Fact Check: ಆರ್‌ಬಿಐ 5000 ರೂಪಾಯಿಯ ಹೊಸ ನೋಟು ಬಿಡುಗಡೆ ಮಾಡಿದೆ ಎಂದು ಸುಳ್ಳು ಸುದ್ದಿ ವೈರಲ್
ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಐದು ಸಾವಿರ ರೂಪಾಯಿಯ ಹೊಸ ನೋಟುಗಳನ್ನು ಬಿಡುಗಡೆ ಮಾಡಿದೆ ಎಂದು ಹೇಳಲಾಗುತ್ತಿದೆ.
By Vinay Bhat
Claim:ಆರ್‌ಬಿಐ 5000 ರೂಪಾಯಿಯ ಹೊಸ ನೋಟು ಬಿಡುಗಡೆ ಮಾಡಿದೆ.
Fact:ಹಕ್ಕು ಸುಳ್ಳು. ಅಂತಹ ಯಾವುದೇ ನಿರ್ಧಾರವನ್ನು ಸರ್ಕಾರ ಅಥವಾ ಆರ್‌ಬಿಐ ತೆಗೆದುಕೊಂಡಿಲ್ಲ.
ಫೇಸ್ಬುಕ್, ಎಕ್ಸ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಒಂದು ವೈರಲ್ ಆಗುತ್ತಿದೆ. ಇದರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಐದು ಸಾವಿರ ರೂಪಾಯಿಯ ಹೊಸ ನೋಟುಗಳನ್ನು ಬಿಡುಗಡೆ ಮಾಡಿದೆ ಎಂದು ಹೇಳಲಾಗುತ್ತಿದೆ. ಹಸಿರು ಬಣ್ಣದಿಂದ ಕೂಡಿರುವ 5000 ರೂಪಾಯಿ ನೋಟಿನ ಫೋಟೋವನ್ನು ಅನೇಕರು ಹಂಚಿಕೊಳ್ಳುತ್ತಿದ್ದಾರೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ಫೋಟೋವನ್ನು ಅಪ್ಲೋಡ್ ಮಾಡಿ, ‘‘BIG NEWS: 5000 ರೂಪಾಯಿಯ ಹೊಸ ನೋಟು ಬಿಡುಗಡೆ: RBI ನೀಡಿದೆ ಈ ಮಾಹಿತಿ|5000 New Note’’ ಎಂದು ಬರೆದುಕೊಂಡಿದ್ದಾರೆ.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಇದು ಸುಳ್ಳು ಎಂಬುದು ತಿಳುದುಬಂದಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಅಂತಹ ಯಾವುದೇ ನೋಟನ್ನು ಬಿಡುಗಡೆ ಮಾಡಿಲ್ಲ. ನಮ್ಮ ತನಿಖೆಯಲ್ಲಿ ವೈರಲ್ ಪೋಸ್ಟ್ ನಕಲಿ ಎಂದು ಕಂಡುಬಂದಿದೆ.
ನಿಜಾಂಶವನ್ನು ತಿಳಿಯಲು ನಾವು ಮೊದಲಿಗೆ ಗೂಗಲ್ ನಲ್ಲಿ ಈ ಕುರಿತು ಸರ್ಚ್ ಮಾಡಿದ್ದೇವೆ. ಆದರೆ, ಆರ್‌ಬಿಐ ಅಂತಹ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಖಚಿತಪಡಿಸಲು ನಾವು ಒಂದೇ ಒಂದು ಸುದ್ದಿಯನ್ನು ನೋಡಿಲ್ಲ. ಆರ್‌ಬಿಐ ಅಥವಾ ಸರ್ಕಾರ 5000 ರೂ. ನೋಟುಗಳ ಬಿಡುಗಡೆ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ನೀಡಲಿಲ್ಲ.
