Fact Check: ಮಾಲ್ಡೀವ್ಸ್ 28 ದ್ವೀಪಗಳನ್ನು ಭಾರತಕ್ಕೆ ಬಿಟ್ಟು ಕೊಟ್ಟಿದೆ ಎಂಬ ವೈರಲ್ ಸುದ್ದಿ ಸುಳ್ಳು
ಸಾಮಾಜಿಕ ಜಾಲತಾಣಗಳಲ್ಲಿ ಭಾರತವು ದ್ವೀಪರಾಷ್ಟ್ರದ ರಾಜ್ಯದಿಂದ 28 ದ್ವೀಪಗಳನ್ನು ಖರೀದಿಸಿದೆ ಎಂಬ ಸುದ್ದಿ ಎಲ್ಲೆಡೆ ವೈರಲ್ ಆಗುತ್ತಿದೆ.
By Vinay Bhat Published on 14 Aug 2024 4:51 PM ISTClaim: ಭಾರತವು ಮಾಲ್ಡೀವ್ಸ್ ರಾಜ್ಯದಿಂದ 28 ದ್ವೀಪಗಳನ್ನು ಖರೀದಿಸಿದೆ.
Fact: ಮಾಲ್ಡೀವ್ಸ್‌ನ 28 ದ್ವೀಪಗಳಿಗೆ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆ ಸೃಷ್ಟಿಗೆ ಭಾರತ ಕೊಡುಗೆ ನೀಡಿದೆ.
ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಇತ್ತೀಚೆಗೆ ಮಾಲ್ಡೀವ್ಸ್‌ಗೆ ಭೇಟಿ ನೀಡಿದ್ದರು. ಮೂರು ದಿನಗಳ ತಮ್ಮ ಭೇಟಿಯಲ್ಲಿ ಅನೇಕ ಮಾತುಕತೆ ನಡೆಸಿದ್ದಾರೆ. ಮೊಹಮ್ಮದ್ ಮುಯಿಝು ಅವರು ಮಾಲ್ಡೀವ್ಸ್ ಅಧ್ಯಕ್ಷರಾದ ಬಳಿಕ, ಭಾರತದ ವಿರುದ್ಧವಾಗಿ ಸಾಕಷ್ಟು ಹೇಳಿಕೆ ನೀಡಿದ್ದರು. ಅವರು ಚೀನಾ ಪರ ನಿಲುವು ಹೊಂದಿದ್ದಾರೆ ಎನ್ನಲಾಗಿತ್ತು. ಹೀಗೆ ಎರಡು ರಾಷ್ಟ್ರಗಳ ನಡುವಿನ ರಾಜಕೀಯ ಮನಸ್ತಾಪದ ನಂತರ ಭಾರತದ ಮೊದಲ ಭೇಟಿ ಇದಾಗಿದೆ.
ಈ ಮಾತುಕತೆ ಬಳಿಕ ಭಾರತ ದ್ವೀಪರಾಷ್ಟ್ರದೊಂದಿಗೆ ಕೈಜೋಡಿಸಿದ್ದು ಕೆಲವು ಯೋಜನೆಗಳಿಗೆ ಚಾಲನೆಯನ್ನು ನೀಡಲಾಗಿದೆ. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಭಾರತವು ದ್ವೀಪರಾಷ್ಟ್ರದ ರಾಜ್ಯದಿಂದ 28 ದ್ವೀಪಗಳನ್ನು ಖರೀದಿಸಿದೆ ಎಂಬ ಸುದ್ದಿ ಎಲ್ಲೆಡೆ ವೈರಲ್ ಆಗುತ್ತಿದೆ.
ಮಹೇಶ್ ಬೇವನೂರ್ ಎಂಬವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಆಗಸ್ಟ್ 13 ರಂದು '28 ದ್ವೀಪಗಳನ್ನು ಭಾರತಕ್ಕೆ ಬಿಟ್ಟು ಕೊಟ್ಟ ಮಾಲ್ಡೀವ್ಸ್. ಇದು ರಾಜತಾಂತ್ರಿಕತೆ. ಜೈ ಜೈಶಂಕರ್. ಮೋದಿಜಿ ಇದ್ರೆ ಎಲ್ಲವೂ ಸಾಧ್ಯ' ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.
