ಬಾಂಗ್ಲಾದೇಶದಲ್ಲಿ ಪ್ರತಿಭಟನೆಯ ಕಾವು ಬೇರೆಯದೇ ರೂಪ ತಾಳಿದ್ದು ಸಾವು ನೋವುಗಳು ಹೆಚ್ಚಾಗುತ್ತಿವೆ. ಹಿಂದೂಗಳನ್ನು ಗುರಿಯಾಗಿಸಿಕೊಂಡು ಮಾಡಿದ ಅನೇಕ ದೌರ್ಜನ್ಯದ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಪ್ರತಿದಿನ ಬಾಂಗ್ಲಾದೇಶದಿಂದ ಹೊಸ ಹೊಸ ವೀಡಿಯೊ ಬರುತ್ತಿದೆ. ಇದೀಗ ಬಾಂಗ್ಲಾದೇಶದಲ್ಲಿರುವ ಹಿಂದೂ ದೇವಾಲಯವನ್ನು ಕೆಡವುತ್ತಿದ್ದಾರೆ ಎಂದು ಹೇಳಲಾಗುತ್ತಿರುವ ವೀಡಿಯೊ ಎಲ್ಲೆಡೆ ಹರಿದಾಡುತ್ತಿದೆ.
ಮಲ್ಲೇಶ್ ನಾಯಕ್ ಎಸ್ ಎಂಬ ಫೇಸ್‌ಬುಕ್ ಬಳಕೆದಾರರು ಆಗಸ್ಟ್ 8, 2024 ರಂದು ತಮ್ಮ ಖಾತೆಯಲ್ಲಿ 'ಇನ್ನು ಎಚ್ಚರಗೋಳ್ಳದಿದ್ದರೆ ಭಾರತ ಮತ್ತೊಂದು ಬಾಂಗ್ಲಾದೇಶ ಆಗುತ್ತೆ' ಎಂದು ಬರೆದು ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವೀಡಿಯದಲ್ಲಿ ಸ್ಕಲ್ ಕ್ಯಾಪ್ ಮತ್ತು ಕುರ್ತಾ ಧರಿಸಿದ ವ್ಯಕ್ತಿಯೊಬ್ಬ ಧಾರ್ಮಿಕ ರಚನೆಯ ಕಮಾನನ್ನು ಕೆಡವುತ್ತಿರುದು ಕಾಣಬಹುದು.
ಅಂತೆಯೆ ಯೂಟ್ಯೂಬ್ನಲ್ಲಿ ಕೂಡ ಈ ವೀಡಿಯೊ ವೈರಲ್ ಆಗುತ್ತಿದೆ. ಸೇವ್ ಬಾಂಗ್ಲಾದೇಶಿ ಹಿಂದೂ ಎಂಬ ಅಕೌಂಟ್ನಿಂದ ಆಗಸ್ಟ್ 8, 2024 ರಂದು ಇದೇ ವೀಡಿಯೊ ಅಪ್ಲೋಡ್ ಆಗಿದ್ದು 'ಈ ರೀತಿ ದೇವಸ್ಥಾನಗಳ ಮೇಲೆ ದಾಳಿ ಮಾಡುವುದು ಸರಿಯೇ?' ಎಂದು ಬರೆದುಕೊಂಡಿದ್ದಾರೆ.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋಧಿಸಿದಾಗ, ಈ ವೈರಲ್ ವೀಡಿಯೊದ ಹಿಂದಿನ ನಿಜಾಂಶ ಏನು ಎಂಬುದು ತಿಳಿಯಿತು. ವೀಡಿಯೊದಲ್ಲಿ ಕೆಡವಲಾಗುತ್ತಿರುವ ಧಾರ್ಮಿಕ ರಚನೆಯ ಕಮಾನು ದೇವಾಲಯವಲ್ಲ ಮತ್ತು ಇದು ಬಾಂಗ್ಲಾದೇಶದಲ್ಲಿ ನಡೆದ ಘಟನೆಯೂ ಅಲ್ಲ. ಇದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ವೀಡಿಯೋವಾಗಿದ್ದು, ಪಸ್ಮಾಂಡ ಮುಸ್ಲಿಮರು ನೋಡಿಕೊಳ್ಳುತ್ತಿದ್ದ ದರ್ಗಾವನ್ನು ಅಶ್ರಫ್ ಮುಸ್ಲಿಮರು ಧ್ವಂಸಗೊಳಿಸುತ್ತಿರುವುದು.
