Fact Check: ಮುಂಬೈನ ಸಿದ್ಧಿವಿನಾಯಕ ದೇವಸ್ಥಾನದ ಮೇಲೆ ವಕ್ಫ್ ಬೋರ್ಡ್ ಹಕ್ಕು ಸಾಧಿಸಿಲ್ಲ, ವೈರಲ್ ಸುದ್ದಿ ನಕಲಿ

ಫೇಸ್ಬುಕ್ ಬಳಕೆದಾರರೊಬ್ಬರು ಗಣೇಶ ದೇವರ ಮತ್ತು ಮುಂಬೈನ ಸಿದ್ಧಿವಿನಾಯಕ ದೇವಸ್ಥಾನದ ಫೋಟೋ ಹಂಚಿಕೊಂಡು, ‘‘ವಕ್ಫ್ ಬೋರ್ಡ್ ಈಗ ಸಿದ್ಧಿ ವಿನಾಯಕ ದೇವಸ್ಥಾನ ನಮ್ದು ಅಂತಿದೆ’’ ಎಂದು ಬರೆದುಕೊಂಡಿದ್ದಾರೆ.

By Vinay Bhat  Published on  21 Nov 2024 4:51 PM IST
Fact Check: ಮುಂಬೈನ ಸಿದ್ಧಿವಿನಾಯಕ ದೇವಸ್ಥಾನದ ಮೇಲೆ ವಕ್ಫ್ ಬೋರ್ಡ್ ಹಕ್ಕು ಸಾಧಿಸಿಲ್ಲ, ವೈರಲ್ ಸುದ್ದಿ ನಕಲಿ
Claim: ಮುಂಬೈನ ಸಿದ್ಧಿವಿನಾಯಕ ದೇವಸ್ಥಾನದ ಮೇಲೆ ವಕ್ಫ್ ಬೋರ್ಡ್ ಹಕ್ಕು ಚಲಾಯಿಸಿದೆ.
Fact: ಸಿದ್ಧಿವಿನಾಯಕ ದೇವಸ್ಥಾನದ ಮೇಲಿನ ವಕ್ಫ್ ಮಂಡಳಿಯ ಹಕ್ಕು ಪೋಸ್ಟ್ ನಕಲಿ ಆಗಿದೆ. ದೇವಸ್ಥಾನದ ಸೊಸೈಟಿ ಅಧಿಕಾರಿಗಳೇ ಇದನ್ನು ನಕಲಿ ಎಂದು ಹೇಳಿದ್ದಾರೆ.

ಮಹಾರಾಷ್ಟ್ರ ಚುನಾವಣೆಯ ಸಂಭ್ರಮದ ನಡುವೆಯೇ ಇದೀಗ ಮುಂಬೈನ ಸಿದ್ಧಿವಿನಾಯಕ ದೇವಸ್ಥಾನದ ಮೇಲೂ ವಕ್ಫ್ ಬೋರ್ಡ್ ಹಕ್ಕು ಚಲಾಯಿಸಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಒಂದು ವೈರಲ್ ಆಗುತ್ತಿದೆ. ಇದರ ಜೊತೆಗೆ ಮರಾಠಿ ಸುದ್ದಿವಾಹಿನಿ 'ಸಕಲ್'ನ ಲೋಗೋವನ್ನು ಹೊಂದಿರುವ ಮತ್ತೊಂದು ಪೋಸ್ಟ್‌ಕಾರ್ಡ್‌ ಕೂಡ ಹಂಚಿಕೊಳ್ಳಲಾಗುತ್ತಿದೆ.

ಫೇಸ್​ಬುಕ್ ಬಳಕೆದಾರರೊಬ್ಬರು ಗಣೇಶ ದೇವರ ಮತ್ತು ಮುಂಬೈನ ಸಿದ್ಧಿವಿನಾಯಕ ದೇವಸ್ಥಾನದ ಫೋಟೋ ಹಂಚಿಕೊಂಡು, ‘‘ವಕ್ಫ್ ಬೋರ್ಡ್ ಈಗ ಸಿದ್ಧಿ ವಿನಾಯಕ ದೇವಸ್ಥಾನ ನಮ್ದು ಅಂತಿದೆ’’ ಎಂದು ಬರೆದುಕೊಂಡಿದ್ದಾರೆ.

