Fact Check: ಮಹಾ ಕುಂಭದಲ್ಲಿ ಸಾಧುವಿನ ವೇಷ ಧರಿಸಿದ್ದ ಭಯೋತ್ಪಾದಕ ಸಿಕ್ಕಿಬಿದ್ದನೇ?, ನಿಜಾಂಶ ಇಲ್ಲಿದೆ
ಕುಂಭಮೇಳಕ್ಕೆ ಸಾಧುವಿನ ವೇಷದಲ್ಲಿ ಬಂದಿದ್ದ ಅಯೂಬ್ ಖಾನ್ ಎಂಬ ಭಯೋತ್ಪಾದಕನನ್ನು ಬಂಧಿಸಲಾಗಿದೆ ಎಂಬ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದರ ಜೊತೆಗೆ ಫೋಟೋವನ್ನು ಕೂಡ ಹಂಚಿಕೊಳ್ಳುತ್ತಿದೆ.
By Vinay Bhat Published on 22 Jan 2025 4:07 PM ISTClaim: ಕುಂಭಮೇಳದಲ್ಲಿ ಸಾಧು ವೇಷದಲ್ಲಿ ಆಯೂಬ್ ಖಾನ್ ಹೆಸರಿನ ಉಗ್ರ ಬಂದು ಸಾಧುಗಳೊಂದಿಗೆ ಬೆರೆತು ದುಷ್ಕೃತ್ಯ ನಡೆಸಲು ಸಂಚು ಮಾಡಿದ್ದ.
Fact: ಆಯೂಬ್ ಮಾದಕ ವ್ಯಸನಿ ಹಾಗೂ ಬುದ್ಧಿಮಾಂದ್ಯ. ಯಾವುದೇ ಕ್ರಿಮಿನಲ್ ದಾಖಲೆ ಹೊಂದಿಲ್ಲ. ಹಾಗೆಯೆ ಈ ಫೋಟೋವನ್ನು ಎಐಯಿಂದ ರಚಿಸಲಾಗಿದೆ.
ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ವಿಶ್ವದ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮ ಮಹಾಕುಂಭ ಮೇಳದಲ್ಲಿ ಪ್ರತಿನಿತ್ಯ ಲಕ್ಷಗಟ್ಟಲೆ ಜನರು ಶ್ರದ್ಧಾಭಕ್ತಿಯಿಂದ ಮುಳುಗಿದ್ದಾರೆ. ನಿನ್ನೆ (ಜ. 21) 8.81 ಕೋಟಿಗೂ ಹೆಚ್ಚು ಭಕ್ತರು ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. 45 ದಿನಗಳ ಕಾಲ ನಡೆಯುವ ಈ ಮಹಾ ಕುಂಭಮೇಳದಲ್ಲಿ ಭದ್ರತೆಗೂ ವಿಶೇಷ ಕಾಳಜಿ ವಹಿಸಲಾಗುತ್ತಿದೆ. ಆದರೆ, ಈ ನಡುವೆ ಕುಂಭಮೇಳಕ್ಕೆ ಸಾಧುವಿನ ವೇಷದಲ್ಲಿ ಬಂದಿದ್ದ ಅಯೂಬ್ ಖಾನ್ ಎಂಬ ಭಯೋತ್ಪಾದಕನನ್ನು ಬಂಧಿಸಲಾಗಿದೆ ಎಂಬ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದರ ಜೊತೆಗೆ ಫೋಟೋವನ್ನು ಕೂಡ ಹಂಚಿಕೊಳ್ಳುತ್ತಿದ್ದು, ಇಬ್ಬರು ಪೊಲೀಸರು ನದಿಯ ದಡದಿಂದ ಸಾಧು ಒಬ್ಬರನ್ನು ಬಂಧಿಸಿ ಕರೆದೊಯ್ಯುತ್ತಿರುವುದು ನೋಡಬಹುದು.
