Fact Check: ಪಾಕಿಸ್ತಾನದ ಡೇರಾ ಇಸ್ಮಾಯಿಲ್ ಖಾನ್ ಜಿಲ್ಲೆಯಲ್ಲಿ ತಾಲಿಬಾನ್ ದಾಳಿಗೆ ಆರು ಸೈನಿಕರು ಬಲಿ ಎಂದು ಹಳೇ ವೀಡಿಯೊ ವೈರಲ್

ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವೆ ನಡೆಯುತ್ತಿರುವ ಉದ್ವಿಗ್ನತೆಯ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಒಂದು ವೈರಲ್ ಆಗುತ್ತಿದೆ. ಇದರಲ್ಲಿ ಒಂದು ಪ್ರದೇಶ ಬೆಂಕಿಯಿಂದ ಹೊತ್ತಿ ಉರಿಯುತ್ತಿರುವುದನ್ನು ಕಾಣಬಹುದು. ಬಳಿಕ ಆ ಜಾಗಕ್ಕೆ ಕೆಲ ಜನರು ಓಡಿಕೊಂಡು ಬರುತ್ತಾರೆ.

By -  Vinay Bhat
Published on : 21 Oct 2025 7:09 PM IST

Fact Check: ಪಾಕಿಸ್ತಾನದ ಡೇರಾ ಇಸ್ಮಾಯಿಲ್ ಖಾನ್ ಜಿಲ್ಲೆಯಲ್ಲಿ ತಾಲಿಬಾನ್ ದಾಳಿಗೆ ಆರು ಸೈನಿಕರು ಬಲಿ ಎಂದು ಹಳೇ ವೀಡಿಯೊ ವೈರಲ್
Claim:ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಣ ಉದ್ವಿಗ್ನತೆ ಮಧ್ಯೆ ಡೇರಾ ಇಸ್ಮಾಯಿಲ್ ಖಾನ್ ಜಿಲ್ಲೆಯಲ್ಲಿ ತಾಲಿಬಾನ್ ದಾಳಿಗೆ ಆರು ಸೈನಿಕರು ಬಲಿ ಆಗಿರುವುದನ್ನು ವೀಡಿಯೊ ತೋರಿಸುತ್ತದೆ.
Fact:ಹಕ್ಕು ಸುಳ್ಳು. ಇದು 2024ರ ಮಾರ್ಚ್ನ ವೀಡಿಯೊ ಆಗಿದ್ದು, ಪಾಕಿಸ್ತಾನಿ ಭದ್ರತಾ ಪಡೆಗಳ ಬೆಂಗಾವಲು ಪಡೆಯನ್ನು ಗುರಿಯಾಗಿಸಿಕೊಂಡು ನಡೆದ ಆತ್ಮಾಹುತಿ ಬಾಂಬರ್ ದಾಳಿ ಇದಾಗಿದೆ.

ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವೆ ನಡೆಯುತ್ತಿರುವ ಉದ್ವಿಗ್ನತೆಯ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಒಂದು ವೈರಲ್ ಆಗುತ್ತಿದೆ. ಇದರಲ್ಲಿ ಒಂದು ಪ್ರದೇಶ ಬೆಂಕಿಯಿಂದ ಹೊತ್ತಿ ಉರಿಯುತ್ತಿರುವುದನ್ನು ಕಾಣಬಹುದು. ಬಳಿಕ ಆ ಜಾಗಕ್ಕೆ ಕೆಲ ಜನರು ಓಡಿಕೊಂಡು ಬರುತ್ತಾರೆ. ಫೇಸ್​ಬುಕ್ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡು, ‘‘ಭರ್ಜರಿ ದೀಪಾವಳಿ ಆಚರಿಸಿದ ಅಫ್ಘಾನಿಸ್ತಾನ. ಪಾಕಿಸ್ತಾನದ ವಿವಾದಿತ ಪ್ರದೇಶ ಕೆಪಿಕೆ ಪ್ರಾಂತ್ಯದ ಡೇರಾ ಇಸ್ಮಾಯಿಲ್ ಖಾನ್ ಜಿಲ್ಲೆಯಲ್ಲಿ ತಾಲಿಬಾನ್ ದಾಳಿಗೆ ಆರು ಮಂದಿ ಸೈನಿಕರು ಬಲಿಯಾಗಿದ್ದು, 9 ಮಂದಿ ಗಾಯಗೊಂಡಿದ್ದಾರೆ.’’ ಎಂದು ಬರೆದುಕೊಂಡಿದ್ದಾರೆ. (Archive)