ಹಾಗೆಯೆ ಮತ್ತೋರ್ವ ಎಕ್ಸ್ ಬಳಕೆದಾರರೊಬ್ಬರು ಸಕಲ್ ಸುದ್ದಿ ವಾಹಿನಿಯ ಲೋಗೋ ಜೊತೆಗೆ, ‘‘ಹಿಂದೂಗಳ ಆರಾಧ್ಯ ದೈವ ಮತ್ತು ಮುಂಬೈನ ಪ್ರಸಿದ್ಧ ಸಿದ್ಧಿವಿನಾಯಕ ದೇವಸ್ಥಾನದ ಮೇಲೆ ವಕ್ಫ್ ಬೋರ್ಡ್ ಹಕ್ಕು’’ ಎಂದು ಬರೆದು ಫೋಟೋವನ್ನು ಹಂಚಿಕೊಂಡಿದ್ದಾರೆ.

ಇದೇ ರೀತಿಯ ವೈರಲ್ ಪೋಸ್ಟ್​ಗಳನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ಪೋಸ್ಟ್ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ವೈರಲ್ ಕ್ಲೈಮ್ ಅನ್ನು ಪರಿಶೀಲಿಸಲು, ನಾವು ಮೊದಲು ಗೂಗಲ್​ನಲ್ಲಿ ಕೀವರ್ಡ್ ಸರ್ಚ್ ಮಾಡಿದ್ದೇವೆ. ಆಗ ನವೆಂಬರ್ 18 ರಂದು, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಪುತ್ರ ಮತ್ತು ಮಹಾರಾಷ್ಟ್ರ ಯುವಸೇನೆಯ ಅಧ್ಯಕ್ಷ ಆದಿತ್ಯ ಠಾಕ್ರೆ ಅವರು ಈ ಪೋಸ್ಟ್ ನಕಲಿ ಎಂದು ಹೇಳಿರುವುದು ನಮಗೆ ಸಿಕ್ಕಿದೆ. ಇದು ವಿರೋಧ ಪಕ್ಷಗಳ ಪಿತೂರಿ ಎಂದು ಅವರು ಹೇಳಿದ್ದಾರೆ.

ಹಾಗೆಯೆ ನವೆಂಬರ್ 18 ರಂದು ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಸೊಸೈಟಿಯ ಖಜಾಂಚಿ ಪವನ್ ತ್ರಿಪಾಠಿ ಅವರ ಹೇಳಿಕೆಯನ್ನು ಮುಂಬೈ ತರುಣ್ ಭಾರತ್ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಮುಂಬೈನ ಸಿದ್ಧಿವಿನಾಯಕ ದೇವಸ್ಥಾನದ ಮೇಲೆ ವಕ್ಫ್ ಬೋರ್ಡ್ ಹಕ್ಕು ಚಲಾಯಿಸಿದೆ ಎಂಬ ಸುಳ್ಳು ವರದಿ ವೈರಲ್ ಆಗುತ್ತಿದೆ ಎಂದು ಪವನ್ ತ್ರಿಪಾಠಿ ವೀಡಿಯೊ ಹೇಳಿಕೆ ನೀಡಿದ್ದಾರೆ. ‘‘ದೇವಾಲಯವು ದೇಶಕ್ಕೆ ಮಾತ್ರವಲ್ಲದೆ ವಿಶ್ವಕ್ಕೆ ನಂಬಿಕೆಯ ಸ್ಥಳವಾಗಿದೆ. ದೇವಸ್ಥಾನದ ಮೇಲೆ ಯಾರೂ ಅಂತಹ ಹಕ್ಕು ಮಂಡಿಸುವುದಿಲ್ಲ. ಶ್ರೀ ಸಿದ್ಧಿವಿನಾಯಕ ದೇವಸ್ಥಾನವನ್ನು ಯಾವುದೇ ಮಂಡಳಿ ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ’’ ಎಂದು ಹೇಳಿರುವ ಮಾತು ಇದರಲ್ಲಿದೆ.

