ಭಾರತ ಸರ್ಕಾರ ಇತ್ತೀಚೆಗೆ ‘ಸ್ವಚ್ಛ ಸರ್ವೇಕ್ಷಣ್ 2024-25’ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಇಂದೋರ್ ಮತ್ತೊಮ್ಮೆ ಅತ್ಯಂತ ಸ್ವಚ್ಛ ನಗರ ಎಂಬ ಬಿರುದನ್ನು ಪಡೆದುಕೊಂಡಿದೆ. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಒಂದು ವೈರಲ್ ಆಗುತ್ತಿದೆ. ಇದರಲ್ಲಿ ರಸ್ತೆಬದಿಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿರುವ ವ್ಯಕ್ತಿಯ ಮೇಲೆ ಟ್ಯಾಂಕರ್ ನೀರು ಸ್ಪ್ರೇ ಮಾಡುವುದು ಕಾಣಬಹುದು. ಇದು ಇಂಧೋರ್ನಲ್ಲಿ ನಡೆದ ಘಟನೆ ಎಂಬ ಹೇಳಿಕೆಯೊಂದಿಗೆ ಅನೇಕರು ಈ ವೀಡಿಯೊವನ್ನು ಹಂಚಿಕೊಳ್ಳುತ್ತಿದ್ದಾರೆ.
ಫೇಸ್‌ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಇಂದೋರ್- ಶುದ್ಧ ಸಿಟಿ ಎಂದು ಬಿರುದು ಪಡೆದವರಿಗೆ ಗಲೀಜು ಮಾಡುವವರನ್ನು ಹೇಗೆ treat ಮಾಡಬೇಕು ಎಂದು ತಿಳಿದಿದೆ ಅಲ್ಲವೇ’’ ಎಂದು ಬರೆದುಕೊಂಡಿದ್ದಾರೆ. (Archive)
ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ವೀಡಿಯೊಗೂ ಭಾರತಕ್ಕೂ ಯಾವುದೇ ಸಂಬಂಧವಿಲ್ಲ. ವಾಸ್ತವವಾಗಿ ಈ ಘಟನೆ ಪೆರುವಿನ ರಾಜಧಾನಿ ಲಿಮಾದಲ್ಲಿ ನಡೆದಿದೆ.
ನಿಜಾಂಶವನ್ನು ತಿಳಿಯಲು ನಾವು ವೀಡಿಯೊದ ಪ್ರಮುಖ ಕೀ ಫ್ರೇಮ್‌ಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ಸರ್ಚ್ ಮಾಡಿದ್ದೇವೆ. ಈ ಸಮಯದಲ್ಲಿ, ಮಾರ್ಚ್ 16, 2025 ರಂದು ದಕ್ಷಿಣ ಅಮೆರಿಕಾದ ದೇಶವಾದ ಪೆರುವಿನ ಫೇಸ್‌ಬುಕ್ ಪುಟದಲ್ಲಿ ಅಪ್‌ಲೋಡ್ ಮಾಡಲಾದ ಅದೇ ವೈರಲ್ ವೀಡಿಯೊವನ್ನು ನಾವು ಕಂಡುಕೊಂಡಿದ್ದೇವೆ. ವೀಡಿಯೊದ ಜೊತೆಗಿನ ಶೀರ್ಷಿಕೆಯು ಅದು ಪೆರುವಿನ ಲಾ ವಿಕ್ಟೋರಿಯಾದಿಂದ ಬಂದಿದೆ ಎಂದು ಹೇಳಿದೆ.
