Fact Check: ದೋಣಿ ಮಗುಚಿದ ವೈರಲ್ ವಿಡಿಯೋ ಗೋವಾದ್ದಲ್ಲ, ಇದು ಕಾಂಗೋದಲ್ಲಿ ನಡೆದ ಘಟನೆ

ದೋಣಿಯೊಂದು ಮುಳುಗುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ಈ ಘಟನೆ ಗೋವಾದಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ.

By Vinay Bhat  Published on  6 Oct 2024 1:36 PM IST
Fact Check: ದೋಣಿ ಮಗುಚಿದ ವೈರಲ್ ವಿಡಿಯೋ ಗೋವಾದ್ದಲ್ಲ, ಇದು ಕಾಂಗೋದಲ್ಲಿ ನಡೆದ ಘಟನೆ
Claim: ಗೋವಾದಲ್ಲಿ ದೋಣಿ ಮಗುಚಿ 23 ಸಾವನ್ನಪ್ಪಿದ್ದಾರೆ ಮತ್ತು 64 ಮಂದಿ ನಾಪತ್ತೆಯಾಗಿದ್ದಾರೆ.
Fact: ಈ ದುರ್ಘಟನೆ ಅಕ್ಟೋಬರ್ 3, 2024 ರಂದು ಆಫ್ರಿಕಾದ ಕಾಂಗೋದ ಗೋಮಾದಲ್ಲಿ ಸಂಭವಿಸಿದೆ.

ಸಾಮಾಜಿಕ ಜಾಲತಾಣಗಳಲ್ಲಿ ದೋಣಿಯೊಂದು ಮುಳುಗುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ಈ ಘಟನೆ ಗೋವಾದಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ. ಓವರ್‌ಲೋಡ್ ಮಾಡಿದ ಸ್ಟೀಮರ್ ಬೋಟ್ ಅಪಘಾತಕ್ಕೀಡಾಗಿದ್ದು, 64 ಜನರು ನಾಪತ್ತೆಯಾಗಿದ್ದಾರೆ ಮತ್ತು 23 ಮೃತದೇಹಗಳು ಪತ್ತೆ ಆಗಿವೆ ಎಂದು ಹೇಳಲಾಗಿದೆ. ದೋಣಿಯಲ್ಲಿ ಅನೇಕ ಜನರು ಇರುವುದನ್ನು ಕಾಣಬಹುದು, ದೋಣಿ ನೀರಿನಲ್ಲಿ ಮುಳುಗಿದಾಗ ಅನೇಕರು ಪ್ರಾಣ ಉಳಿಸಿಕೊಳ್ಳಲು ಈಜುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಫೇಸ್​ಬುಕ್ ಬಳಕೆದಾರರೊಬ್ಬರು ಅಕ್ಟೋಬರ್ 6, 2024 ರಂದು ಈ ವಿಡಿಯೋವನ್ನು ಹಂಚಿಕೊಂಡಿದ್ದು, ‘‘ಇಂದು ಗೋವಾ ಅಪಘಾತದಲ್ಲಿ 23 ಮೃತದೇಹಗಳು 40 ಜನರನ್ನು ರಕ್ಷಿಸಲಾಗಿದೆ ಮತ್ತು 64 ಮಂದಿ ನಾಪತ್ತೆಯಾಗಿದ್ದಾರೆ. ಓವರ್ ಲೋಡ್ ಮಾಡುವಲ್ಲಿ ಬೋಟ್ ಮಾಲೀಕರ ದುರಾಸೆ, ಪ್ರಯಾಣಿಕರಿಗೂ ಅತಿಯಾದ ಆತ್ಮವಿಶ್ವಾಸ, ತುಂಬಾ ದುಃಖದ ದುರಂತ,’’ ಎಂದು ಬರೆದುಕೊಂಡಿದ್ದಾರೆ.

