Fact Check: ರಾಹುಲ್ ಗಾಂಧಿ ಗಾಂಧೀಜಿಯವರ ಸ್ಮಾರಕದಿಂದ ಹಣ ತೆಗೆದುಕೊಂಡಿದ್ದಾರೆಯೇ? ಸುಳ್ಳು, ಸತ್ಯ ಇಲ್ಲಿ ತಿಳಿಯಿರಿ

ಸಾಮಾಜಿಕ ಮಾಧ್ಯಮ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡು ರಾಹುಲ್ ಗಾಂಧಿ ಅವರು ಗಾಂಧೀಜಿ ಅವರ ಸಮಾಧಿಯಿಂದ ನಾಣ್ಯವನ್ನು ಎತ್ತಿಕೊಂಡು ತಮ್ಮ ಜೇಬಿನಲ್ಲಿ ಇಟ್ಟುಕೊಂಡಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದಾರೆ.

By Vinay Bhat
Published on : 28 May 2025 3:33 PM IST

Fact Check: ರಾಹುಲ್ ಗಾಂಧಿ ಗಾಂಧೀಜಿಯವರ ಸ್ಮಾರಕದಿಂದ ಹಣ ತೆಗೆದುಕೊಂಡಿದ್ದಾರೆಯೇ? ಸುಳ್ಳು, ಸತ್ಯ ಇಲ್ಲಿ ತಿಳಿಯಿರಿ
Claim:ರಾಹುಲ್ ಗಾಂಧಿ ಗಾಂಧೀಜಿಯವರ ಸ್ಮಾರಕದಿಂದ ಹಣ ತೆಗೆದುಕೊಳ್ಳುವುದನ್ನು ವೀಡಿಯೊ ತೋರಿಸುತ್ತದೆ.
Fact:ರಾಹುಲ್ ತಮ್ಮ ತಂದೆ ರಾಜೀವ್ ಗಾಂಧಿಯವರ ಪುಣ್ಯತಿಥಿಯಂದು ಅವರ ಸಮಾಧಿಯಿಂದ ಹೂವನ್ನು ಎತ್ತಿಕೊಂಡು ತನ್ನ ಜೇಬಿನಲ್ಲಿ ಇಟ್ಟುಕೊಂಡ ವೀಡಿಯೊ ಇದಾಗಿದೆ.

ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಸಂಸದ ರಾಹುಲ್ ಗಾಂಧಿ ಅವರ ವೀಡಿಯೊವೊಂದು ವೈರಲ್ ಆಗುತ್ತಿದೆ. ಇದರಲ್ಲಿ ಅವರು ಸಮಾಧಿಯಿಂದ ಏನನ್ನೋ ಎತ್ತಿಕೊಂಡು ಜೇಬಿನಲ್ಲಿ ಇಟ್ಟುಕೊಳ್ಳುವುದನ್ನು ಕಾಣಬಹುದು. ಸಾಮಾಜಿಕ ಮಾಧ್ಯಮ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡು ರಾಹುಲ್ ಗಾಂಧಿ ಅವರು ಗಾಂಧೀಜಿ ಅವರ ಸಮಾಧಿಯಿಂದ ನಾಣ್ಯವನ್ನು ಎತ್ತಿಕೊಂಡು ತಮ್ಮ ಜೇಬಿನಲ್ಲಿ ಇಟ್ಟುಕೊಂಡಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದಾರೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಸಮಾಧಿ ಮೇಲೆ ಬಿದ್ದಿರೋ ಚಿಲ್ಲರೆ ಕಾಸನ್ನು ಬಿಡಲಿಲ್ಲ. ಅಪ್ಪಿ ತಪ್ಪಿ ದೇಶದ ಚುಕ್ಕಾಣಿ ಏನಾರ ಸಿಕ್ಕಿ ಬಿಟ್ಟರೆ ಗುಡಿಸಿ ಗುಂಡಾಂತರ ಆಗೋದು ಗ್ಯಾರಂಟಿ!’’ ಎಂದು ಬರೆದುಕೊಂಡಿದ್ದಾರೆ. (Archive)

ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

Fact Check:

ನ್ಯೂಸ್ ಮೀಟರ್ ಈ ವೈರಲ್ ಹೇಳಿಕೆ ಸುಳ್ಳು ಎಂದು ಕಂಡುಹಿಡಿದಿದೆ. ವಾಸ್ತವವಾಗಿ, ರಾಹುಲ್ ತಮ್ಮ ತಂದೆ ರಾಜೀವ್ ಗಾಂಧಿಯವರ ಪುಣ್ಯತಿಥಿಯಂದು ಅವರ ಸಮಾಧಿಗೆ ಹೋಗಿದ್ದರು. ಅಲ್ಲಿ, ಸಮಾಧಿಯಿಂದ ಒಂದು ಹೂವನ್ನು ಎತ್ತಿಕೊಂಡು ತನ್ನ ಜೇಬಿನಲ್ಲಿ ಇಟ್ಟುಕೊಂಡ ವೀಡಿಯೊ ಇದಾಗಿದೆ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್​ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಆಗ ನಾವು ಲೈವ್ ಹಿಂದೂಸ್ತಾನ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ಒಂದು ವರದಿಯನ್ನು ಕಂಡುಕೊಂಡೆವು. ಅದರಲ್ಲಿ ವೈರಲ್ ವೀಡಿಯೊದ ಭಾಗ ಕೂಡ ಕಂಡುಬಂದಿದೆ. ಮೇ 21 ರ ಈ ವರದಿಯ 1:30 ನಿಮಿಷಗಳ ಕಾಲಮಿತಿಯಲ್ಲಿ ವೈರಲ್ ವೀಡಿಯೊದ ಭಾಗವನ್ನು ಕಾಣಬಹುದು. ‘‘ರಾಹುಲ್ ಗಾಂಧಿ ತಮ್ಮ ತಂದೆ ರಾಜೀವ್ ಗಾಂಧಿಯವರ ಸಮಾಧಿಯಿಂದ ಹೂವನ್ನು ಎತ್ತಿಕೊಂಡು ಅವರ ನೆನಪಿಗಾಗಿ ಇಟ್ಟುಕೊಂಡಿದ್ದಾರೆ. ಇದೊಂದು ಭಾವನಾತ್ಮಕ ಕ್ಷಣ’’ ಎಂಬ ಮಾಹಿತಿ ಇದರಲ್ಲಿದೆ.