ಫೇಸ್ಬುಕ್ ಬಳಕೆದಾರರೊಬ್ಬರು 21 ಜನವರಿ, 2025 ರಂದು ಈ ಫೋಟೋವನ್ನು ಹಂಚಿಕೊಂಡು, ‘‘ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಸಾಧು ವೇಷದಲ್ಲಿ - ಆಯೂಬ್ ಖಾನ್ ಎನ್ನುವ ಹೆಸರಿನ ಒಬ್ಬ ಉಗ್ರವಾದಿ ಬಂದು. ನಮ್ಮ ಸಾಧುಗಳೊಂದಿಗೆ ಬೆರೆತು. ಅತಿದೊಡ್ಡ ದುಷ್ಕೃತ್ಯ ನಡೆಸಲು ಸಂಚು ಮಾಡಿದ್ದನು. ದೈವ ಕೃಪೆಯಿಂದ ನಮ್ಮ ಸಾದೂಗಳು ಆ ಉಗ್ರವಾದಿಯ ನಡವಡಿಕೆಗಳನ್ನು ಗಮನಿಸಿ ಪೊಲೀಸ್ ನವರಿಗೆ ಹಿಡಿದು ಕೊಟ್ಟರು. ನಮ್ಮ ನಾಡಿನ ಅನ್ನ ತಿಂದು. ನಮ್ಮ ನಾಡಿನಲ್ಲೇ ಬಾಳಿ ಬದುಕಿ. ಕೊನೆಯಲ್ಲಿ ನಮಗೂ ನಮ್ಮ ಸಹೋದರ ಸಹೋದರಿಯರಿಗೂ ಹಾಗೂ ನಮ್ಮ ಧರ್ಮಕ್ಕೂ ಬೆಂಕಿಯಿಟ್ಟು. ಸಂತೋಷ ಪಡುವ ಈ ತರಹದ ದೇಶ ದ್ರೋಹಿಗಳನ್ನು ಗುಂಡಿಟ್ಟು ಕೊಲ್ಲ ಬೇಕಾದ ಕಾನೂನು ಬರಲೇಬೇಕು. ಆ ತರಹದ ಕಾನೂನು ಬರುವ ತನಕ ಈ ರೀತಿಯ ಚಿತ್ರಹಿಂಸೆ ಹಿಂದೂಗಳಿಗೆ ತಪ್ಪಿದ್ದಲ್ಲ’’ ಎಂದು ಬರೆದುಕೊಂಡಿದ್ದಾರೆ.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆ ಮತ್ತು ಫೋಟೋದೊಂದಿಗೆ ಇದನ್ನು ಹಂಚಿಕೊಳ್ಳಲಾಗುತ್ತಿದೆ ಎಂಬುದು ಕಂಡುಬಂದಿದೆ. ಅಯೂಬ್ ಎಂಬವರು ಕುಂಭಮೇಳದಲ್ಲಿ ಸಿಕ್ಕಿಬಿದ್ದಿರುವುದು ನಿಜ. ಆದರೆ ಆತ ಮಾದಕ ವ್ಯಸನಿ ಹಾಗೂ ಬುದ್ಧಿಮಾಂದ್ಯ. ಜೊತೆಗೆ ಯಾವುದೇ ಕ್ರಿಮಿನಲ್ ದಾಖಲೆಯನ್ನು ಹೊಂದಿಲ್ಲ. ಹಾಗೆಯೆ ಈ ಫೋಟೋವನ್ನು ಎಐಯಿಂದ ರಚಿಸಲಾಗಿದೆ.
ನಿಜಾಂಶವನ್ನು ತಿಳಿಯಲು ನಾವು ಮೊದಲಿಗೆ ಗೂಗಲ್ನಲ್ಲಿ ‘ಆಯೂಬ್ ಖಾನ್-ಮಹಾಕುಂಭ’ ಎಂಬ ಕೀವರ್ಡ್ನೊಂದಿಗೆ ಸರ್ಚ್ ಮಾಡಿದ್ದೇವೆ. ಆಗ ಲೈವ್ ಹಿಂದೂಸ್ಥಾನ್ ಜನವರಿ 15, 2025 ರಂದು ‘‘ಕುಂಭಮೇಳದ ನರಸಿಂಹಾನಂದ ಆಶ್ರಮದ ಹೊರಗೆ ಸಿಕ್ಕಿಬಿದ್ದ ಅಯೂಬ್’’ ಎಂಬ ಶೀರ್ಷಿಕೆಯೊಂದಿಗೆ ಸುದ್ದಿ ಪ್ರಕಟಿಸಿರುವುದು ಸಿಕ್ಕಿದೆ.
