ಸ್ವಾಮಿ ವಿವೇಕಾನಂದರು ಸೆಪ್ಟೆಂಬರ್ 13, 1893 ರಂದು ಅಮೆರಿಕದ ಚಿಕಾಗೋದಲ್ಲಿ ಮಾಡಿದ ಭಾಷಣದ ಅಪರೂಪದ ಕ್ಲಿಪ್ ಎಂದು ಹೇಳುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ಫೇಸ್ಬುಕ್ ಬಳಕೆದಾರರೊಬ್ಬರು ಜನವರಿ 19, 2025 ರಂದು ಈ ವೀಡಿಯೊವನ್ನು ಹಂಚಿಕೊಂಡು, ‘‘ನಮ್ಮ ತಾತಂದಿರು ಕೂಡ ಪ್ರತ್ಯಕ್ಷವಾಗಿ ನೋಡದ ಸಾಧ್ಯತೆಗಳಿರುವ ಸ್ವಾಮಿ ವಿವೇಕಾನಂದರು 13-9-1893 ರಂದು ಅಮೇರಿಕಾದ ಚಿಕಾಗೋದ ಪಾರ್ಲಿಮೆಂಟ್ ನಲ್ಲಿ ಮಾಡಿದ ಭಾಷಣದ ವೀಡಿಯೋ ಲಭ್ಯ. ಇದನ್ನು ಭಾರತೀಯರೆಲ್ಲರೂ ವೀಕ್ಷಿಸಲು ಎಲ್ಲಾ ಗುಂಪುಗಳಲ್ಲಿ ಹಂಚಿ. ಧನ್ಯವಾದಗಳು’’ ಎಂದು ಬರೆದುಕೊಂಡಿದ್ದಾರೆ.
ಹಾಗೆಯೆ ಎಕ್ಸ್ ಬಳಕೆದಾರರೊಬ್ಬರು ಇದೇ ವೀಡಿಯೊವನ್ನು ಅಪ್ಲೋಡ್ ಮಾಡಿಕೊಂಡು, ‘‘ಸ್ವಾಮಿ ವಿವೇಕಾನಂದರು 13-9-1893 ರಂದು ಅಮೇರಿಕಾದ ಚಿಕಾಗೋದ ಪಾರ್ಲಿಮೆಂಟ್ ನಲ್ಲಿ ಮಾಡಿದ ಭಾಷಣದ ವೀಡಿಯೋ ತುಣುಕು’’ ಎಂದು ಹೇಳಿಕೊಂಡಿದ್ದಾರೆ.
ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ವೈರಲ್ ಆದ ವಿಡಿಯೋ ಸ್ವಾಮಿ ವಿವೇಕಾನಂದರು 1893ರ ಸೆಪ್ಟೆಂಬರ್ 13ರಂದು ಅಮೆರಿಕದ ಚಿಕಾಗೋದಲ್ಲಿ ನೀಡಿದ ಭಾಷಣದ ಕ್ಲಿಪ್ಪಿಂಗ್ ಅಲ್ಲ. ಈ ವಿಡಿಯೋ ಯೂಟ್ಯೂಬ್‌ನಲ್ಲಿ ‘ಸ್ವಾಮಿ ವಿವೇಕಾನಂದರ ಆತ್ಮಕಥೆ’ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡ ಸಿನಿಮಾದ ಕ್ಲಿಪ್ ಆಗಿದೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಆಗ ನಮಗೆ, ಸೆಪ್ಟಂಬರ್ 28, 2018 ರಂದು ‘ಶ್ರೀ ರಾಮಕೃಷ್ಣ ಮಠ ಚೆನ್ನೈ’ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ‘‘स्वामी विवेकानंद की आत्मकथा | Full Movie | हिंदी | उन्ही के शब्दों में | Vivekananda Ki Atmakatha’’ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿರುವ ವೀಡಿಯೊದಲ್ಲಿ ಈ ವೈರಲ್ ಕ್ಲಿಪ್ ಕಾಣಿಸಿಕೊಂಡಿತು. ಎರಡು ಗಂಟೆ ಏಳು ನಿಮಿಷವಿರುವ ಈ ವೀಡಿಯೊದ 13:37 ಸೆಕೆಂಡ್‌ಗಳಿಂದ 16:00 ನಿಮಿಷದವರೆಗೆ ನಾವು ವೈರಲ್ ಆದ ವೀಡಿಯೊನ್ನು ನೋಡಬಹುದು. ಈ ಮೂಲಕ ವೈರಲ್ ಆದ ವೀಡಿಯೊ ಸ್ವಾಮಿ ವಿವೇಕಾನಂದರ ಜೀವನಗಾತೆಯ ಸಿನಿಮಾದ ದೃಶ್ಯಾವಳಿಗಳಾಗಿವೆ ಎಂಬುದು ನಮಗೆ ಖಚಿತವಾಗಿದೆ.
ಇದರಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ಇದು ಸ್ವಾಮಿ ವಿವೇಕಾನಂದರ ಆತ್ಮಕಥೆ ಮತ್ತು ಶ್ರೀ ರಾಮಕೃಷ್ಣ ಮಠ, ಚೆನ್ನೈ ಈ ಚಿತ್ರದ ನಿರ್ಮಾಪಕರಾಗಿದ್ದಾರೆ. ಗೂಗಲ್ನಲ್ಲಿ ಈ ಕುರಿತು ಇನ್ನಷ್ಟು ಮಾಹಿತಿ ಹುಡುಕಿದಾಗ, ಈ ಚಲನಚಿತ್ರವು ಹಿಂದಿ, ಇಂಗ್ಲಿಷ್, ಕನ್ನಡ, ತಮಿಳು ಸೇರಿದಂತೆ 4 ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಯಿತು. ರಾಮಕೃಷ್ಣ ಮಠ, ಚೆನ್ನೈ ನಿರ್ಮಿಸಿದ ಈ ಸಿನಿಮಾ ಥಿಯೇಟರ್ನಲ್ಲಿ ಬಿಡುಗಡೆ ಆಗಿಲ್ಲ ಬದಲಾಗಿ ಆನ್‌ಲೈನ್‌ನಲ್ಲಿ ಯೂಟ್ಯೂಬ್ ಮೂಲಕ ಬಿಡುಗಡೆ ಮಾಡಲಾಯಿತು. ಈ ಸಿನಿಮಾದ ಡಿವಿಡಿ ಬಿಡುಗಡೆ ಕೂಡ ಆಗಿದೆ. ಸ್ವಾಮಿ ವಿವೇಕಾನಂದ ಅವರ ಪಾತ್ರವನ್ನು ಬಾಲಾಜಿ ಮನೋಹರ್ ಎಂಬವರು ಮಾಡಿದ್ದಾರೆ.
ಹೀಗಾಗಿ ಈ ಮಾಹಿತಿಯ ಆಧಾರದ ಮೇಲೆ, 1893 ರಲ್ಲಿ ಚಿಕಾಗೋದಲ್ಲಿ ನಡೆದ ವಿಶ್ವ ಧರ್ಮ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರು ಮಾಡಿದ ಪ್ರಸಿದ್ಧ ಭಾಷಣದ ಅಪರೂಪದ ಕ್ಲಿಪ್ ಎಂದು ಹೇಳಿಕೊಳ್ಳುವ ವೀಡಿಯೊ ಸುಳ್ಳು, ಇದು ‘ಸ್ವಾಮಿ ವಿವೇಕಾನಂದರ ಆತ್ಮಕಥೆ’ ಸಿನಿಮಾದ ದೃಶ್ಯ ಎಂದು ನಾವು ಖಚಿತವಾಗಿ ಹೇಳುತ್ತೇವೆ.