Fact Check: ಕೋಲ್ಕತ್ತಾದ ಅತ್ಯಾಚಾರ ಪ್ರಕರಣ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ನೃತ್ಯ ಮಾಡಿದ ಮಹಿಳೆ ವೈದ್ಯೆ ಅಲ್ಲ

ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ಅತ್ಯಾಚಾರ ಮತ್ತು ಹತ್ಯೆಯನ್ನು ವಿರೋಧಿಸಿ ಮಹಿಳಾ ವೈದ್ಯೆ ಭದ್ರಕಾಳಿ ರೂಪ ತಾಳಿದ್ದಾರೆ ಎಂದು ವೀಡಿಯೊ ವೈರಲ್ ಆಗುತ್ತಿದೆ.

By Vinay Bhat  Published on  20 Sep 2024 9:42 AM GMT
Fact Check: ಕೋಲ್ಕತ್ತಾದ ಅತ್ಯಾಚಾರ ಪ್ರಕರಣ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ನೃತ್ಯ ಮಾಡಿದ ಮಹಿಳೆ ವೈದ್ಯೆ ಅಲ್ಲ
Claim: ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಪ್ರತಿಭಟಿಸಿ ಮಹಿಳಾ ವೈದ್ಯೆಯೊಬ್ಬರು ಬೀದಿಯಲ್ಲಿ ನೃತ್ಯ ಮಾಡುತ್ತಿದ್ದಾರೆ.
Fact: ವೀಡಿಯೊದಲ್ಲಿರುವ ಮಹಿಳೆ ಮೋಕ್ಷ ಸೇನ್‌ಗುಪ್ತಾ, ದಕ್ಷಿಣ ಭಾರತದ ಚಲನಚಿತ್ರೋದ್ಯಮದಲ್ಲಿ ಗುರುತಿಸಲ್ಪಟ್ಟ ನಟಿ.

ಕೋಲ್ಕತ್ತಾದ ಅತ್ಯಾಚಾರ ಪ್ರಕರಣವನ್ನು ವಿರೋಧಿಸಿ ಮಹಿಳೆಯೊಬ್ಬರು ರೋಷಗೊಂಡು ಬೀದಿ ನೃತ್ಯ ಮಾಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಬಳಕೆದಾರರು ಪ್ರತಿಭಟನಾನಿರತ ಮಹಿಳೆಯನ್ನು ವೈದ್ಯೆ ಎಂದು ಹೇಳುತ್ತಿದ್ದಾರೆ ಮತ್ತು ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ಅತ್ಯಾಚಾರ ಮತ್ತು ಹತ್ಯೆಯನ್ನು ವಿರೋಧಿಸಿ ಮಹಿಳಾ ವೈದ್ಯೆ ಭದ್ರಕಾಳಿ ರೂಪ ತಾಳಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದಾರೆ.

ನಮ್ ನಮೋ ಎಂಬ ಫೇಸ್ಬುಕ್ ಖಾತೆಯಲ್ಲಿ ಸೆಪ್ಟೆಂಬರ್ 20, 2024 ರಂದು ಈ ವೀಡಿಯೊ ಹಂಚಿಕೊಳ್ಳಲಾಗಿದ್ದು, ‘‘ದೀದಿ ವಿರುದ್ಧ ಬೀದಿಗಿಳಿದು ಕಾಳಿ ನೃತ್ಯ ಮಾಡಿದ ವೈದ್ಯೆ’’ ಎಂದು ಶೀರ್ಷಿಕೆ ನೀಡಲಾಗಿದೆ.