Fact Check

ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು 2024ರ ಮಾರ್ಚ್​ನ ವೀಡಿಯೊ ಆಗಿದ್ದು, ಪಾಕಿಸ್ತಾನಿ ಭದ್ರತಾ ಪಡೆಗಳ ಬೆಂಗಾವಲು ಪಡೆಯನ್ನು ಗುರಿಯಾಗಿಸಿಕೊಂಡು ನಡೆದ ಆತ್ಮಾಹುತಿ ಬಾಂಬರ್ ದಾಳಿ ಇದಾಗಿದೆ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಪ್ರಮುಖ ಚೌಕಟ್ಟನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದ್ದೇವೆ. ಈ ಸಂದರ್ಭ ಮಾರ್ಚ್ 21, 2024 ರಂದು Shafaqna ಎಂಬ ವೆಬ್​ಸೈಟ್​ನಲ್ಲಿ ಇದೇ ವೈರಲ್ ವೀಡಿಯೊದ ಸ್ಕ್ರೀನ್ ಶಾಟ್​ನೊಂದಿಗೆ ಸುದ್ದಿ ಪ್ರಕಟಿಸಿರುವುದು ಕಂಡುಬಂತು. ‘‘ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪೊಲೀಸರು, ಡೇರಾ ಇಸ್ಮಾಯಿಲ್ ಖಾನ್‌ನಲ್ಲಿ ಪಾಕಿಸ್ತಾನಿ ಭದ್ರತಾ ಪಡೆಗಳ ಬೆಂಗಾವಲು ಪಡೆಯನ್ನು ಗುರಿಯಾಗಿಸಿಕೊಂಡು ಆತ್ಮಾಹುತಿ ಬಾಂಬರ್ ದಾಳಿ ನಡೆಸಿರುವುದಾಗಿ ದೃಢಪಡಿಸಿದ್ದಾರೆ. ಈ ದಾಳಿಯಲ್ಲಿ ಇಬ್ಬರು ಪಾಕಿಸ್ತಾನಿ ಭದ್ರತಾ ಪಡೆಗಳು ಸಾವನ್ನಪ್ಪಿದ್ದು, 22 ಮಂದಿ ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನಿ ಪೊಲೀಸರು ತಿಳಿಸಿದ್ದಾರೆ’’ ಎಂಬ ಮಾಹಿತಿ ಇದರಲ್ಲಿದೆ.

ಮಾರ್ಚ್ 21, 2024 ರಂದು ಪಾಕಿಸ್ತಾನದ ಸ್ಥಳೀಯ ಮಾಧ್ಯಮ Expree.pk ಕೂಡ ವೈರಲ್ ವೀಡಿಯೊದ ಸ್ಕ್ರೀನ್ ಶಾಟ್​ನೊಂದಿಗೆ ಪ್ರಕಟಿಸಿದ ಸುದ್ದಿಯಲ್ಲಿ, ಹತಲಾ ಪೊಲೀಸ್ ಠಾಣೆ ವ್ಯಾಪ್ತಿಯ ವಾವಾ ಪೆಟ್ರೋಲ್ ಪಂಪ್ ಬಳಿ ವಾಹನವೊಂದರಲ್ಲಿ ನಡೆದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿ, 22 ಜನರು ಗಾಯಗೊಂಡಿದ್ದಾರೆ. ಪೊಲೀಸರ ಪ್ರಕಾರ, ಆತ್ಮಹತ್ಯಾ ವಾಹನದ ಗುರಿ ಟ್ಯಾಂಕ್ ನಿಂದ ಡೇರಾಗೆ ಬರುತ್ತಿದ್ದ ವಾಹನಗಳು. ಗಾಯಾಳುಗಳನ್ನು ಸಿಎಂಎಚ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂಬ ಮಾಹಿತಿ ಇದೆ.

