ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಒಂದು ವೈರಲ್ ಆಗುತ್ತಿದೆ. ಒಂದು ನಿಮಿಷಕ್ಕೂ ಹೆಚ್ಚು ಉದ್ದದ ಈ ವೀಡಿಯೊದಲ್ಲಿ ಸ್ಕೂಬಾ ಡೈವರ್‌ಗಳ ತಂಡವು ಬಂಡೆಗಳು, ಪ್ರಾಚೀನ ರಚನೆಗಳ ಅವಶೇಷಗಳು ಮತ್ತು ಪ್ರಜ್ವಲಿಸುವ ವಿಗ್ರಹವನ್ನು ಪರಿಶೀಲಿಸುವುದನ್ನು ಕಾಣಬಹುದು. ಈ ಡೈವರ್‌ಗಳು ಸಮುದ್ರದೊಳಗಿನ ರಾಮ ಸೇತುವಿನ ಅವಶೇಷಗಳನ್ನು ತೋರಿಸುತ್ತಿದ್ದಾರೆ ಎಂದು ಅನೇಕ ಬಳಕೆದಾರರು ಹೇಳಿಕೊಳ್ಳುತ್ತಿದ್ದಾರೆ.
ಫೇಸ್ಬುಕ್ ಬಳಕೆದಾರರೊಬ್ಬರು ಏಪ್ರಿಲ್ 5, 2025 ರಂದು ಈ ವೀಡಿಯೊವನ್ನು ಹಂಚಿಕೊಂಡು, ‘‘ಸಮುದ್ರ ಒಳಗಿನ ದೃಶ್ಯ ರಾಮ್ ಸೇತು.. ಜೈ ಶ್ರೀ ರಾಮ್’’ ಎಂದು ಬರೆದುಕೊಂಡಿದ್ದಾರೆ. (Archive)
ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು ಕೃತಕ ಬುದ್ದಿಮತ್ತೆ (AI) ಯಿಂದ ರಚಿಸಿದ ವೀಡಿಯೊ ಆಗಿದೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್ನಲ್ಲಿ ರಿವರ್ಸ್ ಇಮೇಜ್ ಹುಡುಕಾಟ ನಡೆಸಿದ್ದೇವೆ. ಆಗ ಇದೇ ವೀಡಿಯೊವನ್ನು ಅನೇಕ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವುದು ಕಂಡುಬಂತು. ಆದರೆ, ರಾಮ ಸೇತುವಿನ ಅವಶೇಷಗಳನ್ನು ತೋರಿಸುವುದಾಗಿ ಹೇಳಿಕೊಳ್ಳುವ ವೀಡಿಯೊವನ್ನು ಒಳಗೊಂಡ ಯಾವುದೇ ವಿಶ್ವಾಸಾರ್ಹ ವರದಿಗಳು ಅಥವಾ ಅಧಿಕೃತ ಮಾಹಿತಿ ಸಿಕ್ಕಿಲ್ಲ.
ಹೀಗೆ ಹುಡುಕಾಟದ ಸಮಯದಲ್ಲಿ ಇದೇ ವೈರಲ್ ವೀಡಿಯೊ ಅತಿ ಹೆಚ್ಚು ವೀಕ್ಷಣೆ ಪಡೆದ ಇನ್‌ಸ್ಟಾಗ್ರಾಮ್ ಖಾತೆಯೊಂದರಲ್ಲಿ ಕಂಡಿದ್ದೇವೆ. ಈ ವೀಡಿಯೊವನ್ನು ಮಾರ್ಚ್ 27 ರಂದು bharathfx ಎಂಬ ಇನ್ಸ್ಟಾ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಈ ವೀಡಿಯೊವನ್ನು ಪೋಸ್ಟ್ ಮಾಡುವಾಗ, ಬಳಕೆದಾರರು ಇದನ್ನು AI ಬಳಸಿ ರಚಿಸಲಾಗಿದೆ ಎಂದು ಬರೆದುಕೊಂಡಿದ್ದಾರೆ. ಈ ಖಾತೆಯಲ್ಲಿ ಎಐ ಯಿಂದ ರಚಿತವಾದ ಅನೇಕ ವೀಡಿಯೊಗಳಿವೆ.
ಈ ಮಾಹಿತಿಯ ಆಧಾರದ ಮೇಲೆ ನಾವು AI ಪತ್ತೆ ಸಾಧನ ಹೈವ್ ಮಾಡರೇಶನ್‌ನಲ್ಲಿ ವೀಡಿಯೊದ ಒಂದು ವಿಭಾಗವನ್ನು ಪರಿಶೀಲಿಸಿದ್ದೇವೆ. ಆಗ ಇದು ಶೇ. 99.9 ರಷ್ಟು ಎಐಯಿಂದ ರಚಿತವಾಗಿದೆ ಎಂದು ಹೇಳಿದೆ. ಹಾಗೆಯೆ ಮತ್ತೊಂದು AI ಪತ್ತೆ ವೆಬ್‌ಸೈಟ್ WasItAI ನಲ್ಲಿ ವೈರಲ್ ಕ್ಲಿಪ್‌ನಿಂದ ಕೆಲ ಸ್ಕ್ರೀನ್ ಶಾಟ್ ತೆಗೆದು ಪರಿಶೀಲಿಸಿದ್ದೇವೆ. ಇದು ಕೂಡ ಈ ಎಲ್ಲ ಫೋಟೋ ಎಐಯಿಂದ ರಚಿತವಾದವು ಎಂಬುದನ್ನು ಹೇಳಿದೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಳೆ ಸ್ಕೂಬಾ ಡೈವರ್‌ಗಳು ರಾಮ ಸೇತುವಿನ ಅವಶೇಷಗಳನ್ನು ಅನ್ವೇಷಿಸುತ್ತಿರುವುದನ್ನು ತೋರಿಸುವ ವೈರಲ್ ವೀಡಿಯೊವು AI ನಿಂದ ರಚಿತವಾಗಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.