Fact Check: ರಾಂಪುರದ ರೈಲ್ವೆ ಹಳಿ ಮೇಲೆ ಕಬ್ಬಿಣದ ಕಂಬ ಇಟ್ಟಿರುವ ಘಟನೆಗೆ ಕೋಮು ಬಣ್ಣ, ನಿಜಾಂಶ ಇಲ್ಲಿದೆ
ಉತ್ತರ ಪ್ರದೇಶದ ರಾಂಪುರದಲ್ಲಿ ರೈಲ್ವೇ ಹಳಿ ಮೇಲೆ ಕಬ್ಬಿಣದ ಕಂಬ ಇಟ್ಟಿರುವ ಫೋಟೋ ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿದ್ದು, ಇದಕ್ಕೆ ಕೋಮು ಬಣ್ಣ ಬಳಿಯಲಾಗಿದೆ.
By Vinay Bhat Published on 24 Sep 2024 4:30 AM GMTClaim: ರಾಂಪುರದಲ್ಲಿ ರೈಲು ಉರುಳಿಸಲು ಜಿಹಾದಿಗಳು ರೈಲ್ವೆ ಹಳಿ ಮೇಲೆ ಕಬ್ಬಿಣದ ಕಂಬವನ್ನು ಇಟ್ಟಿದ್ದಾರೆ.
Fact: ಇದರಲ್ಲಿ ಯಾವುದೇ ಕೋಮು ಕೋನವಿಲ್ಲ. ಕಳ್ಳತನ ಮಾಡುತ್ತಿದ್ದ ಸಂದೀಪ್ ಮತ್ತು ವಿಜೇಂದ್ರ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಇತ್ತೀಚೆಗಷ್ಟೆ ಕಾನ್ಪುರದ ಪ್ರೇಮಪುರ ರೈಲು ನಿಲ್ದಾಣದ ಬಳಿ ರೈಲು ಹಳಿಯ ಮೇಲೆ ಖಾಲಿ ಗ್ಯಾಸ್ ಸಿಲಿಂಡರ್ ಇಟ್ಟು ಗೂಡ್ಸ್ ರೈಲನ್ನು ಹಳಿ ತಪ್ಪಿಸಲು ಯತ್ನಿಸಿದ ಘಟನೆ ನಡೆದಿತ್ತು. ಇದಲ್ಲದೆ ಕಳೆದ ಕೆಲವು ವಾರಗಳಿಂದ ರೈಲ್ವೆ ಸಂಚಾರವನ್ನು ಅಸ್ತವ್ಯಸ್ತಗೊಳಿಸುವ ಅನೇಕರ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇದರ ಜೊತೆಗೆ ಉತ್ತರ ಪ್ರದೇಶದ ರಾಂಪುರದಲ್ಲಿ ರೈಲ್ವೇ ಹಳಿ ಮೇಲೆ ಕಬ್ಬಿಣದ ಕಂಬ ಇಟ್ಟಿರುವ ಫೋಟೋ ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿದ್ದು, ಇದಕ್ಕೆ ಕೋಮು ಬಣ್ಣ ಬಳಿಯಲಾಗಿದೆ. ಕೆಲ ಬಳಕೆದಾರರು ಇದು ‘ಮುಸ್ಲಿಂ ಕಾಲೋನಿಯ ಹಿಂದೆ ಹಾದುಹೋಗುವ ರೈಲು' ಮತ್ತು 'ರೈಲ್ ಜಿಹಾದ್' ಮುಂತಾದ ಪದಗಳನ್ನು ಬಳಸಿ ಕೋಮುವಾದದ ಹಕ್ಕುಗಳೊಂದಿಗೆ ಫೋಟೋವನ್ನು ಹಂಚಿಕೊಳ್ಳುತ್ತಿದ್ದಾರೆ.