ಇದೇ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವಿಡಿಯೋವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋಧಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವಿಡಿಯೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಗೋವಾದಲ್ಲಿ ಈ ರೀತಿಯ ಯಾವುದೇ ಘಟನೆ ನಡೆದಿಲ್ಲ, ಈ ದುರ್ಘಟನೆ ಸಂಭವಿಸಿರುವುದು ಆಫ್ರಿಕಾದ ಕಾಂಗೋದ ಗೋಮಾದಲ್ಲಿ ಆಗಿದೆ.

ನಿಜಾಂಶವನ್ನು ತಿಳಿಯಲು ನಾವು ಮೊದಲಿಗೆ ಗೂಗಲ್​ನಲ್ಲಿ ಗೋವಾದಲ್ಲಿ ಈ ರೀತಿಯ ಘಟನೆ ನಡೆದಿದೆಯೆ ಎಂಬ ಕುರಿತು ಕೀವರ್ಡ್ ಸರ್ಚ್ ಮಾಡಿದೆವು. ಆದರೆ, ಗೋವಾದಲ್ಲಿ ದೋಣಿ ಅಪಘಾತಕ್ಕೆ ಸಂಬಂಧಿಸಿದ ಯಾವುದೇ ಇತ್ತೀಚಿನ ಸುದ್ದಿಗಳು ಸಿಕ್ಕಿಲ್ಲ. ಬಳಿಕ ವೈರಲ್ ವಿಡಿಯೋದ ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್​​ನಲ್ಲಿ ರಿವರ್ಸ್ ಇಮೇಜ್​ ಸರ್ಚ್ ಮಾಡಿದೆವು. ಆಗ ಈ ವಿಡಿಯೋಗೆ ಸಂಬಂಧಿಸಿದ ಟ್ವೀಟ್ ಅನ್ನು ನಾವು ಕಂಡುಕೊಂಡಿದ್ದೇವೆ.

Millennial ಹೆಸರಿನ ಎಕ್ಸ್ ಖಾತೆಯು ಇದೇ ವೈರಲ್ ವಿಡಿಯೋದ ಮತ್ತೊಂದು ಆ್ಯಂಗಲ್ ಅನ್ನು ಅಕ್ಟೋಬರ್ 3, 2024 ರಂದು ಹಂಚಿಕೊಂಡಿದೆ. ‘‘DR ಕಾಂಗೋದ ಗೋಮಾ/ಬುಕಾವು ದಾರಿಯಲ್ಲಿ ದೋಣಿಯೊಂದು ಮಗುಚಿ ಬಿದ್ದಿದೆ. ಗೋಮಾ ನಗರದ ಶವಾಗಾರದಲ್ಲಿ ಹಲವು ಶವಗಳನ್ನಿ ಇರಿಸಲಾಗಿದೆ. ದೇವರು ಪ್ರಯಾಣಿಕರನ್ನು ರಕ್ಷಿಸಲಿ’’ ಎಂದು ಬರೆದುಕೊಂಡಿದ್ದಾರೆ.

ಈ ಮಾಹಿತಿಯ ಆಧಾರದ ಮೇರೆಗೆ ನಾವು ಕಾಂಗೋಗೆ ಸಂಬಂಧಿಸಿದ ಈ ಸುದ್ದಿಯ ಕೀವರ್ಡ್‌ಗಳನ್ನು ಸರ್ಚ್ ಮಾಡಿದೆವು. ಆಗ ಸುದ್ದಿ ಸಂಸ್ಥೆ Reuters ವೈರಲ್ ವಿಡಿಯೋಗೆ ಸಂಬಂಧಿಸಿದ ಸುದ್ದಿ ಪ್ರಕಟವಾಗಿರುವುದು ಸಿಕ್ಕಿದೆ. ಅಕ್ಟೋಬರ್ 2 ರಂದು ಪ್ರಕಟವಾದ ಈ ಸುದ್ದಿಯಲ್ಲಿ, ‘ಕಾಂಗೋದ ಕಿವು ಸರೋವರದಲ್ಲಿ ದೋಣಿ ಮುಳುಗಿ 78 ಜನರು ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪ್ರಾಂತೀಯ ಗವರ್ನರ್ ಉಲ್ಲೇಖಿಸಿದ್ದಾರೆ. ಪ್ರಾಂತೀಯ ಗವರ್ನರ್ ಪ್ರಕಾರ, ಪೂರ್ವ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದ ಕಿವು ಸರೋವರದಲ್ಲಿ ಗುರುವಾರ 278 ಪ್ರಯಾಣಿಕರನ್ನು ಸಾಗಿಸುತ್ತಿದ್ದ ದೋಣಿ ಮುಳುಗಿದಾಗ ಕನಿಷ್ಠ 78 ಜನರು ಮುಳುಗಿದ್ದಾರೆ’ ಎಂದು ನೀಡಿರುವ ಮಾಹಿತಿ ಇದರಲ್ಲಿದೆ.

