತ್ತು ಅವರ ಕಣ್ಣುಗಳನ್ನು ತೆರೆಯಿರಿ.’’ ಎಂದು ಬರೆದುಕೊಂಡಿದ್ದಾರೆ.
ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.
Fact Check:
ನ್ಯೂಸ್ ಮೀಟರ್ ಈ ಹಕ್ಕು ಸುಳ್ಳು ಎಂದು ಕಂಡುಹಿಡಿದಿದೆ. ವಯನಾಡ್ ಕಾಂಗ್ರೆಸ್ ಸಮಿತಿಯು ಈ ವೀಡಿಯೊ ವಿರುದ್ಧ ದೂರು ದಾಖಲಿಸಿದೆ ಮತ್ತು ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಕ್ಕಾಗಿ ಆ ವ್ಯಕ್ತಿಯನ್ನು ಬಂಧಿಸಲಾಗಿದೆ.
ರಿವರ್ಸ್ ಇಮೇಜ್ ಹುಡುಕಾಟದ ಮೂಲಕ, ಏಪ್ರಿಲ್ 27, 2024 ರಂದು ಇದೇ ವೀಡಿಯೊವನ್ನು ನಾವು ಎಕ್ಸ್ ಖಾತೆಯೊಂದರಲ್ಲಿ ಕಂಡುಕೊಂಡಿದ್ದೇವೆ. ಇದರಿಂದ ವೀಡಿಯೊ ಹಳೆಯದು ಎಂಬ ಸುಳಿವು ಸಿಕ್ಕಿದೆ.
ಬಳಿಕ ನಾವು ಕೀವರ್ಡ್ ಹುಡುಕಾಟ ನಡೆಸಿದಾಗ, ANI ನ ವರದಿ ನಮಗೆ ಸಿಕ್ಕಿದೆ. ಏಪ್ರಿಲ್ 26, 2024 ರಂದು ಪ್ರಕಟವಾದ ಸೋಷಿಯಲ್ ಮೀಡಿಯಾದಲ್ಲಿ ರಾಹುಲ್ ಗಾಂಧಿಯ ಹೆಸರಿನಲ್ಲಿ ನಕಲಿ ವಿಡಿಯೋ ಪ್ರಸಾರವಾದ ಕಾರಣಕ್ಕೆ ಕಾಂಗ್ರೆಸ್ ದೂರು ದಾಖಲಿಸಿದೆ ಎಂಬ ಶೀರ್ಷಿಕೆ ನೀಡಲಾಗಿದೆ.
ವರದಿಯ ಪ್ರಕಾರ, ವಯನಾಡ್ ಜಿಲ್ಲಾ ಕಾಂಗ್ರೆಸ್ ಸಮಿತಿಯು ಈ ವೀಡಿಯೊ ವಿರುದ್ಧ ದೂರು ದಾಖಲಿಸಿದೆ, ಇದು ದಾರಿತಪ್ಪಿಸಲು ಮತ್ತು ಧಾರ್ಮಿಕ ಸಾಮರಸ್ಯವನ್ನು ಹಾಳುಮಾಡಲು ರಚಿಸಲಾಗಿದೆ ಎಂದು ಹೇಳಿದೆ. ಪಕ್ಷವು ದೂರಿನೊಂದಿಗೆ ವೀಡಿಯೊದ ಪ್ರತಿಯನ್ನು ಲಗತ್ತಿಸಿದ್ದು, ಸಾಮಾಜಿಕ ತಾಣಗಳಿಂದ ತೆಗೆದುಹಾಕಲು ಪೊಲೀಸರಲ್ಲಿ ಒತ್ತಾಯಿಸಿದೆ.
ವಯನಾಡ್ ಜಿಲ್ಲಾ ಕಾಂಗ್ರೆಸ್ ಸಮಿತಿಯು ಏಪ್ರಿಲ್ 26, 2024 ರಂದು ವಯನಾಡ್‌ನ ಕಲ್ಪೆಟ್ಟಾದಲ್ಲಿ ಪೊಲೀಸ್ ಅಧೀಕ್ಷಕರಿಗೆ ಸಲ್ಲಿಸಿದ
ದೂರಿನ ಪ್ರತಿಯನ್ನು ನಾವು ಕಂಡುಕೊಂಡಿದ್ದೇವೆ.
ಮಲಯಾಳಂ ಭಾಷೆಯಲ್ಲಿ ಬರೆದಿರುವ ದೂರಿನಲ್ಲಿ, ಕಾಂಗ್ರೆಸ್ ಪಕ್ಷದ ಪ್ರತಿಷ್ಠೆಗೆ ಧಕ್ಕೆ ತರಲು ಉದ್ದೇಶಪೂರ್ವಕವಾಗಿ ಮಾಡಿರುವ ವೀಡಿಯೊವನ್ನು ತಯಾರಿಸಿ ಶೇರ್ ಮಾಡಿದ್ದಕ್ಕೆ ಕಾರಣರಾದವರನ್ನು ಗುರುತಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ. ಸಾಮಾಜಿಕ ಮಾಧ್ಯಮದಿಂದ ವೀಡಿಯೊವನ್ನು ತೆಗೆದುಹಾಕುವಂತೆಯೂ ದೂರಿನಲ್ಲಿ ವಿನಂತಿಸಲಾಗಿದೆ.
ಇನ್ನು ಮೇ 4, 2024 ರಂದು, ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಕೂಡ ಈ ಕುರಿತು ವರದಿ ಮಾಡಿದೆ. ಕೇರಳದ ಅಧಿಕಾರಿಗಳು ಮುವಾಟ್ಟುಪುಳ ನಿವಾಸಿ ರಾಜೇಶ್ ಜಿ ನಾಯರ್ ವಿರುದ್ಧ 30 ಸೆಕೆಂಡುಗಳ ವೀಡಿಯೊವನ್ನು ಪ್ರಸಾರ ಮಾಡಿದ್ದಾರೆ ಎಂದು ಆರೋಪಿಸಿ ಪ್ರಕರಣ ದಾಖಲಿಸಿದ್ದಾರೆ.
ಹೀಗಾಗಿ, ದೇವಸ್ಥಾನವನ್ನು ಕೆಡವಿ ಮಸೀದಿಯನ್ನು ಮರುನಿರ್ಮಾಣ ಮಾಡುವುದಾಗಿ ರಾಹುಲ್ ಗಾಂಧಿ ವಾಗ್ದಾನ ಮಾಡಿದ್ದಾರೆ ಎನ್ನಲಾಗುತ್ತಿರುವ ವೀಡಿಯೊ ಹಳೆಯದಾಗಿದೆ ಮತ್ತು ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.