ಹಾಗೆಯೆ ಚಕ್ರವರ್ತಿ ಸೂಲಿಬೆಲೆ ಅವರ ಎಕ್ಸ್ ಖಾತೆಯಿಂದ ಕೂಡ ಇದೇ ವೀಡಿಯೊ ಅಪ್ಲೋಡ್ ಆಗಿದ್ದು, ‘‘ಪಶ್ಚಿಮ ಬಂಗಾಳದಲ್ಲಿ ಪ್ರತಿಭಟನಾ ನಿರತ ವೈದ್ಯರೊಬ್ಬರು ಮಾಡಿದ ಕಾಳಿ ನೃತ್ಯ!’’ ಎಂದು ಬರೆದುಕೊಂಡಿದ್ದಾರೆ. ಇನ್ನು ರತನ್ ಶಾರಾದ ಎಂಬ ಎಕ್ಸ್ ಖಾತೆಯವರು ಕೂಡ ಇದೇ ವೀಡಿಯೊಕ್ಕೆ ‘‘ಮಹಿಳಾ ವೈದ್ಯರಿಂದ ಕೋಲ್ಕತ್ತಾದಲ್ಲಿ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ಅತ್ಯಾಚಾರ, ಹತ್ಯೆಯನ್ನು ವಿರೋಧಿಸಿ ಕಲ್ಲಿ ನೃತ್ಯಂ, ಲೇಡಿ ಡಾಕ್ಟರ್ ಭದ್ರಕಾಳಿಯಾದರು’’ ಎಂದು ಬರೆದಿದ್ದಾರೆ.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋಧಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಕೋಲ್ಕತ್ತಾದ ಅತ್ಯಾಚಾರ-ಕೊಲೆ ಪ್ರಕರಣದ ವಿರುದ್ಧ ಪ್ರತಿಭಟನೆಯಲ್ಲಿ ನೃತ್ಯ ಮಾಡಿದ ಮಹಿಳೆ ವೈದ್ಯಳಲ್ಲ. ಇವರ ಹೆಸರು ಮೋಕ್ಷ ಸೇನ್‌ಗುಪ್ತಾ ಆಗಿದ್ದು ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿದ್ದಾರೆ.

ಎಕ್ಸ್​ನಲ್ಲಿ ವೈರಲ್ ಆಗುತ್ತಿರುವ ವೀಡಿಯೊಕ್ಕೆ ಕಾಮೆಂಟ್ ವಿಭಾಗದಲ್ಲಿ, ಇವರು ವೈದ್ಯೆ ಎಂಬ ಹೇಳಿಕೆಯನ್ನು ಕೆಲವರು ನಿರಾಕರಿಸಿದ್ದಾರೆ ಮತ್ತು ಇವರು ಬಂಗಾಳಿ, ತೆಲುಗು ಚಲನಚಿತ್ರ ನಟಿ ಮೋಕ್ಷ ಸೇನ್‌ಗುಪ್ತಾ ಎಂದು ಹೇಳಿದ್ದಾರೆ.

ಈ ಮಾಹಿತಿಯ ಆಧಾರದ ಮೇಲೆ ನಾವು ಗೂಗಲ್‌ನಲ್ಲಿ ಮೋಕ್ಷ ಸೇನ್‌ಗುಪ್ತಾ ಅವರ ನೃತ್ಯ ಪ್ರದರ್ಶನಕ್ಕೆ ಸಂಬಂಧಿಸಿದ ಕೀವರ್ಡ್‌ಗಳನ್ನು ಹುಡುಕಿದ್ದೇವೆ. ಆಗ 16 ಸೆಪ್ಟೆಂಬರ್ 2024 ರಂದು ಇಂಡಿಯಾಟುಡೇ ಪ್ರಕಟಿಸಿರುವ ವರದಿ ನಮಗೆ ಸಿಕ್ಕಿತು. ಆರ್‌ಜಿ ಕರ್ ಅತ್ಯಾಚಾರ-ಹತ್ಯೆ ಪ್ರಕರಣದ ವಿರುದ್ಧ ಕೋಲ್ಕತ್ತಾದಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಸಂದರ್ಭದಲ್ಲಿ, ನಟಿ ಮೋಕ್ಷ ಸೇನ್‌ಗುಪ್ತಾ ಅವರು ಕವಿ ಕಾಜಿ ನಜ್ರುಲ್ ಇಸ್ಲಾಂ ಅವರ ಹಾಡಿಗೆ ನೃತ್ಯವನ್ನು ಪ್ರದರ್ಶಿಸಿದರು ಎಂದು ಈ ವರದಿಯಲ್ಲಿ ಬರೆಯಲಾಗಿದೆ. ಇವರು ಬಂಗಾಳಿ ಮೂಲದ ನಟಿಯಾಗಿದ್ದರೂ ದಕ್ಷಿಣ ಭಾರತದ ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