ಇದರಲ್ಲಿರುವ ಮಾಹಿತಿಯ ಪ್ರಕಾರ, ‘‘ಕುಂಭಮೇಳದ ನರಸಿಂಹಾನಂದ ಆಶ್ರಮದ ಹೊರಗೆ ಸಿಕ್ಕಿಬಿದ್ದ ಅಯೂಬ್, ಲುಹಾರಿ ದರ್ವಾಜಾ ಅಲಿಗಂಜ್ ಮೊಹಲ್ಲಾದವನು ಎಂದು ತಿಳಿದುಬಂದಿದೆ. ಮಾಹಿತಿ ಬಂದ ತಕ್ಷಣ ಅಲಿಗಂಜ್ ಪೊಲೀಸರು ರಾತ್ರಿಯೇ ಆತನ ಮನೆಗೆ ತಲುಪಿದ್ದಾರೆ. ಮನೆಯಲ್ಲಿ ತಂಗಿ ಮತ್ತು ಚಿಕ್ಕಪ್ಪ ಇದ್ದರು. ಅವರಿಂದ ಮಾಹಿತಿ ಪಡೆದ ನಂತರ ಅಯೂಬ್ ಮಾದಕ ವ್ಯಸನಿ ಹಾಗೂ ಬುದ್ಧಿಮಾಂದ್ಯನಾಗಿದ್ದು, ಆತನ ತಂದೆ ಮತ್ತು ಸಹೋದರ ಜೈಪುರದಲ್ಲಿ ನೆಲೆಸಿರುವುದು ಬೆಳಕಿಗೆ ಬಂದಿದೆ. ಆತನಿಗೆ ಯಾವುದೇ ಕ್ರಿಮಿನಲ್ ದಾಖಲೆಯೂ ಇಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ’’ ಎಂದು ಮಾಹಿತಿ ಇದರಲ್ಲಿದೆ.
ಹಾಗೆಯೆ ಈಟಿವಿ ಭಾರತ್ ಜನವರಿ 14, 2025 ರಂದು ಮಾಡಿರುವ ವರದಿಯ ಪ್ರಕಾರ, ‘‘ಕುಂಭಮೇಳದಲ್ಲಿ ದಾಸ್ನಾ ದೇವಾಲಯದ ಮಹಂತ್ ಯತಿ ನರಸಿಂಹಾನಂದ ಮಹಾರಾಜ್ ಆಶ್ರಮವಿದೆ. ಮಂಗಳವಾರ ಆಶ್ರಮದ ಹೊರಗಿನಿಂದ ಅಯೂಬ್ ಸಿಕ್ಕಿಬಿದ್ದಿದ್ದಾನೆ. ವಿಚಾರಣೆ ವೇಳೆ ಅಯೂಬ್ ತನ್ನ ಹೆಸರನ್ನು ಆಯುಷ್ ಎಂದು ಬಹಿರಂಗಪಡಿಸಿದ್ದ. ಅನುಮಾನದ ಮೇಲೆ ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಆತನ ಹೆಸರನ್ನು ಅಯೂಬ್ ಎಂದು ಬಹಿರಂಗಪಡಿಸಿದ್ದಾನೆ. ಯುವಕನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ಅಯೂಬ್ ಆಯುಷ್ ನಂತೆ ನಟಿಸಿ ಆಶ್ರಮ ಪ್ರವೇಶಿಸುತ್ತಿದ್ದ. ಯುವಕನ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಯುವಕ ಮೊಹಲ್ಲಾ ಲುಹಾರಿ ದರ್ವಾಜಾ ಪೊಲೀಸ್ ಠಾಣೆಯ ಅಲಿಗಂಜ್ ನಿವಾಸಿ ಶಾಕಿರ್ ಅವರ ಪುತ್ರ ಅಯೂಬ್ ಎಂದು ತಿಳಿದುಬಂದಿದೆ.’’ ಎಂಬ ಮಾಹಿತಿ ಇದರಲ್ಲಿದೆ.