ನಿಜಾಂಶವನ್ನು ತಿಳಿಯಲು ನಾವು ವೈರಲ್ ಆಗುತ್ತಿರುವ ವೀಡಿಯೊದ ಸ್ಕ್ರೀನ್‌ಶಾಟ್ ಅನ್ನು ತೆಗೆದುಕೊಂಡು ಗೂಗಲ್‍ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದೆವು. ಆಗ ಆಂಧ್ರಪ್ರದೇಶ ಸರ್ಕಾರದ ಆರೋಗ್ಯ, ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾದ ಸತ್ಯ ಕುಮಾರ್ ವೈ ಅವರು ಅಕ್ಟೋಬರ್ 14, 2022 ರಂದು ಇದೇ ವೀಡಿಯೊವನ್ನು ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡಿರುವುದು ನಮಗೆ ಸಿಕ್ಕಿದೆ. ಆಂಧ್ರಪ್ರದೇಶದ ಗುಂಟೂರಿನಲ್ಲಿ ಅಶ್ರಫ್ ಮುಸ್ಲಿಮರು ಬಿ.ಸಿ. ನಾಗೂರ್ ಮೀರಾ ಮತ್ತು ದೂದೇಕುಲ ಪಸ್ಮಂಡ ಮುಸ್ಲಿಮರು ಗೌರವಿಸುವ ದರ್ಗಾವನ್ನು ಕೆಡವಿದ್ದಾರೆ ಎಂದು ಶೀರ್ಷಿಕೆ ನೀಡಿದ್ದಾರೆ.
ಈ ಮಾಹಿತಿ ತೆಗೆದುಕೊಂಡು ನಾವು ಸೂಕ್ತವಾದ ಕೀವರ್ಡ್‌ಗಳೊಂದಿಗೆ ಗೂಗಲ್‍ನಲ್ಲಿ ಸರ್ಚ್ ಮಾಡಿದಾಗ ಅಕ್ಟೋಬರ್ 18, 2022 ರಂದು ಇಂಡಿಯಾ ಟುಡೇ ಮಾಡಿರುವ ವರದಿ ಕಂಡುಬಂತು. ಇದರಲ್ಲಿ 'ಆಂಧ್ರದ ಗುಂಟೂರಿನಲ್ಲಿ ಮಸೀದಿ ನಿರ್ಮಿಸಲು ದರ್ಗಾವನ್ನು ಕೆಡವಲಾಗುತ್ತಿದೆ; ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸರು ಹೇಳಿದ್ದಾರೆ' ಎಂಬ ಶೀರ್ಷಿಕೆ ನೀಡಲಾಗಿದೆ.
ಅಕ್ಟೋಬರ್ 12, 2022 ರಂದು ಗುಂಟೂರಿನ ಎಲ್‌ಬಿ ನಗರದಲ್ಲಿರುವ ದರ್ಗಾವನ್ನು ಕೆಡವಲು ಕೆಲವರು ಪ್ರಯತ್ನಿಸಿದಾಗ ಸ್ಥಳೀಯರು ಮಧ್ಯಪ್ರವೇಶಿಸಿ ಅವರನ್ನು ತಡೆದರು ಎಂದು ವರದಿ ಸೂಚಿಸಿದೆ. ಕಳೆದ 40 ವರ್ಷಗಳಿಂದ ಎಲ್ಲಾ ಸಮುದಾಯಗಳಿಗೆ ಸೇರಿದ ದರ್ಗಾದಲ್ಲಿ ಜನರು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ ಎಂದು ಈ ವರದಿಯಲ್ಲಿ ಬರೆಯಲಾಗಿದೆ.
ಲೈವ್ ಹಿಂದೂಸ್ಥಾನ್ ಕೂಡ ಅಕ್ಟೋಬರ್ 18, 2022 ರಂದು ಈ ಬಗ್ಗೆ ವರದಿ ಮಾಡಿರುವುದನ್ನು ನಾವು ಕಂಡಿದ್ದೇವೆ. 'ಆಂಧ್ರಪ್ರದೇಶದ ಗುಂಟೂರಿನಲ್ಲಿ ದರ್ಗಾವನ್ನು ಕೆಡವಿ ಮಸೀದಿ ನಿರ್ಮಾಣ ವಿಚಾರದಲ್ಲಿ ಉದ್ವಿಗ್ನತೆ ಉಂಟಾಗಿದೆ. ಕೆಡವಲು ಪ್ರಯತ್ನಿಸಲಾಗಿದ್ದ ದರ್ಗಾದಲ್ಲಿ ಜನರು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ದರ್ಗಾ ಧ್ವಂಸಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಸ್ಥಳೀಯರು ಪ್ರತಿಭಟನೆ ನಡೆಸಿದಾಗ ಪರಿಸ್ಥಿತಿ ಬಿಗಡಾಯಿಸಿತು. ಆದರೆ, ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸರು ಹೇಳಿದ್ದಾರೆ' ಎಂಬುದಾಗಿ ವರದಿಯಲ್ಲಿದೆ.
ಹೀಗಾಗಿ, ವ್ಯಕ್ತಿಯೋರ್ವ ಹಿಂದೂ ದೇವಾಲಯವನ್ನು ಕೆಡವುತ್ತಿರುವುದು ಎಂದು ವೈರಲ್ ಆಗುತ್ತಿರುವ ವೀಡಿಯೊ ಬಾಂಗ್ಲಾದೇಶದಲ್ಲಿ. ಇದು ಆಂಧ್ರಪ್ರದೇಶದ ಗುಂಟೂರಿನಲ್ಲಿ ನಡೆದ ಘಟನೆ ಎಂದು ನಾವು ಖಚಿತ ಪಡಿಸುತ್ತೇವೆ.