ಮಾರ್ಚ್ 21, 2024 ರಂದು ಟೈಮ್ಸ್ ನೌ ಕೂಡ ತನ್ನ ಯೂಟ್ಯೂಬ್ ಚಾನೆಲ್​ನಲ್ಲಿ ಈ ಕುರಿತು ವೀಡಿಯೊ ಸುದ್ದಿ ಪ್ರಕಟಿಸಿದೆ. ‘‘ಡೇರಾ ಇಸ್ಮಾಯಿಲ್ ಖಾನ್‌ನಲ್ಲಿ ಪಾಕಿಸ್ತಾನ ಭದ್ರತಾ ಪಡೆಗಳ ಬೆಂಗಾವಲು ಪಡೆಯ ಮೇಲೆ ಸ್ಫೋಟಕ ತುಂಬಿದ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಹಲವಾರು ಸೈನಿಕರು ಸಾವನ್ನಪ್ಪಿದರು. ವರದಿಗಳ ಪ್ರಕಾರ ಪಶ್ತೂನ್ ಹೋರಾಟಗಾರರು ಬೆಂಗಾವಲು ಪಡೆಯ ಮೇಲೆ ದಾಳಿ ಮಾಡಿದ ನಂತರ ಪಾಕಿಸ್ತಾನದ ಉದ್ಯೋಗ ಪಡೆಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ 12 ಕ್ಕೆ ಏರಿದೆ’’ ಎಂಬ ಮಾಹಿತಿ ಇದರಲ್ಲಿದೆ.

ಇದು ಡೇರಾ ಇಸ್ಮಾಯಿಲ್ ಖಾನ್ ಜಿಲ್ಲೆಯಲ್ಲಿ ಟ್ಯಾಂಕ್ ನಿಂದ ಬರುತ್ತಿದ್ದ ವಾಹನಗಳ ಬೆಂಗಾವಲು ಪಡೆಯ ಮೇಲೆ ನಡೆದ ಆತ್ಮಾಹುತಿ ಬಾಂಬ್ ದಾಳಿ ಎಂದು ವೈರಲ್ ವೀಡಿಯೊದ ಸ್ಕ್ರೀನ್ ಶಾಟ್​ನೊಂದಿಗೆ ಮಾರ್ಚ್ 21, 2024 ರಂದು ಅನೇಕ ಸುದ್ದಿ ಮಾಧ್ಯಮ ಸುದ್ದಿ ಪ್ರಕಟಿಸಿರುವುದನ್ನು ನೀವು ಇಲ್ಲಿ, ಇಲ್ಲಿ, ಇಲ್ಲಿ ನೋಡಬಹುದು.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ ಪಾಕಿಸ್ತಾನದ ಡೇರಾ ಇಸ್ಮಾಯಿಲ್ ಖಾನ್ ಜಿಲ್ಲೆಯಲ್ಲಿ ತಾಲಿಬಾನ್ ದಾಳಿಗೆ ಆರು ಸೈನಿಕರು ಬಲಿ ಆಗಿದ್ದಾರೆ ಎಂದು ವೈರಲ್ ಆಗುತ್ತಿರುವ ವೀಡಿಯೊ ಹಳೇಯದು ಎಂದು ನಾವು ಖಚಿತವಾಗಿ ಹೇಳುತ್ತೇವೆ.

Claimed By:Facebook User
Claim Reviewed By:NewsMeter
Claim Source:Social Media
Claim Fact Check:False
Fact:ಹಕ್ಕು ಸುಳ್ಳು. ಇದು 2024ರ ಮಾರ್ಚ್ನ ವೀಡಿಯೊ ಆಗಿದ್ದು, ಪಾಕಿಸ್ತಾನಿ ಭದ್ರತಾ ಪಡೆಗಳ ಬೆಂಗಾವಲು ಪಡೆಯನ್ನು ಗುರಿಯಾಗಿಸಿಕೊಂಡು ನಡೆದ ಆತ್ಮಾಹುತಿ ಬಾಂಬರ್ ದಾಳಿ ಇದಾಗಿದೆ.
Next Story