ಟ್ರ್ಯಾಕ್ಟರ್‌ನಿಂದ ಪ್ರತಿಮೆಯೊಂದನ್ನು ಧ್ವಂಸಗೊಳಿಸುತ್ತಿರುವ ವೀಡಿಯೊದೊಂದಿಗೆ ಹಲವಾರು ಪೋಸ್ಟ್‌ಗಳು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರುವ ಕಾರಣ ಮುಸ್ಲಿಮರು ಹಿಂದೂ ಸಮುದಾಯಕ್ಕೆ ಸೇರಿದ ಪ್ರತಿಮೆಗಳನ್ನು ಧ್ವಂಸಗೊಳಿಸುತ್ತಿದ್ದಾರೆ ಎಂದು ವೀಡಿಯೊದ ಜೊತೆಗೆ ಬರೆದು ಅನೇಕರು ಶೇರ್ ಮಾಡುತ್ತಿದ್ದಾರೆ. ಪ್ರತಿಮೆಯ ಹಿಂದೆ ರಾಮ ದೇವರ ಕಟ್-ಔಟ್ ಸಹ ಇದ್ದು, ಇದರ ಮೇಲೂ ಜನರು ಕಲ್ಲು ತೂರಾಟ ನಡೆಸುತ್ತಿರುವಂತೆ ಕಾಣುತ್ತಿದೆ.
ವಿಜೇಂದ್ರ ಅಗರ್ವಾಲ್ ಎಂಬವರ ಎಕ್ಸ್ ಖಾತೆಯಿಂದ ಸೆಪ್ಟೆಂಬರ್ 1, 2024 ರಂದು ಈ ವೀಡಿಯೊ ಅಪ್ಲೋಡ್ ಆಗಿದ್ದು, ‘ಕರ್ನಾಟಕದ ಹಿಂದೂಗಳು ಬಿಜೆಪಿ ಸರ್ಕಾರವನ್ನು ಸೋಲಿಸಿ ಕಾಂಗ್ರೆಸ್ ಪಕ್ಷದ ಸರ್ಕಾರವನ್ನು ರಚಿಸಿದರು. ಈಗ ಕಾಂಗ್ರೆಸ್ ಸರ್ಕಾರದ ನಡೆ ಮತ್ತು ಮುಸ್ಲಿಂ ತುಷ್ಟೀಕರಣದ ಪರಮಾವಧಿಯಿಂದಾಗಿ ಪಶ್ಚಾತ್ತಾಪ ಪಡುತ್ತಿದ್ದಾರೆ.’ ಎಂದು ಬರೆದುಕೊಂಡಿದ್ದಾರೆ.
ಇದೇ ಹೇಳಿಕೆಯೊಂದಿಗೆ ಈ ವೀಡಿಯೊವನ್ನು ಅನೇಕರು ಹಂಚಿಕೊಳ್ಳುತ್ತಿದ್ದು, ಇಲ್ಲಿ, ಇಲ್ಲಿ ನೋಡಬಹುದು.
Fact Check:
ಈ ವೈರಲ್ ವೀಡಿಯೊದ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋಧಿಸಿದಾಗ ಇದು ಸುಳ್ಳು ಸುದ್ದಿ ಎಂಬುದು ಕಂಡುಬಂದಿದೆ. ಇದು ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಜನವರಿ 2024 ರಲ್ಲಿ ನಡೆದ ಘಟನೆಯಾಗಿದ್ದು, ಈ ವಿಡಿಯೋಕ್ಕೂ ಕರ್ನಾಟಕಕ್ಕು ಯಾವುದೇ ಸಂಬಂಧವಿಲ್ಲ.
ನಿಜಾಂಶವನ್ನು ತಿಳಿಯಲು ನಾವು ಗೂಗಲ್ನಲ್ಲಿ ವೈರಲ್ ವೀಡಿಯೊದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟ ನಡೆಸಿದೆವು. ಆಗ ಇದಕ್ಕೆ ಸಂಬಂಧಿಸಿದ ಹಲವಾರು ಮಾಧ್ಯಮ ವರದಿಗಳನ್ನು ನಾವು ಕಂಡುಕೊಂಡಿದ್ದೇವೆ. ಜನವರಿ 26, 2024 ರಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವೆಬ್ಸೈಟ್ನಲ್ಲಿ ಈ ಪ್ರಕರಣವು ಉಜ್ಜಯಿನಿಯ ಮಕ್ಡೋನ್ ಪ್ರದೇಶದಿಂದ ಬಂದಿದೆ ಎಂದು ವೀಡಿಯೊದೊಂದಿಗೆ ಹೇಳಲಾಗಿದೆ. ಇಲ್ಲಿ ಎರಡು ಗುಂಪುಗಳ ನಡುವೆ ದೊಡ್ಡ ಗಲಾಟೆ ನಡೆದಿದೆ.
