ರೈಲಿನಲ್ಲಿ ರೈಲ್ವೇ ಉದ್ಯೋಗಿಯೊಬ್ಬರು ಲಂಚ ಸ್ವೀಕರಿಸಿ ಬಾಲಕಿಯೊಬ್ಬಳೊಂದಿಗೆ ಕೆಟ್ಟದಾಗಿ ವರ್ತಿಸುತ್ತಿರುವ ವೀಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲ್ಪಡುತ್ತಿದೆ. ಈ ವೀಡಿಯೊದಲ್ಲಿ ಟಿಕೆಟ್ ಕಲೆಕ್ಟರ್‌ನಂತೆ ಕಾಣುವ ವ್ಯಕ್ತಿಯೊಬ್ಬರು ರೈಲಿನಲ್ಲಿ ಬಾಲಕಿಯೊಬ್ಬಳಿಂದ ಹಣ ಪಡೆದು ಆಕೆಯ ಕೈ ಹಿಡಿದುಕೊಂಡಿರುವುದು ಕಾಣಬಹುದು.
ಫೇಸ್ಬುಕ್ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡು, ‘‘ಟಿಕೆಟ್ ಇಲ್ಲದ ಹುಡುಗಿಯ ಕೈ ಹಿಡಿದ ರೈಲ್ವೇ ಟಿಸಿ’’ ಎಂದು ಬರೆದುಕೊಂಡಿದ್ದಾರೆ. (Archive)
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು ಯಾವುದೇ ನೈಜ ಘಟನೆಯಲ್ಲ ಬದಲಾಗಿ ಇದು ಸ್ಕ್ರಿಪ್ಟ್ ಮಾಡಲಾದ ವೀಡಿಯೊ ಆಗಿದೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಪ್ರಮುಖ ಚೌಕಟ್ಟುಗಳನ್ನು ಗೂಗಲ್ ಲೆನ್ಸ್ನಲ್ಲಿ ಹುಡುಕಿದಾಗ, ಸೆಪ್ಟೆಂಬರ್ 21 ರಂದು ಪೋಸ್ಟ್ ರಾಜ್ ಠಾಕೂರ್ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಇದೇ ವೈರಲ್ ವೀಡಿಯೊವನ್ನು ಕಂಡುಕೊಂಡಿದ್ದೇವೆ. ವೀಡಿಯೊದೊಂದಿಗಿನ ವಿವರಣೆಯು ಇದನ್ನು ಸ್ಕ್ರಿಪ್ಟ್ ಮಾಡಲಾಗಿದೆ ಎಂದು ಹೇಳುತ್ತದೆ.
ಪೋಸ್ಟ್‌ನ ಶೀರ್ಷಿಕೆಯು ಈ ವೀಡಿಯೊವನ್ನು ಮನರಂಜನೆ ಮತ್ತು ಜಾಗೃತಿ ಮೂಡಿಸಲು ಸ್ಕ್ರಿಪ್ಟ್ ಮಾಡಲಾಗಿದೆ ಮತ್ತು ರಚಿಸಲಾಗಿದೆ ಎಂದು ಹೇಳುತ್ತದೆ. ಈ ಇನ್‌ಸ್ಟಾಗ್ರಾಮ್ ಖಾತೆಯ ಬಯೋ ಪ್ರಕಾರ, ರಾಜ್ ಠಾಕೂರ್, ಅವರು ದೆಹಲಿಯ ವೀಡಿಯೊ ಸೃಷ್ಟಿಕರ್ತ.
ರಾಜ್ ಠಾಕೂರ್ ಅವರ ಯೂಟ್ಯೂಬ್ ಚಾನೆಲ್ನಲ್ಲಿ ಕೂಡ ನಾವು ಇದೇ ವೀಡಿಯೊವನ್ನು ಕಂಡುಕೊಂಡಿದ್ದೇವೆ. ಅಲ್ಲಿ ಕೂಡ ವೀಡಿಯೊವನ್ನು ಸ್ಕ್ರಿಪ್ಟ್ ಮಾಡಲಾಗಿದೆ ಎಂದು ಹೇಳುವ ವಿವರಣೆಯೊಂದಿಗೆ ಅಪ್‌ಲೋಡ್ ಮಾಡಲಾಗಿದೆ. ಚಾನೆಲ್ ಬಯೋದಲ್ಲಿ ಕೂಡ ಅವರು ವಿಷಯ ರಚನೆಕಾರರು ಎಂದು ಉಲ್ಲೇಖಿಸಲಾಗಿದೆ, ಇದು ವೀಡಿಯೊ ನಿಜವಲ್ಲ ಎಂದು ಮತ್ತಷ್ಟು ದೃಢಪಡಿಸುತ್ತದೆ.
ಹೆಚ್ಚುವರಿಯಾಗಿ, ವೈರಲ್ ವೀಡಿಯೊದಲ್ಲಿರುವ ಅದೇ ಹುಡುಗ ಹಾಗೂ ಹುಡುಗಿ ಅದೇಖಾತೆಯಲ್ಲಿನ ಇತರ ವೀಡಿಯೊಗಳಲ್ಲಿ ನಟಿಸುವುದನ್ನು ಕಾಣಬಹುದು.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ರೈಲ್ವೆ ಉದ್ಯೋಗಿಯೊಬ್ಬರು ಹುಡುಗಿಯಿಂದ ಲಂಚ ಪಡೆದು ಅಗೌರವದಿಂದ ಆಕೆಯ ಕೈ ಹಿಡಿದಿರುವ ಈ ವೈರಲ್ ವೀಡಿಯೊ ಸ್ಕ್ರಿಪ್ಟ್ ಮಾಡಲಾಗಿದ್ದು, ಇದು ನಿಜವಾದ ಘಟನೆಯಲ್ಲ ಎಂದು ನಾವು ಖಚಿತವಾಗಿ ಹೇಳುತ್ತೇವೆ.