ಹಾಗೆಯೆ ಅಶೋಕ್ ರಾಥೋಡ್ ಎಂಬವರು ಕೂಡ ತಮ್ಮ ಫೇಸ್ಬುಕ್ ಖಾತೆಯಲ್ಲಿ 'ಮಾಲ್ಡೀವ್ಸ್ ತನ್ನ 28 ದ್ವೀಪಗಳನ್ನು ಭಾರತಕ್ಕೆ ಹಸ್ತಾಂತರಿಸುತ್ತದೆ. ಮೋದಿ ದೇಶ್ ಕೋ ಬೆಚ್ ರಹಾ ಹೈ ಅನ್ನೋ ಮಬ್ಬು ಗುಲಾಮರ ಮನವರಿಕೆಗಾಗಿ?' ಎಂದು ಬರೆದು ವೀಡಿಯೊ ಒಂದನ್ನು ಶೇರ್ ಮಾಡಿದ್ದಾರೆ.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋಧಿಸಿದಾಗ ಇದು ಸುಳ್ಳು ಸುದ್ದಿ ಎಂಬುದು ಕಂಡುಬಂದಿದೆ. ನಿಜಾಂಶವನ್ನು ತಿಳಿಯಲು ನಾವು ಗೂಗಲ್‌ನಲ್ಲಿ ''ಭಾರತ, 28 ದ್ವೀಪಗಳು ಮತ್ತು ಮಾಲ್ಡೀವ್ಸ್'' ಎಂದು ಕೀವರ್ಡ್ ಹುಡುಕಾಟ ನಡೆಸಿದೆವು. ಆಗ ಯಾವುದೇ ವಿಶ್ವಾಸಾರ್ಹ ವರದಿ ಕಂಡುಬಂದಿಲ್ಲ. ಕೇಂದ್ರ ಸರ್ಕಾರವು ಮಾಲ್ಡೀವ್ಸ್ ದೇಶದಿಂದ ಯಾವುದೇ ಪ್ರದೇಶವನ್ನು "ಖರೀದಿಸಿದೆ" ಎಂಬ ವರದಿ ಎಲ್ಲೂ ಇಲ್ಲ.
ಆದಾಗ್ಯೂ, ಮಾಲ್ಡೀವ್ಸ್‌ನಲ್ಲಿ ಭಾರತ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆ ಸೃಷ್ಟಿಗೆ ಕೊಡುಗೆ ನೀಡಿದ ವರದಿ ಕಂಡುಬಂದಿದೆ. ಆಗಸ್ಟ್ 10, 2024 ರಂದು ವಿಜಯವಾಣಿ ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ 'ಮಾಲ್ಡೀವ್ಸ್ ಅಧ್ಯಕ್ಷ ಮತ್ತೆ ಯೂಟರ್ನ್..ಭಾರತದೊಂದಿಗೆ ಸಂಬಂಧವೃದ್ಧಿಗೆ ಬದ್ಧ ಎಂದ ಮುಯಿಜ್ಜು!' ಎಂಬ ಶೀರ್ಷಿಕೆಯೊಂದಿಗೆ ವರದಿ ಬಿತ್ತರಿಸಿದೆ.
ಈ ವರದಿಯಲ್ಲಿ, ಭಾರತದ ಕುರಿತು ಉರಿದುಬೀಳುತ್ತಿದ್ದ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜ್ಜು ಮತ್ತೊಮ್ಮೆ ಯು-ಟರ್ನ್ ತೆಗೆದುಕೊಂಡಿದ್ದಾರೆ. ಈ ಬಾರಿ ಅವರು ಭಾರತದ ಬಗ್ಗೆ ಸಕಾರಾತ್ಮಕ ಮಾತುಗಳನ್ನಾಡಿದ್ದಾರೆ. ಮಾಲ್ಡೀವ್ಸ್‌ನ 28 ದ್ವೀಪಗಳಿಗೆ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆ ಸೃಷ್ಟಿಗೆ ಭಾರತ ಕೊಡುಗೆ ನೀಡಿದೆ. ಭಾರತವು ತನ್ನ ನಿಕಟ ಮಿತ್ರರಾಷ್ಟ್ರಗಳಲ್ಲಿ ಒಂದಾಗಿದೆ. ಅದು ನಮ್ಮ ಪ್ರಮುಖ ಪಾಲುದಾರ ದೇಶವಾಗಿದ್ದು, ನಮಗೆ ಅಗತ್ಯವಿರುವಾಗ, ಸಹಾಯ ಮಾಡುವಲ್ಲಿ ಮುಂದಾಳತ್ವ ವಹಿಸುತ್ತದೆ ಎಂದು ಮುಯಿಜ್ಜು ನೀಡಿರುವ ಹೇಳಿಕೆಯನ್ನು ಬರೆಯಲಾಗಿದೆ.