ದಕ್ಷಿಣ ಕೋಲ್ಕತ್ತಾದ ಸಂತೋಷ್‌ಪುರದಲ್ಲಿ ಆಗಸ್ಟ್ 31 ರಂದು ಎನ್‌ಜಿಒ ಆಯೋಜಿಸಿದ್ದ ಬೀದಿ ನಾಟಕದಲ್ಲಿ ಮೋಕ್ಷ ಅವರು ಈ ಪ್ರದರ್ಶನವನ್ನು ನೀಡುವ ಮೂಲಕ ನ್ಯಾಯಕ್ಕಾಗಿ ಪ್ರತಿಭಟಿಸಿದರು. ಇದಾದ ಬಳಿಕ ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು ಎಂದು ಬರೆಯಲಾಗಿದೆ. ವೈರಲ್ ವೀಡಿಯೊದ ದೃಶ್ಯಗಳನ್ನು ಸಹ ವರದಿಯಲ್ಲಿ ನೋಡಬಹುದು.

ಇದಕ್ಕೆ ಸಂಬಂಧಿಸಿದ ದೈನಿಕ್ ಜಾಗರಣ್ ಅವರ ವೆಬ್‌ಸೈಟ್‌ನಲ್ಲಿಯೂ ವರದಿ ನೋಡಬಹುದು. ಇದರಲ್ಲಿ ನೃತ್ಯ ವೀಡಿಯೊವನ್ನು ಕೂಡ ಉಲ್ಲೇಖಿಸಲಾಗಿದೆ.

ನಾವು ಮೋಕ್ಷ ಸೇನ್‌ಗುಪ್ತಾ ಅವರ ಸಾಮಾಜಿಕ ಮಾಧ್ಯಮ ಖಾತೆಯನ್ನು ಪರಿಶೀಲಿಸಿದ್ದೇವೆ. ಅವರ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ, ಆರ್‌ಜಿ ಕರ್ ಪ್ರಕರಣಕ್ಕೆ ಸಂಬಂಧಿಸಿದ ಅನೇಕ ಪೋಸ್ಟ್‌ಗಳನ್ನು ಕೂಡ ನಾವು ಕಂಡುಕೊಂಡಿದ್ದೇವೆ. ಅವರ ಅಧಿಕೃತ ಇನ್​ಸ್ಟಾಗ್ರಾಮ್​ನಲ್ಲಿ ಈ ನೃತ್ಯ ಪ್ರದರ್ಶನದ ವೀಡಿಯೊವನ್ನು ನಮಗೆ ಸಿಕ್ಕಿದ್ದು, ಆಗಸ್ಟ್ 31, 2024 ರಂದು ಅಪ್ಲೋಡ್ ಮಾಡಿದ್ದಾರೆ. ಈ ವೀಡಿಯೊದ ಜೊತೆಗೆ, ‘‘22ನೇ ದಿನ ಆದರೆ ನ್ಯಾಯ ಇನ್ನೂ ಸಿಕ್ಕಿಲ್ಲ. ಈ ವ್ಯವಸ್ಥೆ ನ್ಯಾಯ ಕೊಡದಿದ್ದಾಗ, ಬೀದಿಗಳಲ್ಲಿ ಪ್ರತಿಭಟನೆ ಮಾಡುವ ಮೂಲಕ ಭಾವನೆಗಳನ್ನು ವ್ಯಕ್ತಪಡಿಸಲು ಪ್ರಯತ್ನಿಸಲಾಗುತ್ತದೆ. ಇದರಲ್ಲಿ ಸರಿಯಾದ ಕೊರಿಯೋಗ್ರಫಿ ಇಲ್ಲ, ಕೇವಲ ಕೋಪ, ಆವೇಶ ಇದೆ’’ ಎಂದು ಬರೆದುಕೊಂಡಿದ್ದಾರೆ.