ಇದಾದ ನಂತರ, ನಾವು ಫೇಸ್‌ಬುಕ್ ಪೋಸ್ಟ್‌ನಲ್ಲಿರುವ ಸ್ಪ್ಯಾನಿಷ್ ಶೀರ್ಷಿಕೆಯ ಸಹಾಯದಿಂದ ಗೂಗಲ್‌ನಲ್ಲಿ ಹುಡುಕಾಟ ನಡೆಸಿದ್ದೇವೆ. ಈ ಸಮಯದಲ್ಲಿ, ಮಾರ್ಚ್ 15, 2025 ರಂದು ಲಾ ರಿಪಬ್ಲಿಕಾಎಂಬ ಸುದ್ದಿ ವೆಬ್‌ಸೈಟ್‌ನಲ್ಲಿ ಪ್ರಕಟವಾದ ವರದಿಯನ್ನು ನಾವು ಕಂಡುಕೊಂಡೆವು. ಅದರಲ್ಲಿ ವೈರಲ್ ವೀಡಿಯೊದ ದೃಶ್ಯಗಳು ಇದ್ದವು. ‘‘ಪೆರುವಿನಲ್ಲಿ, ಒಬ್ಬ ವ್ಯಕ್ತಿ ರಸ್ತೆಬದಿಯಲ್ಲಿ ಮೂತ್ರ ವಿಸರ್ಜಿಸುತ್ತಿದ್ದಾಗ, ನೀರಿನ ಟ್ಯಾಂಕರ್ ಹಾದುಹೋಗುತ್ತಿತ್ತು. ಟ್ಯಾಂಕರ್‌ನಲ್ಲಿ ಕುಳಿತಿದ್ದ ಜನರು ಈ ವ್ಯಕ್ತಿಯನ್ನು ನೋಡಿದಾಗ, ಅವರು ಪೈಪ್‌ನಿಂದ ಅವನ ಮೇಲೆ ನೀರು ಸುರಿಯಲು ಪ್ರಾರಂಭಿಸಿದರು. ಇದಾದ ನಂತರ, ಆ ವ್ಯಕ್ತಿ ಅಲ್ಲಿಂದ ಓಡಲು ಪ್ರಾರಂಭಿಸಿದರು, ಆದರೆ ಟ್ಯಾಂಕರ್‌ನಲ್ಲಿದ್ದ ಜನರು ನೀರು ಸುರಿಯುವುದನ್ನು ನಿಲ್ಲಿಸಲಿಲ್ಲ ಮತ್ತು ಆ ವ್ಯಕ್ತಿಯನ್ನು ಸಂಪೂರ್ಣವಾಗಿ ನೆನೆಸಿದರು’’ ಎಂಬ ಮಾಹಿತಿ ಇದರಲ್ಲಿದೆ.
ವೀಡಿಯೊದಲ್ಲಿ ರಸ್ತೆಯ ಇನ್ನೊಂದು ಬದಿಯಲ್ಲಿರುವ ಕಟ್ಟಡದ ಮೇಲೆ ‘ಸಿನಿಮಾರ್ಕ್' ಎಂದು ಬರೆಯಲಾಗಿದೆ. ಈ ಕುರಿತು ಹುಡುಕಿದಾಗ ಸಿನಿಮಾರ್ಕ್ ಒಂದು ಮಲ್ಟಿಪ್ಲೆಕ್ಸ್ ಆಗಿದೆ. ನಾವು ಗೂಗಲ್ನಕ್ಷೆಗಳಲ್ಲಿ ಲಿಮಾದಲ್ಲಿ ಈ ಸಿನಿಮಾರ್ಕ್ ಸಿನಿಮಾ ಥಿಯೇಟರ್ ಅನ್ನು ಕಂಡುಕೊಂಡೆವು. ಅದರ ಸ್ಟ್ರೀಟ್ ವ್ಯೂವ್ ನೋಡಿದರೆ, ವೈರಲ್ ವೀಡಿಯೊ ಈ ಸ್ಥಳದ್ದೇ ಎಂಬುದು ಸ್ಪಷ್ಟವಾಗುತ್ತದೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ರಸ್ತೆಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿರುವ ವ್ಯಕ್ತಿಯ ವೀಡಿಯೊದ ಬಗ್ಗೆ ಮಾಡಲಾಗಿರುವ ಹೇಳಿಕೆ ಸುಳ್ಳು ಎಂದು ನಾವು ಖಚಿತವಾಗಿ ಹೇಳುತ್ತೇವೆ. ಈ ವೀಡಿಯೊಗೆ ಭಾರತಕ್ಕೂ ಯಾವುದೇ ಸಂಬಂಧವಿಲ್ಲ. ವಾಸ್ತವವಾಗಿ ಈ ಘಟನೆ ಪೆರುವಿನ ರಾಜಧಾನಿ ಲಿಮಾದಲ್ಲಿ ನಡೆದಿದೆ.