ಹಾಗೆಯೆ ಇಂಡಿಯಾ ಟುಡೆ ತನ್ನ ವರದಿಯಲ್ಲಿ, “ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಶನಿವಾರ ಮಾಲ್ಡೀವ್ಸ್‌ಗೆ ಸುಮಾರು 923 ಕೋಟಿ ರೂಪಾಯಿಗಳ (USD 110 ಮಿಲಿಯನ್) ಮೊತ್ತದ ಬೃಹತ್ ನೀರು ಮತ್ತು ನೈರ್ಮಲ್ಯ ಯೋಜನೆಯನ್ನು 28 ದ್ವೀಪಗಳಿಗೆ ಭಾರತದಿಂದ ಹಸ್ತಾಂತರಿಸಿದ್ದಾರೆ" ಎಂದು ಬರೆಯಲಾಗಿದೆ.
"ಮಾಲ್ಡೀವ್ಸ್‌ನ 28 ದ್ವೀಪಗಳಲ್ಲಿ ನೀರು ಮತ್ತು ನೈರ್ಮಲ್ಯ ಯೋಜನೆಗಳ ವರ್ಚುವಲ್ ಉದ್ಘಾಟನೆ" ಎಂದು ಭಾರತೀಯ ವಿದೇಶಾಂಗ ಸಚಿವಾಲಯದ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಆಗಸ್ಟ್ 10, 2024 ರಂದು ವೀಡಿಯೊ ಅಪ್ಲೋಡ್ ಮಾಡಲಾಗಿದೆ. "28 ದ್ವೀಪಗಳಲ್ಲಿ ನೀರು ಮತ್ತು ಒಳಚರಂಡಿ ಸೌಲಭ್ಯಗಳ ಅಧಿಕೃತ ಹಸ್ತಾಂತರ. ಭಾರತ ಸರ್ಕಾರದ ನೆರವು, ಎಕ್ಸಿಮ್ ಬ್ಯಾಂಕ್ ಆಫ್ ಇಂಡಿಯಾದಿಂದ ಲೈನ್ ಆಫ್ ಕ್ರೆಡಿಟ್ ಸೌಲಭ್ಯದ ಮೂಲಕ ಹಣಕಾಸು ಒದಗಿಸಲಾಗಿದೆ,” ಎಂದು ಈವೆಂಟ್‌ನಲ್ಲಿನ ಡಿಸ್ಪ್ಲೇಯಲ್ಲಿ ಬರೆಯಲಾಗಿದೆ.
ಹಾಗೆಯೆ ಮಾಲ್ಡೀವ್ಸ್‌ನ ಅಧ್ಯಕ್ಷರಾದ ಮೊಹಮದ್ ಮುಯಿಜ್ಜು ಅವರು ಆಗಸ್ಟ್ 10, 2024 ರಂದು ಎಕ್ಸ್ ಪೋಸ್ಟ್‌ನಲ್ಲಿ ಯೋಜನೆಯ ಹಸ್ತಾಂತರವನ್ನು ಘೋಷಿಸಿದ್ದಾರೆ. “ಇಂದು @DrSJaishankar ಅವರನ್ನು ಭೇಟಿ ಮಾಡಿ 28 ದ್ವೀಪಗಳಲ್ಲಿ ನೀರು ಮತ್ತು ಒಳಚರಂಡಿ ಯೋಜನೆಗಳನ್ನು ಅಧಿಕೃತ ಹಸ್ತಾಂತರ ಮಾಡಲಾಯಿತು. ಇದರಿಂದ ಸಂತೋಷವಾಯಿತು," ಅವರು ಬರೆದುಕೊಂಡಿದ್ದಾರೆ.
It was a pleasure to meet @DrSJaishankar today and join him in the official handover of water and sewerage projects in 28 islands of the Maldives. I thank the Government of India, especially Prime Minister @narendramodi for always supporting the Maldives. Our enduring partnership… pic.twitter.com/fYtFb5QI6Q
— Dr Mohamed Muizzu (@MMuizzu) August 10, 2024
ತೀರ್ಮಾನ
ಈ ವರದಿಯನ್ನೆಲ್ಲ ಗಮನಿಸಿದ ಬಳಿಕ ಮಾಲ್ಡೀವ್ಸ್ 28 ದ್ವೀಪಗಳನ್ನು ಭಾರತಕ್ಕೆ ಬಿಟ್ಟು ಕೊಟ್ಟಿದೆ ಎಂದು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳಾಗಿದೆ. ಮಾಲ್ಡೀವ್ಸ್‌ನ 28 ದ್ವೀಪಗಳಿಗೆ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆ ಸೃಷ್ಟಿಗೆ ಭಾರತ ಕೊಡುಗೆ ನೀಡಿದೆ ಎಂಬ ಸುದ್ದಿಯನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ ಎಂಬುದನ್ನು ನಾವು ಖಚಿತವಾಗಿ ಹೇಳುತ್ತೇವೆ.