ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸೋತ ನಂತರ ರಾಹುಲ್ ಗಾಂಧಿ ದೇವಸ್ಥಾನಕ್ಕೆ ಪ್ರಾರ್ಥನೆ ಸಲ್ಲಿಸಲು ಹೋಗಿದ್ದಾರೆ ಎಂದು ಹೇಳುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ವೀಡಿಯೊದಲ್ಲಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೇವಸ್ಥಾನದಲ್ಲಿ ಕುಳಿತು ಅರ್ಚಕರ ಜೊತೆಗೆ ಪ್ರಾರ್ಥನೆ ಸಲ್ಲಿಸುತ್ತಿರುವುದು ಕಂಡುಬರುತ್ತದೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಬಿಹಾರ ಸೋತ ಕೂಡಲೇ ಹೆಗಲ ಮೇಲೆ ಕೇಸರಿ ಹಣೆಮೇಲೆ ಕುಂಕುಮ. ಕೈಯಲ್ಲಿ ಪವಿತ್ರ ದಾರ, ಎಲ್ಲ ದೇವರುಗಳು ಎಲ್ಲವೂ ಒಟ್ಟಿಗೆ ನೆನಪಿಗೆ ಬಂದವು. ದೇಹದ ಮೇಲೆ ಕೇಸರಿ ಹಾಕಿದರೆ ಗೆಲುವುದಿಲ್ಲ ಮನಸ್ಸಿನ ಮೇಲೆ ಕೇಸರಿ ಹಾಕಿ ಖಂಡಿತಾ ಗೆಲ್ಲುವಿರಿ’’ ಎಂದು ಬರೆದುಕೊಂಡಿದ್ದಾರೆ. (Archive)
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು ಸುಮಾರು ಒಂದು ವರ್ಷದ ಹಳೆಯ ವೀಡಿಯೊ ಆಗಿದ್ದು, ಭಾರತ್ ಜೋಡೋ ನ್ಯಾಯ ಯಾತ್ರೆಯ ಸಮಯದಲ್ಲಿ ಅವರು ಪ್ರಾರ್ಥನೆ ಸಲ್ಲಿಸಲು ದೇವಸ್ಥಾನಕ್ಕೆ ಭೇಟಿ ನೀಡಿದ್ದರು.
ನಿಜಾಂಶವನ್ನು ತಿಳಿಯಲು ನಾವು ಮೊದಲಿಗೆ ವೈರಲ್ ವೀಡಿಯೊದ ಪ್ರಮುಖ ಕೀ-ಫ್ರೇಮ್ಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದ್ದೇವೆ. ಈ ಸಂದರ್ಭ, ಮಾರ್ಚ್ 14, 2024 ರಂದು ಆಜ್ ತಕ್‌ನ ಯೂಟ್ಯೂಬ್ಚಾನೆಲ್‌ಗೆ ಅಪ್‌ಲೋಡ್ ಮಾಡಲಾದ ವೀಡಿಯೊದಲ್ಲಿ ವೈರಲ್ ಕ್ಲಿಪ್ ಕಂಡುಬಂದಿದೆ. ಈ ವೀಡಿಯೊ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ ಯಾತ್ರೆ ನಾಸಿಕ್ ತಲುಪಿದ ಸಮಯದ್ದಾಗಿದೆ. ಈ ಸಮಯದಲ್ಲಿ, ಅವರು ತ್ರಯಂಬಕೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ವೀಡಿಯೊದ ಉದ್ದಕ್ಕೂ, ರಾಹುಲ್ ಗಾಂಧಿ ಪೂಜೆಯ ನಂತರ ಪುರೋಹಿತರೊಂದಿಗೆ ಮಂತ್ರಗಳ ಪಠಣದೊಂದಿಗೆ ಆರತಿ ಮಾಡುವುದನ್ನು ಕಾಣಬಹುದು.
ಹಾಗೆಯೆ ಜೀ 24 ತಾಸ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ಕೂಡ ಮಾರ್ಚ್ 14, 2024 ರಂದು ಅಪ್‌ಲೋಡ್ ಮಾಡಲಾದ ವೀಡಿಯೊ ವರದಿಯೂ ಕಂಡುಬಂದಿದೆ. ನಾಸಿಕ್‌ನಲ್ಲಿ ಭಾರತ್ ಜೋಡೋ ನ್ಯಾಯ ಯಾತ್ರೆಗೆ ಆಗಮಿಸಿದಾಗ, ರಾಹುಲ್ ಗಾಂಧಿ ಇತರ ಹಲವಾರು ನಾಯಕರೊಂದಿಗೆ ತ್ರ್ಯಂಬಕೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು ಎಂದು ಈ ವರದಿ ಹೇಳುತ್ತದೆ. ಇದರಲ್ಲೂ ವೈರಲ್ ವೀಡಿಯೊದ ದೃಶ್ಯವನ್ನು ಕಾಣಬಹುದು.
ಮಾರ್ಚ್ 14, 2024ರ ಇಂಡಿಯಾ ಡಾಟ್ ಕಾಮ್ ಕೂಡ ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ನೊಂದಿಗೆ ವರದಿ ಪ್ರಕಟಿಸಿದ್ದು, ‘‘ಭಾರತ್ ಜೋಡೋ ನ್ಯಾಯ ಯಾತ್ರೆಯ ನೇತೃತ್ವ ವಹಿಸಿರುವ ರಾಹುಲ್ ಗಾಂಧಿ ಮಹಾರಾಷ್ಟ್ರದಲ್ಲಿದ್ದಾರೆ. ಅವರು ನಾಸಿಕ್ ತಲುಪಿದರು. ಇಲ್ಲಿ ಅವರು ಕೇಂದ್ರ ಸರ್ಕಾರವನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದ್ದು, ಜನರನ್ನು ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ, ರಾಹುಲ್ ಗಾಂಧಿ ನಾಸಿಕ್‌ನ ತ್ರ್ಯಂಬಕೇಶ್ವರ ಜ್ಯೋತಿರ್ಲಿಂಗ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಭಾರತ್ ಜೋಡೋ ನ್ಯಾಯ ಯಾತ್ರೆಯ ಸಮಯದಲ್ಲಿ ರಾಹುಲ್ ಗಾಂಧಿ ನಿಲ್ಲಿಸಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು’’ ಎಂದು ಬರೆಯಲಾಗಿದೆ.
ನಮ್ಮ ತನಿಖೆಯ ಸಮಯದಲ್ಲಿ, ನಾವು ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಯವರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಸಹ ಪರಿಶೀಲಿಸಿದ್ದೇವೆ. ಆದರೆ, ಬಿಹಾರ ವಿಧಾನಸಭಾ ಚುನಾವಣೆಯ ನಂತರ ರಾಹುಲ್ ಗಾಂಧಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಎಂಬ ಬಗ್ಗೆ ಯಾವುದೇ ವಿಶ್ವಾಸಾರ್ಹ ಮಾಹಿತಿ ನಮಗೆ ಸಿಗಲಿಲ್ಲ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಬಿಹಾರ ಚುನಾವಣೆಯಲ್ಲಿ ಸೋತ ನಂತರ ರಾಹುಲ್ ಗಾಂಧಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು ಎಂಬ ಹೇಳಿಕೆ ಸುಳ್ಳು ಎಂದು ನಾವು ಖಚಿತವಾಗಿ ಹೇಳುತ್ತೇವೆ.