ನವಭಾರತ್ ಟೈಮ್ಸ್ ಕೂಡ ಜನವರು 15, 2025 ರಂದು ಈ ಕುರಿತು ವರದಿ ಮಾಡಿರುವುದನ್ನು ಇಲ್ಲಿ ಓದಬಹುದು.
ಎಐಯಿಂದ ರಚಿಸಿದ ಫೋಟೋ:
ಈಟಿವಿ ಭಾರತ್ ಹಾಗೂ ನವಭಾರತ್ ಟೈಮ್ಸ್ ಪ್ರಕಟಿಸಿರುವ ವರದಿಯಲ್ಲಿ ಪೊಲೀಸರು ಆಯೂಬ್ನನ್ನು ಬಂಧಿಸಿರುವ ಫೋಟೋ ಇದೆ. ಆದರೆ, ವೈರಲ್ ಆಗುತ್ತಿರುವ ಪೋಸ್ಟ್ನಲ್ಲಿ ಬೇರೆಯೇ ಫೋಟೋ ಇದೆ. ಹೀಗಾಗಿ ಈ ಕುರಿತು ತನಿಖೆ ನಡೆಸಿದಾಗ ಇದು ಎಐ ಯಿಂದ ರಚಿತವಾದ ಫೋಟೋ ಎಂಬುದು ಕಂಡುಬಂದಿದೆ.
ವೈರಲ್ ಚಿತ್ರವನ್ನು ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಈ ಚಿತ್ರವು ಗೂಗಲ್‌ನಲ್ಲಿಯೂ ಕಂಡುಬಂದಿದೆ ಮತ್ತು ಇದಕ್ಕೆ ಸಂಬಂಧಿಸಿದ ಹಲವಾರು ಫೋಟೋಗಳು ಕಾಣಿಸಿದವು. ಆದರೆ, ಇದೇ ರೀತಿಯ ಫೋಟೋದಲ್ಲಿ ಪೊಲೀಸ್ ಮತ್ತು ಸಾಧು ಚಿತ್ರ ಬದಲಾಗುತ್ತಲೇ ಇತ್ತು. ಹೀಗಾಗಿ ನಾವು AI ಫೋಟೋಗಳನ್ನು ಗುರಿತಿಸಿರುವ hivemoderation ವೆಬ್ಸೈಟ್ನಲ್ಲಿ ವೈರಲ್ ಚಿತ್ರವನ್ನು ಪರಿಶೀಲಿಸಿದಾಗ ಶೇ. 92.7 ರಷ್ಟು AIಯಿಂದ ರಚಿತವಾಗಿದೆ ಎಂದು ತಿಳಿಸಿದೆ. ಹಾಗೆಯೆ WasItAI ನಲ್ಲಿ ನೋಡಿದಾಗ ಇದು ಕೂಡ ಈ ಫೋಟೋ ಎಐ ಯಿಂದ ಮಾಡಲಾಗಿದೆ ಎಂದು ಹೇಳಿದೆ.ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ ಮಹಾಕುಂಭದಲ್ಲಿ ಸಾಧುವಿನ ವೇಷದಲ್ಲಿ ಬಂದಿದ್ದ ಅಯೂಬ್ ಖಾನ್ ಎಂಬ ಭಯೋತ್ಪಾದಕನನ್ನು ಬಂಧಿಸಿದ ಆರೋಪ ಸಂಪೂರ್ಣ ಸುಳ್ಳಾಗಿದೆ. ಆತ ಮಾದಕ ವ್ಯಸನಿ ಹಾಗೂ ಬುದ್ಧಿಮಾಂದ್ಯನಾಗಿದ್ದು, ಯಾವುದೇ ಕ್ರಿಮಿನಲ್ ದಾಖಲೆಯನ್ನು ಹೊಂದಿಲ್ಲ. ಹಾಗೆಯೆ ಈ ಫೋಟೋವನ್ನು ಎಐಯಿಂದ ರಚಿಸಲಾಗಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.