ಬಳಿಕ ನಾವು ಆರ್ಬಿಐಯ ಅಧಿಕೃತವೆಬ್‌ಸೈಟ್ ಅನ್ನು ಪರಿಶೀಲಿಸಿದ್ದೇವೆ. ಇಲ್ಲೂ 5000 ಮುಖಬೆಲೆಯ ಕುರಿತು ಯಾವುದೇ ಅಧಿಸೂಚನೆ ಅಥವಾ ಅಪ್‌ಡೇಟ್ ಕಾಣಿಸಲಿಲ್ಲ. ಆರ್‌ಬಿಐ ವೆಬ್‌ಸೈಟ್ ಪ್ರಕಾರ, ಮಹಾತ್ಮ ಗಾಂಧಿ (ಹೊಸ) ಸರಣಿ ಎಂದು ಕರೆಯಲ್ಪಡುವ ಚಲಾವಣೆಯಲ್ಲಿರುವ ಬ್ಯಾಂಕ್ ನೋಟುಗಳನ್ನು 2016 ರಲ್ಲಿ ಹಳೆಯ 500 ಮತ್ತು 1,000 ರೂ. ನೋಟುಗಳ ಅಮಾನ್ಯೀಕರಣದ ನಂತರ ಪರಿಚಯಿಸಲಾಯಿತು.
ಈ ಸರಣಿಯಲ್ಲಿ ರೂ. 2,000, ರೂ. 500, ರೂ. 200 , ರೂ. 100, ರೂ. 50, ರೂ. 20 ಮತ್ತು ರೂ. 10 ನೋಟುಗಳನ್ನು ಒಳಗೊಂಡಿದೆ. ಆದರೆ, ಮೇ 2023 ರಲ್ಲಿ, ಕೇಂದ್ರ ಸರ್ಕಾರವು ಚಲಾವಣೆಯಿಂದ ಎರಡು ಸಾವಿರ ರೂಪಾಯಿ ನೋಟುಗಳನ್ನು ಹಿಂತೆಗೆದುಕೊಂಡಿತು. ಪ್ರಸ್ತುತ 10, 20, 50, 100, 200, 500 ರೂಪಾಯಿ ನೋಟುಗಳು ಚಲಾವಣೆಯಲ್ಲಿವೆ.
ಹಾಗೆಯೆ ಸರ್ಕಾರದ ಸಂವಹನ ವಿಭಾಗವಾದ ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (PIB) ಕೂಡ ಈ ಹಕ್ಕನ್ನು ಸುಳ್ಳು ಎಂದು ಸ್ಪಷ್ಟೀಕರಣವನ್ನು ನೀಡಿದೆ. ‘‘5000 ರೂಪಾಯಿಯ ಹೊಸ ನೋಟುಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡುತ್ತದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೊಳ್ಳಲಾಗುತ್ತಿದೆ. ಪಿಐಬಿ ಈ ಹಕ್ಕು ಸಂಪೂರ್ಣ ನಕಲಿ ಎಂದು ಹೇಳುತ್ತದೆ. ಅಂತಹ ಯಾವುದೇ ನಿರ್ಧಾರವನ್ನು ರಿಸರ್ವ್ ಬ್ಯಾಂಕ್ ತೆಗೆದುಕೊಂಡಿಲ್ಲ’’ ಎಂದು ಬರೆದುಕೊಂಡಿದೆ.
सतर्क रहें ⚠️सोशल मीडिया पर दावा किया जा रहा है कि भारतीय रिजर्व बैंक द्वारा ₹5000 के नए नोट जारी किए जाएंगे#PIBFactCheck✅ यह दावा फर्जी है✅ @RBI द्वारा ऐसा कोई निर्णय नहीं लिया गया है✅ आधिकारिक वित्तीय जानकारी हेतु वेबसाइट https://t.co/WejSLtVo5O पर विजिट करें pic.twitter.com/CWTBocG62m
— PIB Fact Check (@PIBFactCheck) January 4, 2025
ಹೀಗಾಗಿ 5000 ರೂಪಾಯಿ ನೋಟುಗಳನ್ನು ಆರ್‌ಬಿಐ ಬಿಡುಗಡೆ ಮಾಡಿದೆ ಎಂದು ವೈರಲ್ ಆಗುತ್ತಿರುವ ಪೋಸ್ಟ್ ಸುಳ್ಳು ಎಂದು ನಾವು ಖಚಿತವಾಗಿ ಹೇಳುತ್ತೇವೆ. ಅಂತಹ ಯಾವುದೇ ನಿರ್ಧಾರವನ್ನು ಸರ್ಕಾರ ಅಥವಾ ಆರ್‌ಬಿಐ ತೆಗೆದುಕೊಂಡಿಲ್ಲ.