ಆನಂದಗಿರಿ ರಾಮೇಗೌಡ ಎಂಬ ಫೇಸ್ಬುಕ್ ಖಾತೆಯಲ್ಲಿ ಸೆಪ್ಟೆಂಬರ್ 21, 2024 ರಂದು ಈ ಫೋಟೋವನ್ನು ಅಪ್ಲೋಡ್ ಮಾಡಿದ್ದು, ‘‘ಉತ್ತರ ಪ್ರದೇಶದ ರಾಂಪುರದಲ್ಲಿ ರೈಲ್ವೇ ಪಲ್ಟಿ ಮಾಡಬೇಕು ಅಂತ ಜೀಹಾದಿಗಳು ರೈಲ್ವೆ ಹಳಿ ಮೇಲೆ ಸುಮಾರು 8 ರಿಂದ 9 ಮೀಟರ್ ಉದ್ದದ ಕಬ್ಬಿಣದ ಕಂಬವನ್ನು ಇಟ್ಟಿದ್ದಾರೆ. ಆದರೆ, ಡೆಹ್ರಾಡೂನ್ ಎಕ್ಸ್‌ಪ್ರೆಸ್ ರೈಲಿನ ಲೋಕೋ ಪೈಲಟ್‌ನ ಜಾಣತನದಿಂದ ಅನಾಹುತ ತಪ್ಪಿದೆ. ಲೊಕೊ ಪೈಲಟ್ ಕಬ್ಬಿಣದ ಕಂಬವನ್ನು ನೋಡಿದ ತಕ್ಷಣ ತುರ್ತು ಬ್ರೇಕ್ ಹಾಕುವ ಮೂಲಕ ರೈಲನ್ನು ನಿಲ್ಲಿಸಿದರು. ಆದರೆ ಎಷ್ಟು ಕಾಲ?. ಎಲ್ಲಿಯವರೆಗೆ?, ಅವರು ನಮ್ಮನ್ನು ಎಲ್ಲಾ ಕಡೆಯಿಂದ ಸುತ್ತುವರೆದಿದ್ದಾರೆ!’’ ಎಂದು ಬರೆದುಕೊಂಡಿದ್ದಾರೆ.
ಹಾಗೆಯೆ ಜೈ ಶ್ರೀರಾಮ್ ಎಂಬ ಎಕ್ಸ್ ಖಾತೆಯಲ್ಲಿ ಇದೇ ಫೋಟೋ ಹಂಚಿಕೊಂಡು ಹೀಗೆ ಬರೆಯಲಾಗಿದೆ. ‘‘ಮುಖ ಮುಚ್ಚಿಕೊಂಡು ಪ್ರೀತಿಯ ಬಗ್ಗೆ ಮಾತನಾಡುವ ಮುಲ್ಲಾಗಳು ಎಲ್ಲಿದ್ದಾರೆ?. ಇಂದು ಸಾವಿರಾರು ಹಿಂದೂಗಳ ಜೀವ ಉಳಿದಿದೆ. ರೈಲನ್ನು ಉರುಳಿಸುವ ಉದ್ದೇಶದಿಂದ ರಾಂಪುರದ ಮುಸ್ಲಿಂ ಕಾಲೋನಿಯ ಹಿಂದೆ ಹಾದು ಹೋಗುವ ರೈಲು ಮಾರ್ಗದ ಮೇಲೆ ಉಗ್ರರು ಕಬ್ಬಿಣದ ಕಂಬವನ್ನು ಹಾಕಿದ್ದರು. ಆದರೆ ಡೆಹ್ರಾಡೂನ್ ಎಕ್ಸ್ ಪ್ರೆಸ್ ಲೋಕೋ ಪೈಲಟ್ ಸಕಾಲದಲ್ಲಿ ತುರ್ತು ಬ್ರೇಕ್ ಹಾಕುವ ಮೂಲಕ ಸಾವಿರಾರು ಹಿಂದೂಗಳ ಪ್ರಾಣ ಉಳಿಸಿದ್ದಾರೆ. ರೈಲ್ವೆ ಸಚಿವಾಲಯ ಕಣ್ಣು ತೆರೆಯುವುದು ಯಾವಾಗ?’’ ಎಂದು ಬರೆದಿದ್ದಾರೆ.
