ದೇಶಾದ್ಯಂತ ಗಣೇಶ ಚತುರ್ಥಿ ಆಚರಣೆ ಅದ್ಧೂರಿಯಾಗಿ ನಡೆಯುತ್ತಿರುವ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಒಂದು ವೈರಲ್ ಆಗುತ್ತಿದೆ. ಇದರಲ್ಲಿ ದೇವರನ್ನು ಹೊತ್ತ ಮೆರವಣಿಗೆ ಸಾಗುತ್ತಿರುವ ವೇಳೆ ಒಂದು ಮನೆಯ ಛಾವಣಿಯಿಂದ ಇಬ್ಬರು ವ್ಯಕ್ತಿಗಳು ವಸ್ತುಗಳನ್ನು ಎಸೆಯುತ್ತಿರುವುದನ್ನು ಕಾಣಬಹುದು. ಅನೇಕ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡಿದ್ದು, ಆ ವ್ಯಕ್ತಿಗಳು ಮುಸ್ಲಿಮರು ಮತ್ತು ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದಾರೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಗಣಪತಿ ಮೆರವಣಿಗೆ ಮೇಲೆ ಜಿಹಾದಿ ಮುಸಲ್ಮಾನರಿಂದ ಕಲ್ಲೆಸೆತ. ಮನೆ ಮೇಲೆ ನಿಂತು ಕಲ್ಲು ಎಸೆದು ಯುವಕರು ಎಸ್ಕೇಪ್’’ ಎಂದು ಬರೆದುಕೊಂಡಿದ್ದಾರೆ. (Archive)
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ಘಟನೆಯಲ್ಲಿ ಯಾವುದೇ ಕೋಮುಕೋನವಿಲ್ಲ. ಈ ಪ್ರಕರಣದಲ್ಲಿ ಭಾಗಿಯಾದವರೆಲ್ಲ ಹಿಂದೂಗಳು.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಪ್ರಮುಖ ಚೌಕಟ್ಟನ್ನು ಗೂಗಲ್ ಲೆನ್ಸ್ ಸಹಾಯದಿಂದ ಸರ್ಚ್ ಮಾಡಿದ್ದೇವೆ. ಈ ಸಂದರ್ಭ ಸೆಪ್ಟೆಂಬರ್ 6 ರಂದು ಕನ್ನಡಪ್ರಭ ವೆಬ್ಸೈಟ್ ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ನೊಂದಿಗೆ ಸುದ್ದಿ ಪ್ರಕಟಿಸಿರುವುದು ಕಂಡುಬಂತು.
ಇದರಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ‘‘ರಾಯಚೂರಿನ ಗಂಗಾ ನಿವಾಸ ರಸ್ತೆಯಲ್ಲಿ ಈ ಹಿಂದೆ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ನಡೆಯುವ ವೇಳೆ ಕಲ್ಲು ತೂರಾಟ ಮಾಡಿದ್ದ ಇಬ್ಬರು ಆರೋಪಿಗಳನ್ನು ಸದರ್ ಬಜಾರ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈ ಘಟನೆಯಲ್ಲಿ ಮಂಗಳವಾರ ಪೇಟೆ ನಿವಾಸಿಗಳಾದ ವಿನಯ್ ಮತ್ತು ಗಣೇಶ್ ಎಂಬುವವರಿಗೆ ಗಾಯಗಳಾಗಿದ್ದವು. ಬಂಧಿತ ಆರೋಪಿಗಳನ್ನು ಸ್ಥಳೀಯ ನಿವಾಸಿಗಳಾದ ಪ್ರಶಾಂತ್ ಮತ್ತು ಪ್ರವೀಣ್ ಎಂದು ಗುರುತಿಸಲಾಗಿದೆ. ಆರೋಪಿಗಳು ಸತ್ಯಾಂಶ ಬಾಯಿ ಬಿಟ್ಟಿದ್ದು, ಹಳೆ ದ್ವೇಷದ ಹಿನ್ನಲೆಯಲ್ಲಿ ಕಲ್ಲು ತೂರಿದ್ದಾಗಿ ಹೇಳಿಕೊಂಡಿದ್ದಾರೆ. ಕಲ್ಲು ತೂರಾಟದಲ್ಲಿ ಗಾಯಾಳುಗಳಾಗಿರುವ ವಿನಯ್ ಮತ್ತು ಗಣೇಶ್ ಜೊತೆಗೆ ಬಂಧಿತ ಸ್ಥಳೀಯ ನಿವಾಸಿಗಳಾದ ಪ್ರಶಾಂತ್ ಮತ್ತು ಪ್ರವೀಣ್ ಜಗಳ ಮಾಡಿಕೊಂಡಿದ್ದರು. ತಮ್ಮ ಏರಿಯಾ ಮೂಲಕ ಗಣೇಶ ಮೆರವಣಿಗೆ ಮಾಡಬಾರದು ಎಂದು ಜಗಳ ಮಾಡಿದ್ದರು. ಇದೇ ಕಾರಣಕ್ಕೆ ಇದೀಗ ಅವರ ಏರಿಯಾದಲ್ಲಿ ಗಣೇಶ ವಿಸರ್ಜನೆ ಮಾಡಬಾರದು ಎಂದು ಕಲ್ಲು ತೂರಿದ್ದಾಗಿ ಹೇಳಿದ್ದಾರೆ.’’