ಹುಡುಕಾಟದ ಸಮಯದಲ್ಲಿ, ಕಾಂಗ್ರೆಸ್ ರಾಷ್ಟ್ರೀಯ ಮಾಧ್ಯಮ ಸಂಯೋಜಕಿ ಸುಪ್ರಿಯಾ ಭಾರದ್ವಾಜ್ ಅವರ ಎಕ್ಸ್ ಹ್ಯಾಂಡಲ್‌ನಲ್ಲಿ ಕೂಡ ಇದೇ ವೈರಲ್ ವೀಡಿಯೊವನ್ನು ನಾವು ಕಂಡುಕೊಂಡಿದ್ದೇವೆ. "ಒಂದು ಭಾವನಾತ್ಮಕ ಕ್ಷಣ. ಕಣ್ಣುಗಳು ಒದ್ದೆಯಾದವು. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇಂದು ತಮ್ಮ ತಂದೆ, ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಸಮಾಧಿಯಿಂದ ಹೂವನ್ನು ಎತ್ತಿಕೊಂಡು ಜೇಬಿನಲ್ಲಿ ಇಟ್ಟುಕೊಂಡರು" ಎಂದು ವೀಡಿಯೊದೊಂದಿಗೆ ಬರೆಯಲಾಗಿದೆ.
ಇದೇ ರೀತಿಯ ವೀಡಿಯೊವನ್ನು ಹಿಂದೂಸ್ತಾನ್ ಟೈಮ್ಸ್‌ನ ಯೂಟ್ಯೂಬ್ ಕೂಡ ಮೇ 21 ರಂದು ಹಂಚಿಕೊಂಡಿದೆ. ಈ ವೀಡಿಯೊದಲ್ಲಿ ರಾಹುಲ್ ಗಾಂಧಿ ಸಮಾಧಿಯಿಂದ ಹೂವನ್ನು ಎತ್ತಿಕೊಂಡು ಜೇಬಿನಲ್ಲಿ ಇಡುವುದನ್ನು ಕಾಣಬಹುದು.

ಉತ್ತರಾಖಂಡ ಕಾಂಗ್ರೆಸ್‌ನ ಎಕ್ಸ್ ಹ್ಯಾಂಡಲ್‌ನಲ್ಲಿ ಕೂಡ ವೈರಲ್ ವೀಡಿಯೊವನ್ನು ಹಂಚಿಕೊಳ್ಳಲಾಗಿದ್ದು, ‘‘ರಾಜೀವ್ ಗಾಂಧಿಯವರ ಸ್ಮರಣಾರ್ಥ ರಾಹುಲ್ ಗಾಂಧಿ ಸಮಾಧಿಯಿಂದ ಎತ್ತಿಕೊಂಡ ಹೂವು ಬಹಳಷ್ಟು ಹೇಳುತ್ತದೆ’’ ಎಂದು ಬರೆಯಲಾಗಿದೆ.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ ನ್ಯೂಸ್ ಮೀಟರ್ ವೈರಲ್ ಪೋಸ್ಟ್ ನಕಲಿ ಎಂದು ಕಂಡುಹಿಡಿದಿದೆ. ರಾಹುಲ್ ಗಾಂಧಿ ತಮ್ಮ ತಂದೆಯ ಸಮಾಧಿಯಿಂದ ಹೂವುಗಳನ್ನು ಎತ್ತಿಕೊಂಡ ವೀಡಿಯೊ ಇದಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಸುಳ್ಳು ಹಕ್ಕಿನೊಂದಿಗೆ ವೈರಲ್ ಮಾಡಲಾಗುತ್ತಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.

Claim Review:ರಾಹುಲ್ ಗಾಂಧಿ ಗಾಂಧೀಜಿಯವರ ಸ್ಮಾರಕದಿಂದ ಹಣ ತೆಗೆದುಕೊಳ್ಳುವುದನ್ನು ವೀಡಿಯೊ ತೋರಿಸುತ್ತದೆ.
Claimed By:Facebook User
Claim Reviewed By:NewsMeter
Claim Source:Social Media
Claim Fact Check:False
Fact:ರಾಹುಲ್ ತಮ್ಮ ತಂದೆ ರಾಜೀವ್ ಗಾಂಧಿಯವರ ಪುಣ್ಯತಿಥಿಯಂದು ಅವರ ಸಮಾಧಿಯಿಂದ ಹೂವನ್ನು ಎತ್ತಿಕೊಂಡು ತನ್ನ ಜೇಬಿನಲ್ಲಿ ಇಟ್ಟುಕೊಂಡ ವೀಡಿಯೊ ಇದಾಗಿದೆ.
Next Story