ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಜನವರಿ 13 ರಂದು ಪ್ರಾರಂಭವಾದ ಬೃಹತ್ ಧಾರ್ಮಿಕ ಸಭೆ ಮಹಾ ಕುಂಭ ಮೇಳ ಫೆಬ್ರವರಿ 26 ರಂದು ಕೊನೆಗೊಂಡಿತು. ಇವುಗಳ ಮಧ್ಯೆ ರಾಕಿಂಗ್ ಸ್ಟಾರ್ ಯಶ್ ಮತ್ತು ಅವರ ಕುಟುಂಬವು ಧಾರ್ಮಿಕ ಧ್ವಜಗಳಿಂದ ಅಲಂಕರಿಸಲ್ಪಟ್ಟ ಘಾಟ್‌ಗಳಿಗೆ ಭೇಟಿ ನೀಡಿದ್ದಾರೆ ಎನ್ನಲಾದ ವೀಡಿಯೊ ವೈರಲ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೀಡಿಯೊವನ್ನು ಹಂಚಿಕೊಳ್ಳುವಾಗ ಅನೇಕರು ಇದನ್ನು ಮಹಾ ಕುಂಭಮೇಳದಲ್ಲಿ ಯಶ್ ಎಂದು ಹೇಳಿಕೊಳ್ಳುತ್ತಿದ್ದಾರೆ.
ಫೇಸ್ಬುಕ್ ಬಳಕೆದಾರರೊಬ್ಬರು ಫೆಬ್ರವರಿ 24, 2025 ರಂದು ಈ ವೀಡಿಯೊವನ್ನು ಹಂಚಿಕೊಂಡು, ‘‘ಕನ್ನಡ ಸಿನಿಮಾದ ಸ್ಟಾರ್ ನಟ ಯಶ್ ತನ್ನ ಪೂರಾ ಕುಟುಂಬದೊಂದಿಗೆ ಕುಂಭಮೇಳಕ್ಕೆ ಭೇಟಿ ನೀಡಿದ್ದಾರೆ’’ ಎಂದು ಬರೆದುಕೊಂಡಿದ್ದಾರೆ.
ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ವೈರಲ್ ಆದ ವೀಡಿಯೊದಲ್ಲಿ ಅವರು ತಮ್ಮ ಟಾಕ್ಸಿಕ್ ಸಿನಿಮಾದ ಚಿತ್ರೀಕರಣದ ನಂತರ ಮುಂಬೈಗೆ ಭೇಟಿ ನೀಡುತ್ತಿರುವುದನ್ನು ತೋರಿಸುತ್ತದೆ.
ನಿಜಾಂಶವನ್ನು ತಿಳಿಯಲು ಗೂಗಲ್ ರಿವರ್ಸ್ ಇಮೇಜ್ ಹುಡುಕಾಟ ನಡೆಸಿದಾಗ, ನಾವು ಇದೇ ವೈರಲ್ ವಿಡಿಯೋವನ್ನು ನವೆಂಬರ್ 26, 2024 ರಂದು X ಬಳಕೆದಾರರು ಅಪ್‌ಲೋಡ್ ಮಾಡಿರುವುದನ್ನು ಕಂಡುಕೊಂಡಿದ್ದೇವೆ. "ಟಾಕ್ಸಿಕ್ ಸಿನಿಮಾ ಚಿತ್ರೀಕರಣದ ನಂತರ ಮುಂಬೈನಲ್ಲಿ ತನ್ನ ಕುಟುಂಬದೊಂದಿಗೆ ರಾಕಿಂಗ್ ಯಶ್ ಕಾಣಿಸಿಕೊಂಡರು" ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.
ಹಾಗೆಯೆ ಅದೇ ವೀಡಿಯೊವನ್ನು ಫಿಲ್ಮೀ ಗೋಲ್ಡ್ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ನವೆಂಬರ್ 28, 2024 ರಂದು "ಕೆಜಿಎಫ್ ಸೂಪರ್‌ಸ್ಟಾರ್ ಯಶ್ ತಮ್ಮ ಮಗನನ್ನು ಮಡಿಲಲ್ಲಿಟ್ಟುಕೊಂಡು ಭಾರಿ ಜನಸಮೂಹದಲ್ಲಿ ತಮ್ಮ ಪತ್ನಿ ಮತ್ತು ಮಕ್ಕಳೊಂದಿಗೆ" ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಂಡಿದೆ.
ಮತ್ತಷ್ಟು ಹುಡುಕಾಟ ನಡೆಸಿದಾಗ, ಇಂಡಿಯಾ ಟುಡೇ ನವೆಂಬರ್ 26, 2024 ರಂದು ವೈರಲ್ ವೀಡಿಯೊದ ಸ್ಕ್ರೀನ್‌ಶಾಟ್‌ನೊಂದಿಗೆ ಒಂದು ವರದಿಯನ್ನು ಸಹ ಪ್ರಕಟಿಸಿದೆ. ವರದಿಯಲ್ಲಿ ಯಶ್ ತಮ್ಮ ಪತ್ನಿ ರಾಧಿಕಾ ಪಂಡಿತ್ ಮತ್ತು ಅವರ ಮಕ್ಕಳೊಂದಿಗೆ ಮುಂಬೈನಲ್ಲಿ ತಮ್ಮ ಟಾಕ್ಸಿಕ್ ಚಿತ್ರದ ಚಿತ್ರೀಕರಣದಲ್ಲಿದ್ದಾಗ ಕಾಣಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಅಲ್ಲದೆ ನಾವು ಯಶ್ ಮಹಾ ಕುಂಭಮೇಳಕ್ಕೆ ಭೇಟಿ ನೀಡಿದ್ದಾರ ಎಂಬ ಕುರಿತು ಗೂಗಲ್ ಸರ್ಚ್ ಮಾಡಿದ್ದೇವೆ. ಆದರೆ ಈ ಬಗ್ಗೆ ನಮಗೆ ಯಾವುದೇ ವರದಿಗಳು ಕಂಡುಬಂದಿಲ್ಲ. ಆದ್ದರಿಂದ, ವೈರಲ್ ಆಗಿರುವ ಈ ಹಕ್ಕು ಸುಳ್ಳು ಎಂದು ನಾವು ತೀರ್ಮಾನಿಸುತ್ತೇವೆ.