मोहब्बत की बात करने वाले मुल्ले कहा मुंह छुपाकर बैठे हैंहज़ारों हिन्दुओं की जान जाते जाते बची...रामपुर के मुस्लिम कॉलोनी के पीछे से गुज़र रही रेलवे लाइन पर ट्रेन को पलटाने के उद्देश्य से लोहे का खम्बा रख दिया आतंकवादियों नेलेकिन देहरादून एक्सप्रेस लोको पॉयलेट ने समय रहते… pic.twitter.com/YBkZbsWgIV
— जय श्री राम (@Jaishreeram2050) September 19, 2024
ಇದೇ ರೀತಿಯ ಹೇಳಿಕೆಯೊಂದಿಗೆ ಫೋಟೋ ವೈರಲ್ ಆಗುತ್ತಿರುವುದನ್ನು ನಾವು ಇಲ್ಲಿ, ಇಲ್ಲಿ ಕಾಣಬಹುದು.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋಧಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ಫೋಟೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ನಿಜಾಂಶವನ್ನು ತಿಳಿಯಲು ನಾವು ಗೂಗಲ್ನಲ್ಲಿ ವೈರಲ್ ಫೋಟೋದ ರಿವರ್ಸ್ ಇಮೇಜ್ ಹುಡುಕಾಟ ನಡೆಸಿದೆವು. ಆಗ ಇದಕ್ಕೆ ಸಂಬಂಧಿಸಿದ ಹಲವು ಮಾಧ್ಯಮ ವರದಿಗಳು ನಮಗೆ ಕಂಡುಬಂದಿದೆ.
ಸೆಪ್ಟೆಂಬರ್ 22, 2024 ರಂದು ಎಬಿಪಿ ನ್ಯೂಸ್ ವರದಿಯ ಪ್ರಕಾರ, ‘‘ಸೆಪ್ಟೆಂಬರ್ 18 ರಂದು ಬಿಲಾಸ್‌ಪುರ ರಸ್ತೆ ಮತ್ತು ರುದ್ರಾಪುರ ಸಿಟಿ ರೈಲ್ವೆ ನಿಲ್ದಾಣಗಳ ನಡುವಿನ ಹಳಿಯಲ್ಲಿ ಆರು ಮೀಟರ್ ಉದ್ದದ ಕಬ್ಬಿಣದ ಕಂಬವನ್ನು ಇರಿಸುವ ಮೂಲಕ ನೈನಿ ಜನ ಶತಾಬ್ದಿ ಎಕ್ಸ್‌ಪ್ರೆಸ್ ಹಳಿತಪ್ಪಿತು ಪ್ರಯತ್ನಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ರಾಂಪುರ ಜಿಲ್ಲೆಯ ನಿವಾಸಿಗಳಾದ ಸನ್ನಿ ಅಲಿಯಾಸ್ ಸಾನಿಯಾ ಅಲಿಯಾಸ್ ಸಂದೀಪ್ ಚೌಹಾಣ್ ಮತ್ತು ಬಿಜೇಂದ್ರ ಅಲಿಯಾಸ್ ಟಿಂಕು ಎಂಬುವರನ್ನು ಬಂಧಿಸಲಾಗಿದೆ.’’
‘‘ಆರೋಪಿಗಳು ಕಬ್ಬಿಣದ ಕಂಬವನ್ನು ಕಳ್ಳತನ ಮಾಡಿ ಕೊಂಡೊಯ್ಯುತ್ತಿದ್ದರು. ಆಗ ರೈಲ್ವೇ ಹಾರ್ನ್ ಸದ್ದು ಕೇಳಿದ ಆರೋಪಿಗಳು ಕಂಬವನ್ನು ಟ್ರ್ಯಾಕ್ ಮೇಲೆ ಬಿಟ್ಟು ಓಡಿ ಹೋಗಿದ್ದಾರೆ. ರೈಲ್ವೆ ಅಧಿಕಾರಿಗಳ ಪ್ರಕಾರ, ಉತ್ತರ ಪ್ರದೇಶದ ರಾಂಪುರದಿಂದ ಸುಮಾರು 43 ಕಿಲೋಮೀಟರ್ ದೂರದಲ್ಲಿರುವ ರುದ್ರಪುರ ಸಿಟಿ ರೈಲು ನಿಲ್ದಾಣದ ಬಳಿ ಈ ಘಟನೆ ನಡೆದಿದೆ.’’ ಎಂದು ವರದಿಯಲ್ಲಿದೆ.
