Fact Check: ಕಾಂತಾರ ಚಾಪ್ಟರ್-1 ಸಿನಿಮಾ ನೋಡಿ ಕಣ್ಣೀರಿಟ್ಟು ರಿಷಭ್ರನ್ನು ಅಪ್ಪಿಕೊಂಡ ರಕ್ಷಿತ್ ಶೆಟ್ಟಿ?, ನಿಜಾಂಶ ಇಲ್ಲಿದೆ
ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಒಂದು ವೈರಲ್ ಆಗುತ್ತಿದೆ. ಇದರಲ್ಲಿ ಸ್ಯಾಂಡಲ್ವುಡ್ ನಟ ರಕ್ಷಿತ್ ಶೆಟ್ಟಿ ಥಿಯೇಟರ್ನಲ್ಲಿ ಭಾವುಕರಾಗಿ ರಿಷಭ್ ಶೆಟ್ಟಿ ಅವರನ್ನು ಅಪ್ಪಿಕೊಳ್ಳುವುದು ಕಾಣಬಹುದು.
By - Vinay Bhat |
Claim:ಕಾಂತಾರ ಚಾಪ್ಟರ್-1 ಸಿನಿಮಾ ನೋಡಿ ಕಣ್ಣೀರಿಟ್ಟು ರಿಷಭ್ ಶೆಟ್ಟಿಯನ್ನು ಅಪ್ಪಿಕೊಂಡ ರಕ್ಷಿತ್ ಶೆಟ್ಟಿ.
Fact:ಹಕ್ಕು ಸುಳ್ಳು. ಇದು ಹಳೆಯ ವೀಡಿಯೊ ಆಗಿದ್ದು, 2022 ರಲ್ಲಿ ಕಾಂತಾರ- ಎ ಲೆಜೆಂಡ್ ಸಿನಿಮಾ ಬಿಡುಗಡೆ ಆದಾಗ ನಡೆದ ಘಟನೆ ಆಗಿದೆ.
ರಿಷಭ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ ಸಿನಿಮಾದ ಪ್ರೀಕ್ವೆಲ್ ಕಾಂತಾರ ಚಾಪ್ಟರ್ -1 ಸಿನಿಮಾ ಅಕ್ಟೋಬರ್ 2ಕ್ಕೆ ಬಿಡುಗಡೆ ಆಗಿದ್ದು ಉತ್ತಮ ಪ್ರದರ್ಶನ ಕಾಣುತ್ತಿದೆ. ಈಗಾಗಲೇ ದಾಖಲೆಯ ಟಿಕೆಟ್ ಸೋಲ್ಡ್ ಔಟ್ ಆಗಿದೆ. ಕೇವಲ ಅಭಿಮಾನಿಗಳು ಮಾತ್ರವಲ್ಲದೆ ಅನೇಕ ದಿಗ್ಗಜ ನಟರು ಕೂಡ ಸಿನಿಮಾ ವೀಕ್ಷಣೆ ಮಾಡುತ್ತಿದ್ದಾರೆ. ಇದರ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಒಂದು ವೈರಲ್ ಆಗುತ್ತಿದೆ. ಇದರಲ್ಲಿ ಸ್ಯಾಂಡಲ್ವುಡ್ ನಟ ರಕ್ಷಿತ್ ಶೆಟ್ಟಿ ಥಿಯೇಟರ್ನಲ್ಲಿ ಭಾವುಕರಾಗಿ ರಿಷಭ್ ಶೆಟ್ಟಿ ಅವರನ್ನು ಅಪ್ಪಿಕೊಳ್ಳುವುದು ಕಾಣಬಹುದು.
ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಕಾಂತಾರ ಚಾಪ್ಟರ್-1 ಸಿನಿಮಾ ನೋಡಿದ ಬಳಿಕ ಕಣ್ಣೀರಿಟ್ಟು ರಿಷಭ್ ಶೆಟ್ಟಿಯನ್ನು ಅಪ್ಪಿಕೊಂಡ ರಕ್ಷಿತ್ ಶೆಟ್ಟಿ’’ ಎಂದು ಬರೆದುಕೊಂಡಿದ್ದಾರೆ. (Archive)
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು ಹಳೆಯ ವೀಡಿಯೊ ಆಗಿದ್ದು, 2022 ರಲ್ಲಿ ಕಾಂತಾರ- ಎ ಲೆಜೆಂಡ್ ಸಿನಿಮಾ ಬಿಡುಗಡೆ ಆದಾಗ ನಡೆದ ಘಟನೆ ಆಗಿದೆ.
ನಿಜಾಂಶವನ್ನು ತಿಳಿಯಲು ನಾವು ಮೊದಲಿಗೆ ಕಾಂತಾರ ಚಾಪ್ಟರ್ -1 ಸಿನಿಮಾ ಹಾಗೂ ರಕ್ಷಿತ್ ಶೆಟ್ಟಿ ಎಂಬ ಕೀವರ್ಡ್ ಬಳಸಿ ಗೂಗಲ್ನಲ್ಲಿ ಹುಡುಕಿದ್ದೇವೆ. ಆದರೆ, ಇದಕ್ಕೆ ಸಂಬಂಧಿಸಿದ ಇತ್ತೀಚಿನ ಯಾವುದೇ ಸುದ್ದಿ ಕಂಡುಬಂದಿಲ್ಲ. ಅಲ್ಲದೆ ರಕ್ಷಿತ್ ಶೆಟ್ಟಿ ಕಾಂತಾರ ಚಾಪ್ಟರ್- 1 ಸಿನಿಮಾ ವೀಕ್ಷಣೆಗೆ ಬಂದಿದ್ದರು ಎಂಬುದಕ್ಕೆ ಯಾವುದೇ ವಿಶ್ವಾಸಾರ್ಹ ವರದಿ ಸಿಕ್ಕಿಲ್ಲ.
ಬಳಿಕ ನಾವು ವೈರಲ್ ವೀಡಿಯೊದ ಪ್ರಮುಖ ಚೌಕಟ್ಟನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದಾಗ, ಇದೇ ವೈರಲ್ ವಿಡಿಯೊವನ್ನು ನ್ಯೂಸ್ ಫಸ್ಟ್ ಕನ್ನಡ ಸೆಪ್ಟೆಂಬರ್ 30, 2022 ರಂದು ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ಹಂಚಿಕೊಂಡಿರುವುದು ಸಿಕ್ಕಿದೆ. ಇದಕ್ಕೆ ‘‘Kantara Premier Show : ಓಡೋಡಿ ಬಂದು Rishab Shetty ಅನ್ನು ಹಗ್ ಮಾಡಿಕೊಂಡು ರಕ್ಷಿತ್ ಭಾವುಕ’’ ಎಂದು ಕ್ಯಾಪ್ಶನ್ ನೀಡಲಾಗಿದೆ.