ನಂತರ ನಾವು ಮರಾಠಿ ಸುದ್ದಿವಾಹಿನಿ ಸಕಲ್ ಹೆಸರಿನಲ್ಲಿ ಪೋಸ್ಟ್‌ಕಾರ್ಡ್ ವೈರಲ್ ಆಗುತ್ತಿರುವ ಬಗ್ಗೆ ತಿಳಿಯಲು ಅವರ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳನ್ನು ಹುಡುಕಿದೆವು. ಆಗ ಸಕಲ್​ನ ಅಧಿಕೃತ ಇನ್‌ಸ್ಟಾ ಹ್ಯಾಂಡಲ್‌ನಿಂದ ನವೆಂಬರ್ 18 ರಂದು ಪೋಸ್ಟ್ ಮಾಡಲಾದ ಈ ಪೋಸ್ಟ್‌ಕಾರ್ಡ್ ಅನ್ನು ನಕಲಿ ಎಂದು ಘೋಷಿಸಿರುವುದು ಕಂಡುಬಂತು. ಸಕಲ್ ಅಂತಹ ಯಾವುದೇ ಪೋಸ್ಟ್​ಕಾರ್ಡ್ ಮಾಡಿಲ್ಲ ಎಂದು ಪೋಸ್ಟ್ ನಲ್ಲಿ ಮಾಹಿತಿ ನೀಡಲಾಗಿದೆ. ಕೆಲವರು ನಮ್ಮ ಟೆಂಪ್ಲೇಟ್‌ಗಳು ಮತ್ತು ಲೋಗೋಗಳನ್ನು ಬಳಸಿಕೊಂಡು ಈ ಕಿಡಿಗೇಡಿತನವನ್ನು ಮಾಡಿದ್ದಾರೆ ಎಂದು ಹೇಳಿದ್ದಾರೆ.

ಈ ಎಲ್ಲ ಮಾಹಿತಿಯ ಆಧಾರದ ಮೇಲೆ ಮುಂಬೈನ ಸಿದ್ಧಿವಿನಾಯಕ ದೇವಸ್ಥಾನದ ಮೇಲಿನ ವಕ್ಫ್ ಮಂಡಳಿಯ ಹಕ್ಕು ಪೋಸ್ಟ್ ನಕಲಿ ಎಂದು ನ್ಯೂಸ್ ಮೀಟರ್ ಖಚಿತಪಡಿಸುತ್ತದೆ. ದೇವಸ್ಥಾನದ ಸೊಸೈಟಿಯ ಅಧಿಕಾರಿಗಳೇ ಇದನ್ನು ನಕಲಿ ಎಂದು ಹೇಳಿದ್ದಾರೆ.

Claim Review:ಮುಂಬೈನ ಸಿದ್ಧಿವಿನಾಯಕ ದೇವಸ್ಥಾನದ ಮೇಲೆ ವಕ್ಫ್ ಬೋರ್ಡ್ ಹಕ್ಕು ಚಲಾಯಿಸಿದೆ.
Claimed By:Facebook User
Claim Reviewed By:News Meter
Claim Fact Check:False
Fact:ಸಿದ್ಧಿವಿನಾಯಕ ದೇವಸ್ಥಾನದ ಮೇಲಿನ ವಕ್ಫ್ ಮಂಡಳಿಯ ಹಕ್ಕು ಪೋಸ್ಟ್ ನಕಲಿ ಆಗಿದೆ. ದೇವಸ್ಥಾನದ ಸೊಸೈಟಿ ಅಧಿಕಾರಿಗಳೇ ಇದನ್ನು ನಕಲಿ ಎಂದು ಹೇಳಿದ್ದಾರೆ.
Next Story