ಈ ಘಟನೆಯ ಕುರಿತು ಸೆಪ್ಟೆಂಬರ್ 1 ರಂದು ಈ ದಿನ ಪ್ರಕಟಿಸಿದ ವರದಿಯಲ್ಲಿ ಹೀಗಿದೆ: ‘‘ರಾಯಚೂರಿನಲ್ಲಿ ಗಣೇಶ ವಿಸರ್ಜನೆ ಮೆರವಣಿಗೆಯ ವೇಳೆ ಎರಡು ಗುಂಪುಗಳ ನಡುವೆ ತೀವ್ರ ಗಲಾಟೆ ನಡೆದು ಪರಿಸ್ಥಿತಿ ಉದ್ವಿಗ್ನಗೊಂಡಿತು. ವೈಯಕ್ತಿಕ ಕಾರಣಕ್ಕಾಗಿ ಬಿಜೆಪಿ ಮುಖಂಡ ಯು. ನರಸರೆಡ್ಡಿ ಹಾಗೂ ಡ್ಯಾಡಿ ವೀರೇಶ ಅವರ ಗುಂಪುಗಳ ನಡುವೆ ಜಗಳ ಉಂಟಾಗಿ ಮಾರಾಮಾರಿ ನಡೆಯಿತು. ಘರ್ಷಣೆಯ ವೇಳೆ ಖಾರದಪುಡಿ ಎರಚಿ ಕಲ್ಲು ತೂರಾಟ ನಡೆಸಲಾಗಿದ್ದು, ಪರಿಸ್ಥಿತಿ ನಿಯಂತ್ರಿಸಲು ಬಂದ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯ ಪಿಎಸ್‌ಐ ಅವರ ಕಣ್ಣಿಗೆ ದುಷ್ಕರ್ಮಿಗಳು ಖಾರದಪುಡಿ ಎರಚಿದ್ದಾರೆ. ಹೀಗಾಗಿ ಪರಿಸ್ಥಿತಿ ಕೈಮೀರಿದ ಹಿನ್ನೆಲೆಯಲ್ಲಿ ಪೊಲೀಸರು ಲಘು ಲಾಠಿ ಚಾರ್ಜ್ ನಡೆಸಿ ಜನರನ್ನು ಚದುರಿಸಿದರು ಹಾಗೂ ಡಿಜೆ ಸೆಟ್‌ನ್ನು ಜಪ್ತಿ ಮಾಡಿದರು.’’
ಇನ್ನಷ್ಟು ಖಚಿತ ಮಾಹಿತಿಗಾಗಿ ನಾವು ರಾಯಚೂರಿನ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಎಂ ಅವರನ್ನು ಸಂಪರ್ಕಿಸಿದ್ದೇವೆ. ಈ ಸಂದರ್ಭ ಅವರು, ‘‘ಇದು ಹಿಂದು ಮುಸ್ಲಿಂ ಗಲಾಟೆ ಅಲ್ಲ. ಹಳೆ ದ್ವೇಷದ ಹಿನ್ನೆಲೆ ಗಂಗಾನಿವಾಸ್ ರಸ್ತೆಯಲ್ಲಿ ಹಿಂದೂ ಯುವಕರ ಮಧ್ಯೆ ಗಲಾಟೆ ನಡೆದಿದೆ. ಗಣೇಶ ಮೂರ್ತಿಗೆ ಕಲ್ಲು ಎಸೆದಿಲ್ಲ. ಗಣೇಶ ವಿಸರ್ಜನೆ ರ್ಯಾಲಿ ಮಾಡುತ್ತಿದ್ದ ವಿನಯ್ ಹಾಗೂ ಗಣೇಶ ಎಂಬವರ ಮೇಲೆ ಕಲ್ಲು ಎಸೆಯಲಾಗಿದೆ. ಪ್ರಶಾಂತ್ ಹಾಗೂ ಪ್ರವೀಣ್ ಎಂಬವರು ಈ ಕೃತ್ಯ ಎಸಗಿದ್ದಾರೆ’’ ಎಂದು ಅವರು ನ್ಯೂಸ್ ಮೀಟರ್ಗೆ ಹೇಳಿದ್ದಾರೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಗಣೇಶ ಚತುರ್ಥಿ ಮೆರವಣಿಗೆಯ ಮೇಲೆ ಇಬ್ಬರು ವ್ಯಕ್ತಿಗಳು ಕಲ್ಲು ತೂರುತ್ತಿರುವುದನ್ನು ತೋರಿಸುವ ವೀಡಿಯೊ ಸುಳ್ಳು ಕೋಮು ನಿರೂಪಣೆಗಳೊಂದಿಗೆ ವೈರಲ್ ಆಗಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.