ಮೋಕ್ಷ ಅವರು ತಮ್ಮ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ವೀಡಿಯೊಗೆ ಸಂಬಂಧಿಸಿದಂತೆ ಇಂಡಿಯಾ ಟುಡೇ ಮತ್ತು ದೈನಿಕ್ ಜಾಗರಣ್ ಮಾಡಿರುವ ವರದಿಗಳನ್ನು ಹಂಚಿಕೊಂಡಿದ್ದಾರೆ. ಇಂಡಿಯಾ ಟುಡೇಗೆ ಧನ್ಯವಾದ ಅರ್ಪಿಸುತ್ತಾ, "ಇದು ನಮ್ಮ ಪ್ರಾಚೀನ ಬಂಗಾಳದ ಸಂಸ್ಕೃತಿ. ಅಗತ್ಯ ಬಿದ್ದಾಗಲೆಲ್ಲ ನಾವು ನಮ್ಮ ಕಲೆಯನ್ನು ನೈಜ್ಯ ಕಾರಣಗಳಿಗಾಗಿ ಉಪಯೋಗಿಸುತ್ತೇವೆ, ಧ್ವನಿ ಎತ್ತಲು ಬೀದಿಗಿಳಿಯುತ್ತೇವೆ" ಎಂದು ಬರೆದಿದ್ದಾರೆ.

ವಿಜಯವಾಣಿ ಕೂಡ ಸೆಪ್ಟೆಂಬರ್ 19, 2024 ರಂದು ‘ಬೀದಿಯಲ್ಲಿ ಡಾನ್ಸ್ ಮಾಡಿದ ನಟಿ! ದಂಗಾಗಿ ನೋಡುತ್ತ ನಿಂತ ಜನ’ ಎಂಬ ಶೀರ್ಷಿಕೆಯೊಂದಿಗೆ ಸುದ್ದಿ ಪ್ರಕಟಿಸಿದೆ. ವರದಿಯಲ್ಲಿ, ‘ಇವರು ಕಲಾವಿದ ಮತ್ತು ಸೈಕಾಲಜಿಯಲ್ಲಿ ಮೇಜರ್ ಆಗಿದ್ದಾರೆ. ಜೊತೆಗೆ ಶಿಕ್ಷಕಿಯಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗ ಮುಖ್ಯವಾಗಿ ದಕ್ಷಿಣ ಭಾರತದ ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡುತ್ತಿದ್ದಾರೆ. ನೀತೊ ನೇನು, ಅಳನಟಿ ರಾಮಚಂದ್ರಡು ಮತ್ತು ಐ ಹೇಟ್ ಯೂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗಷ್ಟೇ ಧನರಾಜ್ ಮತ್ತು ಸಮುದ್ರಖನಿ ಅಭಿನಯದ ರಾಮ್ ರಾಘವಂ ಸಿನಿಮಾದಲ್ಲೂ ಮೋಕ್ಷ ಸೇನ್‌ಗುಪ್ತ ನಟಿಸಿದ್ದರು’ ಎಂದು ವರದಿಯಲ್ಲಿದೆ.

ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವಂತೆ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ಅತ್ಯಾಚಾರ ಮತ್ತು ಹತ್ಯೆಯನ್ನು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ನೃತ್ಯ ಮಾಡುತ್ತಿರುವುದು ಮಹಿಳಾ ವೈದ್ಯೆಯಲ್ಲ ಎಂಬುದನ್ನು ನಾವು ಖಚಿತವಾಗಿ ಹೇಳುತ್ತೇವೆ. ಇವರ ಹೆಸರು ಮೋಕ್ಷ ಸೇನ್‌ಗುಪ್ತಾ ಆಗಿದ್ದು, ಚಿತ್ರರಂಗದವರಾಗಿದ್ದಾರೆ.

Claim Review:ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಪ್ರತಿಭಟಿಸಿ ಮಹಿಳಾ ವೈದ್ಯೆಯೊಬ್ಬರು ಬೀದಿಯಲ್ಲಿ ನೃತ್ಯ ಮಾಡುತ್ತಿದ್ದಾರೆ.
Claimed By:Facebook User
Claim Reviewed By:News Meter
Claim Source:Social Media
Claim Fact Check:False
Fact:ವೀಡಿಯೊದಲ್ಲಿರುವ ಮಹಿಳೆ ಮೋಕ್ಷ ಸೇನ್‌ಗುಪ್ತಾ, ದಕ್ಷಿಣ ಭಾರತದ ಚಲನಚಿತ್ರೋದ್ಯಮದಲ್ಲಿ ಗುರುತಿಸಲ್ಪಟ್ಟ ನಟಿ.
Next Story