ಹಾಗೆಯೆ ಅಸೋಸಿಯೇಟೆಡ್ ಪ್ರೆಸ್ ಕೂಡ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ವಿಡಿಯೋವನ್ನು ಅಪ್ಲೋಡ್ ಮಾಡಿದೆ. ಕಾಂಗೋದಲ್ಲಿ ದೋಣಿ ಮುಳುಗಿ 78 ಮಂದಿ ಸಾವನ್ನಪ್ಪಿದ್ದಾರೆ ಎಂದು ಅವರು ಈ ಸುದ್ದಿಯಲ್ಲಿ ತಿಳಿಸಿದ್ದಾರೆ. ಅಕ್ಟೋಬರ್ 4 ರಂದು ಈ ವಿಡಿಯೋ ಅಪ್ ಆಗಿದೆ.

ಗೋವಾ ಪೊಲೀಸರಿಂದ ಸ್ಪಷ್ಟನೆ:

ಗೋವಾ ಪೊಲೀಸರು ಕೂಡ ಈ ವಿಡಿಯೋ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ‘ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ದೋಣಿ ಮುಳುಗುವ ವಿಡಿಯೋ ಗೋವಾದ್ದು ಎಂದು ಹೇಳಲಾಗುತ್ತಿದೆ. ಆದರೆ, ಇದು ಸುಳ್ಳು ಸದ್ದಿ. ಈ ವಿಡಿಯೋ ಆಫ್ರಿಕಾದ ಕಾಂಗೋದ ಗೋಮಾದಿಂದ ಬಂದಿದೆ. ಖಚಿತ ಮಾಹಿತಿ ಇಲ್ಲದೆ ವಿಡಿಯೋವನ್ನು ಹಂಚಿಕೊಳ್ಳಬೇಡಿ’ ಎಂದು ಗೋವಾ ಪೊಲೀಸರು ನಾಗರಿಕರಿಗೆ ಮನವಿ ಮಾಡಿದ್ದಾರೆ.

ಹೀಗಾಗಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿನ ಹೇಳಿಕೆಯಲ್ಲಿರುವಂತೆ ದೋಣಿ ಮಗುಚಿದ ಘಟನೆ ನಡೆದಿರುವುದು ಗೋವಾದಲ್ಲಿ ಅಲ್ಲ. ಈ ದುರ್ಘಟನೆ ಸಂಭವಿಸಿರುವುದು ಆಫ್ರಿಕಾದ ಕಾಂಗೋದ ಗೋಮಾದಲ್ಲಿ ಎಂದು ನಾವು ಖಚಿತವಾಗಿ ಹೇಳುತ್ತೇವೆ.

Claim Review:ಗೋವಾದಲ್ಲಿ ದೋಣಿ ಮಗುಚಿ 23 ಸಾವನ್ನಪ್ಪಿದ್ದಾರೆ ಮತ್ತು 64 ಮಂದಿ ನಾಪತ್ತೆಯಾಗಿದ್ದಾರೆ.
Claimed By:Facebook User
Claim Reviewed By:News Meter
Claim Source:Social Media
Claim Fact Check:False
Fact:ಈ ದುರ್ಘಟನೆ ಅಕ್ಟೋಬರ್ 3, 2024 ರಂದು ಆಫ್ರಿಕಾದ ಕಾಂಗೋದ ಗೋಮಾದಲ್ಲಿ ಸಂಭವಿಸಿದೆ.
Next Story