ಹಾಗೆಯೆ kannada filmibeat ಕೂಡ ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ನೊಂದಿಗೆ ಸೆಪ್ಟೆಂಬರ್ 30, 2022 ರಂದು ‘‘ಓಡೋಡಿ ಬಂದು ತಬ್ಬಿಕೊಂಡ ರಕ್ಷಿತ್: ಕಣ್ಣೀರಿಟ್ಟ ರಿಷಬ್ ಶೆಟ್ಟಿ’’ ಎಂಬ ಶೀರ್ಷಿಕೆಯೊಂದಿಗೆ ಸುದ್ದಿ ಪ್ರಕಟಿಸಿದೆ. ಇದರಲ್ಲಿರುವ ಮಾಹಿತಿಯ ಪ್ರಕಾರ, ‘‘ರಿಷಬ್ ಶೆಟ್ಟಿ ರಚಿಸಿ, ನಟಿಸಿ, ನಿರ್ದೇಶಿಸಿರುವ ಕಾಂತಾರ ಚಿತ್ರವನ್ನು ಮೊದಲ ಬಾರಿಗೆ ನೋಡಿದ ರಕ್ಷಿತ್ ಶೆಟ್ಟಿ ಸಂಭ್ರಮಿಸಿದ ವಿಡಿಯೋ ವೈರಲ್ ಆಗುತ್ತಿದೆ. ರಕ್ಷಿತ್ ಶೆಟ್ಟಿ ನಿನ್ನೆ(ಸಪ್ಟೆಂಬರ್ ೨೯) ಮೊದಲ ಬಾರಿಗೆ ಪ್ರೀಮಿಯರ್ ಶೋನಲ್ಲಿ ವೀಕ್ಷಿಸಿದ್ದಾರೆ. ಕಾಂತಾರ ಚಿತ್ರ ಮುಗಿದ ಮೇಲೆ ರಕ್ಷಿತ್ ಎರಡೂ ಕೈಗಳನ್ನು ಮೇಲಕೆತ್ತಿ ಚಪ್ಪಾಳೆ ಹೊಡೆಯುತ್ತಾರೆ. ಬಳಿಕ ತಾವಿದ್ದ ಸ್ಥಳದಿಂದ ಜಿಗಿದು ಓಡೋಡಿ ಬಂದು ರಿಷಬ್ ಶೆಟ್ಟಿಯನ್ನು ತಬ್ಬಿಕೊಳ್ಳುತ್ತಾರೆ. ಮೊದಲೇ ಪ್ರೇಕ್ಷಕರ ಪ್ರತಿಕ್ರಿಯೆ ನೋಡಿ ಭಾವುಕರಾಗಿದ್ದ ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ ತಬ್ಬಿಕೊಳ್ಳುತ್ತಿದ್ದಂತೆ ಕಣ್ಣೀರು ಹಾಕಿದ್ದಾರೆ. ನಿನ್ನೆ ನಡೆದ ಕಾಂತಾರ ಪ್ರೀಮಿಯರ್ ಶೋ ಈ ಒಂದು ಸುಂದರ ಘಳಿಗೆಗೆ ಸಾಕ್ಷಿಯಾಯಿತು. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ರಕ್ಷಿತ್ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ ಸ್ನೇಹಕ್ಕೆ ಮನಸೋತಿದ್ದಾರೆ’’ ಎಂದು ಬರೆಯಲಾಗಿದೆ.
ಇನ್ನು ಈ ವೈರಲ್ ವೀಡಿಯೊದಲ್ಲಿ ಹೊಂಬಾಳೆ ಫಿಲ್ಮ್ಸ್ನ ಲೋಗೋ ಇರುವುದನ್ನು ನಾವು ಗಮನಿಸಿದ್ದೇವೆ. ಹೀಗಾಗಿ ನಾವು ಹೊಂಬಾಳೆಯ ಯೂಟ್ಯೂಬ್ ಚಾನೆಲ್ನಲ್ಲಿ ಹುಡುಕಿದಾಗ ಇದೇ ವೀಡಿಯೊವನ್ನು ಸೆಪ್ಟೆಂಬರ್ 30, 2022 ರಂದು ಹಂಚಿಕೊಂಡಿರುವುದು ಸಿಕ್ಕಿತು. ‘‘ಬೆಂಗಳೂರು ಪ್ರೀಮಿಯರ್ ಶೋ ಹೈಲೈಟ್ಸ್: ಪ್ರೀಮಿಯರ್ ಶೋನಲ್ಲಿ ಕಾಂತಾರ - ಎ ಲೆಜೆಂಡ್ ನೋಡಿದ ನಂತರ ಪ್ರೇಕ್ಷಕರ ಹೃದಯಸ್ಪರ್ಶಿ ಪ್ರತಿಕ್ರಿಯೆಯನ್ನು ವೀಕ್ಷಿಸಿ’’ ಎಂದು ಕ್ಯಾಪ್ಶನ್ ನೀಡಲಾಗಿದೆ.