ಹಾಗೆಯೆ ಈಟಿವಿ ಭಾರತ್ ಕೂಡ ಈ ಬಗ್ಗೆ ವರದಿ ಮಾಡಿರುವುದು ನಮಗೆ ಸಿಕ್ಕಿದ್ದು, ‘‘ಕಬ್ಬಿಣದ ಕಂಬವನ್ನು ಕಳ್ಳತನ ಮಾಡಿ ತೆಗೆದುಕೊಂಡು ಹೋಗುತ್ತಿದ್ದರು... ಆಗ ಶತಾಬ್ದಿ ಎಕ್ಸ್ ಪ್ರೆಸ್ ಬಂತು; ರಾಂಪುರದಲ್ಲಿ ರೈಲು ಉರುಳಿಸುವ ಸಂಚು ಬಯಲು’’ ಎಂಬ ಹೆಡ್ಲೈನ್ನೊಂದಿಗೆ ಸುದ್ದಿ ಪ್ರಕಟವಾಗಿದೆ.
ಈಟಿವಿ ಭಾರತ್ ಪ್ರಕಟಿಸಿದ ವರದಿಯಲ್ಲಿ ಮೊರಾದಾಬಾದ್ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ವರ್ಮಾ ನೀಡಿರುವ ಮಾಹಿತಿಯನ್ನು ಉಲ್ಲೇಖಿಸಲಾಗಿದೆ. ‘‘ಈ ಘಟನೆಯ ಹಿಂದೆ ಇವರಿಗೆ ಬೇರೆ ಯಾವುದೇ ದುರುದ್ದೇಶವಿರಲಿಲ್ಲ. ಸಂದೀಪ್ ವಿರುದ್ಧ ಬಿಲಾಸ್‌ಪುರ ಪೊಲೀಸ್ ಠಾಣೆಯಲ್ಲಿ ಈಗಾಗಲೇ 14 ಪ್ರಕರಣಗಳು ದಾಖಲಾಗಿದ್ದು, ಆತ ಕ್ರಿಮಿನಲ್ ಸ್ವಭಾವದ ವ್ಯಕ್ತಿ. ಎರಡನೇ ಆರೋಪಿ ವಿಜಯೇಂದ್ರ, ಆತನ ವಿರುದ್ಧ ಸೆಕ್ಷನ್ 307 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇವರು ತಮ್ಮ ಮಾದಕ ವ್ಯಸನವನ್ನು ಪೂರೈಸಲು, ಕಬ್ಬಿಣದ ಕಂಬವನ್ನು ಕದ್ದಿದ್ದಾರೆ. ತೆಗೆದುಕೊಂಡು ಹೋಗುವಾಗ ರೈಲು ಬಂದಿದ್ದು, ಕಬ್ಬಿಣದ ಕಂಬವನ್ನು ಅಲ್ಲೇ ಬಿಟ್ಟು ಓಡಿ ಹೋಗಿದ್ದಾರೆ.’’ ಎಂದು ಪೊಲೀಸರ ಹೇಳಿಕೆ ಇದರಲ್ಲಿದೆ.
ಹಾಗೆಯೆ ಅಮರುಜಲ ಕೂಡ ಈ ಘಟನೆಯ ಕುರಿತು ವರದಿ ಮಾಡಿರುವುದನ್ನು ನೀವು ಇಲ್ಲಿ ಓದಬಹುದು.
ನ್ಯೂಸ್ ಮೀಟರ್ ಫ್ಯಾಕ್ಟ್ ಚೆಕ್ ಪರಿಶೀಲನೆಯಿಂದ ಈ ವಿಷಯದಲ್ಲಿ ಯಾವುದೇ ಕೋಮು ಕೋನವಿಲ್ಲ ಎಂಬುದು ಸ್ಪಷ್ಟವಾಗಿದೆ. ಘಟನೆಯಲ್ಲಿ ಇಬ್ಬರು ಆರೋಪಿಗಳಾದ ಸಂದೀಪ್ ಮತ್ತು ವಿಜೇಂದ್ರನನ್ನು ಪೊಲೀಸರು ಬಂಧಿಸಿದ್ದಾರೆ. ಹೀಗಾಗಿ ವೈರಲ್ ಆಗುತ್ತಿರುವ ಹೇಳಿಕೆ ಸುಳ್ಳಾಗಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.