ವಿಡಿಯೋದಲ್ಲಿ ಕೆಡವಲಾಗುತ್ತಿರುವ ಪ್ರತಿಮೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರದ್ದು. ಈ ಪ್ರದೇಶದಲ್ಲಿ ಪಾಟಿದಾರ್ ಸಮುದಾಯದ ಜನರು ಮಾಜಿ ಉಪಪ್ರಧಾನಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆಯನ್ನು ಕೆಡವಲು ಮುಂದಾದಾಗ ಇದಕ್ಕೆ ವಿರೋಧ ವ್ಯಕ್ತವಾಗಿ ಕೋಲಾಹಲ ಉಂಟಾಗಿದೆ. ಮಾತಿನ ಚಕಮಕಿ ಎಷ್ಟು ಹೆಚ್ಚಾಯಿತು ಎಂದರೆ ಎರಡೂ ಗುಂಪುಗಳು ಪರಸ್ಪರ ಕಲ್ಲು ತೂರಾಟ ನಡೆಸತೊಡಗಿದವು. ಪ್ರಿಂಟ್ ಕೂಡ ಈ ಬಗ್ಗೆ ವರದಿ ಪ್ರಕಟಿಸಿತ್ತು.
ಹಾಗೆಯೆ ಕನ್ನಡದ ಡಿಜಿಟಲ್ ಮಾಧ್ಯಮ ನಾನು ಗೌರಿ ಕೂಡ ಜನವರಿ 26, 2024 ರಂದು ‘ಅಂಬೇಡ್ಕರ್-ಪಟೇಲ್ ಪ್ರತಿಮೆ ವಿವಾದ; ದಲಿತರು-ಪಾಟೀದಾರ್ ಸಮುದಾಯಗಳ ನಡುವೆ ಘರ್ಷಣೆ’ ಎಂಬ ಶೀರ್ಷಿಕೆಯೊಂದಿಗೆ ಲೇಖನ ಪ್ರಕಟಿಸಿದೆ. ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಮತ್ತು ಡಾ.ಬಿ.ಆರ್ ಅಂಬೇಡ್ಕರ್ ಅವರ ಪ್ರತಿಮೆ ಸ್ಥಾಪಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ ಎಂದು ಇದರಲ್ಲಿ ಬರೆಯಲಾಗಿದೆ.
ವಾಸ್ತವವಾಗಿ, ಉಜ್ಜಯಿನಿ ಜಿಲ್ಲೆಯ ಮಕ್ಡೋನ್‌ನ ಮಂಡಿ ಗೇಟ್ ಮತ್ತು ಬಸ್ ನಿಲ್ದಾಣದ ಬಳಿ ಭೂಮಿ ಖಾಲಿಯಾಗಿತ್ತು. ಭೀಮ್ ಆರ್ಮಿ ಡಾ. ಅಂಬೇಡ್ಕರ್ ಅವರ ಪ್ರತಿಮೆಯನ್ನು ಇಲ್ಲಿ ಸ್ಥಾಪಿಸಲು ಬಯಸಿದ್ದರು. ಪಾಟಿದಾರ್ ಸಮುದಾಯದ ಜನರು ಸರ್ದಾರ್ ಪಟೇಲ್ ಅವರ ಪ್ರತಿಮೆಯನ್ನು ಸ್ಥಾಪಿಸಲು ಒತ್ತಾಯಿಸುತ್ತಿದ್ದರು. ಈ ವಿಷಯ ಪಂಚಾಯಿತಿಯಲ್ಲಿತ್ತು. ಆದರೆ 2024ರ ಜನವರಿ 24ರ ರಾತ್ರಿ ಯಾರೋ ಸರ್ದಾರ್ ಪಟೇಲರ ಪ್ರತಿಮೆಯನ್ನು ಅಲ್ಲಿ ಸ್ಥಾಪಿಸಿದರು.
ಈ ವಿಷಯ ತಿಳಿದ ಇತರ ಸಮುದಾಯದವರು 25 ಜನವರಿ 2024ರ ಬೆಳಗ್ಗೆ ಸ್ಥಳದಲ್ಲಿ ಜಮಾಯಿಸಿ ಟ್ರ್ಯಾಕ್ಟರ್‌ನಿಂದ ಹೊಡೆದು ವಿಗ್ರಹವನ್ನು ಕೆಡವಿದರು. ನಂತರ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಘರ್ಷಣೆಗೆ ಕಾರಣವಾಯಿತು. ಸರ್ದಾರ್ ಪಟೇಲ್ ಪ್ರತಿಮೆ ಉರುಳಿಸಿದ ಹಿನ್ನೆಲೆ ಮಾಕ್ರೋನ್ ಪಟ್ಟಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಘಟನೆಯಲ್ಲಿ ಕೆಲ ಅಂಗಡಿ ಮುಂಗಟ್ಟುಗಳು ಧ್ವಂಸಗೊಂಡಿವೆ. ಈ ಮಾಹಿತಿ ಪಡೆದ ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು ಎಂದು ವರದಿಯಲ್ಲಿದೆ.
ಹೀಗಾಗಿ ಈ ಘಟನೆಗೂ ಕರ್ನಾಟಕಕ್ಕೂ ಯಾವುದೇ ಸಂಬಂಧವಿಲ್ಲ. ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆಯನ್ನು ಧ್ವಂಸಗೊಳಿಸುತ್ತಿರುವ ವೀಡಿಯೊಕ್ಕೆ ಸುಳ್ಳು ಕೋಮು ಬಣ್ಣ ಬಳಿದು ವೈರಲ್ ಮಾಡಲಾಗುತ್ತಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.